Sasikanth Senthil program Mangalore: ಸಮಾನತೆಯನ್ನು ನಂಬುವವರೇ ಮೆಜಾರಿಟಿ, ಸಾಮರಸ್ಯ ನಂಬದೇ ಇರೋರು ಮೈನಾರಿಟಿ ; ದೇಶದಲ್ಲಿ ಎರಡು ಮನಸ್ಥಿತಿಯ ಯುದ್ಧ ಇದೆ, ಸ್ವಾತಂತ್ರ್ಯ ಹೋರಾಟ ಬ್ರಿಟಿಷರ ವಿರುದ್ಧ ಆಗಿದ್ದಲ್ಲ..! ಸಂಸದ ಶಶಿಕಾಂತ್ ಸೆಂಥಿಲ್ ವಿಶ್ಲೇಷಣೆ 

03-09-24 01:54 pm       Mangalore Correspondent   ಕರಾವಳಿ

ದೇಶದಲ್ಲಿ ಎರಡು ಮನಸ್ಥಿತಿಯ ನಡುವೆ ಯುದ್ಧ ನಡೀತಾ ಇದೆ. ಒಂದು ಎಲ್ಲರನ್ನೂ ಸಮಾನತೆಯಿಂದ ನೋಡುವುದಾಗಿದ್ದರೆ, ಮತ್ತೊಂದು ಮೇಲು ಕೀಳು ಭಾವನೆಯನ್ನು ಹೊಂದಿರುವ ಮನಸ್ಥಿತಿ.

ಮಂಗಳೂರು, ಸೆ.3: ದೇಶದಲ್ಲಿ ಎರಡು ಮನಸ್ಥಿತಿಯ ನಡುವೆ ಯುದ್ಧ ನಡೀತಾ ಇದೆ. ಒಂದು ಎಲ್ಲರನ್ನೂ ಸಮಾನತೆಯಿಂದ ನೋಡುವುದಾಗಿದ್ದರೆ, ಮತ್ತೊಂದು ಮೇಲು ಕೀಳು ಭಾವನೆಯನ್ನು ಹೊಂದಿರುವ ಮನಸ್ಥಿತಿ. ತುಂಬ ವರ್ಷಗಳಿಂದ ಈ ಯುದ್ಧ ಆಗ್ತಾನೇ ಬಂದಿದ್ದು ಈಗಲೂ ಮುಂದುವರಿದಿದೆ. ನಮ್ಮ ಸ್ವಾತಂತ್ರ್ಯ ಹೋರಾಟ ಬ್ರಿಟಿಷರ ವಿರುದ್ಧ ಆಗಿದ್ದಲ್ಲ‌. 70 ಪರ್ಸೆಂಟ್ ಹೋರಾಟ ಸಮಾನತೆಗಾಗಿ ಆಗಿರುವುದು. ಹೀಗೆಂದು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ, ಹಾಲಿ ತಮಿಳುನಾಡಿನ ತಿರುವಳ್ಳೂರ್ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿರುವ ಶಶಿಕಾಂತ್ ಸೆಂಥಿಲ್ ವಿಶ್ಲೇಷಣೆ ಮಾಡಿದ್ದಾರೆ. ‌

ಮದರ್ ತೆರೇಸಾ ಅವರ 27ನೇ ಸಂಸ್ಮರಣೆ ಅಂಗವಾಗಿ ನಗರದ ಪುರಭವನದಲ್ಲಿ ನಡೆದ ಸಮಾರಂಭ ಉದ್ಘಾಟಿಸಿ ಸೆಂಥಿಲ್ ಮಾತನಾಡಿದರು. ಗಾಂಧೀಜಿ ಧೋತಿ ಮಾತ್ರ ಹಾಕಿದ್ದು ಬಟ್ಟೆ ಇಲ್ಲದ ಕಾರಣಕ್ಕಲ್ಲ. ನನ್ನ ದೇಶದ ರೈತರಲ್ಲಿ ಬಟ್ಟೆ ಇಲ್ಲ. ಹಾಗಾಗಿ ನನಗೂ ಬೇಡ ಅಂತ ಗಾಂಧೀಜಿ ಬಟ್ಟೆ ತೊಟ್ಟಿರಲಿಲ್ಲ. ದೇಶದ ಜನರೆಲ್ಲ ಸಮಾನರು ಅನ್ನುವ ದೃಷ್ಟಿಯಿಂದ ಹೋರಾಟ ಮಾಡಿದ್ದರು. ಬ್ರಿಟಿಷರ ವಿರುದ್ಧ ಮಾತ್ರ ಹೋರಾಟ ಆಗಿರಲಿಲ್ಲ ಎಂದು ಸೆಂಥಿಲ್ ಹೇಳಿದರು. 

ಎಲ್ಲರು ಸಮಾನರು ಅನ್ನುವ ದೃಷ್ಟಿಯಿಂದ ಅಂಬೇಡ್ಕರ್ ಸಂವಿಧಾನ ಮಾಡಿದ್ದಾರೆ. ಆದರೆ ಇದನ್ನು ಬಹಳ ಜನ ಒಪ್ಪಲಿಲ್ಲ. ಈಗಲು ಒಪ್ಪುವುದಿಲ್ಲ ಎಂದು ಹೇಳಿದ ಸೆಂಥಿಲ್, ನಾವು ಈ ವೇದಿಕೆಯ ಮೇಲೆ ಬರಲು, ಐಎಎಸ್ ಅಧಿಕಾರಿಯಾಗಲು ಅವಕಾಶ ಕೊಟ್ಟಿದ್ದು ಸಂವಿಧಾನ. ತಮಿಳುನಾಡಿನಲ್ಲಿ ಹುಟ್ಟಿ 30 ವರ್ಷ ಅಲ್ಲಿಯೇ ಬೆಳೆದಿದ್ದ ನಾನು ಡೀಸಿಯಾಗಿ ಬಂದ ಮೇಲೆ ಕನ್ನಡ, ಹಿಂದಿ, ಇಂಗ್ಲಿಷ್ ಕಲಿತಿದ್ದೇನೆ. ಬಹುತ್ವದ ದೇಶವನ್ನು ನೋಡಿದ್ದೇನೆ. ನಾವೆಲ್ಲ ಬೇರೆ ಬೇರೆ ಜಾತಿ, ಭಾಷೆ, ಭಾವನೆ ಹೊಂದಿದವರು. ನಮ್ಮಲ್ಲಿ ಟಾಲರೇಟೆಡ್ ಡಿಫರೆನ್ಸ್ ಇರೋದಲ್ಲ. ಸೆಲಬ್ರೇಟೆಡ್ ಡಿಫರೆನ್ಸ್ ಇದೆ. ದಿವಾಳಿ, ರಂಜಾನ್ ಜೊತೆಯಾಗಿ ಆಚರಣೆ ಮಾಡುತ್ತೇವೆ. ಇದೇ ಐಡಿಯಾ ಆಫ್ ಇಂಡಿಯಾ. ನಮ್ಮಲ್ಲಿ ವಿಭಿನ್ನತೆ ಇದ್ದರೂ ಸಮಾನತೆಯನ್ನು ತೋರುತ್ತಿರುವುದೇ ವೈಶಿಷ್ಟ್ಯ. ಸಂವಿಧಾನದ ಕಾರಣ ನಾವೆಲ್ಲ ಜೊತೆಗಿದ್ದೇವೆ. ದೇವರು ಬೇರೆ ಬೇರೆ ರೂಪದಲ್ಲಿ ಇರೋದಲ್ಲ. ನಮಗೆ ಸಂವಿಧಾನದ ರೂಪದಲ್ಲಿ ದೇವರು ಇದ್ದಾನೆ. 

ಮಂಗಳೂರಿನಲ್ಲಿ ಇರುವಷ್ಟು ವೈವಿಧ್ಯ ದೇಶದ ಬೇರೆಲ್ಲೂ ಇಲ್ಲ. ಇದು ಮಿನಿ ಇಂಡಿಯಾ. ನಾನು ಮಕ್ಕಳಿಗೆ ಹೇಳುವುದು, ನಾವು ವಿಭಿನ್ನ ಸಂಸ್ಕೃತಿಯನ್ನು ಆಚರಣೆ ಮಾಡಬೇಕು‌. ಡೈವರ್ಸಿಟಿಗೆ ಮಂಗಳೂರು ಈಸ್ ಪರ್ಫೆಕ್ಟ್ ಪ್ಲೇಸ್ ಎಂದು ಸೆಂಥಿಲ್ ಹೇಳಿದರು. ನನ್ನ ಬಗ್ಗೆ ಯಾರಿಗೆ ಇಷ್ಟ ಇಲ್ಲವೋ, ಮಕ್ಕಳು ಮಾತ್ರ ನನ್ನ ಬಗ್ಗೆ ಪ್ರೀತಿ ಹೊಂದಿದ್ದಾರೆ. ಈಗಿನ ಮಂಗಳೂರು ಡೀಸಿ ನನ್ನನ್ನು ಬೀಟ್ ಮಾಡಬೇಕು ಅಂತ ಹೇಳಿದ್ದೇನೆ ಎಂದರು. ನಮಗೆ ಬೇಕಿರುವುದು ಸಮಾಧಾನ, ನೆಮ್ಮದಿ ಅಷ್ಟೇ. ಎಲ್ಲಿ ಶಾಂತಿ, ನೆಮ್ಮದಿ ಇದೆಯೋ ಅದನ್ನು ನೋಡಿಕೊಂಡು ಪಾಲಿಟಿಕ್ಸ್ ಮಾಡಬೇಕು. ಮಕ್ಕಳ ಭವಿಷ್ಯಕ್ಕಾಗಿ ರಾಜಕೀಯದಲ್ಲಿ ಸಕ್ರಿಯವಾಗಬೇಕು ಎಂದರು. 

ಮಕ್ಕಳಲ್ಲಿ ಸ್ಪರ್ಧೆ ಯಾಕಿರಬೇಕು ? 

ಮಕ್ಕಳಲ್ಲಿ ಸ್ಪರ್ಧೆ ಯಾಕೆ ಬೇಕು, ನಾವು ಪರಸಯ ಸಹಕಾರದಿಂದ ಇರಬೇಕು. ಬುಡಕಟ್ಟು ಸಂಸ್ಕೃತಿಯಲ್ಲಿ ಯಾವುದೇ ಸ್ಪರ್ಧೆ ಇಲ್ಲ. ಮಕ್ಕಳಲ್ಲಿ ನಾವು ಸ್ಪರ್ಧಾ ಭಾವನೆಯನ್ನು ಹೋಗಲಾಡಿಸಬೇಕು. ಹಾಗೆ ಮಾಡಿದರೆ ಮಾತ್ರ ಮದರ್ ತೆರೆಸಾಗೆ ನಾವು ನಿಜ ಗೌರವ ಕೊಟ್ಟಂತಾಗುತ್ತದೆ. ಮಂಗಳೂರಿನಲ್ಲಿ ನನ್ನ ಕೆಲಸ ಇನ್ನೂ ಮುಗಿದಿಲ್ಲ. ಅರ್ಧದಲ್ಲಿ ಕೆಲಸ ಬಿಟ್ಟು ಹೋಗಿದ್ದಕ್ಕೆ ವಿಷಾದ ಇದೆ.‌ ಹಾಗಾಗಿ ಇಲ್ಲಿನ ಜನರ ಜೊತೆ ವಿಶಿಷ್ಟ ಪ್ರೀತಿ ಇದೆ. ದೇಶದಲ್ಲಿ ಬೇರಾವುದೇ ಮೆಜಾರಿಟಿ, ಮೈನಾರಿಟಿ ಇಲ್ಲ. ಸಾಮರಸ್ಯ, ಸಮಾನತೆಯನ್ನು ನಂಬುವವರೇ ಮೆಜಾರಿಟಿ, ಸಾಮರಸ್ಯ ನಂಬದೇ ಇರೋರು ಮೈನಾರಿಟಿ. ಇಂತಹ ಮೈನಾರಿಟಿ ಮೆಂಟಾಲಿಟಿ ಇರುವವರ ಕೈಯಲ್ಲಿ ಸಮಾಜವನ್ನು ಕೊಡಬಾರದು. ಸಮಾನತೆ ನಂಬುವ ನಾವು ಮೆಜಾರಿಟಿಯವರು ಒಟ್ಟಿಗೆ ಸೇರಿ ಮತ್ತೆ ಭಾರತವನ್ನು ಕಟ್ಟಬೇಕು. ಸಾಮರಸ್ಯದ ಮಂಗಳೂರನ್ನು, ಸಾಮರಸ್ಯದ ಸಂಸ್ಕೃತಿಯನ್ನು ಬಲಿಷ್ಠವಾಗಿ ಕಟ್ಟಬೇಕು ಎಂದು ಹೇಳಿದರು. 

ಮುಖ್ಯ ಭಾಷಣಕಾರ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಮಾತನಾಡಿ, ಧರ್ಮ ಪ್ರಭುತ್ವದ ಬಳಿಕ ರಾಜ ಪ್ರಭುತ್ವ ಬಂತು. ಈ ವ್ಯವಸ್ಥೆಯನ್ನು ಮೀರಿ ನಾವೆಲ್ಲ ಸಮಾನರು ಎಂಬ ಭಾವನೆಯ ಪ್ರಜಾಪ್ರಭುತ್ವ ಜಾರಿಗೆ ತಂದರು. ಸ್ವಾತಂತ್ರ್ಯ ಹೋರಾಟ ಬ್ರಿಟಿಷ್ ವಿರುದ್ಧ ಮಾತ್ರ ಇರಲಿಲ್ಲ. ರೈತರು, ಕಾರ್ಮಿಕರು, ಮಹಿಳೆಯರು, ಶೋಷಿತರ ಪರ ದನಿಯಾಗಿತ್ತು.‌ ಈ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದು ಸಾವಿತ್ರಿ ಬಾಯಿ ಫುಲೆ, ಫಾತಿಮಾ ಬೇಗಂ ಹೋರಾಟ. ಪುಣೆಯಲ್ಲಿ ಮೊದಲ ಬಾರಿಗೆ ಹೋರಾಟ ಮಾಡಿ ಅಡುಗೆ ಮನೆಯಲ್ಲಿದ್ದ ಹೆಣ್ಣನ್ನು ಹೊರಗೆ ತಂದರು. ಬ್ರಿಟಿಷರು ನೀವು ಹೇಗೆ ದೇಶ ಮುನ್ನಡೆಸುತ್ತೀರಿ ಎಂದಾಗ 389 ಜನ ಮೇಧಾವಿಗಳು ಸೇರಿ ಸಂವಿಧಾನ ರಚನೆಗೆ ಮುಂದಾದರು. ಏಳು ದೊಡ್ಡ ಧರ್ಮಗಳಿರುವ, ಮೂರು ವಿಭಿನ್ನ ನಾಗರಿಕತೆಗಳಿದ್ದ ದೇಶವನ್ನು ಒಗ್ಗಟ್ಟಿನಲ್ಲಿ ಒಯ್ಯುವುದಕ್ಕೆ ಸಂವಿಧಾನ ಮಾಡಲಾಯಿತು. ದೇಶದಲ್ಲಿ 22 ಅಧಿಕೃತ ಭಾಷೆಗಳಿದ್ದರೆ, 19 ಸಾವಿರ ಆಡುಭಾಷೆಗಳಿವೆ, ಬೆಂಗಳೂರು ನಗರ ಒಂದರಲ್ಲಿ 108 ಭಾಷೆ ಮಾತಾಡುತ್ತಾರೆ. ಪುಣೆಯಲ್ಲಿ 98 ಭಾಷೆ ಇದೆ ಎನ್ನುವುದು ಅಧ್ಯಯನದಲ್ಲಿ ಬಂದಿದೆ. ಇಷ್ಟೊಂದು ವೈವಿಧ್ಯತೆ ಇರುವ ನಾಡು ಮತ್ತೊಂದು ಕಡೆ ಇಲ್ಲ ಎಂದರು. 

ಮಹಿಳಾ ಪರ ಚಿಂತಕಿ ಯುಟಿ ಫರ್ಜಾನಾ, ಮಹಮ್ಮದ್ ಕುಂಜತ್ ಬೈಲು, ರಾಯ್ ಕ್ಯಾಸ್ಟಲಿನೋ, ಸುನಿಲ್ ಕುಮಾರ್ ಬಜಾಲ್ ಮತ್ತಿತರರು ಇದ್ದರು.

Sasikanth Senthil special program organised in Mangalore. There are two kinds of mindsets in India we are not fighting against British we are fighting against our ownselfs he added.