ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋತಿಷಿ ಮೊರೆ ಹೋದ ಬೆಳ್ತಂಗಡಿ ಯುವತಿ ; ಪೂಜೆ ಮಾಡಿಸ್ತೀನಿ ಎಂದು ಬರೋಬ್ಬರಿ 24 ಲಕ್ಷ ಪೀಕಿಸಿದ ಬೆಂಗಳೂರಿನ ಆನ್ಲೈನ್ ಜ್ಯೋತಿಷಿ ! 

05-11-25 09:39 pm       Mangalore Correspondent   ಕ್ರೈಂ

ಮದವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಇನ್ ಸ್ಟಾ ಗ್ರಾಮ್ ನಲ್ಲಿ ದೇವಿ ಸಾನ್ನಿಧ್ಯ ಹೆಸರಿನಲ್ಲಿದ್ದ ಜ್ಯೋತಿಷ್ಯದ ಜಾಹೀರಾತು ನೋಡಿ ಬೆಳ್ತಂಗಡಿಯ ಯುವತಿಯೊಬ್ಬಳು ಪೂಜೆ ಮಾಡಿಸುವುದಕ್ಕಾಗಿ ಬರೋಬ್ಬರಿ 24 ಲಕ್ಷ ರೂಪಾಯಿ ಕೊಟ್ಟು ಮೋಸ ಹೋಗಿದ್ದು, ಮಂಗಳೂರು ಪೊಲೀಸರು ಬೆಂಗಳೂರಿನ ವಂಚಕ ಜ್ಯೋತಿಷಿಯನ್ನು ಬಂಧಿಸಿದ್ದಾರೆ.

ಮಂಗಳೂರು, ನ.5 : ಮದವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಇನ್ ಸ್ಟಾ ಗ್ರಾಮ್ ನಲ್ಲಿ ದೇವಿ ಸಾನ್ನಿಧ್ಯ ಹೆಸರಿನಲ್ಲಿದ್ದ ಜ್ಯೋತಿಷ್ಯದ ಜಾಹೀರಾತು ನೋಡಿ ಬೆಳ್ತಂಗಡಿಯ ಯುವತಿಯೊಬ್ಬಳು ಪೂಜೆ ಮಾಡಿಸುವುದಕ್ಕಾಗಿ ಬರೋಬ್ಬರಿ 24 ಲಕ್ಷ ರೂಪಾಯಿ ಕೊಟ್ಟು ಮೋಸ ಹೋಗಿದ್ದು, ಮಂಗಳೂರು ಪೊಲೀಸರು ಬೆಂಗಳೂರಿನ ವಂಚಕ ಜ್ಯೋತಿಷಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಯಶವಂತಪುರ ಗೋಕುಲ ಮೊದಲ ಹಂತದ ನಿವಾಸಿ ವಾಸುದೇವ ಆರ್. (32) ಬಂಧಿತ ಆರೋಪಿ. ಬೆಳ್ತಂಗಡಿಯಲ್ಲಿ ಖಾಸಗಿ ಬ್ಯಾಂಕಿನಲ್ಲಿ ಕೆಲಸದಲ್ಲಿರುವ ಚಿಕ್ಕಮಗಳೂರು ಮೂಲದ ಯುವತಿಯೊಬ್ಬಳು ಇನ್ ಸ್ಟಾ ಗ್ರಾಮ್ ನಲ್ಲಿ ನೀಡಲಾಗಿದ್ದ ದೇವಿ ಸಾನ್ನಿಧ್ಯ ಹೆಸರಿನ ಜ್ಯೋತಿಷ್ಯದ ಜಾಹೀರಾತು ನೋಡಿ ಸಂಪರ್ಕಿಸಿದ್ದಳು. ತನಗೆ ಎಷ್ಟು ನೋಡಿದರೂ ಹುಡುಗ ಸೆಟ್ ಆಗುತ್ತಿಲ್ಲ, ಏನೋ ದೋಷವಿದೆ ಎಂದು ಸಮಸ್ಯೆ ಹೇಳಿದ ಯುವತಿಗೆ ಜ್ಯೋತಿಷಿ ನಿಮಗೆ ಜಾತಕ ದೋಷವಿದ್ದು ಮುಡಿಪು ಹಣ ಇರಿಸಿ ದೇವಿಗೆ ಪೂಜೆ ಮಾಡಿಸಬೇಕು ಎಂದು ಸಲಹೆ ನೀಡಿದ್ದಾನೆ.

ಯುವತಿ ಮೊದಲಿಗೆ 5 ಲಕ್ಷ ನೀಡಿದ್ದು ಅದನ್ನು ಮುಡಿಪು ಹೆಸರಲ್ಲಿ ದೇವಿಗೆ ಇಟ್ಟು ಪೂಜೆ ಮಾಡಿಸುತ್ತೇವೆ ಎಂದು ಜ್ಯೋತಿಷಿ ಹೇಳಿದ್ದಾನೆ. ಆದರೆ ಪೂಜೆ ಆದಬಳಿಕ ಅದು ದೇವಿಗೆ ಸಂದಾಯ ಆಗಿಲ್ಲ, ಆಕೆ ಸಂತೃಪ್ತಿ ಆಗಿಲ್ಲ. ಮತ್ತೊಮ್ಮೆ ಪೂಜೆ ಮಾಡಿಸಬೇಕು, ಆ ಹಣವನ್ನೆಲ್ಲ ಪೂಜೆ ಬಳಿಕ ಹಿಂತಿರುಗಿಸುತ್ತೇವೆ ಎಂದು ಹೇಳಿದ್ದಾನೆ. ಮತ್ತೊಮ್ಮೆ ಹಣ ಹಾಕಿದ್ದು, ಇದೇ ರೀತಿ ಮತ್ತೆ ಮತ್ತೆ ಹಣವನ್ನು ಸಂದಾಯ ಮಾಡಿದ್ದಾಳೆ.

ಈ ನಡುವೆ, ತನ್ನ ಗುರೂಜಿ ಮಾತನಾಡುತ್ತಾರೆಂದು ಮತ್ತೊಬ್ಬ ಮಾತನಾಡಿದ ರೀತಿ ಫೋನಲ್ಲಿ ಮಾತನಾಡಿದ್ದಾನೆ. ಎಲ್ಲವೂ ಆನ್ಲೈನಲ್ಲಿಯೇ ನಡೆದಿದ್ದು ಯುವತಿ ಎಂದಿಗೂ ಆತನನ್ನು ನೋಡಲು ಹೋಗಿಲ್ಲ. ಆತನೂ ಈಕೆಯನ್ನು ಪೂಜೆಗೆ ಬರಲು ಹೇಳಿಲ್ಲ. ನಿಮ್ಮ ಹೆಸರಿನಲ್ಲಿ ನಾವು ದೇವಿಗೆ ಪೂಜೆ ಮಾಡುತ್ತೇವೆ ಎಂದು ಹೇಳಿಯೇ ನಂಬಿಸಿದ್ದಾನೆ. ಇದೇ ರೀತಿ 24,78,274 ರೂಪಾಯಿ ಹಣವನ್ನು ಯುವತಿ ಜ್ಯೋತಿಷಿಗೆ ನೀಡಿದ್ದು, ಹಣವನ್ನು ಮರಳಿಸದೆ ಮೋಸ ಮಾಡಿದ್ದಾನೆ.

2025ರ ಸೆ.6ರಿಂದ ಅಕ್ಟೋಬರ್ 6ರ ನಡುವೆ ಹಣವನ್ನು ಪಡೆದಿದ್ದು ಇತ್ತ ಮದುವೆಯೂ ಆಗಿಲ್ಲ, ಜ್ಯೋತಿಷಿಗೆ ಹಾಕಿದ ಹಣವೂ ಹೋಗಿದೆ ಎಂದು ಮೋಸಗೊಂಡ ಯುವತಿ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಠಾಣೆ ಮಂಗಳೂರಿನಲ್ಲಿ ಇತ್ತೀಚೆಗೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದ್ದು ಬರೀಯ ಫೋನಲ್ಲೇ ಜ್ಯೋತಿಷ್ಯ ಹೆಸರಲ್ಲಿ ಯಾಮಾರಿಸಿದ ಆರೋಪಿ ವಾಸುದೇವನನ್ನು ಬಂಧಿಸಿ ಕರೆತಂದಿದ್ದಾರೆ.

A young woman from Belthangady, desperate to get married, fell victim to a Bengaluru-based fake astrologer who swindled ₹24.7 lakh from her through an online “puja” scam after promising to remove obstacles in her horoscope. Mangaluru Cyber Police have arrested the accused.