Mangalore, Harish Kumar: ಎರಡು ನಿಮಿಷದ ಆಜಾನ್ ನಿಲ್ಲಿಸಲು ಹೋಗಿ ಈಗ ಮೈಕ್ ಕಟ್ಟಲು ತೊಂದ್ರೆ ಅಂತಿದ್ದಾರೆ, ಕಾನೂನು ಮಾಡಿದಾಗ ಗೊತ್ತಿರಲಿಲ್ವಾ..? ಯಕ್ಷಗಾನ, ನಾಟಕ ಯಾವುದಕ್ಕು ತೊಂದ್ರೆ ಆಗಿಲ್ಲ, ಈಗ ಯಾಕೆ ಹೊಡಿ ಬಡಿ ಭಾಷಣ ಮಾಡ್ತಿಲ್ಲ ಇವರು..?

11-09-25 09:38 pm       Mangalore Correspondent   ಕರಾವಳಿ

ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಇದ್ದಾಗ ಆಜಾನ್ ನಿಲ್ಲಿಸುವ ಉದ್ದೇಶದಿಂದ ರಾತ್ರಿ ವೇಳೆ ಧ್ವನಿವರ್ಧಕ ನಿಷೇಧಿಸುವ ಕಾನೂನು ಮಾಡಿದ್ದರು.

ಮಂಗಳೂರು, ಸೆ.11 : ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಇದ್ದಾಗ ಆಜಾನ್ ನಿಲ್ಲಿಸುವ ಉದ್ದೇಶದಿಂದ ರಾತ್ರಿ ವೇಳೆ ಧ್ವನಿವರ್ಧಕ ನಿಷೇಧಿಸುವ ಕಾನೂನು ಮಾಡಿದ್ದರು. ಆಗ ಈ ಜಿಲ್ಲೆಯ ಶಾಸಕರೇ ಅಧಿಕಾರದಲ್ಲಿದ್ದರು. ಪಕ್ಷಪಾತದಿಂದ ಮಾಡಿದ್ದ ಕಾನೂ‌ನಿನ ಬಿಸಿ ಈಗ ಎಲ್ಲರಿಗೂ ತಟ್ಟುತ್ತಿದೆ. ಕಾನೂನು ಮುಂದಿಟ್ಟು ಇನ್ನೊಬ್ಬರಿಗೆ ತೊಂದರೆ ಮಾಡಲು ಹೋದರೆ ಎಲ್ಲರಿಗೂ ತೊಂದರೆ ಆಗುತ್ತದೆ. ಎರಡು ನಿಮಿಷದ ಆಜಾನ್ ಕೇಳಿಸಿಕೊಳ್ಳಲು ಆಗಿಲ್ಲ ಎಂದು ಕಾನೂನು ಮಾಡಿ ಈಗ ಎಲ್ಲದಕ್ಕೂ ತೊಂದರೆ ಆಗಿದೆ. ಇಂತಹ ಘಟನೆಗಳಿಗೆ ನಾವೇ ಕಾರಣ. ಈಗ ಅಧಿಕಾರಿಗಳು ಬಿಡ್ತಾ ಇಲ್ಲ ಅಂದ್ರೆ ಹೇಗೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ. 

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ನಮ್ಮ ಸರ್ಕಾರ ಹಿಂದು - ಮುಸ್ಲಿಂ ತಾರತಮ್ಯ ಮಾಡಿಲ್ಲ, ಮಾಡೋದೂ ಇಲ್ಲ. ಈಗಲೂ ರಾತ್ರಿ ಹತ್ತು ಗಂಟೆ ವರೆಗೆ ಅಂತ ಕಾನೂನು ಮಾಡಿರುವುದರಿಂದ ಶಾಮಿಯಾನ, ಮೈಕ್ ಹಾಕಿದ ಯಾರಿಗೂ ತೊಂದರೆ ಆಗಿಲ್ಲ. ಅವರಿಗೆ ಬಾಡಿಗೆ ಪೂರ್ತಿ ಸಿಗುತ್ತೆ ಹೌದಲ್ವಾ.. ಯಾರು ಪರ್ಮಿಷನ್ ಪಡೆಯದೆ ಹಾಕುತ್ತಾರೋ ಅವರಿಗೆ ಮಾತ್ರ ತೊಂದರೆಯಾಗಿದೆ. ಯಕ್ಷಗಾನ, ನಾಟಕಕ್ಕೂ ತೊಂದರೆ ಆಗಿಲ್ಲ. ಕಾನೂನು ಪ್ರಕಾರ ಎಷ್ಟು ಡೆಸಿಬಲ್ ಸೌಂಡ್ ಇರಬೇಕೋ ಅಷ್ಟು ಇಡುವುದಕ್ಕೆ ತೊಂದರೆ ಇಲ್ಲ ಎಂದರು.  

ಮೂರು- ನಾಲ್ಕು ತಿಂಗಳ ಹಿಂದೆ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಟ್ಟು ಕೊಲೆ ದೊಂಬಿಯಾಗಿ ಅಶಾಂತಿ ಉಂಟಾಗಿತ್ತು. ಎಸ್ಪಿ, ಕಮಿಷನರ್ ಬದಲಾದ ಬಳಿಕ ವಾತಾವರಣ ಪೂರ್ತಿ ಬದಲಾಯಿತು. ಕಾನೂನು ಎಲ್ಲ ಕಡೆಯೂ ಒಂದೇ. ಅದನ್ನು ಬಿಗಿಯಾಗಿ ಅನುಷ್ಠಾನ ಮಾಡಿದ್ದರಿಂದ ಶಾಂತಿ ನಿರ್ಮಾಣ ಆಯ್ತು. ಈಗ ಡಿಜೆ, ಪಾರ್ಟಿ, ಧ್ವನಿವರ್ಧಕ ವಿಷಯದಲ್ಲಿ ಹಿಂದು ಸಂಘಟನೆಗಳ ನೇತೃತ್ವದಲ್ಲಿ ಆಕ್ಷೇಪ ತೆಗೆದಿದ್ದಾರೆ. ಜನರಿಗೆ ಅಕ್ರಮ ನಿಲ್ಲಬೇಕಿತ್ತು, ಶಾಂತಿ ನೆಲೆಸಬೇಕಿತ್ತು. ಅಕ್ರಮ ಚಟುವಟಿಕೆ ನಿಲ್ಲಿಸಿ ಶಾಂತಿ ಸ್ಥಾಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ. 

ಎರಡು ನಿಮಿಷದಂತೆ ದಿನದಲ್ಲಿ ಐದು ಬಾರಿ ಅಂದರೆ, ಒಟ್ಟು ಹತ್ತು ನಿಮಿಷ ಆಜಾನ್ ಕೂಗುವುದರಿಂದ ಯಾವ ಪರೀಕ್ಷೆಗೂ ತೊಂದರೆ ಆಗುತ್ತಿರಲಿಲ್ಲ. ಈಗ ಅವರೇ ಕಾನೂನು ಮಾಡಿ ತೊಂದರೆ ಆಗಿದೆ ಎಂದು ಹೇಳುತ್ತಿದ್ದಾರೆ. ಹಿಂದೆ ಹೊಡಿ ಬಡಿ ಭಾಷಣಗಳು ಭಾರೀ ಜೋರಾಗಿದ್ದವು. ಈಗ ಯಾಕೆ ಹಿಂದು ರಕ್ಷಕರು ಭಾಷಣ ಮಾಡ್ತಿಲ್ಲ. ಅವರಿಗೆ ಧೈರ್ಯ ಇದ್ದರೆ ಭಾಷಣ ಮಾಡಬೇಕಲ್ವಾ.. ಇವರೆಲ್ಲಾ ಹೇಡಿಗಳು. ಹಿಂದುತ್ವದ ಹೆಸರಲ್ಲಿ ಮತ ಬೇಟೆ ನಡೆಸುವವರು. ಮತಕ್ಕಾಗಿ ಅಷ್ಟೇ ಹಿಂದು ಧರ್ಮದ ವಿಷಯ ತೆಗೆಯುತ್ತಾರೆ. ಆಯಾ ಧರ್ಮದ ನಿಯಮಗಳನ್ನು ಪಾಲನೆ ಮಾಡಿದರೆ ಸಾಕು. ಧರ್ಮ ರಕ್ಷಣೆ ತಾನಾಗೇ ಆಗುತ್ತದೆ. ಧರ್ಮ ರಕ್ಷಣೆಗೆ ರಕ್ತ ಚೆಲ್ಲಬೇಕಾಗಿಲ್ಲ ಎಂದು ಹರೀಶ್ ಕುಮಾರ್ ಹೇಳಿದರು. 

ಮೊನ್ನೆ ರಸ್ತೆ ಗುಂಡಿಗೆ ಬಿದ್ದು ಹಿಂದು ಮಹಿಳೆ ಸತ್ತಾಗ ಯಾಕೆ ಬಿಜೆಪಿ ನಾಯಕರು ಬೊಬ್ಬೆ ಹೊಡೆದಿಲ್ಲ. ಅದು ಹಿಂದು ಅಲ್ವಾ.. ಮುಸ್ಲಿಮನಿಂದ ಕೊಲೆಯಾದ್ರೆ ಮಾತ್ರ ಧರ್ಮಕ್ಕೆ ಹಾನಿ ಆಯ್ತೆಂದು ಬೊಬ್ಬೆ ಹೊಡೆಯೋದಾ.. ಇಂಥ ಹೇಡಿಗಳಿಂದಾಗಿ ಹಿಂದು ಧರ್ಮಕ್ಕೆ ಸಂಕಷ್ಟ ಬಂದಿದೆ. ಈಗ ರಾಜ್ಯದಲ್ಲಿ ನಿಷೇಧ ಇರುವ ಡಿಜೆಯ ಬಗ್ಗೆ ಧ್ವನಿ ಎತ್ತಿದ್ದಾರೆ. ಡಿಜೆ ಸೌಂಡಿನಿಂದ ಈ ಬಾರಿ ಎಷ್ಟು ಜನ ಮೃತಪಟ್ಟಿದ್ದಾರೆ. ಇವತ್ತು ಕೂಡ 30 ವರ್ಷದ ಯುವಕ ಮೃತಪಟ್ಟಿದ್ದಾನೆ. ಕರ್ಕಶ ಧ್ವನಿಗೆ ಕುಣಿಯುವ ಡಿಜೆ ನಮಗೆ ಬೇಕಾಗಿಲ್ಲ. ಅದಕ್ಕೆ ನಮ್ಮ ಸರ್ಕಾರ ನಿಷೇಧ ಹೇರಿದೆ. ಷರತ್ತು ವಿಧಿಸಿ ಹಿಂದುಗಳಿಗೆ ಮಾತ್ರ ತೊಂದರೆ ಮಾಡ್ತಿದ್ದಾರೆ ಎನ್ನುವುದು ಸುಳ್ಳು. ಅಂತಹ ದಾಖಲೆ ಇದ್ದರೆ ಕೊಡಲಿ, ನಾವು ಯಾವುದೇ ತಾರತಮ್ಯ ಮಾಡಿಲ್ಲ ಎಂದರು. 

ಜಿಎಸ್ಟಿ ಇಳಿಕೆಯ ವಿಚಾರವನ್ನು ಸ್ವಾತಂತ್ರ್ಯ ಬಂದಾಗೆ ಸಂಭ್ರಮ ಮಾಡುತ್ತಿದ್ದಾರೆ.  ಎಂಟು ವರ್ಷ ಸುಲಿಗೆ ಮಾಡಿ 5ರಿಂದ 18 ಪರ್ಸೆಂಟ್ ಮಾತ್ರ ಜಿಎಸ್ಡಿ ತೆಗೀರಿ, ಅದಕ್ಕಿಂತ ಹೆಚ್ಚು ಮಾಡಬೇಡಿ ಎಂದು ರಾಹುಲ್ ಗಾಂಧಿ ಹೇಳಿದರೆ ಕೇಳಲಿಲ್ಲ. ಅದನ್ನು 28 ಪರ್ಸೆಂಟ್ ಮಾಡಿದ್ರು. ಈಗ ಕಾಂಗ್ರೆಸ್ ಹೇಳಿದ್ದನ್ನೇ ಮಾಡ್ತಾ ಇದ್ದಾರೆ‌. ಜನರನ್ನು ಸುಲಿಗೆ ಮಾಡಿದ್ದಕ್ಕೆ ಗಬ್ಬರ್ ಸಿಂಗ್ ಟ್ಯಾಕ್ಸ್ ಅಂತ ಕಾಂಗ್ರೆಸ್ ಟೀಕಿಸಿತ್ತು. ಹಿಂದೆ ಆಧಾರ್ ಕಾರ್ಡ್ ಮಾಡಿದಾಗಲೂ ಅದನ್ನು ನಿಲ್ಲಿಸ್ತೀವಿ, ಅದರಲ್ಲಿ ಲಕ್ಷ ಕೋಟಿ ತಿಂದಿದ್ದಾರೆ ಅಂತ ಬೊಬ್ಬಿಟ್ಟವರು ಯಾಕೆ ನಿಲ್ಲಿಸಲಿಲ್ಲ. ಈಗ ಓಟ್ ಮಾಡುವುದಕ್ಕೂ ಆಧಾರ್ ಕಾರ್ಡ್ ತೋರಿಸಬಹುದು ಅಂತಿದ್ದಾರೆ.  ಜಿಎಸ್ಟಿಯಲ್ಲಿ ರಾಹುಲ್ ಹೋರಾಟಕ್ಕೆ ಜಯ ಸಿಕ್ಕಿದೆ ಎನ್ನುವುದನ್ನು ಅವರೇ ಒಪ್ಪಿಕೊಂಡಿದ್ದಾರೆ ಎಂದರು. 

ಹೆದ್ದಾರಿಯಲ್ಲಿ 60 ಕಿಮೀಗೆ ಟೋಲ್ ಇಲ್ಲ ಎಂದು ಸಚಿವ ಗಡ್ಕರಿ ಸಂಸತ್ತಿನಲ್ಲಿ ಹೇಳಿ ಎರಡು ವರ್ಷ ಆಯ್ತು. ಟೋಲ್ ಸಂಗ್ರಹ ಮಾಡ್ತಾನೇ ಇದ್ದಾರೆ, ಅದೇ ರೀತಿ ರಸ್ತೆ ನಿರ್ವಹಣೆ ಮಾಡಬೇಕಲ್ವಾ.. ಮೋರಿ ಚರಂಡಿ ಬೇಡ, ಲವ್ ಜಿಹಾದ್ ಸಾಕು ಎನ್ನುತ್ತಿದ್ದರು. ಈಗ ಅದನ್ನೇ ಬಿಜೆಪಿಯವರು ಮಾಡುತ್ತಿದ್ದಾರೆ‌‌. ಹೆದ್ದಾರಿಯನ್ನು ಸರಿಪಡಿಸಲು ಆಗ್ರಹಿಸಿ ನಾಳೆ ಸೆ.12ರಂದು ನಂತೂರಿನಿಂದ ಹೆದ್ದಾರಿ ಇಲಾಖೆ ಕಚೇರಿ ವರೆಗೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದ್ದು  ಎಲ್ಲ ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಸದಾಶಿವ ಉಳ್ಳಾಲ್, ನೀರಜ್ ಪಾಲ್, ಶಶಿಧರ ಹೆಗ್ಡೆ, ಅಪ್ಪಿ, ಶಾಹುಲ್ ಹಮೀದ್ ರವೀಂದ್ರ ಕಂಬಳಿ ಮತ್ತಿತರರಿದ್ದರು.

Dakshina Kannada District Congress President Harish Kumar has strongly criticized the BJP for politicizing the loudspeaker issue, stating that the very law they introduced to curb Azaan during the Bommai government has now backfired, causing trouble for everyone.