ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ; ಆಧುನಿಕ ಶಸ್ತ್ರಚಿಕಿತ್ಸೆಗಳಿಗೆ ತೆರೆದುಕೊಂಡ ರಾಜ್ಯದ ಎರಡನೇ ಸರ್ಕಾರಿ ಆಸ್ಪತ್ರೆ, ಕೆಎಂಸಿ ವೈದ್ಯರ ತಂಡದಿಂದ ಸೇವೆ, ಬಿಪಿಎಲ್ ಮಂದಿಗೆ ವರದಾನ ! 

06-10-25 04:57 pm       Mangalore Correspondent   ಕರಾವಳಿ

ಬೆಂಗಳೂರಿನ ಸಿ.ವಿ. ರಾಮನ್‌ ಜನರಲ್‌ ಆಸ್ಪತ್ರೆ ಬಳಿಕ ರಾಜ್ಯದಲ್ಲಿ  ಪ್ರಥಮ ಬಾರಿಗೆ ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭಿಸಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬಿಪಿಎಲ್ ಕಾರ್ಡುದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ದೊರೆಯಲಿದೆ. 

ಮಂಗಳೂರು, ಅ.6 : ಬೆಂಗಳೂರಿನ ಸಿ.ವಿ. ರಾಮನ್‌ ಜನರಲ್‌ ಆಸ್ಪತ್ರೆ ಬಳಿಕ ರಾಜ್ಯದಲ್ಲಿ  ಪ್ರಥಮ ಬಾರಿಗೆ ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭಿಸಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬಿಪಿಎಲ್ ಕಾರ್ಡುದಾರರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ದೊರೆಯಲಿದೆ. 

ವೆನ್ಲಾಕ್‌ ಆಸ್ಪತ್ರೆಯ ಸರ್ಜಿಕಲ್‌ ಬ್ಲಾಕ್‌ನಲ್ಲಿ ಕೆಎಂಸಿ ಆಸ್ಪತ್ರೆಯಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಕ್ಯಾಥ್‌ಲ್ಯಾಬ್‌ ನಿರ್ಮಿಸಲಾಗಿದೆ. ತಜ್ಞ ವೈದ್ಯರು, ನರ್ಸಿಂಗ್‌ ಸಿಬ್ಬಂದಿ, ತಂತ್ರಜ್ಞರ ನಿಯೋಜನೆ ಮಾಡಿದ್ದು, ಸ್ಟಂಟ್‌ ಮತ್ತಿತರ ಹೃದಯ ತೊಂದರೆಗಳಿಗೆ ಬಳಕೆಯಾಗುವ ಔಷಧಗಳನ್ನು ರಾಜ್ಯ ಸರಕಾರ ಪೂರೈಕೆ ಮಾಡುತ್ತದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಹೊಸ ವ್ಯವಸ್ಥೆಯನ್ನು ಸೆ.21ರಂದು ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸಿದ್ದು, ಸೆ.29ರಂದು ಪ್ರಥಮ ಆಂಜಿಯೋಪ್ಲಾಸ್ಟಿ ಮತ್ತು ಆಂಜಿಯೋಗ್ರಾಂ ಮಾಡಲಾಗಿತ್ತು. ಅ.3ರ ತನಕ ಒಟ್ಟು 4 ಆಂಜಿಯೊಗ್ರಾಂ ಮತ್ತು 5 ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ. 


 
ರಾಜ್ಯ ಮತ್ತು ಕೇಂದ್ರ ಸರಕಾರದ ಜಂಟಿ ಪಾಲುದಾರಿಕೆಯ ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಬಿಪಿಎಲ್‌ ಕಾರ್ಡ್‌ದಾರರಿಗೆ ಲಭ್ಯ 8 ಚಿಕಿತ್ಸೆಗಳೂ ಉಚಿತವಾಗಿದ್ದು, ಆಂಜಿಯೋಗ್ರಾಂಗೆ ಮಾತ್ರ ಎಬಿಆರ್‌ಕೆಯಲ್ಲಿ ಯಾವುದೇ ಕೋಡ್‌ ನಿಗದಿ ಮಾಡದ ಹಿನ್ನೆಲೆಯಲ್ಲಿ ಬಿಪಿಎಲ್‌ ಕಾರ್ಡ್‌ದಾರರೂ 5 ಸಾವಿರ ರೂ. ಪಾವತಿ ಮಾಡಬೇಕಾಗುತ್ತದೆ. ಎಪಿಎಲ್‌ ಕಾರ್ಡ್‌ದಾರರಿಗೆ ಸರಕಾರದ ಎಬಿಎಆರ್‌ಕೆ ಮಂಜೂರಾತಿ ಮೊತ್ತ ನಿಗದಿಪಡಿಸಲಾಗಿದೆ. 

ಆಯುಷ್ಮಾನ್‌ ಕಾರ್ಡ್‌ ಮಾಡಿಸಿದವರಿಗೆ ಶೇ. 30 ರಿಯಾಯಿತಿ ಇರಲಿದ್ದು ಶೇ. 70ರಷ್ಟು ಮೊತ್ತ ಪಾವತಿಸಬೇಕು. ಚಿಕಿತ್ಸೆಯು ಎಬಿಎಆರ್‌ಕೆ ಯೋಜನೆಯನ್ನೇ ಆಶ್ರಯಿಸಿರುವುರಿಂದ ಮೊತ್ತ ಪಾವತಿ ಅನಿವಾರ್ಯ. ವರ್ಷಕ್ಕೆ ಹೃದ್ರೋಗ ಚಿಕಿತ್ಸೆ ನೀಡುವ ಯಂತ್ರಗಳ ನಿರ್ವಹಣೆಗೆ 10-15 ಕೋಟಿ ರೂ. ಅಗತ್ಯವಿದೆ ಎನ್ನುತ್ತಾರೆ ಅಧಿಕಾರಿಗಳು. ಕೆಎಂಸಿಯ ಹೃದ್ರೋಗ ತಜ್ಞ ಡಾ. ನರಸಿಂಹ ಪೈ ನೇತೃತ್ವದ ತಂಡ ಆಂಜಿಯೋಗ್ರಾಂ, ಆಂಜಿಯೋಪ್ಲಾಸ್ಟಿ ಮಾಡುತ್ತಿದ್ದು, ಮುಂದೆ ಪೇಸ್‌ಮೇಕರ್‌, ಬ್ರೈನ್‌ ಆಂಜಿಯೋಗ್ರಾಂ ಚಿಕಿತ್ಸೆಯೂ ದೊರೆಯಲಿದೆ. ಅಲ್ಲದೆ, ಮಕ್ಕಳ ಹೃದಯ ರಂಧ್ರ ಶಸ್ತ್ರಚಿಕಿತ್ಸೆಗೆ ಎಎಸ್‌ಡಿ ಮತ್ತು ವಿಎಸ್‌ಡಿ ಮೊದಲಾದ ಚಿಕಿತ್ಸೆಯೂ ಲಭಿಸಲಿದೆ. 

ವೆನ್ಲಾಕ್ ಆಸ್ಪತ್ರೆಯ ಸೀಮಿತ ಸಿಬ್ಬಂದಿ, ನಿಯಮಿತ ಸೌಲಭ್ಯ ಮೂಲಕ ಕ್ಯಾಥ್‌ಲ್ಯಾಬ್ ಆರಂಭಗೊಂಡಿದೆ. ಮೂವರು ತಜ್ಞ ವೈದ್ಯರಿದ್ದು, ನಿಯಮಿತ ಅವಧಿಯ ಸೇವೆ ನೀಡಲಿದ್ದಾರೆ. ಸರಕಾರಿ ರಜೆ ಇದ್ದರೆ ಆರೋಗ್ಯ ಮಿತ್ರರು ಇರುವುದಿಲ್ಲ. ಹಾಗಾಗಿ ಹೃದ್ರೋಗ ಚಿಕಿತ್ಸೆಯೂ ಸಾಧ್ಯವಾಗುವುದಿಲ್ಲ. ಶಸ್ತ್ರಚಿಕಿತ್ಸೆ ನಡೆದು, 24 ಗಂಟೆಯೊಳಗೆ ಎಬಿಆರ್‌ಕೆಗೆ ದಾಖಲೆ ಅಪ್‌ಲೋಡ್‌ ಮಾಡದಿದ್ದರೆ, ಉಚಿತ ಸೌಲಭ್ಯವೂ ಮಂಜೂರಾಗುವುದಿಲ್ಲ. ಈ ಬಗ್ಗೆ ರಾಜ್ಯ ಸರಕಾರ ಗಮನಹರಿಸಬೇಕಿದೆ.

After Bengaluru’s CV Raman General Hospital, Mangaluru’s Wenlock District Hospital has become the state’s second government facility to provide advanced cardiac care, including angioplasty and angiogram services. A Cath Lab worth ₹5 crore has been set up with the support of KMC doctors, with free treatment available for BPL cardholders under Ayushman Bharat and Arogya Karnataka schemes.