Sowjanya, Mangalore, Justice: ಬೆಳ್ತಂಗಡಿಯಲ್ಲಿ ಸೌಜನ್ಯಾ ಪರ ನ್ಯಾಯದ ನಡಿಗೆ ; ನ್ಯಾಯ ಸಿಗದಿದ್ದರೆ ದಂಗೆ ಏಳ್ತೇವೆ- ಮಟ್ಟಣ್ಣವರ್, ಸತ್ತರೂ ಬಿಡೋದಿಲ್ಲ ಎಂದ ಕುಸುಮಾವತಿ 

10-10-26 09:17 pm       HK News Staffer   ಕರಾವಳಿ

14 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ದುರಂತ ಸಾವಿಗೀಡಾಗಿದ್ದ ಉಜಿರೆ ಎಸ್ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಪ್ರಕರಣದಲ್ಲಿ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಎಸ್ಐಟಿ ರಚನೆಯಾಗಿ ತನಿಖೆ ಆರಂಭಿಸಿರುವಾಗಲೇ ಸೌಜನ್ಯಾ ಕೊಲೆಯಾದ ಅ.10ರಂದೇ ಬೆಳ್ತಂಗಡಿಯಲ್ಲಿ ನ್ಯಾಯಕ್ಕಾಗಿ ಆಗ್ರಹ ಕೇಳಿಬಂದಿದೆ. ಸಾವಿರಾರು ಜನರು ಉಜಿರೆಯಿಂದ ಬೆಳ್ತಂಗಡಿಗೆ ನ್ಯಾಯದ ನಡಿಗೆ ಹೆಸರಲ್ಲಿ ಪಾದಯಾತ್ರೆ ನಡೆಸಿದ್ದು ಬೆಳ್ತಂಗಡಿ ಅಂಬೇಡ್ಕರ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿದ್ದಾರೆ. 

ಬೆಳ್ತಂಗಡಿ, ಅ.10: 14 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ದುರಂತ ಸಾವಿಗೀಡಾಗಿದ್ದ ಉಜಿರೆ ಎಸ್ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಪ್ರಕರಣದಲ್ಲಿ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶದ ಬಳಿಕ ಎಸ್ಐಟಿ ರಚನೆಯಾಗಿ ತನಿಖೆ ಆರಂಭಿಸಿರುವಾಗಲೇ ಸೌಜನ್ಯಾ ಕೊಲೆಯಾದ ಅ.10ರಂದೇ ಬೆಳ್ತಂಗಡಿಯಲ್ಲಿ ನ್ಯಾಯಕ್ಕಾಗಿ ಆಗ್ರಹ ಕೇಳಿಬಂದಿದೆ. ಸಾವಿರಾರು ಜನರು ಉಜಿರೆಯಿಂದ ಬೆಳ್ತಂಗಡಿಗೆ ನ್ಯಾಯದ ನಡಿಗೆ ಹೆಸರಲ್ಲಿ ಪಾದಯಾತ್ರೆ ನಡೆಸಿದ್ದು ಬೆಳ್ತಂಗಡಿ ಅಂಬೇಡ್ಕರ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿದ್ದಾರೆ. 

ಸಭೆಯಲ್ಲಿ ಹೈಕೋರ್ಟ್ ವಕೀಲ ಮೋಹಿತ್ ಕುಮಾರ್ ಮಾತನಾಡಿ, ನಾನು ಉಜಿರೆ, ಬೆಳ್ತಂಗಡಿ ಬರುವಾಗ ಪೊಲೀಸ್ ನವರು ವಿಡಿಯೋ ಮಾಡ್ತಿದ್ರು.‌ ಅದೇ ವಿಡಿಯೋ 14 ವರ್ಷಗಳ ಹಿಂದೆ ಮಾಡಿದ್ರೆ ಇಷ್ಟು ದೊಡ್ಡ ಹೋರಾಟ ಆಗುತ್ತಿರಲಿಲ್ಲ.‌ ಈ ಪ್ರಕರಣ ಇಷ್ಟೊಂದು ಬಿಗಡಾಯಿಸಲು ಸಂಪೂರ್ಣ ಹೊಣೆ ಆಗಿನ ಪೊಲೀಸರು ಎಂದು ಆರೋಪಿಸಿದರು. ಇದೇ ವೇಳೆ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಅಭಿನಂದನೆ ಸಲ್ಲಿಸಿದ ಲೋಹಿತ್ ಕುಮಾರ್, ಚೌಧರಿ ಮಾತ್ರ ಯಾವುದೇ ಆಮಿಷಕ್ಕೆ ಒಳಗಾಗಿಲ್ಲ ಎಂದರು. ಎಸ್ಐಟಿ ಬಗ್ಗೆ ನಮಗೆ ನಂಬಿಕೆ ಇದೆ, ಆರೋಪಿಗಳು ಯಾರು ಎಂದು ಪತ್ತೆಹಚ್ಚಿ ಆದಷ್ಟು ಬೇಗ ಜೈಲಿಗೆ ಕಳುಹಿಸುತ್ತಾರೆಂಬ ನಂಬಿಕೆ ಇದೆ. ಸೌಜನ್ಯಾ ಆತ್ಮ ಇಲ್ಲೇ ನ್ಯಾಯಕ್ಕಾಗಿ ತಿರುಗಾಡುತ್ತಿದ್ದು ಎಸ್ಐಟಿಗೆ ಬಾಧಿಸುವ ಮುಂಚೆ ಎಚ್ಚೆತ್ತುಕೊಳ್ಳಿ ಎಂದು ಹೇಳಿದರು.  

ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ಮಾತನಾಡಿ, ಹಿಂದೆ ಅತ್ಯಾಚಾರಿಗಳು ದೇವಸ್ಥಾನ, ದೇವರ ಹಿಂದೆ ಅಡಗಿಕೊಳ್ಳುತ್ತಿದ್ದರು. ಆದ್ರೆ ಸುಪ್ರೀಂ ಕೋರ್ಟ್ ಎಲ್ಲರನ್ನು ಹೊರಗೆ ತರುವಂತೆ ಮಾಡಿದೆ. ಇದೇ ದಿನ 14 ವರ್ಷದ ಹಿಂದೆ  ಸೌಜನ್ಯ ಹೆಣ್ಣು ಮಗಳು ಸತ್ತು ಬಿದ್ದಿತ್ತು. ಆದ್ರೆ ಈ ಕೃತ್ಯವನ್ನು ಹೇಗೆ ಮರೆಮಾಚುವುದು ಎಂದು ಪ್ಲಾನ್ ಮಾಡುತ್ತಿದ್ದರು. ಈಗ ಸೌಜನ್ಯಾ ಆತ್ಮ ಎದ್ದು ನಿಂತಿದ್ದು ಸಾಗರದ ರೀತಿ ಜನ ಬರುತ್ತಿದ್ದಾರೆ.‌ ಇಲ್ಲಿ ಸೇರಿದವರು ಎಲ್ಲರೂ ಧರ್ಮಸ್ಥಳದ ಭಕ್ತರೇ. 

ಸೌಜನ್ಯಾ ಕೊಂದವರು ಯಾರು ಎಂದು ಎಲ್ಲರಿಗೂ ಗೊತ್ತು. ಪೊಲೀಸರಿಗೂ ಗೊತ್ತು. ಆದರೆ ಈ ಬಗ್ಗೆ ಯಾರು ಧ್ವನಿ ಎತ್ತಿದರೂ ಕೋಮುವಾದಿ, ಕಮ್ಯುನಿಸ್ಟ್ ಆಗುತ್ತಾರೆ. ಈ ಸಭೆ ಮಾಡಿದ್ದು ಎಸ್ಐಟಿಗೆ ಬಯ್ಯಲು ಅಲ್ಲ.‌ ತನಿಖೆ ಸರಿಯಾಗಿ ಮಾಡಿದ್ರೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಈ ಶತಮಾನ ಕಂಡ ಅದ್ಭುತ ಹೋರಾಟ ಸೌಜನ್ಯ ಹೋರಾಟ. ನಮಗೆ ಬಂಗಾರದಂತಹ ವಕೀಲರು ಇದ್ದಾರೆ, ಸೌಜನ್ಯಾಗೆ ನ್ಯಾಯ ಸಿಗಬೇಕು. ಇಲ್ಲವಾದಲ್ಲಿ ನಾವು ದಂಗೆ ಏಳುತ್ತೇವೆ ಎಂದು ಗಿರೀಶ್ ಮಟ್ಟಣ್ಣವರ್ ಎಚ್ಚರಿಸಿದರು. 

ಸೌಜನ್ಯ ತಾಯಿ ಕುಸುಮಾವತಿ ಗೌಡ ಮಾತನಾಡಿ, ಸುಪ್ರೀಂ ಕೋರ್ಟಿನ ವಕೀಲರು ಹಾಗು ನ್ಯಾಯವಾದಿಗಳಿಗೆ ಧನ್ಯವಾದಗಳು. ನನಗೆ ನ್ಯಾಯ ಸಿಗಲೇಬೇಕು. ನ್ಯಾಯ ಸಿಗದೇ ಇದ್ರೆ ಸತ್ತರೂ ಬಿಡೋದಿಲ್ಲ. ಆಗಿನ ಅಧಿಕಾರಿಗಳು ಸಾಕ್ಷ್ಯಗಳನ್ನ ನಾಶ ಮಾಡಿದ್ದಾರೆ.  ಸೆರಗೊಡ್ಡಿ ಕೇಳುತ್ತಿದ್ದೇನೆ, ಈಗಲಾದರೂ ಎಸ್ಐಟಿ ಅಧಿಕಾರಿಗಳು ನ್ಯಾಯ ಕೊಡಿಸಿ. ಇವತ್ತು ನಾನು ಮಗಳನ್ನ ಕಳೆದುಕೊಂಡ ದಿವಸ. ಇವತ್ತು ಮಗಳು ನನ್ನ ಮನೆಗೆ ಹೆಣವಾಗಿ ಬಂದ ದಿವಸ ಎಂದು ಸೌಜನ್ಯಾ ನೆನೆದು ಬಿಕ್ಕಳಿಸಿದರು.

Thousands of people participated in a massive march from Ujire to Belthangady on Friday, demanding justice for Sowjanya, an SDM College student from Ujire who died under tragic circumstances in Dharmasthala 14 years ago.