Mangalore MCC Anand CL, Abdul Rauf: ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಭ್ರಷ್ಟಾಚಾರ ಆರೋಪ ; ಪಾಲಿಕೆ ಸದಸ್ಯರನ್ನು ಕತ್ತಲಲ್ಲಿಟ್ಟು ನಿಯಮ ಮೀರಿದ ಕಟ್ಟಡಗಳಿಗೆ ಪ್ರವೇಶ ಪತ್ರ! ರಾಜ್ಯ ಸರ್ಕಾರಕ್ಕೆ ತನಿಖೆಗೆ ಬರೆದ ಮೇಯರ್ 

04-01-25 09:49 pm       Mangalore Correspondent   ಕರಾವಳಿ

ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೇ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್ ವಿರುದ್ಧ ಪಾಲಿಕೆಯ ಹಿರಿಯ ಸದಸ್ಯ, ಕಾಂಗ್ರೆಸ್ ನಾಯಕ ಅಬ್ದುಲ್ ರವೂಫ್‌ ಅವರು ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ತನ್ನ ಆರೋಪ ಸುಳ್ಳಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ. 

ಮಂಗಳೂರು, ಜ.4: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೇ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್ ವಿರುದ್ಧ ಪಾಲಿಕೆಯ ಹಿರಿಯ ಸದಸ್ಯ, ಕಾಂಗ್ರೆಸ್ ನಾಯಕ ಅಬ್ದುಲ್ ರವೂಫ್‌ ಅವರು ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ತನ್ನ ಆರೋಪ ಸುಳ್ಳಾಗಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದ್ದಾರೆ. 

ಶನಿವಾರ ಮಹಾನಗರ ಪಾಲಿಕೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಬ್ದುಲ್ ರವೂಫ್ ಗಂಭೀರ ಆರೋಪಗಳನ್ನು ಮಾಡಿದ್ದು ಆಡಳಿತ ಮತ್ತು ವಿಪಕ್ಷ ಸದಸ್ಯರು ಮೂಕಪ್ರೇಕ್ಷಕರಾಗಿದ್ದರು. ಮಾತಿನ ಆರಂಭದಲ್ಲೇ ಸದಸ್ಯ ಅಬ್ದುಲ್ ರವೂಫ್‌, ತಾನು ದಾಖಲೆ ಸಹಿತ ಮಾತನಾಡುತ್ತಿದ್ದು, ಆಯುಕ್ತರು ಪಾಲಿಕೆಯ ಸದಸ್ಯರನ್ನು ಕತ್ತಲೆಯಲ್ಲಿಟ್ಟು 2001ರಿಂದೀಚೆಗೆ ನಿಯಮ ಮೀರಿ ಕಟ್ಟಲ್ಪಟ್ಟ ಕಟ್ಟಡಗಳಿಗೆ ಪ್ರವೇಶ ಪತ್ರಗಳನ್ನು ನೀಡಿದ್ದಾರೆ. ಈ ಹಿಂದೆ ಐಎಎಸ್‌ ಅಧಿಕಾರಿಗಳು ಆಯುಕ್ತರಾಗಿ ಬಂದು ಹೋಗಿದ್ದಾರೆ. ಯಾರು ಕೂಡ ಪ್ರವೇಶ ಪತ್ರ ನೀಡಿರಲಿಲ್ಲ. ತಡೆಹಿಡಿಯಲಾಗಿದ್ದ ವಸತಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳಿಗೆ ಈಗ ಅನುಮತಿ ನೀಡಲಾಗಿದೆ. ಭಾರೀ ಭ್ರಷ್ಟಾಚಾರ ನಡೆಯದೆ ಇದು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು. 

Mangalore Today | Latest main news of mangalore, udupi - Page  MCC-supplied-untreated-water-for-2-months-Abdul-Rauf

ಕೆಲವೊಂದು ಕಟ್ಟಡಗಳ ಬಗ್ಗೆ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಇನ್ನು ಕೆಲವು ಕೋರ್ಟಿನಲ್ಲಿ ವಿಚಾರಣೆಯಲ್ಲಿದೆ. ಇವುಗಳಿಗೂ ಪಾಲಿಕೆ ಆಯುಕ್ತರು ಪ್ರವೇಶ ಪತ್ರ ನೀಡಿದ್ದಾರೆ ಎಂದು ಅಬ್ದುಲ್ ರವೂಫ್ ಹೇಳಿದಾಗ, ಆಯುಕ್ತರು ದಾಖಲೆ ಇದ್ದರೆ ಕೊಡಿ, ಸುಮ್ಮನೆ ಆರೋಪ ಮಾಡಬೇಡಿ ಎಂದು ಹೇಳಿದರು. ನಾನು ದಾಖಲೆ ಇದ್ದೇ ಮಾತನಾಡುತ್ತಿದ್ದೇನೆ, ದಾಖಲೆಯನ್ನು ಮೇಯರ್ ಗೆ ನೀಡುತ್ತೇನೆಂದು ಹೇಳಿ ಪ್ರತಿಗಳನ್ನು ಸಲ್ಲಿಸಿದರು. 

ಇಬ್ಬರು ಜೆಇ, ಇಬ್ಬರು ಎಇಇಗಳಿಗೆ ಚಾರ್ಜ್ ನೀಡದೆ 29 ದಿನ ಸತಾಯಿಸಿದ್ದಾರೆ ಎಂದು ಆರೋಪಿಸಿದ ರವೂಫ್, ಪಾಲಿಕೆಯಲ್ಲಿ 30 ವರ್ಷ ಅನುಭವ ಇರುವ ಇಂಜಿನಿಯರ್ ಗಳನ್ನು ಬಿಟ್ಟು ಡೆಪ್ಯುಟೇಶನ್ ಮೇಲೆ ಬಂದವರನ್ನು ಸೀನಿಯರ್ ಇಂಜಿನಿಯರ್ ಎಂದು ಚಾರ್ಜ್ ನೀಡಿದ್ದಾರೆ. ಇದರಲ್ಲಿ ಯಾವ ಉದ್ದೇಶ ಇತ್ತು ಎಂದು ಪ್ರಶ್ನಿಸಿದ್ದಾರೆ. ವಿವಿಧ ಕಾಮಗಾರಿಗಳಿಗೆ ಪಾಲಿಕೆಯಲ್ಲಿ ಕೇವಲ 60 ಕೋಟಿ ರೂ. ಹಣ ಇರುವುದು ಗೊತ್ತಿದ್ದೂ 160 ಕೋಟಿ ರೂ.ಗಳನ್ನು ಆಯುಕ್ತರು ಮಂಜೂರು ಮಾಡಿಸಿದ್ದಾರೆ. ತುರ್ತು ಕಾಮಗಾರಿಗಳಿಗೆ 5 ಲಕ್ಷ ರೂ. ವರೆಗೆ ರಿಯಾಯಿತಿ ಇದೆ, ಆದರೆ ಆಯುಕ್ತರು ಅದನ್ನು ಮೀರಿ ಹೆಚ್ಚಿನ ಕಾಮಗಾರಿಗಳಿಗೆ ಇ ಟೆಂಡರ್ ಆದೇಶ ನೀಡಿದ್ದಾರೆ ಎಂದರು. ಇಂತಹ ಭ್ರಷ್ಟ ಅಧಿಕಾರಿ ಪಾಲಿಕೆಗೆ ಅಗತ್ಯವಿಲ್ಲ. ಇವರ ವಿರುದ್ಧ ತನಿಖೆಗೆ ರಾಜ್ಯ ಸರ್ಕಾರಕ್ಕೆ ಬರೆಯಬೇಕೆಂದು ಅಬ್ದುಲ್ ರವೂಫ್ ಆಗ್ರಹಿಸಿದರು. ಮೇಯರ್ ಮನೋಜ್ ಕೋಡಿಕಲ್ ವಿಪಕ್ಷ ಸದಸ್ಯರ ಕೋರಿಕೆಯನ್ನು ಒಪ್ಪಿ ಸರ್ಕಾರಕ್ಕೆ ಬರೆಯುವುದಾಗಿ ಹೇಳಿದರು.‌

ಆರೋಪಕ್ಕೆ ಪಾಲಿಕೆ ಆಯುಕ್ತರ ಸ್ಪಷ್ಟನೆ 

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧೀಕ್ಷಕ ಅಭಿಯಂತರರು ಮೇ 2024 ರಂದು ನಿವೃತ್ತಿಯಾಗಿ ಖಾಲಿಯಾದ ಹುದ್ದೆಗೆ ಸರ್ಕಾರದಿಂದ ಯಾವುದೇ ಅಧಿಕಾರಿಗಳು ಭರ್ತಿಯಾಗದ ಸಂದರ್ಭದಲ್ಲಿ ಆಡಳಿತಾತ್ಮಕ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಉದ್ದೇಶದಿಂದ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂರು ಕಾರ್ಯಪಾಲಕ ಅಭಿಯಂತರರ ಸೇವಾ ದಾಖಲೆಗಳಾದ ವಿದ್ಯಾರ್ಹತೆ, ಜನ್ಮ ದಿನಾಂಕ ಹಾಗೂ ಸೇವೆಗೆ ಸೇರಿದ ದಿನಾಂಕಗಳ ಆಧಾರವನ್ನು ಪರಿಗಣಿಸಿ ಅರ್ಹ ಅಧಿಕಾರಿಯನ್ನು ಅಧೀಕ್ಷಕ ಅಭಿಯಂತರರ ಹುದ್ದೆಗೆ ಅಧಿಕ ಪ್ರಭಾರವನ್ನು ವಹಿಸಲಾಗಿರುತ್ತದೆ. ಆದರೆ ಸದಸ್ಯರು ಪರೋಕ್ಷವಾಗಿ ಪ್ರಸ್ತಾಪಿಸಿದ ಅಧಿಕಾರಿಯವರು ಸೂಕ್ತ ವಿದ್ಯಾರ್ಹತೆಯನ್ನು ಹೊಂದಿರದ ಕಾರಣ ಕ್ರಮಬದ್ದ ನಿರ್ಣಯನ್ನು ಕೈಗೊಳ್ಳಲಾಗಿದೆ. 

ಇ ಟೆಂಡರ್‌ ಕುರಿತ ಆರೋಪಕ್ಕೆ ಪಾಲಿಕೆಯಲ್ಲಿ ಸ್ವಂತ ನಿಧಿಯಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಗಳ ಪೈಕಿ ರೂ. 5 ಲಕ್ಷ ಮೌಲ್ಯಕ್ಕೆ ಮೇಲ್ಪಟ್ಟ ಕಾಮಗಾರಿಗಳಿಗೆ ಮಾತ್ರ ಇ-ಪ್ರೊಕ್ಯುರ್‌ಮೆಂಟ್‌ ನಲ್ಲಿ ಹಾಗು ರೂ. 5 ಲಕ್ಷದ  ಕೆಳಗಿನ ಕಾಮಗಾರಿಗಳನ್ನು  Manual Tender ಮೂಲಕ ಕರೆಯಲಾಗುತ್ತಿದ್ದು ಬಹುತೇಕ ಎಲ್ಲಾ ಗುತ್ತಿಗೆದಾರರು ತಮ್ಮ ಹಂತದಲ್ಲಿಯೇ ಪರಸ್ಪರ ಒಳ ಒಪ್ಪಂದದ ಮೂಲಕ  ಕಾಮಗಾರಿಗಳನ್ನು  ಗೊತ್ತುಪಡಿಸಿಕೊಂಡು ಅಧಿಕ ಮೊತ್ತಕ್ಕೆ ಟೆಂಡರ್‌ ಪಡೆಯುತ್ತಿದ್ದು, ಈ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ಕೊರತೆ ಕಂಡುಬಂದಿತ್ತು. ಅಲ್ಲದೇ ಈ ಪದ್ದತಿಯಿಂದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಗುತ್ತಿಗೆದಾರರಿಗೆ ಸರ್ಕಾರ ರೂಪಿಸಿರುವ ಮೀಸಲಾತಿ ನಿಯಮದಂತೆ ಹಂಚಿಕೆ ಮಾಡಬೇಕಾದ ಕಾಮಗಾರಿಗಳಿಂದ ವಂಚಿತರಾಗಿ ಸಾಮಾಜಿಕ ನ್ಯಾಯಕ್ಕೆ ದಕ್ಕೆಯಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಗುತ್ತಿಗೆದಾರರು ಮತ್ತು ಕಾರ್ಪೋರೇಟರ್‌ಗಳ ಒಳ ಒಪ್ಪಂದಲ್ಲಿ, ತಮಗೆ ಬೇಕಾದ ಗುತ್ತಿಗೆದಾರರಿಂದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು. ಕಾಮಗಾರಿ ಅನುಷ್ಟಾನವನ್ನು ಕ್ರಮಬದ್ದವಾಗಿ ನಿರ್ವಹಿಸಲು ಹಾಗೂ ಸೋರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ಹಿಂದೆ ಪಾಲಿಕೆಯಲ್ಲಿ ಪಾಲನೆಯಾಗುತ್ತಿದ್ದ ರೂ. 5 ಲಕ್ಷ ವರೆಗಿನ ಮ್ಯಾನುವಲ್‌ ಟೆಂಡರನ್ನು ರದ್ದುಪಡಿಸಿ ರೂ. 1.00 ಲಕ್ಷಕ್ಕೂ ಮೀರಿದ ಎಲ್ಲಾ ಕಾಮಗಾರಿಗಳಿಗೆ ಇ-ಪ್ರೋಕ್ಯುರ್‌ಮೆಂಟ್‌ ವ್ಯವಸ್ಥೆಯಲ್ಲಿ ಟೆಂಡರ್‌ ಕರೆಯಲು  ತೀರ್ಮಾನ ಕೈಗೊಂಡಿರುತ್ತೇನೆ‌. 

ಈ ವ್ಯವಸ್ಥೆಯನ್ನು ಸೆಪ್ಟಂಬರ್‌ 2023 ರಿಂದ ಜಾರಿಗೊಳಿಸಿದ್ದು,  2023-24ನೇ ಸಾಲಿನಲ್ಲಿ ಪಾಲಿಕೆಯ ಸ್ವಂತ ಅನುದಾನದಲ್ಲಿ ರೂ. 83.00 ಕೋಟಿ ವೆಚ್ಚದಲ್ಲಿ ಸುಮಾರು 944 ಕಾಮಗಾರಿಗಳನ್ನು ನಿರ್ವಹಿಸಲಾಗಿದ್ದು, ಸದ್ರಿ ಕಾಮಗಾರಿಗಳಿಗೆ ಇ-ಟೆಂಡರ್‌ ಕರೆದಿರುವುದರಿಂದ ಸದ್ರಿ ಟೆಂಡರ್‌ನಲ್ಲಿ ಅತ್ಯಧಿಕ ಬಿಡ್‌ದಾರರು ಭಾಗವಹಿಸುತ್ತಿದ್ದಾರೆ. ಪ್ರತಿ ಬಿಡ್‌ನಲ್ಲಿಯೂ ಸಹ ಟೆಂಡರ್‌ ಪ್ರೀಮಿಯಂ ದರಕ್ಕಿಂತ ಸುಮಾರು 5 ರಿಂದ 10% ಕಡಿಮೆ ದರಕ್ಕೆ ಸಲ್ಲಿಕೆಯಾಗುತ್ತಿದ್ದು ಒಟ್ಟಾರೆ ರೂ. 10 ಕೋಟಿಯಷ್ಟು ಅನುದಾನ ಉಳಿಕೆಯಾಗಿದೆ. ಸದ್ರಿ ಅನುದಾನವನ್ನು ಮತ್ತಷ್ಟು ಅಭಿವೃದ್ದಿ ಕಾಮಗಾರಿಗಳಿಗೆ ವಿನಿಯೋಗಿಸಲು ಸಹಕಾರವಾಗುತ್ತಿರುವುದು ಕಂಡುಬಂದಿದೆ.  ಹಾಗೂ ಗುತ್ತಿಗೆಯಿಂದ ವಂಚಿತರಾಗುತ್ತಿದ್ದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಗುತ್ತಿಗೆದಾರರಿಗೆ ಕಾಮಗಾರಿಗಳ ಗುತ್ತಿಗೆಯನ್ನು ನೀಡುತ್ತಿದ್ದು ಸರ್ಕಾರ ಆಶಯದಂತೆ ಸಾಮಾಜಿಕ ನ್ಯಾಯವನ್ನು ಒದಗಿಸುತ್ತಿದ್ದೇ‌ನೆ ಎಂದು ಪಾಲಿಕೆ ಆಯುಕ್ತ ಆನಂದ ಸಿ.ಎಲ್ ಸ್ಪಷ್ಟನೆ ನೀಡಿದ್ದಾರೆ.

Mangalore city commissioner Anand CL alleged of corruption by Congress member Abdul Rauf