ತಯಾರಿಕಾ ನ್ಯೂನತೆಯುಳ್ಳ ಇನೋವಾ ಕಾರು ಮಾರಾಟ ; ಬಲ ಬದಿಯಲ್ಲಿ ಟೈರ್ ಸವೆತ, ಹೊಸ ಕಾರು ನೀಡುವಂತೆ ಉಡುಪಿ ಜಿಲ್ಲಾ ಗ್ರಾಹಕರ ಕೋರ್ಟ್ ಆದೇಶ, ಮಾನಸಿಕ ತೊಂದರೆಗೆ ಮಾಲಕನಿಗೆ 50 ಸಾವಿರ ಪರಿಹಾರ 

07-11-25 11:41 am       Udupi Correspondent   ಕರಾವಳಿ

ತಯಾರಿಕೆಯಲ್ಲಿ ನ್ಯೂನತೆಯುಳ್ಳ ಇನೋವಾ ಕಾರು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರನ್ನು ಬದಲಾಯಿಸಿ ನೀಡುವ ಅಥವಾ ಕಾರಿನ ಮೌಲ್ಯವನ್ನು ಮರಳಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. 

ಉಡುಪಿ, ನ.7 : ತಯಾರಿಕೆಯಲ್ಲಿ ನ್ಯೂನತೆಯುಳ್ಳ ಇನೋವಾ ಕಾರು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರನ್ನು ಬದಲಾಯಿಸಿ ನೀಡುವ ಅಥವಾ ಕಾರಿನ ಮೌಲ್ಯವನ್ನು ಮರಳಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. 

ಬ್ರಹ್ಮಾವರ ತಾಲೂಕಿನ ಕಚ್ಚೂರು ನಿವಾಸಿ ಶ್ರವಣ ಕುಮಾರ್ ಅವರು 2022 ರ ನ.16ರಂದು ಟೊಯೋಟಾ ಕಂಪೆನಿಯ ಇನೋವಾ ಕಾರನ್ನು 5 ವರ್ಷಗಳ ವಾರೆಂಟಿಯೊಂದಿಗೆ ಉಡುಪಿಯ ಯುನೈಟೆಡ್ ಟೊಯೋಟ ಪ್ರೈ.ಲಿ. ಮಳಿಗೆಯಲ್ಲಿ ಖರೀದಿಸಿದ್ದರು. ಕಾರು ಒಂದು ತಿಂಗಳ ವರೆಗೆ 1 ಸಾವಿರ ಕಿ.ಮೀ. ಚಲಿಸಿತ್ತು. ಅನಂತರ ಕಾರಿನ ತಯಾರಿಕಾ ದೋಷಗಳಿಂದ ಬಲಬದಿಯ ಟೈರ್‌ಗಳು ತನ್ನಷ್ಟಕ್ಕೆ ಜಖಂಗೊಂಡವು. ಈ ಬಗ್ಗೆ ಖರೀದಿಸಿದ ಮಳಿಗೆಗೆ ಮಾಹಿತಿ ನೀಡಿದರೂ ಅವರು ಸಮಸ್ಯೆಯನ್ನು ಪರಿಹರಿಸಲಿಲ್ಲ. ಸಂಪೂರ್ಣವಾಗಿ ತಯಾರಿಕಾ ದೋಷವನ್ನು ಅವಗಣಿಸಿ ಕಾರನ್ನು ಮಾಲಕರಿಗೆ ವಾಪಸು ನೀಡಿದ್ದರು.

ಆನಂತರ ಕಾರು ಕ್ರಮವಾಗಿ 5,000 ಕಿ.ಮೀ., 10,000 ಕಿ.ಮೀ. ಹಾಗೂ 3ನೇ ಸರ್ವೀಸ್ ಆದಾಗಲೂ ಆ ತಯಾರಿಕಾ ದೋಷ ಮತ್ತು ಟೈರ್‌ಗಳ ಸಮಸ್ಯೆ ಬಗೆಹರಿಯಲಿಲ್ಲ. ಅನಂತರ ಕಾರಿನ ಮಾರಾಟ ಮಳಿಗೆಯವರು ಕಾರಿಗೆ ಅಳವಡಿಸಿರುವ ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಟೈರ್‌ಗಳು ಇದಕ್ಕೆ ಕಾರಣವೆಂದು ಆ ಕಂಪೆನಿಗೆ ಟೈರ್‌ಗಳನ್ನು ಪುನರ್‌ಪರಿಶೀಲನೆಗೆ ಕಳುಹಿಸಿದರು. ಆದರೆ ಬ್ರಿಡ್ಜ್ ಸ್ಟೋನ್ ಸಂಸ್ಥೆಯ ಟೈರ್‌ಗಳಲ್ಲಿ ಯಾವುದೇ ದೋಷಗಳಿಲ್ಲ ಎಂದು ವರದಿ ನೀಡಿತು.

ಕಾರು ಮಾರಾಟ ಮಾಡಿದ ಮಳಿಗೆಯವರು ಕಾರಿನ ವಾರಂಟಿ ಸಮಯದ ಒಳಗೆ ಆದ ತೊಂದರೆಯನ್ನು ಸರಿಪಡಿಸದೇ ಸೇವಾ ನ್ಯೂನತೆ ಮಾಡಿರುವ ಬಗ್ಗೆ ಕಾರಿನ ಮಾಲಕರು ಲೀಗಲ್ ನೋಟಿಸು ನೀಡಿದರೂ ಯಾವುದೇ ರೀತಿಯ ಉತ್ತರ ಸಿಗಲಿಲ್ಲ. ಬಳಿಕ ಕಾರಿನ ತಯಾರಿಕರು, ಮಾರಾಟಗಾರರು ಮತ್ತು ಕಾರಿನ ಟೈರ್‌ ತಯಾರಿಕಾ ಸಂಸ್ಥೆಯ ಮೇಲೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ದೂರು ದಾಖಲಿಸಲಾಯಿತು.

ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ನ್ಯೂನತೆಯುಳ್ಳ ಕಾರನ್ನು ಬದಲಾಯಿಸಿ ಅದೇ ಮಾದರಿಯ ಹೊಸ ಕಾರನ್ನು ಮಾಲಕರಿಗೆ ನೀಡಬೇಕು. ಇಲ್ಲವೇ ಕಾರಿನ ಅಂದಿನ ಮೌಲ್ಯ 32,08,952 ರೂ.ಗಳಿಗೆ ಶೇ.9 ಬಡ್ಡಿಯೊಂದಿಗೆ 2022 ರ ನ.16 ಕ್ಕೆ ಅನ್ವಯವಾಗುವಂತೆ ಪಾವತಿ ಮಾಡಿದ ಆದೇಶದೊಂದಿಗೆ ಗ್ರಾಹಕರಿಗೆ ಆದ ಮಾನಸಿಕ ತೊಂದರೆಯ ಬಗ್ಗೆ 50,000 ರೂ. ಹಾಗೂ ದಾವೆ ಖರ್ಚು 10,000 ರೂ.ಗಳನ್ನು 45 ದಿನಗಳ ಒಳಗೆ ಪಾವತಿಸಬೇಕೆಂದು ಕಾರಿನ ತಯಾರಕರು ಮತ್ತು ಮಾರಾಟಗಾರರಿಗೆ ಆದೇಶಿಸಿದೆ.

ಕಾರಿನ ಮಾಲಕ ಶ್ರವಣ ಕುಮಾರ್ ಪರವಾಗಿ ಉಡುಪಿಯ ಹಿರಿಯ ನ್ಯಾಯವಾದಿ ಗಂಗಾಧ‌ರ್ ಎಚ್.ಎಂ. ಮತ್ತು ವಿಪಿನ್ ಜತ್ತನ್ ವಾದಿಸಿದರು.

The Udupi District Consumer Disputes Redressal Commission has ordered a car dealer and manufacturer to replace a defective Toyota Innova car or refund its full value, after finding that the vehicle had a manufacturing defect causing abnormal tyre wear on the right side.