Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ್ಯಾಂಪಸ್ ರಿಯಲ್ ಎಸ್ಟೇಟ್ ಕುಳಕ್ಕೆ! ಬಿಲ್ಡರ್ ಪಾಲಾಗುತ್ತಾ 25 ವರ್ಷಗಳ ಹಿಂದೆ ನೀಡಿದ್ದ ಸರ್ಕಾರಿ ಭೂಮಿ? ಐಟಿ ಸಂಸ್ಥೆಯ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ

14-08-26 10:23 pm       Mangaluru Staffer   ಕರಾವಳಿ

25 ವರ್ಷಗಳ ಹಿಂದೆ ಮಂಗಳೂರಿನಲ್ಲೂ ಐಟಿ ಸಂಸ್ಥೆಗಳು ಬೆಳೆಯಬೇಕು, ಯುವಜನರಿಗೆ ಉದ್ಯೋಗ ಸಿಗಬೇಕೆಂದು ರಾಜ್ಯ ಸರ್ಕಾರ ಕಡಿಮೆ ದರಕ್ಕೆ ಇನ್ಫೋಸಿಸ್ ಸಂಸ್ಥೆಗೆ ನಗರದ ಕೊಟ್ಟಾರದಲ್ಲಿ ಜಮೀನು ನೀಡಿತ್ತು.

ಮಂಗಳೂರು, ಆ.14: 25 ವರ್ಷಗಳ ಹಿಂದೆ ಮಂಗಳೂರಿನಲ್ಲೂ ಐಟಿ ಸಂಸ್ಥೆಗಳು ಬೆಳೆಯಬೇಕು, ಯುವಜನರಿಗೆ ಉದ್ಯೋಗ ಸಿಗಬೇಕೆಂದು ರಾಜ್ಯ ಸರ್ಕಾರ ಕಡಿಮೆ ದರಕ್ಕೆ ಇನ್ಫೋಸಿಸ್ ಸಂಸ್ಥೆಗೆ ನಗರದ ಕೊಟ್ಟಾರದಲ್ಲಿ ಜಮೀನು ನೀಡಿತ್ತು. ಆನಂತರ, ಇನ್ಫೋಸಿಸ್ ಸಂಸ್ಥೆಯನ್ನು ಮಂಗಳೂರು ಹೊರವಲಯದ ಮುಡಿಪುವಿಗೆ ಸ್ಥಳಾಂತರ ಮಾಡಲಾಗಿತ್ತು. ಕೊಟ್ಟಾರದಲ್ಲಿ ಖಾಲಿಯಾಗಿ ಉಳಿದುಕೊಂಡಿದ್ದ 2.73 ಎಕರೆ ವ್ಯಾಪ್ತಿಯ ಕಟ್ಟಡ ಮತ್ತು ಜಾಗವನ್ನು ಈಗ ರಿಯಲ್ ಎಸ್ಟೇಟ್ ಕುಳಕ್ಕೆ ಮಾರಾಟ ಮಾಡಲು ಕಂಪನಿ ಮುಂದಾಗಿದೆ.

ಮಂಗಳೂರು ನಗರದಲ್ಲಿ ಭೂಮಿಗೆ ಬಂಗಾರದ ಕ್ರಯವಿದೆ. 25 ವರ್ಷಗಳ ಹಿಂದೆ ಉದ್ಯೋಗ ಸೃಷ್ಟಿ, ಐಟಿ ಕಂಪನಿಗಳ ಆಕರ್ಷಣೆ ಸಲುವಾಗಿ ನೀಡಿದ್ದ ಭೂಮಿಯನ್ನು ಅಲ್ಲಿಯೇ ಉಳಿಸಿಕೊಂಡು ಇದೀಗ ರಿಯಲ್ ಎಸ್ಟೇಟ್ ಕುಳಗಳಿಗೆ ಮಾರಾಟ ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ. 2.72 ಎಕರೆ ಜಾಗದಲ್ಲಿ 19000 ಚದರಡಿಯ ಕಟ್ಟಡ ನಿರ್ಮಿಸಿ ಇನ್ಫೋಸಿಸ್ ಸಂಸ್ಥೆ 2001ರಲ್ಲಿ ಕಾರ್ಯಾರಂಭಿಸಿತ್ತು. ಇದರ ಬೆನ್ನಲ್ಲೇ ಅಲ್ಲಿಯೇ 29 ಎಕರೆ ಭೂಮಿ ಅಗತ್ಯವಿದ್ದು, ಬೃಹತ್ತಾಗಿ ಐಟಿ ಪಾರ್ಕ್ ನಿರ್ಮಿಸುವ ಪ್ರಸ್ತಾಪ ಇಟ್ಟಿತ್ತು.

ಆದರೆ ಆಸುಪಾಸಿನಲ್ಲಿ ದೇವಸ್ಥಾನ, ಜಿಲ್ಲಾ ಪಂಚಾಯತ್, ಸರ್ಕಾರಿ ನೌಕರರ ಕ್ವಾಟರ್ಸ್ ಇದ್ದುದರಿಂದ ಜಮೀನು ಪರಭಾರೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರದ ಮಟ್ಟದಲ್ಲಿ ಜಮೀನು ನೀಡಲು ಸಮ್ಮತಿ ಆಗಿದ್ದರೂ, ಆಗಿನ ಮಹಾನಗರ ಪಾಲಿಕೆಯಲ್ಲಿ ಆಡಳಿತದಲ್ಲಿದ್ದ ಮಾಜಿ ಮೇಯರ್ ದಿವಾಕರ್ ಸೇರಿದಂತೆ ಪ್ರಮುಖರು ಅಷ್ಟೊಂದು ಭೂಮಿಯನ್ನು ಕಂಪನಿಗೆ ಕೊಡುವುದಕ್ಕೆ ಆಕ್ಷೇಪಿಸಿದ್ದರು. ಆನಂತರ, ನಗರ ಹೊರಭಾಗದ ಮುಡಿಪು ಬಳಿಯಲ್ಲಿ 350 ಎಕರೆ ಖಾಲಿ ಭೂಮಿಯನ್ನು ಇನ್ಫೋಸಿಸ್ ಸಂಸ್ಥೆಗೆ ನೀಡಲಾಗಿತ್ತು. ಅಲ್ಲಿ ಬೃಹತ್ ಕಟ್ಟಡವನ್ನು ನಿರ್ಮಿಸಿ 2007ರ ವೇಳೆಗೆ ಕೊಟ್ಟಾರದ ಐಟಿ ಕ್ಯಾಂಪಸನ್ನು ಅಲ್ಲಿಗೆ ಸ್ಥಳಾಂತರಿಸಿತ್ತು.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಇನ್ಫೋಸಿಸ್ ಸಂಸ್ಥೆಯ ಅಧೀನದ ಕೊಟ್ಟಾರದಲ್ಲಿರುವ 2.73 ಎಕರೆ ಭೂಮಿ ಮತ್ತು ಅಲ್ಲಿರುವ ಕಟ್ಟಡವನ್ನು ಮಂಗಳೂರಿನ ಮುಕುಂದ್ ರಿಯಾಲ್ಟಿ ಸಂಸ್ಥೆಗೆ ಮಾರಾಟ ಮಾಡುವ ಬಗ್ಗೆ ಪ್ರಕಟಣೆ ನೀಡಲಾಗಿತ್ತು. ಈ ಜಾಗದ ಬಗ್ಗೆ ತಕರಾರು ಇದ್ದಲ್ಲಿ 15 ದಿನಗಳ ಒಳಗಡೆ ಆಕ್ಷೇಪ ಸಲ್ಲಿಸಬೇಕೆಂದು ತಿಳಿಸಲಾಗಿತ್ತು. ಮಂಗಳೂರಿನಲ್ಲಿ ಐಟಿ ಸಂಸ್ಥೆ ಬೆಳೆಯಬೇಕೆಂದು ಅತಿ ಕಡಿಮೆ ದರದಲ್ಲಿ ನೀಡಿದ್ದ ಭೂಮಿಯನ್ನು ಅದರ ಬೆಲೆ ನೂರು ಪಟ್ಟು ಹೆಚ್ಚಿರುವ ಸಂದರ್ಭದಲ್ಲಿ 200 ಕೋಟಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡಲು ಕಸರತ್ತು ನಡೆಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಇದರ ವಿರುದ್ಧ ಭಾರೀ ಹೋರಾಟಕ್ಕೆ ಸಿದ್ಧತೆ ನಡೆಸಲಾಗಿದೆ.

2000 ಇಸವಿಗೂ ಮುನ್ನ ಮೂಡಾ ಅಧ್ಯಕ್ಷರಾಗಿ ತೇಜೋಮಯ ಇದ್ದಾಗ 4.30 ಎಕರೆ ಭೂಮಿಯನ್ನು ಕೊಟ್ಟಾರದಲ್ಲಿ ಇನ್ಫೋಸಿಸ್ ಸಂಸ್ಥೆಗೆ ನೀಡಲಾಗಿತ್ತು ಎನ್ನುವ ಮಾಹಿತಿ ಇದೆ. ಆದರೆ ಈ ಭೂಮಿ ಲೀಸಿಗೆ ನೀಡಿದ್ದರೇ ಅಥವಾ ಬೇರೆಯವರಿಗೆ ಪರಭಾರೆ ಮಾಡಲಾಗದು ಎನ್ನುವ ಷರತ್ತು ವಿಧಿಸಿದ್ದರಾ ಎನ್ನುವ ಬಗ್ಗೆ ಮಾಹಿತಿ ಇಲ್ಲ. 1995ರಲ್ಲಿ ಭರತ್ ಲಾಲ್ ಮೀನಾ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕೊಟ್ಟಾರದಲ್ಲಿರುವ ಸದ್ರಿ ಜಮೀನಿನಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಯೋಜನೆ ಹಾಕಲಾಗಿತ್ತು. ಉಡುಪಿ ಭಾಗದಿಂದ ಬರುವ ಬಸ್ಸುಗಳಿಗೆ ಕೊಟ್ಟಾರದಲ್ಲಿ ಮತ್ತು ಕಾಸರಗೋಡು, ಬೆಳ್ತಂಗಡಿ, ಪುತ್ತೂರು ಕಡೆಯಿಂದ ಬರುವ ವಾಹನಗಳಿಗೆ ಪಂಪ್ವೆಲ್ ನಲ್ಲಿ ಬಸ್ ನಿಲ್ದಾಣ ಮಾಡಲು ಪ್ರಸ್ತಾಪ ಇತ್ತು. ಕೊಟ್ಟಾರದಲ್ಲಿ ಕಟ್ಟಡ ನಿರ್ಮಾಣಕ್ಕೆ ತಯಾರಿ ಆಗಿದ್ದಾಗಲೇ ಇಲ್ಲಿನ ಜನಪ್ರತಿನಿಧಿಗಳು ನೇರವಾಗಿ ಅದೇ ಜಾಗವನ್ನು ಐಟಿ ಸಂಸ್ಥೆಗೆ ಕೊಟ್ಟು ಕೈತೊಳೆದುಕೊಂಡಿದ್ದರು.

A controversy has erupted over the proposed sale of a 2.73-acre property and building belonging to Infosys in Kottara, Mangaluru, with questions being raised over the sale of land that was reportedly allotted by the government decades ago at a concessional rate to promote the IT sector and create employment.