Magaalore rain news: ಏರ್ಪೋರ್ಟ್ ರಸ್ತೆಯಲ್ಲೇ ಹರಿದ ಮಳೆನೀರು ; ಸ್ಥಳೀಯರ ಆಕ್ರೋಶ, ಜಪ್ಪುವಿನಲ್ಲಿ ಮನೆಗಳಿಗೆ ನುಗ್ಗಿದ ನೀರು, ಬಜಾಲ್ ನಲ್ಲಿ ಅಂಡರ್ ಪಾಸ್ ಬ್ಲಾಕ್ !

26-06-24 11:03 pm       Mangalore Correspondent   ಕರಾವಳಿ

ಎರಡು ದಿನಗಳಿಂದ ಸತತ ಸುರಿದ ಮಳೆಯಿಂದಾಗಿ ಮಂಗಳೂರಿನ ಹಲವೆಡೆ ಕೃತಕ ನೆರೆ ಉಂಟಾಗಿದೆ. ಬಜಾಲ್ ನಲ್ಲಿ ರೈಲ್ವೇ ಅಂಡರ್ ಪಾಸಲ್ಲಿ ನೀರು ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗಿದ್ದರೆ, ಬಜ್ಪೆ ಏರ್ಪೋರ್ಟ್ ಬಳಿಯ ಕೆಂಜಾರಿನಲ್ಲಿ ನೀರು ಹರಿಯೋ ಚರಂಡಿ ತಡೆ ಬಿದ್ದುದರಿಂದ ಮಳೆನೀರು ರಸ್ತೆಯಲ್ಲೇ ಹರಿದಿತ್ತು.

ಮಂಗಳೂರು, ಜೂನ್ 26: ಎರಡು ದಿನಗಳಿಂದ ಸತತ ಸುರಿದ ಮಳೆಯಿಂದಾಗಿ ಮಂಗಳೂರಿನ ಹಲವೆಡೆ ಕೃತಕ ನೆರೆ ಉಂಟಾಗಿದೆ. ಬಜಾಲ್ ನಲ್ಲಿ ರೈಲ್ವೇ ಅಂಡರ್ ಪಾಸಲ್ಲಿ ನೀರು ನಿಂತಿದ್ದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗಿದ್ದರೆ, ಬಜ್ಪೆ ಏರ್ಪೋರ್ಟ್ ಬಳಿಯ ಕೆಂಜಾರಿನಲ್ಲಿ ನೀರು ಹರಿಯೋ ಚರಂಡಿ ತಡೆ ಬಿದ್ದುದರಿಂದ ಮಳೆನೀರು ರಸ್ತೆಯಲ್ಲೇ ಹರಿದಿತ್ತು.

ಬುಧವಾರ ರಾತ್ರಿ ಸುರಿದ ಮಳೆಗೆ ಕೆಂಜಾರಿನ ಶ್ರೀದೇವಿ ಕಾಲೇಜು ಮುಂಭಾಗದ ರಸ್ತೆಯಲ್ಲೇ ಭಾರೀ ಪ್ರಮಾಣದ ನೀರು ಹರಿದಿತ್ತು. ಇದರ ವಿಡಿಯೋ ವೈರಲ್ ಆಗಿದ್ದು ಸ್ಥಳೀಯರು ಕಾಲೇಜು ಸಿಬಂದಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂದಿದೆ. ಕಾಲೇಜಿನವರು ಚರಂಡಿ ನೀರು ಹರಿಯುವುದಕ್ಕೆ ಸಣ್ಣ ಪೈಪ್ ಹಾಕಿದ್ದರು. ಅದನ್ನು ನಾವು ಪ್ರಶ್ನೆ ಮಾಡಿದ್ದರೂ ಕೇರ್ ಮಾಡಿರಲಿಲ್ಲ. ಈಗ ಗುಡ್ಡದಿಂದ ಹರಿದು ಬಂದ ಮಳೆ ನೀರು ಪೂರ್ತಿಯಾಗಿ ನಮ್ಮ ತೋಟ ಮತ್ತು ಗದ್ದೆಗೆ ನುಗ್ಗಿದೆ. ಇದನ್ನು ಕೂಡಲೇ ಸರಿಪಡಿಸದೇ ಇದ್ದಲ್ಲಿ ನಾಳೆ ಕಾಲೇಜು ಗೇಟ್ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಮಳೆನೀರು ಏರ್ಪೋರ್ಟ್ ರಸ್ತೆಯಲ್ಲೇ ಹರಿಯುವುದು ವಿಡಿಯೋದಲ್ಲಿದೆ.

ಜಪ್ಪಿನಮೊಗರುವಿನಲ್ಲಿ ಚರಂಡಿಯಲ್ಲಿ ಮಳೆ ನೀರು ಹರಿಯಲು ಸಾಧ್ಯವಾಗದೆ ಬ್ಲಾಕ್ ಆಗಿದ್ದು, ನೀರು ಹಲವು ಮನೆಗಳಿಗೆ ನುಗ್ಗಿತ್ತು. ಘಟನಾ ಸ್ಥಳಕ್ಕೆ ಕೆಲವು ಸಾಮಾಜಿಕ ಕಾರ್ಯಕರ್ತರು ಭೇಟಿ ಕೊಟ್ಟು ಮಹಾನಗರ ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆನಂತರ, ಸ್ಥಳೀಯ ಕಾರ್ಪೊರೇಟರ್ ಮತ್ತು ಪಾಲಿಕೆಯ ಅಧಿಕಾರಿಗಳು ಬಂದು ಬ್ಲಾಕ್ ಸರಿಪಡಿಸುವ ಭರವಸೆ ನೀಡಿದ್ದಾರೆ.

ಬಜಾಲ್ ರೈಲ್ವೇ ಅಂಡರ್ ಪಾಸಲ್ಲಿ ಪ್ರತಿ ಮಳೆಗಾಲಕ್ಕೂ ಅದೇ ಸ್ಥಿತಿಯಾಗಿದೆ. ಅಂಡರ್ ಪಾಸ್ ಆಳ ಇರೋದು ಮತ್ತು ನೀರು ಹರಿಯಲು ವ್ಯವಸ್ಥೆ ಮಾಡದಿರುವುದರಿಂದ ಮಳೆ ನೀರು ತುಂಬಿಕೊಂಡು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಸಲದ ಮಳೆಗಾಲದಲ್ಲಿ ಮೊದಲ ಬಾರಿಗೆ ಬುಧವಾರ ಬಜಾಲ್ ಅಂಡರ್ ಪಾಸ್ ಅರ್ಧ ಮುಳುಗಡೆಯಾಗಿತ್ತು. ಕಾರೊಂದು ನೀರಿನಲ್ಲಿ ಸಾಗಲು ಯತ್ನಿಸಿ, ಅರ್ಧದಲ್ಲಿ ಬಾಕಿಯಾಗಿತ್ತು. ಕೊಟ್ಟಾರದಲ್ಲಿಯೂ ಮಳೆ ನೀರು ಹಲವು ಮನೆಗಳಿಗೆ ನುಗ್ಗಿದೆ. ಪ್ರತಿ ಮಳೆಗಾಲದಲ್ಲಿಯೂ ಕೊಟ್ಟಾರದಲ್ಲಿ ಸಮಸ್ಯೆ ಮಾಮೂಲಿ ಅನ್ನುವಂತಾಗಿದೆ.

Mangalore rain, bajal, Bajpe, jeppu flooded with rain water.