ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸಂಪುಟ ಸಭೆಯಲ್ಲಿ ಐತಿಹಾಸಿಕ ಘೋಷಣೆಗೆ ಸಿದ್ಧತೆ, ಬಿಜೆಪಿಗರು ಕೈಚೆಲ್ಲಿದ್ದನ್ನು ಕಾಂಗ್ರೆಸಿಗರು ಮಾಡಿಯಾರೇ..?

09-09-26 09:04 pm       HK News Staffer   ಕರಾವಳಿ

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟ ತುಳು ಭಾಷೆಗೆ ಸರ್ಕಾರದ ಮಾನ್ಯತೆ ಸಿಗಬೇಕು ಎನ್ನುವುದು ಬಹುಕಾಲದ ಬೇಡಿಕೆ. ಆದರೆ, ಆಡಳಿತ ನಡೆಸುವವರು ಆಗಿಂದಾಗ್ಗೆ ಹೇಳಿಕೆ ನೀಡಿದ್ದು ಬಿಟ್ಟರೆ ಇಚ್ಛಾಶಕ್ತಿ ತೋರಿಸುವ ಕೆಲಸ ಮಾಡಿಲ್ಲ. ಕಳೆದ ಎರಡು ವರ್ಷಗಳಿಂದ ಪುತ್ತೂರು ಶಾಸಕ ಅಶೋಕ ರೈ ವಿಧಾನಸಭೆಯಲ್ಲಿ ನಿರಂತರ ಪ್ರಶ್ನೆ ಎತ್ತಿದ್ದರಿಂದ ತುಳು ಭಾಷೆಯನ್ನು ರಾಜ್ಯ ಸರ್ಕಾರ ಆದ್ಯತೆಯ ನೆಲೆಯಲ್ಲಿ ನೋಡುವಂತಹ ಸ್ಥಿತಿಯಾಗಿದೆ.

ಮಂಗಳೂರು, ಸೆ.9: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದೆಂದು ಗುರುತಿಸಲ್ಪಟ್ಟ ತುಳು ಭಾಷೆಗೆ ಸರ್ಕಾರದ ಮಾನ್ಯತೆ ಸಿಗಬೇಕು ಎನ್ನುವುದು ಬಹುಕಾಲದ ಬೇಡಿಕೆ. ಆದರೆ, ಆಡಳಿತ ನಡೆಸುವವರು ಆಗಿಂದಾಗ್ಗೆ ಹೇಳಿಕೆ ನೀಡಿದ್ದು ಬಿಟ್ಟರೆ ಇಚ್ಛಾಶಕ್ತಿ ತೋರಿಸುವ ಕೆಲಸ ಮಾಡಿಲ್ಲ. ಕಳೆದ ಎರಡು ವರ್ಷಗಳಿಂದ ಪುತ್ತೂರು ಶಾಸಕ ಅಶೋಕ ರೈ ವಿಧಾನಸಭೆಯಲ್ಲಿ ನಿರಂತರ ಪ್ರಶ್ನೆ ಎತ್ತಿದ್ದರಿಂದ ತುಳು ಭಾಷೆಯನ್ನು ರಾಜ್ಯ ಸರ್ಕಾರ ಆದ್ಯತೆಯ ನೆಲೆಯಲ್ಲಿ ನೋಡುವಂತಹ ಸ್ಥಿತಿಯಾಗಿದೆ.

ಕಳೆದ ಬಾರಿ ಬಿಜೆಪಿ ಸರ್ಕಾರ ಇದ್ದಾಗ ತುಳು ಮಾತೃಭಾಷಿಗರೇ ಆಗಿದ್ದ ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದರು. ಹೀಗಾಗಿ ತುಳು ಭಾಷೆಗೆ ಗೌರವ ದೊರಕಿಸುವುದು ಸುಲಭದ ಕೆಲಸ ಎನ್ನುವ ಮಾತು ಕೇಳಿಬಂದಿತ್ತು. ಸುನಿಲ್ ಕುಮಾರ್ ಒಂದು ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದರು. ಆದರೆ ಸುನಿಲ್ ಕುಮಾರ್ ಹೋದಲ್ಲಿ ಬಂದಲ್ಲಿ ಭಾಷಣ ಮಾಡಿದ್ದು ಬಿಟ್ಟರೆ ತುಳು ಭಾಷೆಯ ಬಗ್ಗೆ ಆಸ್ಥೆ ವಹಿಸಿ ಕೆಲಸ ಮಾಡಲೇ ಇಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಾಗಲೂ ಅದು ಬಿಟ್ಟರೆ ನಿಮಗೆ ಬೇರಾವುದೇ ವಿಷಯ ಇಲ್ವಾ ಎಂದು ಪತ್ರಕರ್ತರಲ್ಲೇ ಅಸಹನೆ ತೋರಿದ್ದರು. ಕೊನೆಗೆ, ಇನ್ನೇನು ಚುನಾವಣೆಗೆ ಎರಡು ತಿಂಗಳು ಇದೆ ಎನ್ನುವಾಗ ಡಾ.ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ಅಧ್ಯಯನ ಸಮಿತಿಯನ್ನು ಘೋಷಣೆ ಮಾಡಿದ್ದರು. ತರಾತುರಿಯಲ್ಲಿ ಅಧ್ಯಯನ ಸಮಿತಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸಿದರೂ ಅದನ್ನು ಸಂಪುಟದಲ್ಲಿ ಸ್ವೀಕರಿಸಿ ನಿರ್ಣಯ ಮಾಡುವುದಕ್ಕೆ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ.

ಆನಂತರ, ಬಿಜೆಪಿ ಸರ್ಕಾರ ಬಿದ್ದು ಹೋದ ಬಳಿಕ 2023ರಲ್ಲಿ ಸಿದ್ದರಾಮಯ್ಯ ಸರ್ಕಾರ ಪೂರ್ಣ ಬಹುಮತದಲ್ಲಿ ಬಂದರೂ, ಎರಡು ಕೋಟಿಗೂ ಹೆಚ್ಚು ಜನರು ಮಾತನಾಡುವ ತುಳು ಭಾಷೆಗೆ ಗೌರವ ದೊರಕಿಸಲು ಸಾಧ್ಯವಾಗಲಿಲ್ಲ. ಅಶೋಕ ರೈ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದಾಗ ಮಾತ್ರ ಕರಾವಳಿಯ ಬಿಜೆಪಿ ಶಾಸಕರು ತಮ್ಮದೂ ಪಾತ್ರ ಇದೆ ಎನ್ನುವ ರೀತಿ ತೋಳೇರಿಸುತ್ತಿದ್ದರು. ಆಗ ಸ್ಪೀಕರ್ ಆಗಿದ್ದ ಯುಟಿ ಖಾದರ್, ಕರಾವಳಿಯ ಶಾಸಕರು ಅಧಿವೇಶನದಲ್ಲಿ ಗದ್ದಲ ನಡೆಸಿದಾಗಲೆಲ್ಲ ತುಳುವಿನಲ್ಲಿ ಗದರುತ್ತಿದ್ದುದು, ಅಶೋಕ ರೈಯನ್ನು ಕೂಡ ನೀವೊಮ್ಮೆ ಕೂತ್ಕೊಳ್ಳಿ ಎಂದು ತುಳುವಿನಲ್ಲಿ ಸಮಾಧಾನಿಸುತ್ತಿದ್ದುದು ಇತರೇ ಭಾಗದ ಶಾಸಕರ ಅಸಹನೆಗೆ ಕಾರಣವಾಗುತ್ತಿತ್ತು. 

ಒಂದೊಮ್ಮೆ ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ತುಳುವರ ಭಾಷಾಭಿಮಾನದ ಬಗ್ಗೆ ಲೇಖನ ಬರೆದಿದ್ದರು. ಇಬ್ಬರು ತುಳುವರು ಲಂಡನಲ್ಲಿ ಸ್ಟಾರ್ ಹೊಟೇಲಿನಲ್ಲಿ ಭೇಟಿಯಾದರೂ ತುಳುವಿನಲ್ಲೇ ಮಾತಾಡುತ್ತಾರೆ, ಕನ್ನಡದವರಾದ್ರೆ ಇಂಗ್ಲಿಷ್ ಮಾತ್ರ ವ್ಯವಹಾರ ಭಾಷೆಯಾಗುತ್ತದೆ ಎಂದು ತುಳುವರ ಭಾಷಾ ಪ್ರೇಮವನ್ನು ಹೊಗಳಿದ್ದರು. ಕರಾವಳಿಯಲ್ಲಿ ಯಾವುದೇ ಜಾತಿ, ಧರ್ಮದ ವ್ಯಕ್ತಿಯೇ ಆದರೂ, ಆತನ ಮಾತೃಭಾಷೆ ಬೇರೆಯೇ ಆಗಿದ್ದರೂ ತುಳುವಿನಲ್ಲೇ ವ್ಯವಹರಿಸುವುದು ವಿಶೇಷ. ಹಾಗಾಗಿ ಬೆಂಗಳೂರಿನ ಜನರು ತುಳುವನ್ನು ಮಂಗಳೂರಿನ ರಾಷ್ಟ್ರಭಾಷೆಯೆಂದು ಹೇಳುವುದುಂಟು. ಯಾಕಂದ್ರೆ, ಇಲ್ಲಿ ಯಾರೇ ಕರ್ತವ್ಯ ನಿಮಿತ್ತ ಬಂದರೂ ಒಂದೆರಡು ತಿಂಗಳಿಗೆ ತುಳು ಭಾಷೆಯನ್ನೇ ಕಲಿತುಬಿಡುತ್ತಾರೆ. ಮಂಗಳೂರಿನಲ್ಲಿ ಈಗಿನ ಕಮಿಷನರ್ ಸುಧೀರ್ ರೆಡ್ಡಿ ಎರಡು ತಿಂಗಳಲ್ಲಿಯೇ ತುಳುವಿನಲ್ಲಿ ಮಾತಾಡತೊಡಗಿದ್ದು ಸಣ್ಣ ವಿಷಯ ಅಲ್ಲ. ಈ ಭಾಗದಲ್ಲಿ ಒಂದೆರಡು ವರ್ಷ ಕೆಲಸ ಮಾಡಿ ಹೋದವರೆಲ್ಲ ತುಳುವರು, ತುಳು ಭಾಷೆಯ ಬಗ್ಗೆ ಗೌರವ ಮೂಡಿಸಿಕೊಂಡೇ ಹೋಗಿದ್ದು ಹೆಚ್ಚು. ಅದು ಒಂದು ಭಾಷೆಯ ಹೆಚ್ಚುಗಾರಿಕೆ ಮತ್ತು ಜನರನ್ನು ಆವರಿಸಿಕೊಳ್ಳುವ ತಾಕತ್ತು. 

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ತುಳುವರಿದ್ದಾರೆ. ಇದಲ್ಲದೆ, ಕರಾವಳಿಯ ಲಕ್ಷಾಂತರ ಜನರು ವಿದೇಶದಲ್ಲಿ ನೆಲೆಸಿದ್ದಾರೆ. ತುಳು ಭಾಷೆಯ ಮೇಲಿನ ಗೌರವದಲ್ಲಿ ಮುಂಬೈ, ದೆಹಲಿ, ಬೆಂಗಳೂರು, ಚೆನ್ನೈ ಹೀಗೆ ದೇಶ-ವಿದೇಶದಲ್ಲಿ ತುಳು ಕೂಟ ಮಾಡಿಕೊಂಡಿದ್ದಾರೆ. ಅಮೆರಿಕ, ಗಲ್ಫ್ ದೇಶಗಳಲ್ಲಿ ಅನೇಕ ತುಳು ಭಾಷಿಗರ ಸಂಘಟನೆಗಳಿವೆ. ನಾಲ್ಕು ಜಿಲ್ಲೆಗಳಲ್ಲಿ 50 ಲಕ್ಷದಷ್ಟು ಮಂದಿ ತುಳು ಮಾತೃಭಾಷಿಗರಿದ್ದಾರೆಂದು ಅಂದಾಜಿದ್ದರೂ, ವ್ಯವಹಾರದಲ್ಲಿ ತುಳು ಮಾತನಾಡುವವರು, ವಿದೇಶದಲ್ಲಿ ನೆಲೆಸಿದವರ ಸಂಖ್ಯೆ ಎರಡು ಕೋಟಿ ಆಗಬಹುದೆಂಬ ಲೆಕ್ಕಾಚಾರ ಇದೆ. ಕರಾವಳಿ ಜನರು ಅತಿ ಹೆಚ್ಚು ಸಾಕ್ಷರರು ಮತ್ತು ಉದ್ಯಮಶೀಲರು ಹಾಗೂ ಇತರೇ ಕಡೆಗಳಿಗೆ ಹೋಲಿಸಿದರೆ ಪ್ರಗತಿಶೀಲರು. ಆದರೆ ತಮ್ಮ ಭಾಷೆಗೆ ಮಾನ್ಯತೆ ಸಿಗಬೇಕೆಂದು ಹೋರಾಡಿ ಗದ್ದಲ ಎಬ್ಬಿಸದೇ ಇರುವುದು ಕೊರತೆಯೂ ಹೌದು.

ಹತ್ತು ವರ್ಷಗಳಿಂದ ತುಳುವಿಗೂ ಸ್ವಂತ ಲಿಪಿ ಇದೆಯೆಂದು ಅದರ ಕಲಿಕೆ, ಪ್ರಚಾರದತ್ತ ಒಂದಷ್ಟು ಕೆಲಸಗಳಾದವು. ಆದರೆ ಲಿಪಿ ಸ್ವಂತದ್ದೇ ಆಗಿದ್ದರೂ, ಅದು ಮಲಯಾಳ ಭಾಷಿಗರು ಬಳಸುತ್ತಿರುವ ಲಿಪಿಯೇ ಆಗಿದೆ. ಅದರಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಹಿಂದಿನ ಕಾಲದಲ್ಲಿ ಈ ಭಾಗದ ಬ್ರಾಹ್ಮಣರು ದೇವಸ್ಥಾನಗಳ ಪೂಜೆಗಾಗಿ ಕೇರಳಕ್ಕೆ ಹೋಗಿ ನೆಲೆಸಿದ್ದು ಅಲ್ಲಿಯೂ ತುಳುವಿನಲ್ಲಿ ಬರೆಯುತ್ತಿದ್ದುದು ಅದೇ ಮುಂದೆ ನಾಗರಿಕತೆ ಬೆಳೆಯುತ್ತಿದ್ದಂತೆ ಮಲಯಾಳಿಗರ ಲಿಪಿಯಾಗಿತ್ತು ಎನ್ನುವುದು ಇತಿಹಾಸ. ಯಾಕಂದ್ರೆ, ಮಲಯಾಳಕ್ಕೆ ರಾಜಪ್ರಭುತ್ವದ ಕೃಪೆಯಿತ್ತು. ತುಳು ರಾಜ್ಯ ಎನ್ನುವ ಪ್ರತ್ಯೇಕ ವ್ಯಾಪ್ತಿಯಾಗಲೀ, ಪ್ರಬಲ ರಾಜಪ್ರಭುತ್ವವಾಗಲೀ ಇರದೇ ಇದ್ದುದು ತುಳುವಿಗೆ ಆಡಳಿತದ ಮಾನ್ಯತೆ ಸಿಗದಂತಾಗಿತ್ತು. ಹೀಗಾಗಿ ತುಳುವಿಗೆ ಲಿಪಿ ಇದ್ದರೂ ಅದು ಪ್ರಚಾರಕ್ಕೆ ಬಂದಿರಲಿಲ್ಲ. ಸ್ವಾತಂತ್ರ್ಯ ನಂತರ ತುಳುನಾಡಿನ ಸಾಹಿತಿಗಳು ಕನ್ನಡದಲ್ಲೇ ಹೆಚ್ಚು ಬರೆದಿದ್ದರಿಂದ ತುಳು ಭಾಷೆ, ಸಂಸ್ಕೃತಿ ಇದ್ದರೂ ಪ್ರಚಾರ ಸಿಕ್ಕಿರಲಿಲ್ಲ. 

ಈಗ್ಗೆ 10-15 ವರ್ಷಗಳಲ್ಲಿ ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಸಿಗಬೇಕು ಎನ್ನುವ ನೆಲೆಯಲ್ಲಿ ಆಗ್ರಹಗಳು ಕೇಳಿಬಂದವು. ಬಿಕೆ ಹರಿಪ್ರಸಾದ್ ರಾಜ್ಯಸಭೆ ಸದಸ್ಯರಾಗಿದ್ದ ವೇಳೆ ಸಂಸತ್ತಿನಲ್ಲೂ ಪ್ರಶ್ನೆ ಎತ್ತಿದ್ದರು. ಆದರೆ ಕರಾವಳಿಯಲ್ಲಿ ಸಂಸದರಾಗಿದ್ದವರು ಈ ಬಗ್ಗೆ ಆಸ್ಥೆ ವಹಿಸಿರಲಿಲ್ಲ. ಎರಡು ವರ್ಷಗಳ ಹಿಂದೆ ಕಾಸರಗೋಡು ಸಂಸದ ಉಣ್ಣಿತ್ತಾನ್ ತುಳು ಭಾಷೆ ಬಗ್ಗೆ ಸಂಸತ್ತಿನ ಗಮನ ಸೆಳೆದಿದ್ದರು. ಈಗಿನ ದ.ಕ. ಸಂಸದ ಬ್ರಿಜೇಶ್ ಚೌಟ ಸಂಸತ್ತಿನಲ್ಲಿ ಧ್ವನಿಯೆತ್ತಿದಾಗ, ಎಂಟನೇ ಪರಿಚ್ಛೇದಕ್ಕೆ ಸೇರಲು ಆಯಾ ಭಾಗದ ರಾಜ್ಯಗಳ ಮಾನ್ಯತೆ ದೊರಕುವುದು ಮಾನದಂಡ ಎನ್ನುವ ಉತ್ತರ ಬಂದಿತ್ತು. ಇತ್ತ ರಾಜ್ಯಭಾಷೆಯ ಮಾನ್ಯತೆ ದೊರಕಿಸುವ ಪ್ರಯತ್ನಗಳೂ ನಡೆದಿದ್ದವು.

ಹಾಲಿ ಸರ್ಕಾರದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ಹೊಸತರಲ್ಲೇ ಮಂಗಳೂರಿನ ಅಭಿವೃದ್ಧಿಗಾಗಿ ಅಲ್ಲಿಯೇ ಸಚಿವ ಸಂಪುಟ ಸಭೆ ಕರೆಯುವುದಾಗಿ ಹೇಳಿದ್ದರು. ಇದೀಗ ಸೆ.18ರಂದು ಸಚಿವ ಸಂಪುಟ ಸಭೆ ನಡೆಯುವುದು ಪಕ್ಕಾ ಆಗುತ್ತಲೇ ತುಳುವನ್ನು ರಾಜ್ಯದ ದ್ವಿತೀಯ ಭಾಷೆಯೆಂದು ಘೋಷಣೆ ಮಾಡಲೇಬೇಕು ಎನ್ನುವ ಆಗ್ರಹ ಕೇಳಿಬಂದಿದೆ. ಸರ್ಕಾರದ ಮೂಲಗಳ ಪ್ರಕಾರ, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಂಡಿಸಿ ಆಡಳಿತ ಪಕ್ಷ ಕಾಂಗ್ರೆಸ್ ಇದರ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ತಯಾರಿ ನಡೆಸಿದೆ. ಆಮೂಲಕ ಸಿಎಂ ಡಿಕೆಶಿ ಹಿಂದೆ ತಾವೇ ಹೇಳಿದಂತೆ ತುಳು ನಮ್ಮ ಸೋದರ ಭಾಷೆ, ಅದಕ್ಕೆ ಮಾನ್ಯತೆ ಸಿಗಲೇಬೇಕು ಎನ್ನುವ ಮಾತನ್ನು ತಮ್ಮದೇ ಸರ್ಕಾರದಲ್ಲಿ ಮಾನ್ಯ ಮಾಡಲು ಮುಂದಾಗಿದ್ದಾರೆ. ಸಂಪುಟದಲ್ಲಿ ನಿರ್ಣಯ ಆದಬಳಿಕ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಇದೇ ವೇಳೆ, ಇದರ ಕ್ರೆಡಿಟ್ ತಮಗೇ ಸಿಗಬೇಕೆಂದು ಸಚಿವ ಯುಟಿ ಖಾದರ್ ಆದಿಯಾಗಿ ಕೆಲವರು ಜಾಲತಾಣದಲ್ಲಿ ಕಸರತ್ತನ್ನೂ ನಡೆಸಿದ್ದಾರೆ.