illegal sand, Pavoor Uliya, Muneer Katipalla; ಪಾವೂರು, ಉಳಿಯ ದ್ವೀಪದಲ್ಲಿ ಮರಳುಗಾರಿಕೆ ; ಸುಳ್ಳು ವರದಿ ನೀಡಿದ ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ, 30 ಎಕರೆ ಇದ್ದುದು 98 ಎಕರೆ ಎಂದಿದ್ದೇ ಸೋಜಿಗ ; ಮುನೀರ್ ಕಾಟಿಪಳ್ಳ ಆಕ್ರೋಶ 

27-06-24 03:01 pm       Mangaluru Correspondent   ಕರಾವಳಿ

ಪಾವೂರು, ಉಳಿಯ ದ್ವೀಪದಲ್ಲಿ ಮರಳು ಮಾಫಿಯಾದ ಅಟ್ಟಹಾಸ ಬರಿಗಣ್ಣಿಗೆ ಕಾಣುತ್ತಿದ್ದರೂ,  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ "ಪರಿಶೀಲನೆ" ಯಲ್ಲಿ ಸಾಮಾನ್ಯ ಮರಳುಗಾರಿಕೆ ನಡೆದಿರುವ ಕುರುಹುಗಳೂ ಕಂಡುಬಂದಿಲ್ಲ ಎಂದು ಇಲಾಖೆ ಅಧಿಕಾರಿಗಳು ನೀಡಿರುವ ಸ್ಪಷ್ಟೀಕರಣಕ್ಕೆ ಸಮಾನ ಮನಸ್ಕ ಸಂಘಟನೆಯ ಸಂಚಾಲಕ ಮುನೀರ್ ಕಾಟಿಪಳ್ಳ ಕಿಡಿಕಾರಿದ್ದಾರೆ. 

ಮಂಗಳೂರು, ಜೂನ್ 27: ಪಾವೂರು, ಉಳಿಯ ದ್ವೀಪದಲ್ಲಿ ಮರಳು ಮಾಫಿಯಾದ ಅಟ್ಟಹಾಸ ಬರಿಗಣ್ಣಿಗೆ ಕಾಣುತ್ತಿದ್ದರೂ,  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ "ಪರಿಶೀಲನೆ" ಯಲ್ಲಿ ಸಾಮಾನ್ಯ ಮರಳುಗಾರಿಕೆ ನಡೆದಿರುವ ಕುರುಹುಗಳೂ ಕಂಡುಬಂದಿಲ್ಲ ಎಂದು ಇಲಾಖೆ ಅಧಿಕಾರಿಗಳು ನೀಡಿರುವ ಸ್ಪಷ್ಟೀಕರಣಕ್ಕೆ ಸಮಾನ ಮನಸ್ಕ ಸಂಘಟನೆಯ ಸಂಚಾಲಕ ಮುನೀರ್ ಕಾಟಿಪಳ್ಳ ಕಿಡಿಕಾರಿದ್ದಾರೆ. 

ಈ ಬಗ್ಗೆ ಹೇಳಿಕೆ ನೀಡಿರುವ ಮುನೀರ್, ಸ್ಥಳೀಯ ಮಾಧ್ಯಮಗಳು ಸ್ಥಳಕ್ಕೆ ಹೋಗಿ ಖುದ್ದು ಚಿತ್ರೀಕರಿಸಿ ಪ್ರಸಾರ ಮಾಡಿದ "ವೀಡಿಯೋ ದೃಶ್ಯಗಳು ಹಳೆಯವು" ಎಂದು ಇಲಾಖೆಯ ತನಿಖೆಯಿಂದ ಗೊತ್ತಾಗಿದೆಯಂತೆ‌.  ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಖುದ್ದು ಸ್ಥಳ ಪರಿಶೀಲನೆ ನಡೆಸಿದಾಗ ದ್ವೀಪದ ದೊಡ್ಡ ಭಾಗ ನದಿಯ ಪಾಲಾಗಿರುವುದು, ದ್ವೀಪದ ಭೂಭಾಗ ಕಿರಿದಾಗಿರುವುದು ಕಂಡು ಬಂದಿತ್ತು. ಆದರೆ, 'ಹಿರಿಯ ಭೂ ವಿಜ್ಞಾನಿ ಹಾಗೂ ಅವರ ತಾಂತ್ರಿಕ ಅಧಿಕಾರಿಗಳ ತಂಡ' ಪರಿಶೀಲನೆ ನಡೆಸಿದಾಗ, "30 ಎಕರೆ ಇರಬೇಕಾದ ದ್ವೀಪ 98 ಎಕರೆ ಆಗಿದೆ" ಎಂದು ವರದಿ ನೀಡಿದ್ದಾರೆ. ಇದಂತೂ ವಿಸ್ಮಯಕಾರಿಯಾಗಿದೆ. ಬಹುಶಃ ಮರಳು ದಂಧೆಕೋರರು ಪರಿಸರದ ಮೇಲಿನ ಅಪಾರ ಕಾಳಜಿಯಿಂದ ಹೊರಗಡೆಯಿಂದ ಮರಳು ತಂದು ದ್ವೀಪದ ಸುತ್ತ ಸುರಿದು ದ್ವೀಪವನ್ನು ವಿಸ್ತರಿಸಿದ್ದಾರೆಯೆ, ಹೊರತು ಮರಳು ತೆಗೆದಿಲ್ಲ ಎಂದು ಗಣಿ ಇಲಾಖೆ ಹೇಳಲು ಹೊರಟಂತಿದೆ.

ದ್ವೀಪವಾಸಿಗಳ ದೂರು, ಮಾಧ್ಯಮಗಳ ವರದಿಯ ಮೇರೆಗೆ ಪರಿಶೀಲನೆಗೆ ತೆರಳಿದ ಹಿರಿಯ ಭೂ ವಿಜ್ಞಾನಿ ಹಾಗೂ ತಾಂತ್ರಿಕ ಅಧಿಕಾರಿಗಳ ತಂಡವನ್ನೇ ಸರಕಾರ ತನಿಖೆಗೆ ಒಳಪಡಿಸಬೇಕು. ಪರಿಶೀಲನೆಗೆ ಉಳಿಯ ದ್ವೀಪಕ್ಕೆ ಆಗಮಿಸಿದ ತಂಡ, ದೂರುದಾರರಾದ ದ್ವೀಪವಾಸಿಗಳ ಉಪಸ್ಥಿತಿಯಲ್ಲಿ ಪರಿಶೀಲನೆ ನಡೆಸುವ ಬದಲಿಗೆ, ಮರಳು ದಂಧೆಕೋರರ ದೋಣಿಯನ್ನು ಉಪಯೋಗಿಸಿ ದ್ಚೀಪಕ್ಕೆ ತೆರಳಿದೆ, ಮರಳು ದಂಧೆಯವರ ಆತಿಥ್ಯದಲ್ಲಿ ಸ್ಥಳ ಪರಿಶೀಲನೆ ನಡೆಸಿದೆ. ಈ ನಡವಳಿಕೆಗಳೇ ಗಣಿ ಇಲಾಖೆಯ ಭ್ರಷ್ಟತೆ, ಮರಳು ಮಾಫಿಯಾ ಜೊತೆಗಿನ ಶಾಮೀಲಾತಿಯನ್ನು ಎತ್ತಿ ತೋರಿಸುತ್ತದೆ. 

ಮಾಧ್ಯಮಗಳು ಪ್ರಸಾರ ಮಾಡಿದ ದ್ವೀಪದಲ್ಲಿ ಮರಳುಗಾರಿಕೆ ನಡೆಸುವ ದೃಶ್ಯಗಳು ಒಂದು ವಾರದಷ್ಟು ಇತ್ತೀಚೆಗೆ ಸ್ಥಳೀಯ ವಾಹಿನಿಯೊಂದು ಚಿತ್ರೀಕರಿಸಿದ್ದಾಗಿದ್ದು, ಇದು ಹಳೆಯ ವೀಡಿಯೋ ಎಂದು ಇಲಾಖೆ ಪ್ರಕಟನೆ ನೀಡಿರುವುದು ಅತ್ಯಂತ ನಿರ್ಲಜ್ಜ ನಡೆಯಾಗಿದೆ. ಈ ಚಿತ್ರೀಕರಣದ ಎಲ್ಲಾ ದಾಖಲೆಗಳು ಮಾಧ್ಯಮ ಕಚೇರಿಯಲ್ಲಿ ಲಭ್ಯ ಇದ್ದು, ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಬಹುದಾಗಿದೆ. ಇನ್ನು, ಈಗಲೂ ಪಾವೂರು ಸುತ್ತಲೂ ಸಹಿತ, ನೇತ್ರಾವತಿ, ಫಲ್ಗುಣಿ ನದಿಯಲ್ಲಿ ಮರಳುಗಾರಿಕೆಯ ದೋಣಿಗಳು ನೂರಾರು ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಕತ್ತಲಾಗುತ್ತಲೇ, ಈ ದೋಣಿಗಳು ಜೀವ ತಳೆದು ಮರಳುಗಾರಿಕೆಯಲ್ಲಿ ತೊಡಗುತ್ತವೆ. ಮರಳುಗಾರಿಕೆಗೆ ಪೂರ್ಣ ನಿಷೇಧ ಇರುವ ಮಳೆಗಾಲದ ಅವಧಿಯಲ್ಲಿ ಈ ದೋಣಿಗಳಿಗೆ ನದಿಯಲ್ಲೇನು ಕೆಲಸ, ಗಣಿ ಇಲಾಖೆ ಈ ಕುರಿತು ಕ್ರಮಗಳನ್ನು ಯಾಕೆ ಜರುಗಿಸುವುದಿಲ್ಲ ?

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಈ ಪರಿಶೀಲನಾ ವರದಿ ಪಾವೂರು, ಉಳಿಯ ದ್ಚೀಪ ಹಾಗೂ ಅದರ ಸುತ್ತಲು ಅಕ್ರಮ ಮರಳುಗಾರಿಕೆ ನಡೆಸುವ ದಂಧೆಕೋರರು, ಹಾಗೂ ಅವರೊಂದಿಗೆ ಶಾಮೀಲಾಗಿರುವ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ರಕ್ಷಿಸುವ ನಾಚಿಕೆಗೇಡಿನ ಯತ್ನವಲ್ಲದೆ ಮತ್ತೇನಲ್ಲ. ಈ ನಡೆಯನ್ನು ಬಲವಾಗಿ ಖಂಡಿಸುತ್ತೇವೆ. ಮರಳು ದಂಧೆಕೋರರಿಗೆ ಪ್ರಭಾವಿ ರಾಜಕಾರಣಿಗಳ ಬೆಂಬಲ ಇರುವುದನ್ನೂ ಇದು ಎತ್ತಿ ತೋರಿಸುತ್ತದೆ. ಉಳಿಯ ದ್ವೀಪದಲ್ಲಿ ನಡೆದಿರುವ ಈ ವರಗಿನ ಅಕ್ರಮ ಮರಳು ಗಾರಿಕೆಯ ಕುರಿತು ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳಲ್ಲಿರುವ ಪ್ರಾಮಾಣಿಕ ಅಧಿಕಾರಿಗಳ ತಂಡ ರಚಿಸಿ ತನಿಖೆಗೆ ಆದೇಶಿಸಬೇಕು, ಈಗ ಸ್ಥಳ ಪರಿಶೀಲನೆ ನಡೆಸಿದ ಗಣಿ ಇಲಾಖೆಯ ಅಧಿಕಾರಿಗಳನ್ನೂ ಪ್ರತ್ಯೇಕ ತನಿಖೆಗೆ ಒಳಪಡಿಸಬೇಕು, ಜಿಲ್ಲಾಧಿಕಾರಿಗಳು ನಾವು ಈಗಾಗಲೇ ಮಾಡಿರುವ ಮನವಿಯನ್ನು ಮನ್ನಿಸಿ ಉಳಿಯ ದ್ವೀಪಕ್ಕೆ ತೆರಳಿ ಖುದ್ದು ಪರಿಶೀಲನೆ ನಡೆಸಬೇಕು ಸಮಾನ ಮನಸ್ಕ ಸಂಘಟನೆಗಳು ಬಲವಾಗಿ ಆಗ್ರಹಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Social activist and state president of Democratic Youth Federation of India DYFI, Muneer Katipalla slams ofiicals of the Mines and Geology for dening charges of illegal sand extraction in and around Pavoor-Uliya Kudru in Netravathi river and the consequent degeneration of the river island.