MP Brijesh Chowta, Mangalore: ದೇಶವ್ಯಾಪಿ ಸರ್ದಾರ್‌ @150 ಏಕತಾ ನಡಿಗೆ ; ನ.10, 12ರಂದು ಮಂಗಳೂರು, ಪುತ್ತೂರಿನಲ್ಲಿ ಬೃಹತ್‌ ಪಾದಯಾತ್ರೆಗೆ ಸಿದ್ಧತೆ 

31-10-25 09:23 pm       Mangalore Correspondent   ಕರಾವಳಿ

ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಸ್ಮರಣಾರ್ಥ ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯವು ದೇಶಾದ್ಯಂತ ‘ಸರ್ದಾರ್‌@ 150 ಏಕತಾ ನಡಿಗೆʼಯನ್ನು ಹಮ್ಮಿಕೊಂಡಿದೆ.

ಮಂಗಳೂರು, ಅ.31: ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಸ್ಮರಣಾರ್ಥ ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯವು ದೇಶಾದ್ಯಂತ ‘ಸರ್ದಾರ್‌@ 150 ಏಕತಾ ನಡಿಗೆʼಯನ್ನು ಹಮ್ಮಿಕೊಂಡಿದೆ. ಅದರಂತೆ, ದಕ್ಷಿಣ ಕನ್ನಡದಲ್ಲಿಯೂ ವಲ್ಲಭಭಾಯಿ ಪಟೇಲ್‌ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಮಂಗಳೂರಿನಲ್ಲಿ ನ.10ರಂದು ಹಾಗೂ ಪುತ್ತೂರಿನಲ್ಲಿ ನ.12ರಂದು ಪಾದಯಾತ್ರೆ ನಡೆಸಲಾಗುವುದು ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಅಭಿಯಾನವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಾಷ್ಟ್ರ ನಿರ್ಮಾಣದ ದೃಷ್ಟಿಕೋನದ ಹಿನ್ನೆಲೆಯಲ್ಲಿ ದೇಶದ ಯುವಜನರಲ್ಲಿ ಏಕತೆ, ದೇಶಭಕ್ತಿ ಮತ್ತು ನಾಗರಿಕ ಹೊಣೆಗಾರಿಕೆ ಭಾವನೆಯನ್ನು ಜಾಗೃತಗೊಳಿಸುವ ಆಶಯವನ್ನು ಹೊಂದಿದೆ. ಈ ಮೂಲಕ ಪ್ರಧಾನಿ ಮೋದಿ ಅವರ ಪರಿಕಲ್ಪನೆಯಂತೆ ಯುವ ಸಮುದಾಯದಲ್ಲಿ ಏಕ್‌ ಭಾರತ್‌, ಆತ್ಮನಿರ್ಭರ ಭಾರತ್‌ ಆದರ್ಶಗಳನ್ನು ಮೈಗೂಡಿಸಿಕೊಳ್ಳುವತ್ತ ಪ್ರೋತ್ಸಾಹ ಹಾಗೂ ಪ್ರೇರಣೆ ನೀಡಲಾಗುವುದು ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ನ.10ರಂದು ಬೆಳಗ್ಗೆ 9.30ಕ್ಕೆ ಅಂಬೇಡ್ಕರ್‌ ವೃತ್ತದಿಂದ ಕುದ್ಮುಲ್‌ ರಂಗರಾವ್‌ ಪುರಭವನದ ವರೆಗೆ ಏಕತಾ ನಡಿಗೆ ನಡೆಯಲಿದೆ. ಹಾಗೆಯೇ, ಪುತ್ತೂರಿನಲ್ಲಿ ನ.12ರಂದು ಬೆಳಗ್ಗೆ 9.30 ಗಂಟೆಗೆ ವಿವೇಕಾನಂದ ವೃತ್ತದಿಂದ ಶ್ರೀ ಮಹಾಲಿಂಗೇಶ್ವರ ದೇವಾಲಯದ ವರೆಗೆ ಪಾದಯಾತ್ರೆ ಆಯೋಜಿಸಲಾಗಿದೆ. ಯುವಕರು, ಎನ್‌ಎಸ್‌ಎಸ್‌ ಸ್ವಯಂಸೇವಕರು, ಎನ್‌ಸಿಸಿಯವರು, ವಿವಿಧ ಸಾಂಸ್ಕೃತಿಕ ತಂಡಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಏಕತಾ ನಡಿಗೆಯನ್ನು ಯಶಸ್ವಿಗೊಳಿಸಬೇಕು. ಜನರ ಪಾಲ್ಗೊಳ್ಳುವಿಕೆಯಿಂದ ರಾಷ್ಟ್ರ ನಿರ್ಮಾಣ ಮಾಡುವ ಪ್ರಧಾನ ಮಂತ್ರಿಗಳ ಸಂಕಲ್ಪಕ್ಕೆ ಜನತೆ ಹೆಚ್ಚಿನ ಉತ್ಸಾಹದಿಂದ ಕೈಜೋಡಿಸಬೇಕು ಎಂದು ಕ್ಯಾ.ಚೌಟ ಮನವಿ ಮಾಡಿದ್ದಾರೆ.

ಪಾದಯಾತ್ರೆಗೂ ಮೊದಲು ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಲು ಶಾಲೆ ಹಾಗೂ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುವುದು. ವಿದ್ಯಾರ್ಥಿಗಳಿಗೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಜೀವನ-ಆದರ್ಶಗಳ ಕುರಿತು ಪ್ರಬಂಧ, ಚರ್ಚಾ ಸ್ಪರ್ಧೆಗಳು, ವಿಚಾರ ಸಂಕಿರಣ, ಬೀದಿ ನಾಟಕಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನೊಂದೆಡೆ, ಸಾಮಾಜಿಕ ಜಾಲತಾಣಗಳ ಮೂಲಕವೂ ಈ ಏಕತಾ ನಡಿಗೆ ಭಾಗವಾಗಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುವುದು. ಈ ಹಿನ್ನಲೆಯಲ್ಲಿ ದೇಶವ್ಯಾಪಿ ರೀಲ್ಸ್‌ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಮತ್ತು ಸರ್ದಾರ್‌ @ 150 ಯಂಗ್‌ ಲೀಡರ್ಸ್‌ ಎನ್ನುವ ಕಾರ್ಯಕ್ರಮಕ್ಕೆ ಈಗಾಗಲೇ ಕೇಂದ್ರ ಸಚಿವ ಡಾ.ಮನಸುಖ್‌ ಮಾಂಡವಿಯಾ ಚಾಲನೆ ನೀಡಿದ್ದಾರೆ. ಸ್ಪರ್ಧೆಯಲ್ಲಿ ದೇಶದೆಲ್ಲೆಡೆಯಿಂದ ಆಯ್ಕೆಯಾಗುವ 150 ಮಂದಿ ವಿಜೇತರು ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ರಾಷ್ಟ್ರ ಮಟ್ಟದ ಏಕತಾ ನಡಿಗೆ ನ.26ರಿಂದ ಡಿ.6ರ ವರೆಗೆ ಕರಮಸದ್‌ನಿಂದ ಸ್ಟ್ಯಾಚ್ಯೂ ಆಫ್‌ ಯೂನಿಟಿ ವರೆಗೆ ಒಟ್ಟು 152 ಕಿ.ಮೀ. ದೂರ ನಡೆಯಲಿದೆ ಎಂದು ಕ್ಯಾ. ಚೌಟ ವಿವರಿಸಿದ್ದಾರೆ.

ನಶೆ ಮುಕ್ತ ಭಾರತ ಪ್ರತಿಜ್ಞೆ 

ಈ ಪಾದಯಾತ್ರೆಯ ದಿನದಂದು ‘ನಶೆ ಮುಕ್ತ ಭಾರತ’ ಮತ್ತು ‘ಗರ್ವ್‌ ಸೆ ಸ್ವದೇಶಿʼ ಪ್ರತಿಜ್ಞೆಯನ್ನು ಸ್ವೀಕರಿಸಲಾಗುತ್ತದೆ. ಅಲ್ಲದೆ, ಈ ಪಾದಯಾತ್ರೆ ಉದ್ದಕ್ಕೂ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸರ್ದಾರ್‌ ಪಟೇಲ್‌ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಅಭಿಯಾನವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಬೇಕು ಕ್ಯಾ.ಬ್ರಿಜೇಶ್‌ ಚೌಟ ಕರೆ ನೀಡಿದ್ದಾರೆ.

ಏಕತಾ ನಡಿಗೆ ಸಂಬಂಧಿಸಿದ ಎಲ್ಲ ನೋಂದಣಿ ಮತ್ತು ಚಟುವಟಿಕೆಗಳನ್ನು ‘ಮೈ ಭಾರತ್ʼ ಪೋರ್ಟಲ್ ಮೂಲಕ ನಡೆಸಲಾಗುತ್ತಿದೆ:  ಹೀಗಾಗಿ, ಸಾರ್ವಜನಿಕರು https://mybharat.gov.in/pages/unity march ನಲ್ಲಿ ನೋಂದಣಿ ಮಾಡಿಕೊಂಡು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಂಸದ ಕ್ಯಾ.ಚೌಟ ಅವರು ಕೋರಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ವಕ್ತಾರ ಅರುಣ್ ಶೇಟ್ , ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ಶೇಷಪ್ಪ ಕೆ ಅಮೀನ್, ಮೈ ಭಾರತ್ ಆಡಳಿತಾಧಿಕಾರಿ ಜಗದೀಶ್, ಉಲ್ಲಾಸ್  ಉಪಸ್ಥಿತರಿದ್ದರು.

To commemorate the 150th birth anniversary of India’s first Home Minister, Sardar Vallabhbhai Patel, the Ministry of Youth Affairs and Sports has launched a nationwide campaign titled “Sardar @150 – Ekta Nadige (Unity Walk).” As part of this initiative, programs have been planned across Dakshina Kannada district — in Mangaluru on November 10 and Puttur on November 12, announced MP Capt. Brijesh Chowta.