ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಕರಾಮತ್ತು ತೋರಿದ್ದ ಖದೀಮರು ಪತ್ತೆ, ಕ್ಷೇತ್ರಪಾಲ ಗುಳಿಗನಿಗೆ ಅರ್ಚಕರ ಹರಕೆ ಫಲಿಸಿತು!

11-09-26 03:51 pm       HK News Staffer   ಕರಾವಳಿ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ನಾಲ್ವರು ಅಂತರ್ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಖದೀಮರು ಕಲ್ಲಾಪುವಿನ ಎಸಿಪಿ ಕಚೇರಿಯ ಕಣ್ಣಳತೆಯ ಮಹಾಲಕ್ಷ್ಮಿ ಗಣಪತಿ ಕ್ಷೇತ್ರಕ್ಕೂ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ದೋಚಿದ್ದರೆಂಬ ವಿಚಾರ ಬೆಳಕಿಗೆ ಬಂದಿದೆ.

ಉಳ್ಳಾಲ, ಸೆ.11: ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ನಾಲ್ವರು ಅಂತರ್ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಖದೀಮರು ಕಲ್ಲಾಪುವಿನ ಎಸಿಪಿ ಕಚೇರಿಯ ಕಣ್ಣಳತೆಯ ಮಹಾಲಕ್ಷ್ಮಿ ಗಣಪತಿ ಕ್ಷೇತ್ರಕ್ಕೂ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ದೋಚಿದ್ದರೆಂಬ ವಿಚಾರ ಬೆಳಕಿಗೆ ಬಂದಿದೆ.

ಯಾವುದೇ ಸುಳಿವು ಬಿಟ್ಟುಕೊಡದೆ ಕೃತ್ಯ ಎಸಗಿದ್ದ ಕಳ್ಳರ ಜಾಡು ಸಿಕ್ಕಿರಲಿಲ್ಲ. ಹೀಗಾಗಿ ಮಹಾಲಕ್ಷ್ಮಿ ಕ್ಷೇತ್ರದ ಅರ್ಚಕರು ಕಳ್ಳರ ಶೀಘ್ರ ಪತ್ತೆಗಾಗಿ ಕ್ಷೇತ್ರಪಾಲ ಗುಳಿಗನಿಗೆ ಈಡುಗಾಯಿ ಪ್ರಾರ್ಥನೆಯನ್ನು ಸಲ್ಲಿಸಿದ್ದರು. ಗುಳಿಗನ ಪವಾಡವೋ ಎಂಬಂತೆ ತಿಂಗಳ ಅಂತರದಲ್ಲೇ ಖದೀಮರು ಪೊಲೀಸರ ಕೈಗೆ ಸಿಕ್ಕಿ ಬೀಳುವಂತಾಗಿದೆ.

ಸೆಪ್ಟೆಂಬರ್ 01ರ ಮಧ್ಯರಾತ್ರಿ, ಮುಲ್ಕಿ ಬಳಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಾದ ಹೆಜಮಾಡಿಯ ಜಾಹೀದ್ ಸಿನಾನ್(36), ಕಾರ್ಕಳದ ಯಾಸೀನ್(36), ದಾವಣಗೆರೆ ನಿವಾಸಿಗಳಾದ ಮಹಮ್ಮದ್ ಅಫ್ರಿದಿ(26) ಮತ್ತು ಎಸ್.ಕೆ. ಅಬ್ದುಲ್ ಜುಮ್ಮಾನ್(26) ಎಂಬವರನ್ನ ಬಂಧಿಸಿ, ಸುಮಾರು 11,20,000/- ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ವಶಪಡಿಸಿದ್ದಾರೆ. 

ಕಳೆದ ಆಗಸ್ಟ್ 19ರಂದು ರಾತ್ರಿ ಮಂಗಳೂರು ದಕ್ಷಿಣ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತರ(ಎಸಿಪಿ) ಕಲ್ಲಾಪು ಕಚೇರಿಯ ಎದುರಲ್ಲೇ ಇರುವ ಶ್ರೀ ಮಹಾಲಕ್ಷ್ಮಿ ಗಣಪತಿ ದೇವಸ್ಥಾನಕ್ಕೆ ನುಗ್ಗಿದ್ದ ಕಳ್ಳರು ದೇವಿಯ ವಿಗ್ರಹದ ಲಕ್ಷಾಂತರ ರೂಪಾಯಿ ಬೆಲೆಯ ಚಿನ್ನಾಭರಣ, ಬೆಳ್ಳಿ ಕವಚ ದೋಚಿದ್ದರು. ಕಳ್ಳತನ ಪ್ರಕರಣದ ಜಾಡು ಹಿಡಿಯಲು ಪೊಲೀಸರಿಗೆ ಯಾವುದೇ ಸುಳಿವನ್ನೂ ಕಳ್ಳರು ಬಿಟ್ಟು ಹೋಗಿರಲಿಲ್ಲ. ಇಷ್ಟಲ್ಲದೆ ಮಹಾಲಕ್ಷ್ಮಿ ಕ್ಷೇತ್ರವಾಗಲಿ, ಪಕ್ಕದ ಎಸಿಪಿ ಕಚೇರಿಯಲ್ಲಾಗಲಿ ತನಿಖೆಗೆ ಪ್ರಮುಖವಾಗಿರುವ ಸಿಸಿ ಕ್ಯಾಮೆರಾಗಳೇ ಇರಲಿಲ್ಲ. ಹೀಗಾಗಿ ಈ ಕಳ್ಳತನ ಪ್ರಕರಣವು ಎಸಿಪಿ ಕಚೇರಿಯನ್ನೇ ಅಣಕಿಸಿದಂತಿತ್ತು.

ಘಟನೆಯಿಂದ ತೀವ್ರ ಬೇಸತ್ತ ಕ್ಷೇತ್ರದ ಹಿರಿಯ ಅರ್ಚಕರಾದ ಬಾಲಕೃಷ್ಣ ಭಟ್ ಅವರು ಕಳ್ಳತನ ಕೃತ್ಯ ನಡೆಸಿದ ಕಿಡಿಗೇಡಿಗಳ ಶೀಘ್ರ ಪತ್ತೆಗಾಗಿ ಪ್ರಾರ್ಥಿಸಿ ಇತ್ತೀಚೆಗೆ ಕ್ಷೇತ್ರಪಾಲ ಗುಳಿಗನ ಸನ್ನಿಧಿಯಲ್ಲಿ ಈಡುಗಾಯಿ ಒಡೆದಿದ್ದರು. ಗುಳಿಗನ ಪವಾಡವೆಂಬಂತೆ ಇದೀಗ ನಾಲ್ಕು ಜನ ಅಂತರ್ ಜಿಲ್ಲಾ ಕಳ್ಳರು ಆದಿ ಕಿಲ್ಪಾಡಿಯ ಕೋರ್ದಬ್ಬು ದೈವಸ್ಥಾನದ ಕಳ್ಳತನ ಪ್ರಕರಣದಲ್ಲಿ ಪೊಲೀಸರ ಕೈಗೆ ತಗ್ಲಾಕ್ಕೊಂಡಿದ್ದಾರೆ. ಉಳ್ಳಾಲ ಪೊಲೀಸರು ಶೀಘ್ರವೇ ಆರೋಪಿಗಳನ್ನ ತಮ್ಮ ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಲಿದ್ದಾರೆಂಬ ಮಾಹಿತಿ ಲಭಿಸಿದೆ.