Mangalore Police, Panambur Beach: ಗಂಡ - ಹೆಂಡತಿ ಜಗಳ ; ಮಗುವಿನೊಂದಿಗೆ ಸಮುದ್ರಕ್ಕೆ ಹಾರಿ ಸಾಯಲು ಹೋಗಿದ್ದ ಕಾವೂರಿನ ಯುವಕ, ವಿಡಿಯೋ ಬೆನ್ನತ್ತಿ ಜೀವ ಉಳಿಸಿದ ಪಣಂಬೂರು ಪೊಲೀಸರು, ಸಾಯೋದು ಬೇಡಪ್ಪಾ ಎಂದಿದ್ದ ಮಗುವಿನ ಮಾತು ಕರುಳು ಹಿಂಡಿತ್ತು..! 

04-11-25 08:37 pm       Mangalore Correspondent   ಕರಾವಳಿ

ಹೆಂಡತಿಯ ಜೊತೆ ಜಗಳವುಂಟಾಗಿ ಗಂಡ ತನ್ನ ನಾಲ್ಕು ವರ್ಷದ ಹೆಣ್ಣು ಮಗುವಿನ ಜೊತೆಗೆ ಸಮುದ್ರಕ್ಕೆ ಹಾರಿ ಸಾಯಲು ಹೋಗಿದ್ದು ಅದರ ವಿಡಿಯೋ ಮಾಡಿ ವಾಟ್ಸಪ್ ಗ್ರೂಪಿಗೆ ಹಾಕಿದ್ದಲ್ಲದೆ ಬಳಿಕ ತನ್ನ ಮನೆಗೆ ಬಂದು ನೇಣು ಹಾಕಲು ಯತ್ನಿಸಿದಾಗ ಪೊಲೀಸರು ಸಕಾಲಿಕವಾಗಿ ಎಚ್ಚತ್ತುಕೊಂಡು ಆತನನ್ನು ರಕ್ಷಿಸಿದ ಘಟನೆ ಕಾವೂರಿನಲ್ಲಿ ನಡೆದಿದೆ. 

ಮಂಗಳೂರು, ನ.4 : ಹೆಂಡತಿಯ ಜೊತೆ ಜಗಳವುಂಟಾಗಿ ಗಂಡ ತನ್ನ ನಾಲ್ಕು ವರ್ಷದ ಹೆಣ್ಣು ಮಗುವಿನ ಜೊತೆಗೆ ಸಮುದ್ರಕ್ಕೆ ಹಾರಿ ಸಾಯಲು ಹೋಗಿದ್ದು ಅದರ ವಿಡಿಯೋ ಮಾಡಿ ವಾಟ್ಸಪ್ ಗ್ರೂಪಿಗೆ ಹಾಕಿದ್ದಲ್ಲದೆ ಬಳಿಕ ತನ್ನ ಮನೆಗೆ ಬಂದು ನೇಣು ಹಾಕಲು ಯತ್ನಿಸಿದಾಗ ಪೊಲೀಸರು ಸಕಾಲಿಕವಾಗಿ ಎಚ್ಚತ್ತುಕೊಂಡು ಆತನನ್ನು ರಕ್ಷಿಸಿದ ಘಟನೆ ಕಾವೂರಿನಲ್ಲಿ ನಡೆದಿದೆ. 

ಕಾವೂರು ಶಾಂತಿನಗರ ನಿವಾಸಿ ರಾಜೇಶ್ ಅಲಿಯಾಸ್ ಸಂತು (35) ಸಾಯಲು ಹೋಗಿ ಪೊಲೀಸರಿಂದ ರಕ್ಷಿಸಲ್ಪಟ್ಟವನು. ಈತ ಬಜ್ಪೆಯ ಯುವತಿಯನ್ನು ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗು ಇದೆ. ಇತ್ತೀಚೆಗೆ ಕೆಲವು ಸಮಯದಿಂದ ಗಂಡ ತನ್ನ ಪತ್ನಿಯ ಬಗ್ಗೆ ಅನುಮಾನ ಪಡುತ್ತಿದ್ದು ಬೇರೆಯವರ ಜೊತೆಗೆ ಸಂಬಂಧ ಇರಿಸಿದ್ದೀಯಾ ಎಂದು ಹೇಳಿ ಜಗಳ ಮಾಡುತ್ತಿದ್ದ. ಅಲ್ಲದೆ, ಪತ್ನಿಗೆ ಪೆಟ್ಟು ಕೊಟ್ಟು ಕಿರುಕುಳ ನೀಡುತ್ತಿದ್ದನಂತೆ. 

ಪತ್ನಿ ಸರಿಯಿಲ್ಲ ಎಂದು ಪತಿ ರಾಜೇಶ್ ಸೋಮವಾರ ಸಂಜೆ ತನ್ನ ಮಗಳನ್ನು ಕರ್ಕೊಂಡು ತಣ್ಣೀರುಬಾವಿ ಬೀಚ್ ಗೆ ಹೋಗಿದ್ದು ನಾವು ಸಾಯೋಣ ಮಗಳೇ, ಅವಳಿಗೆ ಬೇಕಾದ ರೀತಿ ಇರಲಿ, ನಿನ್ನ ತಾಯಿ ಸರಿ ಇಲ್ಲ.. ನಮಗೆ ಯಾರೂ ಬೇಡ ಎನ್ನುತ್ತ ನೀರಿನತ್ತ ನಡೆಯುವ ರೀತಿ ವಿಡಿಯೋ ಮಾಡಿದ್ದಾನೆ. ಅಲ್ಲದೆ, ವಿಡಿಯೋವನ್ನು ತನ್ನ ಅಕ್ಕ ಮತ್ತು ಇತರ ಸಂಬಂಧಿಕರಿಗೂ ಹಾಕಿದ್ದಾನೆ. ವಿಡಿಯೋ ಕ್ಷಣಾರ್ಧದಲ್ಲಿ ವಾಟ್ಸಪ್ ನಲ್ಲಿ ಷೇರ್ ಆಗಿದ್ದು ಏಳು ಗಂಟೆ ವೇಳೆಗೆ ಪಣಂಬೂರು ಪೊಲೀಸರಿಗೆ ತಲುಪಿತ್ತು.‌ ಆದರೆ ವಿಡಿಯೋದಲ್ಲಿ ಅವನ ಮುಖ ಇರಲಿಲ್ಲ. ಕೇವಲ ಸಮುದ್ರದ ನೀರಿನ ಕಡೆಗೆ ನಡೆಯುತ್ತಾ ಹೋಗುವುದು, ಅದರಲ್ಲಿ ತಂದೆ- ಮಗಳ ನೆರಳು ಮಾತ್ರ ಇತ್ತು. ಪಣಂಬೂರು ಬೀಚ್ ಇರಬೇಕೆಂದು ಪೊಲೀಸರು ಕೂಡಲೇ ಅಲ್ಲಿಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಇನ್ಸ್ ಪೆಕ್ಟರ್ ಮಹಮ್ಮದ್ ಸಲೀಂ ವಿಡಿಯೋವನ್ನು ನೋಡಿ, ತಣ್ಣೀರುಬಾವಿ ಆಗಿರಬೇಕೆಂದು ಠಾಣೆಯಲ್ಲಿದ್ದ ಎಲ್ಲ ಸಿಬಂದಿಯನ್ನೂ ಹುಡುಕಲು ಹಚ್ಚಿದ್ದಾರೆ. ಅಲ್ಲಿ ಹುಡುಕಿದಾಗಲೂ ಯಾರೂ ಇರಲಿಲ್ಲ. ಆದರೆ ಮಗುವಿನ ಜೊತೆಗೆ ಒಬ್ಬಾತ ಬಂದಿದ್ದು ಹೌದು ಎನ್ನುವ ಮಾಹಿತಿ ಲಭಿಸಿತ್ತು. ಅಲ್ಲದೆ, ವಿಡಿಯೋದಲ್ಲಿ ಸಾಕ್ಷಿಯಾಗಿ ಅಲ್ಲಿನ ಚಿತ್ರಣಗಳೂ ಇದ್ದವು. 

ಸೈಬರ್ ಪೊಲೀಸ್ ಸಹಾಯ ಪಡೆದು ಆತನ ನಂಬರ್ ಟ್ರೇಸ್ ಮಾಡಿ ಲೊಕೇಶನ್ ನೋಡಿದಾಗ, ಕಾವೂರು ಶಾಂತಿನಗರ ತೋರಿಸಿತ್ತು. ಕೂಡಲೇ ಕಾವೂರು ಠಾಣೆಗೆ ತಿಳಿಸಿ, ಪಣಂಬೂರು ಠಾಣೆಯ ಇನ್ನೊಂದು ತಂಡವನ್ನು ಆ ಜಾಗಕ್ಕೆ ಇನ್ಸ್ ಪೆಕ್ಟರ್ ಸಲೀಂ ಕಳಿಸಿಕೊಟ್ಟಿದ್ದರು. ಫಕೀರಪ್ಪ, ಶರಣಪ್ಪ ಮತ್ತು ರಾಕೇಶ್ ಅವರಿದ್ದ ಪಣಂಬೂರು ಪೊಲೀಸರು ಹತ್ತು ನಿಮಿಷದಲ್ಲಿ ಅಲ್ಲಿಗೆ ತಲುಪಿ ಮನೆ ಪತ್ತೆ ಮಾಡಿದ್ದರು. ಮನೆಗೆ ಬಾಗಿಲು ಹಾಕಿದ್ದು ಹೊರಗಿನಿಂದ ಬಡಿದರೂ ಸ್ಪಂದನೆ ಬರಲಿಲ್ಲ. ಹೀಗಾಗಿ ಇನ್ಸ್ ಪೆಕ್ಟರ್ ಸೂಚನೆಯಂತೆ, ಮನೆ ಬಾಗಿಲು ಒಡೆದು ಒಳಗೆ ಹೋಗಿದ್ದು ಪಕ್ಕಾಸಿಗೆ ನೇಣು ಹಗ್ಗ ಹಾಕಿ ಮಗಳ ಜೊತೆಗೆ ನೇಣಿಗೆ ಶರಣಾಗಲು ರೆಡಿ ಮಾಡಿಕೊಳ್ತಿದ್ದ‌. ಪೊಲೀಸರು ಕೂಡಲೇ ಆತನನ್ನು ಹಿಡಿದುಕೊಂಡಿದ್ದು ಕೆಲವೇ ಕ್ಷಣಗಳಲ್ಲಿ ಸಾಯುತ್ತಿದ್ದ ತಂದೆ- ಮಗಳನ್ನು ರಕ್ಷಣೆ ಮಾಡಿದ್ದಾರೆ. ಎರಡು ನಿಮಿಷ ತಡವಾದರೂ ಪ್ರಾಣ ಹೋಗುತ್ತಿತ್ತು. 

'ವಿಡಿಯೋದಲ್ಲಿ ತುಳುವಿನಲ್ಲಿ ಮಾತನಾಡುತ್ತ ಸಮುದ್ರ ಕಡೆಗೆ ಹೋಗುವುದು ಮಾತ್ರ ಇತ್ತು. ಎಲ್ಲಿಯ ವಿಡಿಯೋ ಅಂತ ಗೊತ್ತಾಗುತ್ತಿರಲಿಲ್ಲ. ಸಣ್ಣ ಮಗು ಸಾಯೋದು ಬೇಡಪ್ಪಾ ಎನ್ನುತ್ತಿರುವುದನ್ನು ಕೇಳಿ ಕರುಳು ಚುರುಕ್ ಎಂದಿತ್ತು. ನಾವು ಪಣಂಬೂರು ಠಾಣೆಯ ಎಲ್ಲ ಸಿಬಂದಿ ಸೇರಿ ಹುಡುಕಾಡಿದ್ದೆವು. ಮಂಗಳೂರಿನದ್ದೋ, ಉಡುಪಿಯದ್ದೋ ಎಲ್ಲಿಯ ವಿಡಿಯೋ ಅಂತಲೇ ಗೊತ್ತಿರಲಿಲ್ಲ. ಆದರೆ ಏಳು ಗಂಟೆಯಿಂದ ರಾತ್ರಿ ಹತ್ತು ಗಂಟೆ ವರೆಗೆ ನಾವು ಒಂದು ಜೀವ ಉಳಿಸುವುದಕ್ಕಾಗಿ ಪ್ರಯತ್ನ ಪಟ್ಟಿದ್ದು ಸಾರ್ಥಕ ಆಯ್ತು ಎಂದು ಪಣಂಬೂರು ಇನ್ಸ್ ಪೆಕ್ಟರ್ ಮಹಮ್ಮದ್ ಸಲೀಂ ಹೇಳುತ್ತಾರೆ. 

ಕಾವೂರು ಠಾಣೆಯಲ್ಲಿ ಮಂಗಳವಾರ ಗಂಡ- ಹೆಂಡತಿ ಇಬ್ಬರನ್ನೂ ಕರೆಸಿ ಪೊಲೀಸರು ಬುದ್ಧಿವಾದ ಹೇಳಿ ಮಾತುಕತೆ ನಡೆಸಿದ್ದಾರೆ. ಆದರೆ ಅವನೊಂದಿಗೆ ಇರುವುದಕ್ಕೆ ಪತ್ನಿ ಒಪ್ಪಲಿಲ್ಲ. ತನಗೆ ಸಾಕಾಗಿ ಹೋಗಿದೆ, ಬೇರೆಯಾಗಿ ಇರುತ್ತೇವೆ, ಡೈವರ್ಸ್ ಕೊಡುತ್ತೇನೆ. ಮಗುವನ್ನು ತಾನೇ ಸಾಕುತ್ತೇನೆ ಎಂದು ಹೇಳಿದ್ದಾಳೆ‌. ಡೈವರ್ಸ್ ಕೊಟ್ಟು ಬೇರೆಯಾಗಿಯೇ ಇರಿ, ಯಾಕೆ ಸಾಯ್ತೀರಿ ಎಂದು ಪೊಲೀಸರು ಬುದ್ಧಿ ಹೇಳಿದ್ದಾರೆ. ಗಂಡ ರಾಜೇಶ್ ಒಟ್ಟಿಗೆ ಬಾಳ್ತೀವಿ ಎಂದರೂ ಹೆಂಡತಿ ಕೇಳಲಿಲ್ಲ. ಬಳಿಕ ಇಬ್ಬರನ್ನೂ ಕಳಿಸಿಕೊಟ್ಟಿದ್ದಾರೆ‌. ಆತ್ಮಹತ್ಯೆ ಯತ್ನದ ಬಗ್ಗೆ ಹಿಂದೆ ಕೇಸು ದಾಖಲಿಸಲು ಅವಕಾಶ ಇತ್ತು. ಈಗ ಬಿಎನ್ಎಸ್ ನಲ್ಲಿ ಅದರ ಸೆಕ್ಷನ್ 309 ತೆಗೆದು ಹಾಕಿದ್ದರಿಂದ ಹಾಗೇ ಬಿಟ್ಟು ಕಳಿಸಿದ್ದೇವೆ ಅಂತಾರೆ ಪೊಲೀಸರು. ಒಟ್ಟಿನಲ್ಲಿ ಪಣಂಬೂರು ಪೊಲೀಸರ ಸಕಾಲಿಕ ಪ್ರಯತ್ನ ಮತ್ತು ಸಮಯ ಪ್ರಜ್ಞೆಯಿಂದಾಗಿ ಸಾಯಲು ಮುಂದಾಗಿದ್ದ ಜೀವಗಳು ಉಳಿದುಬಿಟ್ಟಿವೆ. ಇದಕ್ಕಾಗಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಆದಿಯಾಗಿ ಸಾರ್ವಜನಿಕರ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

A major tragedy was averted in Mangaluru when a man attempted to end his life along with his four-year-old daughter by jumping into the sea following a quarrel with his wife. Thanks to the quick response of Panambur police, both lives were saved at the last moment.