Mangalore Kuthar, house rain, Krishna Byre Gowda visit: ಬೆಟ್ಟದ ಇಳಿಜಾರಿನಲ್ಲಿ ಮನೆ ಕಟ್ಟಿದ್ದರಿಂದ ದುರಂತ, ಈ ರೀತಿ ಅಪಾಯಕ್ಕೀಡು ಮಾಡಬಲ್ಲ ಮನೆಗಳಿದ್ದರೆ ತಕ್ಷಣ ಪತ್ತೆಹಚ್ಚಿ ; ಕುತ್ತಾರಿನ ದುರಂತ ಸ್ಥಳಕ್ಕೆ ಭೇಟಿಯಿತ್ತ ಕಂದಾಯ ಸಚಿವರಿಂದ ಅಧಿಕಾರಿಗಳಿಗೆ ಸೂಚನೆ

26-06-24 08:55 pm       Mangalore Correspondent   ಕರಾವಳಿ

ಪ್ರಕೃತಿ ವಿಕೋಪವನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಮುಂಜಾಗ್ರತೆ ವಹಿಸದೆ ಇಳಿಜಾರಿನಲ್ಲಿ ಮನೆ ಕಟ್ಟಿಕೊಂಡಿರುವುದು ಇಲ್ಲಿ ಕಂಡುಬಂದಿದೆ.

ಮಂಗಳೂರು, ಜೂನ್.26: ಪ್ರಕೃತಿ ವಿಕೋಪವನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಮುಂಜಾಗ್ರತೆ ವಹಿಸದೆ ಇಳಿಜಾರಿನಲ್ಲಿ ಮನೆ ಕಟ್ಟಿಕೊಂಡಿರುವುದು ಇಲ್ಲಿ ಕಂಡುಬಂದಿದೆ. ಬೆಟ್ಟದ ಇಳಿಜಾರಿನಲ್ಲಿ ಈ ರೀತಿ ಮನೆ ಮಾಡಿರುವುದು ರಾಜ್ಯದಲ್ಲಿ ಸಾವಿರಾರು ಇರಬಹುದು. ಮಳೆಯ ಸಂದರ್ಭದಲ್ಲಿ ತೊಂದರೆ ಆಗಬಲ್ಲಂತಹ ಇಂತಹ ಮನೆಗಳನ್ನು ಗುರುತಿಸಿ, ಅಲ್ಲಿನ ನಿವಾಸಿಗಳಿಗೆ ಬೇರೆಡೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಕುತ್ತಾರಿನ ಮುನ್ನೂರು ಗ್ರಾಮದಲ್ಲಿ ಮನೆ ಕುಸಿತದಿಂದ ನಾಲ್ವರು ಮೃತಪಟ್ಟ ಘಟನಾ ಸ್ಥಳಕ್ಕೆ ಸಂಜೆಯ ವೇಳೆಗೆ ಕಂದಾಯ ಸಚಿವರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಬೆಟ್ಟದ ಇಳಿಜಾರಿನಲ್ಲಿ ಮನೆ ಕಟ್ಟಿಕೊಳ್ಳುವಾಗ ಮುಂಜಾಗ್ರತೆ ವಹಿಸಬೇಕು. ಫೌಂಡೇಶನ್, ಸೆಟ್ ಬ್ಯಾಕ್ ನೋಡಿಕೊಳ್ಳಬೇಕು. ಇಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳದೆ ಮನೆ ಕಟ್ಟಿರುವುದು ಕಂಡುಬರುತ್ತದೆ. ಇಂತಹ ಘಟನೆಗಳಾದಾಗ ಚರ್ಚೆ ಮಾಡುವ ಬದಲು ಮನೆ ಕಟ್ಟಿಕೊಳ್ಳುವಾಗಲೇ ಈ ಬಗ್ಗೆ ಜಾಗ್ರತೆ ವಹಿಸಬೇಕು. ರಾಜ್ಯದ ಎಲ್ಲ ಪಂಚಾಯತ್ ವ್ಯಾಪ್ತಿಯಲ್ಲಿ ಇಂತಹ ಮನೆಗಳಿದ್ದರೆ ಪಟ್ಟಿ ಮಾಡಲು ಸೂಚನೆ ನೀಡಿದ್ದೇನೆ ಎಂದರು. ಮೃತರ ಕುಟುಂಬಗಳಿಗೆ ಪರಿಹಾರ ಕೊಡುವ ವಿಚಾರದಲ್ಲಿ ಜಿಲ್ಲಾಧಿಕಾರಿ ಮತ್ತು ಸ್ಪೀಕರ್ ಅವರು ಚರ್ಚಿಸಿ ವ್ಯವಸ್ಥೆ ಮಾಡಲಿದ್ದಾರೆ ಎಂದರು.

ಕಡಲ್ಕೊರೆತ ಸಮಸ್ಯೆ ಹೆಚ್ಚಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ರಾಜ್ಯದಲ್ಲಿ 326 ಕಿಮೀ ಉದ್ದಕ್ಕೆ ಕಡಲ ತೀರ ಇದ್ದು ಕೆಲವು ಕಡೆ ಸಮಸ್ಯೆ ಇರುವುದು ತಿಳಿದಿದೆ. ಕೆಲವು ಕಡೆ ಪ್ರಯೋಜನ ಆಗಿದ್ದರೆ, ಇನ್ನು ಕೆಲವು ಕಡೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸಮಸ್ಯೆ ಆಗಿದೆ. ಮಂಗಳೂರಿನಲ್ಲಿ ಸಮಸ್ಯೆ ಆಗಿರುವ ಬಗ್ಗೆ ಸ್ಪೀಕರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ಮಾಡಿದ್ದೇವೆ. ಕಡಲ್ಕೊರೆತಕ್ಕೆ ತಡೆಗೋಡೆ ರಚಿಸಲು 80 ಕೋಟಿ ಅನುದಾನ ನೀಡುವುದಕ್ಕೆ ತೀರ್ಮಾನ ಮಾಡಿದ್ದೇವೆ ಎಂದರು.

ಮಲೆನಾಡು ಭಾಗದಲ್ಲಿ ಗುಡ್ಡ ಕುಸಿಯುತ್ತಿರುವ ಪ್ರಶ್ನೆಗೆ, ಜಿಯೋಗ್ರಾಫಿಕಲ್ ಸರ್ವೆ ಪ್ರಕಾರ ಭೂಕುಸಿತ ಆಗಬಲ್ಲ ಪಾಯಿಂಟ್ ಗಳನ್ನು ಗುರುತಿಸಿದ್ದೇವೆ. ಆ ಪೈಕಿ ತೀವ್ರ ತೊಂದರೆ ಆಗಬಲ್ಲ ಪ್ರದೇಶಗಳಲ್ಲಿ ತಡೆಗೋಡೆ ಇನ್ನಿತರ ಕಾಮಗಾರಿ ನಡೆಸಲು 80 ಕೋಟಿ ಅನುದಾನ ನೀಡುವ ಪ್ರಸ್ತಾವನೆ ಇದೆ. ಎಲ್ಲಿ ಅಗತ್ಯ ಇದೆಯೋ ಅಲ್ಲಿಗೆ ಅನುದಾನ ನೀಡಲಾಗುವುದು ಎಂದು ಹೇಳಿದರು. ಸ್ಪೀಕರ್ ಯುಟಿ ಖಾದರ್ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಬಳಿಕ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಕೃತಿ ವಿಕೋಪ ಕುರಿತು ಸಭೆ ನಡೆಸಿದರು.

Mangalore Kuthar house collapsed due to rains, minster Krishna Byre Gowda visits spot. In a heart-wrenching incident that occurred in the early hours on Wednesday June 26, a compound wall collapsed onto a house, leading to the death of a family of four in Madaninagar, Munnur village, Ullal taluk.