Malayalam actor Jayakrishnan Arrest, Mangalore: ಕ್ಯಾಬ್ ಚಾಲಕನಿಗೆ ಮುಸ್ಲಿಂ ಟೆರರಿಸ್ಟ್ ಎಂದು ಹೇಳಿ ನಿಂದನೆ ; ಮಲಯಾಳಂ ನಟ ಜಯಕೃಷ್ಣನ್ ಸೇರಿ ಇಬ್ಬರು ಮಂಗಳೂರು ಪೊಲೀಸರ ವಶಕ್ಕೆ, ತೀವ್ರ ವಿಚಾರಣೆ 

11-10-25 07:18 pm       Mangalore Correspondent   ಕರಾವಳಿ

ಮುಸ್ಲಿಂ ಟೆರರಿಸ್ಟ್ ಎಂದು ಕ್ಯಾಬ್ ಚಾಲಕನಿಗೆ ನಿಂದಿಸಿದ ಪ್ರಕರಣದಲ್ಲಿ ಮಲಯಾಳಂ ನಟ ಜಯಕೃಷ್ಣನ್ ಮತ್ತು ಅವರ ಸ್ನೇಹಿತ ಸಂತೋಷ್ ಅಬ್ರಾಹಂ ಅವರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

ಮಂಗಳೂರು, ಅ.11 : ಮುಸ್ಲಿಂ ಟೆರರಿಸ್ಟ್ ಎಂದು ಕ್ಯಾಬ್ ಚಾಲಕನಿಗೆ ನಿಂದಿಸಿದ ಪ್ರಕರಣದಲ್ಲಿ ಮಲಯಾಳಂ ನಟ ಜಯಕೃಷ್ಣನ್ ಮತ್ತು ಅವರ ಸ್ನೇಹಿತ ಸಂತೋಷ್ ಅಬ್ರಾಹಂ ಅವರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

ಓಲಾ ಕ್ಯಾಬ್ ಬುಕ್ ಮಾಡಿ, ಕರೆ ಮಾಡಿದ್ದಕ್ಕೆ ಚಾಲಕನಿಗೆ ಟೆರರಿಸ್ಟ್ ಎಂದು ಬೈದಿದ್ದ ಆರೋಪದಲ್ಲಿ ಮಂಗಳೂರಿನ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಲಯಾಳಂ ಸಿನಿಮಾ ನಟ ಜಯಕೃಷ್ಣನ್, ವಿಮಲ್ ಮತ್ತು ಸಂತೋಷ್ ವಿರುದ್ಧ ಕೇಸು ದಾಖಲಾಗಿತ್ತು. 

ಜಯಕೃಷ್ಣನ್, ಸಂತೋಷ್ ಅಬ್ರಾಹಂ ಮತ್ತು ವಿಮಲ್ ಅವರು ಮಂಗಳೂರಿಗೆ ವಿಹಾರ ನಿಮಿತ್ತ ಆಗಮಿಸಿದ್ದು ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಸೆ.9ರಂದು ರಾತ್ರಿ ಇವರು ಓಲಾ ಮತ್ತು ರ್ಯಾಪಿಡೋ ಏಪ್ ನಲ್ಲಿ ಕ್ಯಾಬ್ ಬುಕ್ ಮಾಡಿದ್ದರು. ಟ್ಯಾಕ್ಸಿ ಬುಕ್ ಆಗಿದ್ದರಿಂದ ಕ್ಯಾಬ್ ಚಾಲಕ ಶಫೀಕ್ ಅಹ್ಮದ್ ಪಿಕಪ್ ಎಲ್ಲಿಂದ ಎಂದು ಕೇಳಲು ಕರೆ ಮಾಡಿದ್ದರು. ಆದರೆ ಕರೆ ಸ್ವೀಕರಿಸಿದ ವ್ಯಕ್ತಿಗಳು ಮದ್ಯದ ನಶೆಯಲ್ಲಿ ಚಾಲಕ ಮುಸ್ಲಿಂ ಎಂದು ತಿಳಿದು ಮುಸ್ಲಿಂ ತೀವ್ರವಾದಿ, ಟೆರರಿಸ್ಟ್ ಎಂದು  ಅಪಹಾಸ್ಯ ಮಾಡುವ ರೀತಿ ನಿಂದಿಸಿದ್ದಾರೆ. ಇದರ ಆಡಿಯೋ ರೆಕಾರ್ಡ್ ಆಗಿದ್ದು ಪೊಲೀಸರಿಗೆ ನೀಡಿದ್ದಾರೆ. 

ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ಚಾಲಕ ಅಹ್ಮದ್ ಶಫೀಕ್ ಉರ್ವಾ ಠಾಣೆಗೆ ದೂರು ನೀಡಿದ್ದು BNS 352, 353(2) ಅಡಿ ಪ್ರಕರಣ ದಾಖಲಾಗಿತ್ತು. ಉರ್ವಾ ಠಾಣೆ ಪೊಲೀಸರು ಮಲಯಾಳಂ ನಟನನ್ನು ಬೆಳಗ್ಗಿನಿಂದಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಂಠಪೂರ್ತಿ ಕುಡಿದು ಮಾತನಾಡಿದ್ದಾಗಿ ನಟ ಜಯಕೃಷ್ಣನ್ ಒಪ್ಪಿಕೊಂಡಿದ್ದು ಜೊತೆಗಿದ್ದ ಮೂವರದ್ದೂ ವಾಯ್ಸ್ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಮೂವರಲ್ಲಿ ಯಾರು ಆ ರೀತಿ ಮಾತನಾಡಿದ್ದು ಎಂದು ತಿಳಿಯಲು ವಾಯ್ಸ್ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಿದ್ದಾರೆ. ‌ಜಯಕೃಷ್ಣನ್ ತಾನು ಮಾತನಾಡಿದ್ದಲ್ಲ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ವಾಯ್ಸ್ ಇವರದ್ದೇ ಎಂದು ಸಾಬೀತಾದ ಬಳಿಕ ಬಂಧನ ಆಗಲಿದೆ ಎನ್ನಲಾಗುತ್ತಿದೆ.

Mangaluru Police have detained Malayalam actor Jayakrishnan and his friend Santhosh Abraham for allegedly abusing a cab driver with communal slurs and calling him a “Muslim terrorist.” The incident occurred on September 9 when the duo, reportedly intoxicated, booked a ride via Ola and Rapido.