Mangalore Tulu, Unicode: ಯುನಿಕೋಡ್ ಕೀಲಿಮಣೆಗೆ ತುಳು ಭಾಷೆ ; ಇನ್ನು ಮೊಬೈಲ್, ಡಿಜಿಟಲ್ ಪರದೆಗಳಲ್ಲೂ ತೆರೆದುಕೊಳ್ಳಲಿದೆ ತುಳು ತಿಗಳಾರಿ ಲಿಪಿ, ತುಳು ಭಾಷಿಕರಿಗೆ ಹೊಸ ಮೈಲಿಗಲ್ಲು !  

09-09-24 05:45 pm       Mangalore Correspondent   ಕರಾವಳಿ

ತುಳು ಭಾಷೆಗೆ 500 ವರ್ಷಗಳ ಹಿಂದಿನಿಂದಲೂ ಸ್ವಂತ ಲಿಪಿ ಇದ್ದರೂ, ಅದು ಇತ್ತೀಚಿನ ವರೆಗೂ ಬಳಕೆಯಲ್ಲಿ ಇರಲಿಲ್ಲ. ತುಳು ಭಾಷೆ, ಸಂಸ್ಕೃತಿ, ಜನಪದ ಬಗ್ಗೆ ಸಾಕಷ್ಟು ಸಂಶೋಧನೆ ಆಗಿದ್ದರೂ, ಅವೆಲ್ಲ ಕನ್ನಡ ಲಿಪಿಯಲ್ಲೇ ಬಂದಿರುವಂಥವು.

ಮಂಗಳೂರು, ಸೆ.9: ತುಳು ಭಾಷೆಗೆ 500 ವರ್ಷಗಳ ಹಿಂದಿನಿಂದಲೂ ಸ್ವಂತ ಲಿಪಿ ಇದ್ದರೂ, ಅದು ಇತ್ತೀಚಿನ ವರೆಗೂ ಬಳಕೆಯಲ್ಲಿ ಇರಲಿಲ್ಲ. ತುಳು ಭಾಷೆ, ಸಂಸ್ಕೃತಿ, ಜನಪದ ಬಗ್ಗೆ ಸಾಕಷ್ಟು ಸಂಶೋಧನೆ ಆಗಿದ್ದರೂ, ಅವೆಲ್ಲ ಕನ್ನಡ ಲಿಪಿಯಲ್ಲೇ ಬಂದಿರುವಂಥವು. ತುಳು ಭಾಷೆಯ ಪಾಡ್ದನ, ಇನ್ನಿತರ ಸಾಹಿತ್ಯವನ್ನೂ ಕನ್ನಡದಲ್ಲೇ ಬರೆಯುತ್ತಿದ್ದರು. ಇತ್ತೀಚೆಗೆ 5-10 ವರ್ಷಗಳಿಂದ ತುಳು ಲಿಪಿಯ ಬಳಕೆ, ಲಿಪಿಯ ಅಧ್ಯಯನ ಆಸಕ್ತಿಯೂ ಹೆಚ್ಚುತ್ತಿದೆ. ಇದರ ನಡುವೆಯೇ, ತುಳು ಲಿಪಿಯನ್ನು ಆಧುನಿಕ ಕಂಪ್ಯೂಟರ್ ಕೀಲಿಮಣೆಗೂ ತರಲಾಗಿದೆ ಎನ್ನುವ ಹೊಸ ಸುದ್ದಿ ಬಂದಿದೆ.

ಯುನಿಕೋಡ್ ಎನ್ನುವ ಆಧುನಿಕ ಕೀಲಿಮಣೆ ಸಾಫ್ಟ್ ವೇರ್ ನಲ್ಲಿ ತುಳು ತಿಗಳಾರಿ ಲಿಪಿಯನ್ನು ಜೋಡಿಸಲಾಗಿದೆ. ಇತ್ತೀಚೆಗೆ ಗೂಗಲ್ ಟ್ರಾನ್ಸ್ ಲೇಟ್ ತಂತ್ರಾಂಶದಲ್ಲಿ ತುಳು ಭಾಷೆ ಸೇರ್ಪಡೆ ಆಗಿತ್ತು. ನಾವು ಇಂಗ್ಲಿಷ್ ಅಥವಾ ಇನ್ನಾವುದೇ ಭಾಷೆಯಲ್ಲಿ ಶಬ್ದಗಳನ್ನು ಬರೆದರೆ, ಅದನ್ನು ತುಳುವಿನಲ್ಲಿ ಅನುವಾದಿಸುವ ಕೆಲಸ ಗೂಗಲ್ ಮಾಡುತ್ತದೆ. ಇದೀಗ ತುಳು ಲಿಪಿಯದ್ದೇ ಅಧಿಕೃತ ಫಾಂಟ್ ಕೀಲಿಮಣೆಗೆ ಪ್ರವೇಶವಾಗಿದ್ದು, ಮುಂದಿನ ದಿನಗಳಲ್ಲಿ ಮೊಬೈಲ್, ಕಂಪ್ಯೂಟರ್, ಇನ್ನಿತರ ಡಿಜಿಟಲ್ ಪರದೆಗಳಲ್ಲಿ ತುಳು ಫಾಂಟ್ ಸಿಗಲಿದೆ. ಈಗ ಕನ್ನಡ, ತೆಲುಗು, ಇಂಗ್ಲಿಷ್, ಹಿಂದಿ ಇನ್ನಿತರ ಭಾಷೆಗಳ ಲಿಪಿ ಇರುವಂತೆಯೇ ತುಳು ಲಿಪಿಯನ್ನೂ ಮೊಬೈಲ್, ಕಂಪ್ಯೂಟರ್ ತೋರಿಸಲಿದೆ.

ತುಳು ಭಾಷೆಯ ಆಸಕ್ತರು ಮಲಯಾಳದ ರೀತಿಯಲ್ಲೇ ತುಳು ತಿಗಳಾರಿ ಅಕ್ಷರಗಳನ್ನು ಜೋಡಿಸಬಹುದಾಗಿದೆ. ಯುನಿಕೋಡ್ -16ರ ಅವತರಣಿಕೆಯಲ್ಲಿ ತುಳುವನ್ನು ಕೀಲಿಮಣೆಗೆ ಜೋಡಿಸಲಾಗಿದ್ದು, ಜಗತ್ತಿನ ಯಾವುದೇ ಮೂಲೆಯಲ್ಲೂ ತುಳು ಭಾಷೆಯ ಲಿಪಿ ಸಿಗಲಿದೆ. ತುಳು ತಿಗಲಾರಿ ಲಿಪಿ ಎಂದು ಇದನ್ನು ಯುನಿಕೋಡ್ ತಂತ್ರಾಂಶಕ್ಕೆ ಜೋಡಣೆ ಮಾಡಲಾಗಿದೆ. ತಿಗಳಾರಿ ಲಿಪಿ ಎನ್ನುವುದು ತುಳು ಭಾಷೆಯ ಮೂಲ ಲಿಪಿಯಾಗಿದ್ದು, 500 ವರ್ಷಗಳ ಹಿಂದೆಯೇ ಅಂದರೆ ಕೇರಳದಲ್ಲಿ ಮಲಯಾಳಿ ಕೃತಿಗಳು ಬರುವ ಮೊದಲೇ ಉಡುಪಿ, ಇನ್ನಿತರ ಪ್ರಮುಖ ವಿದ್ಯಾಕೇಂದ್ರ, ಮಠಗಳಲ್ಲಿ ತಿಗಳಾರಿ ಲಿಪಿ ಚಾಲ್ತಿಯಲ್ಲಿತ್ತು. ಉಡುಪಿ ಕೃಷ್ಣ ಮಠದ ಎಲ್ಲ ಸ್ವಾಮೀಜಿಗಳು, ಅಲ್ಲಿನ ಪ್ರಮುಖರು ತಿಗಳಾರಿ ಎನ್ನುವ ಲಿಪಿಯಲ್ಲಿಯೇ ತುಳುವನ್ನು ಈಗಲೂ ಬರೆಯುತ್ತಿದ್ದಾರೆ. ಕಡತಗಳಿಗೆ ಸಹಿಗಳನ್ನು ಹಾಕುತ್ತಿದ್ದಾರೆ. ಇಲ್ಲಿರುವ ಹಳೆಯ ತಾಳೆಗರಿಗಳಲ್ಲಿ ಬರೆದಿರುವ ಶಾಸನ ಇನ್ನಿತರ ಕೃತಿಗಳೂ ತುಳು ತಿಗಳಾರಿ ಲಿಪಿಯಲ್ಲೇ ಇರುವುದನ್ನು ಕಾಣಬಹುದು. ಅಂದರೆ, ತಿಗಳಾರಿ ಲಿಪಿಗೆ ಮಲಯಾಳಿ ಲಿಪಿಗಿಂತಲೂ ಹಳೆಯ ಇತಿಹಾಸ ಇದೆ ಅನ್ನುವುದನ್ನು ಇದು ತೋರಿಸುತ್ತದೆ.  

ತಿಗಳಾರಿ ಲಿಪಿಗೂ ಹಾಲಿ ಮಲಯಾಳಿ ಲಿಪಿಗೂ ಹತ್ತಿರದ ಸಾಮ್ಯತೆ ಇದೆ. ಕನ್ನಡದ ರೀತಿಯಲ್ಲೇ ಉರುಟಾದ ಅಕ್ಷರಗಳಿದ್ದರೂ, ಮಲಯಾಳದ ಪಡಿಯಚ್ಚಿನಂತಿವೆ. ಈವರೆಗೂ ತುಳು ಲಿಪಿಯ ಆಸಕ್ತರು ಮಲಯಾಳಿ ಲಿಪಿಯನ್ನು ಬಳಸಿ ತುಳುವಿನ ಅಕ್ಷರಗಳನ್ನು ಜೋಡಿಸಲು ಪ್ರಯತ್ನಿಸಿದ್ದರೂ, ಸ್ವಂತದ್ದೇ ಆದ ಕೀಲಿಮಣೆ ಇರಲಿಲ್ಲ. ಸಂಶೋಧಕರಾದ ಯುಬಿ ಪವನಜ, ಕೆಪಿ ರಾವ್ ಕನ್ನಡದ ಕೀಲಿಮಣೆಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. 2001ರಲ್ಲಿ ಪವನಜ ಅವರೇ ತುಳು ಲಿಪಿಯನ್ನೂ ಯುನಿಕೋಡ್ ತಂತ್ರಾಂಶಕ್ಕೆ ಸೇರಿಸುವಂತೆ ಯುನಿಕೋಡ್ ಸಂಸ್ಥೆಯವರಿಗೆ ಪ್ರಸ್ತಾಪ ಮಂಡಿಸಿದ್ದರು. 2014ರಲ್ಲಿ ಕರ್ನಾಟಕ ತುಳು ಅಕಾಡೆಮಿಯಿಂದ ಯುನಿಕೋಡ್ ಫಾಂಟ್ ತರುವುದಕ್ಕಾಗಿ ಸಾಕಷ್ಟು ಪ್ರಯತ್ನ ನಡೆದಿತ್ತು.


ಮೊಬೈಲ್, ಜಾಲತಾಣಗಳಲ್ಲಿ ತುಳು ಲಿಪಿ

ಇದೀಗ ಯುನಿಕೋಡ್ -16ರ ಆವೃತ್ತಿಯಲ್ಲಿ ತುಳು ತಿಗಳಾರಿ ಲಿಪಿ ಸೇರ್ಪಡೆಯಾಗಿದ್ದು, ಎಲ್ಲ ರೀತಿಯ ಡಿಜಿಟಲ್ ವೇದಿಕೆಗಳಲ್ಲಿ ತುಳು ಲಿಪಿ ಲಭ್ಯವಾಗಲಿದೆ. 80 ಅಕ್ಷರ – ಸಂಕೇತಗಳನ್ನು ಒಳಗೊಂಡ ಕೋಡಿಂಗ್ ಕೀಲಿಮಣೆಯಲ್ಲಿ ಇರಲಿದೆ ಎನ್ನಲಾಗುತ್ತಿದೆ. ಆಮೂಲಕ ತುಳು ಲಿಪಿಯಲ್ಲೇ ವೆಬ್ ಸೈಟ್, ಜಾಲತಾಣದಲ್ಲಿ ಬಳಕೆ, ಮೆಸೇಜಿಂಗ್ ಏಪ್ಸ್ ಗಳಲ್ಲಿ ಬಳಕೆ ಸಾಧ್ಯವಾಗಲಿದೆ. ಯುನಿಕೋಡ್ ಸೇರ್ಪಡೆಯಾಗಿರುವುದು ತುಳು ಭಾಷಿಕರ ಮಟ್ಟಿಗೆ ಒಂದು ದೊಡ್ಡ ಮೈಲಿಗಲ್ಲು. ಆದರೆ, ಹೆಚ್ಚಿನವರಿಗೆ ತುಳು ಲಿಪಿ ತಿಳಿಯದೇ ಇರುವುದರಿಂದ ಇದರ ಬಳಕೆಯ ವ್ಯಾಪ್ತಿಯೂ ಲಿಪಿಯನ್ನು ತಿಳಿದವರಿಗಷ್ಟೇ ಸೀಮಿತವಾಗಿರಲಿದೆ. ಜಗತ್ತಿನ ಹೆಚ್ಚಿನ ಪ್ರಮುಖ ಭಾಷೆಗಳ ಯುನಿಕೋಡ್ ಫಾಂಟ್ ಲಭ್ಯವಿದ್ದು, ಅದರಲ್ಲಿ ತುಳು ಭಾಷೆಯದ್ದೂ ಸೇರಿಕೊಂಡಿದೆ ಎನ್ನುವುದು ತುಳುವರಿಗೊಂದು ಹೆಗ್ಗಳಿಕೆ.

ಯುನಿಕೋಡ್ ತಂತ್ರಾಂಶದ ಹೆಗ್ಗಳಿಕೆ

ಯುನಿಕೋಡ್ ತಂತ್ರಾಂಶದ ಹೆಗ್ಗಳಿಕೆ ಏನಂದ್ರೆ, ಕನ್ನಡದಲ್ಲಿ ನುಡಿ ತಂತ್ರಾಂಶದಲ್ಲಿ ಬರೆದರೆ ಆ ತಂತ್ರಾಂಶ ಇಲ್ಲದ ಕಡೆ ಓಪನ್ ಆಗುವುದಿಲ್ಲ. ಲಿಪಿಯನ್ನು ಕನ್ವರ್ಟ್ ಮಾಡಿದರೂ, ಕೆಲವೊಮ್ಮೆ ಸರಿಯಾಗಿ ಬರುವುದಿಲ್ಲ. ಕನ್ನಡದಲ್ಲಿ ಯುನಿಕೋಡ್ ತಂತ್ರಾಂಶ ಬಂದ ಬಳಿಕ ಈ ತೊಂದರೆ ಇಲ್ಲದಾಗಿದೆ. ಮೊಬೈಲ್, ಜಾಲತಾಣ, ಎಲ್ಲ ಕಡೆಯೂ ಯೂನಿಕೋಡ್ ತಂತ್ರಾಂಶವೇ ಚಾಲ್ತಿಯಲ್ಲಿದೆ ಎನ್ನುವುದು ವಿಶೇಷ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ತುಳು ಲಿಪಿಯನ್ನು ಅಂಗೀಕರಿಸುವ ನಿಟ್ಟಿನಲ್ಲಿ ಹಲವಾರು ತಜ್ಞರು ಕೆಲಸ ಮಾಡಿದ್ದಾರೆ. ಕೆಪಿ ರಾವ್, ಯುಬಿ ಪವನಜ, ವೈಷ್ಣವಿ ಮೂರ್ತಿ, ಎಸ್.ಎ.ಕೃಷ್ಣಯ್ಯ, ರಾಧಾಕೃಷ್ಣ ಬೆಳ್ಳೂರು, ಭಾಸ್ಕರ ಶೇರಿಗಾರ್, ಎಸ್.ಆರ್ ವಿಘ್ನರಾಜ್, ಆಕಾಶ್ ರಾಜ್ ಸೇರಿದಂತೆ ಅನೇಕರು ಕೊಡುಗೆ ನೀಡಿದ್ದಾರೆ. ತುಳು ತಿಗಳಾರಿ ಲಿಪಿಯನ್ನು ಯುನಿಕೋಡ್ ಅಂಗೀಕರಿಸಿದ್ದು, ಆಮೂಲಕ ಜಾಗತಿಕವಾಗಿ ತುಳು ಲಿಪಿ ತೆರೆದುಕೊಳ್ಳಲು ಅವಕಾಶ ಲಭಿಸಿದೆ. ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿಸುವ ಪ್ರಯತ್ನಕ್ಕೆ ಮತ್ತಷ್ಟು ಮಹತ್ವ ಬಂದಿದೆ ಎಂದಿದ್ದಾರೆ.

ಐದು ದ್ರಾವಿಡ ಭಾಷೆಗಳಲ್ಲಿ ತುಳುವೂ ಒಂದೆನ್ನುವುದನ್ನು 150 ವರ್ಷಗಳ ಹಿಂದೆ ತುಳು, ಕನ್ನಡ, ತೆಲುಗು, ಮಲಯಾಳ, ತಮಿಳು ಭಾಷೆಗಳಿಗೆ ನಿಘಂಟು ರಚಿಸಿದ್ದ ಮಿಷನರಿಗಳು ತಿಳಿಸಿದ್ದರು. ಆದರೆ, ಉಳಿದೆಲ್ಲ ಭಾಷೆಗಳು ಸ್ವಂತ ರಾಜ್ಯ ಭಾಷೆಯಿಂದಾಗಿ ಬೆಳವಣಿಗೆ ಕಂಡಿದ್ದರೆ, ತುಳುವಿಗೆ ರಾಜ್ಯಭಾಷೆಯ ಮನ್ನಣೆ ಸಿಗದೆ ಸೊರಗಿತ್ತು. ಈಗಲೂ ತುಳುವನ್ನು ಅಧಿಕೃತ ಭಾಷೆಯೆಂದು ದೃಢೀಕರಿಸುವಲ್ಲಿ ಕರ್ನಾಟಕ ಸರಕಾರ ಮೀನ ಮೇಷ ಎಣಿಸುತ್ತಿರುವುದು ದುರಂತ ಸತ್ಯ.

The Unicode Consortium has announced the inclusion of Tulu script in its latest version, Unicode 16. This update adds 80 characters to the Unicode Standard, marking a significant milestone for the Tulu-speaking community. According to officials, the journey to this achievement began in 2001 when a member of the Unicode Consortium helped fix the Kannada script in Unicode and simultaneously advocated for the inclusion of Tulu.