Mangalore Land Fraud, Lawyer, Mohiuddin Bava: ವಿದೇಶದಲ್ಲಿದ್ದ ತಮ್ಮನ ಜಾಗವನ್ನೇ ತನ್ನ ಹೆಸರಿಗೆ ಜಿಪಿಎ ಮಾಡಿಕೊಂಡಿದ್ದ ಅಣ್ಣ ; ಮಂಗಳೂರಿನ ನೋಟರಿ ವಕೀಲ ಸೇರಿ ಮಾಜಿ ಶಾಸಕ ಮೊಯ್ದೀನ್ ಬಾವ ಆಪ್ತ ಸಂಬಂಧಿಕರ ಮೇಲೆ ಎಫ್ಐಆರ್ ! 

24-10-25 07:57 pm       Mangalore Correspondent   ಕರಾವಳಿ

ನಕಲಿ ಜಿಪಿಎ (ಪವರ್ ಆಫ್ ಅಟಾರ್ನಿ) ಮಾಡಿ ತನ್ನ ತಮ್ಮನ ಹೆಸರಲ್ಲಿದ್ದ ಜಾಗವನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ದ್ರೋಹ ಎಸಗಿದ ಬಗ್ಗೆ ಮಂಗಳೂರು ಉತ್ತರ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಹತ್ತಿರದ ಸಂಬಂಧಿಗಳು ಮತ್ತು ನೋಟರಿ ವಕೀಲರಿಬ್ಬರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮಂಗಳೂರು, ಅ.24 : ನಕಲಿ ಜಿಪಿಎ (ಪವರ್ ಆಫ್ ಅಟಾರ್ನಿ) ಮಾಡಿ ತನ್ನ ತಮ್ಮನ ಹೆಸರಲ್ಲಿದ್ದ ಜಾಗವನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ದ್ರೋಹ ಎಸಗಿದ ಬಗ್ಗೆ ಮಂಗಳೂರು ಉತ್ತರ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರ ಹತ್ತಿರದ ಸಂಬಂಧಿಗಳು ಮತ್ತು ನೋಟರಿ ವಕೀಲರಿಬ್ಬರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಈ ಬಗ್ಗೆ ಮಂಗಳೂರು ನಗರದಲ್ಲಿ ನೆಲೆಸಿರುವ ಜುಬೇರ್ ಅಹಮ್ಮದ್ ದೂರು ನೀಡಿದ್ದಾರೆ. ಅಹಮ್ಮದ್ ಮೊಯ್ದೀನ್ ಬಾವ, ಸೀಮಾ ಗುರುರಾಜ್, ಕಡಂದಲೆ ನಿವಾಸಿ ಅಜಯ್ ಕುಮಾರ್, ನಕಲಿ ದಾಖಲೆಗಳಿಗೆ ನೋಟರಿ ಮಾಡಿದ್ದ ಮಂಗಳೂರಿನ ನೋಟರಿ ವಕೀಲ ಜಗನ್ನಾಥ ಪೂಜಾರಿ, ರಾಯಲ್ ಚೇಂಬರ್ಸ್ ನಲ್ಲಿರುವ ಇನ್ನೊಬ್ಬ ವಕೀಲ ಪ್ರದೀಪ್ ಕುಮಾರ್ ಹಾಗೂ ಕೃಷ್ಣಾಪುರ ನಿವಾಸಿಯಾಗಿದ್ದ ಶಾಸಕ ಮೊಯ್ದೀನ್ ಬಾವಾರ ತಮ್ಮ ಒಂದು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ದಿ.ಬಿ.ಎಂ.ಮುಮ್ತಾಜ್ ಆಲಿ ಅವರನ್ನು ಆರೋಪಿಗಳೆಂದು ತೋರಿಸಲಾಗಿದೆ.

ದೂರುದಾರ ಜುಬೈರ್ ಅಹ್ಮದ್ ಮುಲ್ಕಿ ಬಳಿಯ ಮುಕ್ಕದಲ್ಲಿ 2005ರಲ್ಲಿ 34 ಸೆಂಟ್ಸ್ ಜಾಗವನ್ನು ಖರೀದಿಸಿದ್ದರು. ಇದರ ದಾಖಲೆ ಪತ್ರಗಳನ್ನು ಮಂಗಳೂರಿನ ತಾಯಿ ಮನೆಯಲ್ಲಿ ಇಟ್ಟಿದ್ದರು. ಜುಬೇರ್ ಅಹ್ಮದ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು ವರ್ಷಕ್ಕೊಮ್ಮೆ ಊರಿಗೆ ಬಂದಾಗ ಜಾಗವನ್ನು ನೋಡಿ ಬರುತ್ತಿದ್ದರು. ಇತ್ತೀಚೆಗೆ ಅಲ್ಲಿಗೆ ತೆರಳಿದಾಗ ಕಟ್ಟಡ ಕಾಮಗಾರಿ ನಡೆಯುತ್ತಿರುವುದನ್ನು ನೋಡಿ ಅಚ್ಚರಿಗೀಡಾಗಿದ್ದಾರೆ. ಅಲ್ಲಿನ ಕೆಲಸದವರನ್ನು ಕೇಳಿದಾಗ, ಈ ಜಾಗ ಅಹ್ಮದ್ ಮೊಯ್ದೀನ್ ಬಾವಾಗೆ ಸೇರಿದ್ದು ಎಂದು ತಿಳಿಸಿದ್ದಾರೆ. ಆನಂತರ, ಜಾಗದ ದಾಖಲೆಗಳನ್ನು ತೆಗೆದು ನೋಡಿದಾಗ 2005ರ ನವೆಂಬರ್ 24ರಂದು ಜುಬೈರ್ ಅಹ್ಮದ್ ತಾವಾಗಿಯೇ ಪವರ್ ಆಫ್ ಅಟಾರ್ನಿ ಬರೆದುಕೊಟ್ಟಿರುವ ರೀತಿ ನಕಲಿ ದಾಖಲೆ ಸೃಷ್ಟಿಸಿರುವುದು ಪತ್ತೆಯಾಗಿದೆ.

ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ 2023ರ ಸೆಪ್ಟೆಂಬರ್ 21ರಂದು ಮಂಗಳೂರಿನ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮುದ್ರಾಂಕ ಶುಲ್ಕ ದೃಢೀಕರಿಸಿದ್ದು ಕಂಡುಬಂದಿದೆ. ಅಲ್ಲದೆ, 2023ರ ಸೆಪ್ಟೆಂಬರ್ 29ರಂದು ಮೂಲ್ಕಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಸ್ತಿಯನ್ನು ದಾನ ಪತ್ರ ನೀಡಿದಂತೆ ದಾಖಲೆ ಮಾಡಿರುವುದು ಪತ್ತೆಯಾಗಿದೆ ಎಂದು ದಾಖಲೆ ಸಹಿತ ಜುಬೇರ್ ಅಹ್ಮದ್ ಸುರತ್ಕಲ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಸೀಮಾ ಎಂಬಾಕೆಯ ಹೆಸರಿಗೆ ಆಸ್ತಿಯನ್ನು ಬರೆದುಕೊಟ್ಟಿರುವ ರೀತಿ ಮಾಡಲಾಗಿದೆ. ಆದರೆ ಆ ಹೆಸರಿನ ಮಹಿಳೆ ಯಾರೆಂದೇ ತಿಳಿದಿಲ್ಲ. ವಿಚಾರಣೆ ಸಂದರ್ಭದಲ್ಲಿ ಅಹ್ಮದ್ ಮೊಯ್ದೀನ್ ಅವರ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯೆಂದು ತಿಳಿದುಬಂದಿದೆ. ಅಲ್ಲದೆ, ಇದಕ್ಕೆಲ್ಲ ತನ್ನ  ಸಹಿಯನ್ನು ಆರೋಪಿಗಳು ಪೋರ್ಜರಿ ಮಾಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಜಿಪಿಎ ನೀಡಿರುವುದಕ್ಕೆ ಮೊಯ್ದೀನ್ ಬಾವಾರ ತಮ್ಮ ಬಿ.ಎಂ.ಮಮ್ರಾಜ್ ಆಲಿ ಸಾಕ್ಷಿಯಾಗಿದ್ದು, ಇವರು ವರ್ಷದ ಹಿಂದೆ ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿದೇಶದಲ್ಲಿ ಟ್ರೇಡಿಂಗ್ ವಹಿವಾಟು ನಡೆಸುತ್ತಿದ್ದ ದೂರುದಾರ ಜುಬೇರ್ ಅಹ್ಮದ್, ವಕೀಲರು ಮತ್ತು ತನ್ನ ಸೋದರನೇ ಸೇರಿಕೊಂಡು ಮಾಡಿರುವ ವಂಚನೆ ಬಗ್ಗೆ ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ಇದೇ ಅ.21ರಂದು ದೂರು ನೀಡಿದ್ದರು.

A shocking case of land fraud has surfaced in Mangaluru, where relatives of former Mangaluru North MLA Moidin Bava and two notary lawyers have been booked for allegedly creating a fake General Power of Attorney (GPA) to transfer an NRI’s property into their own name.