ಅಯೋಧ್ಯೆ ಕಾಣಿಕೆ ಹಣ ಕಳವು ತೀವ್ರ ಆಘಾತಕಾರಿ, ಯಾವುದೇ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ; ನೀಟ್ ವಿಚಾರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಸರಿಯಾಗೇ ಇದೆ, ತಪ್ಪಿಲ್ಲ..! 

06-08-26 10:22 pm       HK News Desk   ಕರಾವಳಿ

ಅಯೋಧ್ಯೆ ರಾಮ ಮಂದಿರದಲ್ಲಿ ಕಾಣಿಕೆ ಹಣ ಕಳವು ಪ್ರಕರಣ ತೀವ್ರ ಆಘಾತ ತಂದಿದೆ. ಹಣ ಕಳವು ವಿಚಾರ ಬೆಳಕಿಗೆ ಬಂದ ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ವಿಎಚ್ ಪಿ ಒತ್ತಾಯಿಸಿತ್ತು. ಪ್ರಕರಣದ ತನಿಖೆಗೆ ವಿಎಚ್ ಪಿ ಮುಕ್ತವಾಗಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ. 

ಮಂಗಳೂರು, ಆಗಸ್ಟ್ 6 ಅಯೋಧ್ಯೆ ರಾಮ ಮಂದಿರದಲ್ಲಿ ಕಾಣಿಕೆ ಹಣ ಕಳವು ಪ್ರಕರಣ ತೀವ್ರ ಆಘಾತ ತಂದಿದೆ. ಹಣ ಕಳವು ವಿಚಾರ ಬೆಳಕಿಗೆ ಬಂದ ತಕ್ಷಣವೇ ಉನ್ನತ ಮಟ್ಟದ ತನಿಖೆಗೆ ವಿಎಚ್ ಪಿ ಒತ್ತಾಯಿಸಿತ್ತು. ಪ್ರಕರಣದ ತನಿಖೆಗೆ ವಿಎಚ್ ಪಿ ಮುಕ್ತವಾಗಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತನಿಖೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ರಾಮಜನ್ಮಭೂಮಿ ಟ್ರಸ್ಟ್‌ ಮುಕ್ತವಾಗಿ ವರ್ತಿಸಿದೆ.‌ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಅನಿಲ್ ಮಿಶ್ರಾ ಅವರು ಸ್ವಯಂಪ್ರೇರಿತರಾಗಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ವಿಎಚ್‌ಪಿ ಸ್ವತಃ ಎಫ್‌ಐಆರ್ ದಾಖಲಿಸಿದೆ.‌ ಅಲ್ಲದೆ, ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ.‌ ಯಾವುದೇ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. 2026ರ ಅಂತ್ಯದ ವೇಳೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಹೇಳಿದರು. 

ಭವಿಷ್ಯದಲ್ಲಿ ಇಂತಹ ಲೋಪಗಳು ನಡೆಯದಂತೆ ತಡೆಯಲು ವೃತ್ತಿಪರ ದೇವಸ್ಥಾನದ ಆಡಳಿತ ಅನುಭವವಿರುವ ಸಿಇಒ ನೇಮಕ ಮಾಡಲಾಗುವುದು. ಆಧುನಿಕ ತಂತ್ರಜ್ಞಾನಗಳ ಬಳಕೆ ಮತ್ತು ಪಾರದರ್ಶಕ ಲೆಕ್ಕಪತ್ರ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಸಿಇಒ ಹುದ್ದೆಗೆ ದೇಶದ ನಾನಾ ಭಾಗಗಳಿಂದ 5000 ಅರ್ಜಿಗಳು ಬಂದಿವೆ ಎಂದು ಹೇಳಿದರು. 

ಸಂಸದ್ ಭವನದ ಎದುರು ಸಾಧು ವೇಷದಲ್ಲಿ‌ ಸಂಸದ ಪಪ್ಪುಯಾದವ್ ಚಡಾವಾ ಚೋರಿ ಪ್ರತಿಭಟನೆ ಬಗ್ಗೆ ಪ್ರಯಿಕ್ರಿಯಿಸಿದ ಅವರು, ವಿಪಕ್ಷಗಳು ಮಿತಿ ಮೀರಿ ವರ್ತಿಸುತ್ತಿರುವುದು ಖಂಡನೀಯ. ಸಂಸತ್ತಿನ ಮುಂಭಾಗದಲ್ಲಿ ವಿಪಕ್ಷ ನಾಯಕರು ಮತ್ತು ಪ್ರಮುಖ ರಾಜಕಾರಣಿಗಳು ಸಾಧು-ಸಂತರ ವೇಷ ಧರಿಸಿ ಅಪಮಾನ ಮಾಡಿದ್ದಾರೆ.‌ ಭಗವಾ ವಸ್ತ್ರ ಮತ್ತು ಸಂತರ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ.‌ ಶ್ರೀರಾಮ ಮಂದಿರ ಹೋರಾಟವನ್ನು ಆರಂಭದಿಂದಲೂ ವಿರೋಧಿಸುತ್ತಾ ಬಂದವರು  ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳ ನಾಯಕರು. ಈಗ ಸಂತ ಸಮುದಾಯವನ್ನು ‘ಚೋರ್ '’ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಸನಾತನ ಧರ್ಮ ಮತ್ತು ಸಂತರ ನಿಂದನೆಯನ್ನು ದೇಶದ ಜನರು ಗಮನಿಸುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಈ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. 

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರ್ ಸ್ ಎಸ್ ನೋಂದಣಿ ಬಗ್ಗೆ ಪ್ರಶ್ನೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇರುವ ಕಾರಣ ಮಾತನಾಡುತ್ತಿದ್ದಾರೆ, ಅದರಲ್ಲಿ ತಪ್ಪಿಲ್ಲ. ತಮ್ಮ ಹೇಳಿಕೆಗಳ ಮೂಲಕ ಅಲ್ಪಸಂಖ್ಯಾತರನ್ನು ಮೆಚ್ಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆರ್ ಎಸ್ಎಸ್ ನ ಗುರುದಕ್ಷಿಣೆ ಸ್ವಯಂಸೇವಕರು ನೀಡುವ ಪವಿತ್ರ ಸಂಭಾವನೆಯಾಗಿದೆ.‌ ಇದು ಯಾವುದೇ ಸಾರ್ವಜನಿಕ ದೇಣಿಗೆಯಲ್ಲ. ಬಿಹಾರ್ ಹೈಕೋರ್ಟ್ ಮತ್ತು ಆದಾಯ ತೆರಿಗೆ ಇಲಾಖೆಯ ತೀರ್ಪುಗಳ ಪ್ರಕಾರ ಇದು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಎಲ್ಲ ವಿಚಾರಗಳು ಸ್ಪಷ್ಟವಾಗಿರುವಾಗ ಕರ್ನಾಟಕದ ಗೃಹ ಸಚಿವರ ಹೇಳಿಕೆ ಹಾಸ್ಯಾಸ್ಪದ ಎಂದರು.‌

ಜಂತರ್ ಮಂತರ್ ನಲ್ಲಿ ಸಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿಗಳ ಪ್ರತಿಭಟನೆ ಸರಿಯಾಗಿದೆ, ಅದರಲ್ಲಿ ತಪ್ಪಿಲ್ಲ. NEET ಪರೀಕ್ಷೆ  ರದ್ದಾಗಿದ್ದರಿಂದ ವಿದ್ಯಾರ್ಥಿಗಳ ವರ್ಷಗಟ್ಟಲೆ ಶ್ರಮ ಮತ್ತು ಪೋಷಕರ ತ್ಯಾಗ ವ್ಯರ್ಥವಾಗುತ್ತದೆ.‌ ಸರ್ಕಾರಗಳು ಸೋರಿಕೆ ರಹಿತ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಬೇಕು.  ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಹಿಂದೆ ಎಡಪಂಥೀಯ ಸಂಘಟನೆಗಳಿದ್ದದ್ದು ಸ್ಷಷ್ಟ. ಪೊಲೀಸರು ಹಾಕಿದ ಕ್ಯಾಮರಾಗಳಲ್ಲಿ ಸಿಕ್ಕ ದೃಶ್ಯಾವಳಿಗಳಲ್ಲಿ ಸ್ಪಷ್ಟ ಸಾಕ್ಷಿಗಳಿವೆ. ಈ ಪ್ರತಿಭಟನೆಯಲ್ಲಿ 2900ಕ್ಕೂ ಅಧಿಕ ಕ್ರಿಮಿನಲ್ ಗಳು ಭಾಗಿಯಾಗಿದ್ದರು. ಬ್ಯಾನರ್, ಭಾಷಣಗಳಲ್ಲಿ ಕೀಳು ಮಟ್ಟದ ಅಶ್ಲೀಲ ಭಾಷೆ ಬಳಸಲಾಗಿತ್ತು. ಇದು ಪ್ರತಿಭಟನೆಯನ್ನು ರಾಜಕೀಯವಾಗಿ ಬಳಸಿಕೊಂಡವರ ಮನಸ್ಥಿತಿ ತಿಳಿಸುತ್ತದೆ. ಕೀಳು ಮಟ್ಟದ ಅಶ್ಲೀಲ ಭಾಷೆ ಬಳಸಿದವರನ್ನು ಕ್ಷಮಿಸುವಂತೆ ಪ್ರಧಾನಿ ಕರೆ ನೀಡಿರುವುದನ್ನು ವಿ ಎಚ್ ಪಿ ಬೆಂಬಲಿಸುತ್ತದೆ ಎಂದರು. ಪ್ರಮುಖರಾದ ಎಂಬಿ ಪುರಾಣಿಕ್, ಶರಣ್ ಪಂಪ್ವೆಲ್, ಭುಜಂಗ ಕುಲಾಲ್, ಪುರುಷೋತ್ತಮ ಇದ್ದರು.