Bhatkal News, Pakistani Origin Mangalore: ಭಟ್ಕಳದಲ್ಲಿ 14, ಮಂಗಳೂರಿನಲ್ಲಿ ಇಬ್ಬರು ಪಾಕ್ ಮೂಲದ ಮಹಿಳೆಯರು ; ದೇಶ ತೊರೆಯಲು ಹೇಳಿದ್ದರೂ ಇಲ್ಲೇ ಮೊಕ್ಕಾಂ, ಅಧಿಕೃತ ಇಷ್ಟು ಅನಧಿಕೃತ ಎಷ್ಟೋ ? 

25-04-25 07:43 pm       Mangalore Correspondent   ಕರಾವಳಿ

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಸರ್ಕಾರ ಪಾಕಿಸ್ತಾನ ಪ್ರಜೆಗಳು ಕೂಡಲೇ ದೇಶ ಬಿಟ್ಟು ಹೋಗಬೇಕು ಎಂದು ಎಚ್ಚರಿಕೆ ನೀಡಿತ್ತು. ಆದರೆ ಭಾರತ- ಪಾಕಿಸ್ತಾನ ಮಧ್ಯೆ ಮದುವೆ ಸಂಬಂಧ ಏರ್ಪಟ್ಟವರು ಈ ಆದೇಶದಿಂದ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಕರಾವಳಿಯಲ್ಲಿ ಅಧಿಕೃತ ಮಾಹಿತಿ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 14 ಮಂದಿ ಮತ್ತು ಮಂಗಳೂರಿನಲ್ಲಿ ಇಬ್ಬರು ಪಾಕಿಸ್ತಾನ ಮೂಲದ ಯುವತಿಯರು ನೆಲೆಸಿದ್ದಾರೆ.

ಮಂಗಳೂರು, ಎ.25 : ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಸರ್ಕಾರ ಪಾಕಿಸ್ತಾನ ಪ್ರಜೆಗಳು ಕೂಡಲೇ ದೇಶ ಬಿಟ್ಟು ಹೋಗಬೇಕು ಎಂದು ಎಚ್ಚರಿಕೆ ನೀಡಿತ್ತು. ಆದರೆ ಭಾರತ- ಪಾಕಿಸ್ತಾನ ಮಧ್ಯೆ ಮದುವೆ ಸಂಬಂಧ ಏರ್ಪಟ್ಟವರು ಈ ಆದೇಶದಿಂದ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಕರಾವಳಿಯಲ್ಲಿ ಅಧಿಕೃತ ಮಾಹಿತಿ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 14 ಮಂದಿ ಮತ್ತು ಮಂಗಳೂರಿನಲ್ಲಿ ಇಬ್ಬರು ಪಾಕಿಸ್ತಾನ ಮೂಲದ ಯುವತಿಯರು ನೆಲೆಸಿದ್ದಾರೆ. ದೀರ್ಘಾವಧಿ ವೀಸಾದಲ್ಲಿ ಭಾರತಕ್ಕೆ ಬಂದಿರುವ ಇವರಿಗೆ ದೇಶದ ಪೌರತ್ವ ಸಿಕ್ಕಿಲ್ಲ. ಹೀಗಾಗಿ ಇವರನ್ನು ಸರ್ಕಾರ ಬಲವಂತದಿಂದ ಹೊರ ಹಾಕುತ್ತಾ ಎನ್ನುವ ಆತಂಕ ಸಂಬಂಧಿಕರಲ್ಲಿದೆ. 

ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ನಡೆದ ಬೆನ್ನಲ್ಲೇ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರದ ಗಡುವು ನೀಡಿತ್ತು. ಭಟ್ಕಳದಲ್ಲಿ 14 ಜನ ಪಾಕಿಸ್ತಾನ ಮೂಲದ ಮಹಿಳೆಯರಿದ್ದು ಸದ್ಯಕ್ಕೆ ತಾವು ಇದ್ದಲ್ಲೇ ಮೊಕ್ಕಾಂ ಹೂಡಿದ್ದಾರೆ. 

ಭಟ್ಕಳದ ನವಾಯತ್ ಹಾಗೂ ಪಾಕಿಸ್ತಾನದ ನವಾಯತ್ ಕುಟುಂಬದ ನಡುವೆ ಹಿಂದಿನಿಂದಲೂ ವೈವಾಹಿಕ ಸಂಬಂಧಗಳು ನಡೆಯುತ್ತಿದ್ದು ಕೊಡು ಕೊಳ್ಳುವಿಕೆ ನಡೆದುಬಂದಿದೆ. ಇವರಿಗೆ ಮಕ್ಕಳೂ ಜನಿಸಿದ್ದಾರೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಇವರ ವೀಸಾ ನವೀಕರಣವಾಗುತ್ತಿತ್ತು. ಇದೀಗ ಎಲ್ಲ ಪಾಕಿಸ್ತಾನಿಯರ ವೀಸಾ ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಹೀಗಾಗಿ ಇವರ ವೀಸಾ ರದ್ದಾಗುತ್ತಾ ಎನ್ನುವ ಕುತೂಹಲವಿದ್ದು ಪೊಲೀಸರು ಮೇಲಿನಿಂದ ಬರುವ ಆದೇಶಕ್ಕಾಗಿ ಕಾಯುತ್ತಿದ್ದಾರೆ. 

ಮಹಿಳೆಯರು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಪರಿಗಣಿಸಿಲ್ಲ‌. ಭಾರತದಲ್ಲಿ ಹುಟ್ಟಿದ ಇವರ ಮಕ್ಕಳಿಗೂ ಪೌರತ್ವ ನೀಡಿಲ್ಲ. ಇವರು ಅಧಿಕೃತವಾಗಿ ಬಂದು ಉಳಿದುಕೊಂಡವರಾಗಿದ್ದರೆ, ಅನಧಿಕೃತವಾಗಿ ಬಂದು ಉಳಿದವರ ಪಟ್ಟಿ ದೊಡ್ಡದಿರಬಹುದು ಎಂದು ಹೇಳಲಾಗುತ್ತಿದೆ. ಪೊಲೀಸರು ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. 

ಮಂಗಳೂರಿನಲ್ಲಿ ಸದ್ಯಕ್ಕೆ ಇಬ್ಬರು ಪಾಕ್ ಮೂಲದ ಯುವತಿಯರು ಇದ್ದಾರೆನ್ನುವ ಮಾಹಿತಿಯಿದ್ದು ಅವರ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದಾರೆ. ಇನ್ನಷ್ಟು ಮಂದಿ ಬಾಂಗ್ಲಾ ಮತ್ತು ಪಾಕ್ ಮೂಲದವರು ಕರಾವಳಿಯಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಅವರ ಬಗ್ಗೆ ಪೊಲೀಸರಲ್ಲು ಮಾಹಿತಿ ಇಲ್ಲ. ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಆಗಿಂದಾಗ್ಗೆ ಆರೋಪ ಕೇಳಿಬಂದರೂ, ಅವರು ಆಧಾರ್ ಇನ್ನಿತರ ಐಡಿ ಕಾರ್ಡ್ ಗಳನ್ನು ಮಾಡಿಕೊಂಡು ಸರ್ಕಾರದ ಕಣ್ಣಿನಿಂದ ಬಚಾವ್ ಆಗುತ್ತಿದ್ದಾರೆಂದು ಪೊಲೀಸ್ ಮೂಲಗಳೇ ಹೇಳುತ್ತಿವೆ.

14 Pakistani Origin Women Remain in Bhatkal Amid Deportation Orders, 2 in Mangalore Remain Unaccounted.