Someshwar Beach, Mangalore: ಸೋಮೇಶ್ವರದಲ್ಲಿ ಸಮುದ್ರ ಪಾಲಾಗಿದ್ದ ಚಿಕ್ಕಮಗಳೂರಿನ ವಿದ್ಯಾರ್ಥಿಯ ಮೃತದೇಹ ಪತ್ತೆ ; ಬೀಚ್ ತೆರಳಿದ್ದ ಎಸ್ ಡಿಎಂ ಕಾಲೇಜಿನ 9 ವಿದ್ಯಾರ್ಥಿಗಳು 

11-10-26 05:37 pm       Mangaluru Staffer   ಕರಾವಳಿ

ಸೋಮೇಶ್ವರದ ಪೆರಿಬೈಲ್ ಬೀಚಲ್ಲಿ ನಿನ್ನೆ(ಶನಿವಾರ) ಸಂಜೆ ಸಮುದ್ರಪಾಲಾಗಿದ್ದ ಉಜಿರೆ ಎಸ್ ಡಿಎಂ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ, ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿ ಶೋಭಿತ್ ಎಂ. ಗೌಡ(18) ಅವರ ಮೃತದೇಹವು ಇಂದು ಪೆರಿಬೈಲ್ ಸಮುದ್ರದಲ್ಲಿ ಪತ್ತೆಯಾಗಿದೆ.

ಉಳ್ಳಾಲ, ಅ.11: ಸೋಮೇಶ್ವರದ ಪೆರಿಬೈಲ್ ಬೀಚಲ್ಲಿ ನಿನ್ನೆ(ಶನಿವಾರ) ಸಂಜೆ ಸಮುದ್ರಪಾಲಾಗಿದ್ದ ಉಜಿರೆ ಎಸ್ ಡಿಎಂ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿ, ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಮ್ಮರಡಿ ನಿವಾಸಿ ಶೋಭಿತ್ ಎಂ. ಗೌಡ(18) ಅವರ ಮೃತದೇಹವು ಇಂದು ಪೆರಿಬೈಲ್ ಸಮುದ್ರದಲ್ಲಿ ಪತ್ತೆಯಾಗಿದೆ.

ಉಜಿರೆ ಎಸ್ ಡಿಎಂ ಕಾಲೇಜಿನ ಒಂಭತ್ತು ಮಂದಿ ವಿದ್ಯಾರ್ಥಿಗಳು ಶನಿವಾರ ಕುತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸಂಜೆ ವೇಳೆ ಸೋಮೇಶ್ವರದ ಪೆರಿಬೈಲ್ ಬೀಚ್ ಗೆ ತೆರಳಿದ್ದರು. ಈ ವೇಳೆ ಶೋಭಿತ್ ಮತ್ತು ಆಕಾಶ್ ಎಂಬವರು ಸಮುದ್ರದಲ್ಲಿ ನೀರಾಟಕ್ಕಿಳಿದಿದ್ದು, ಅಲೆಗಳ ರಭಸಕ್ಕೆ ಇಬ್ಬರೂ ನೀರು ಪಾಲಾಗಿದ್ದರು. ಆಕಾಶ್ ಈಜು ತಿಳಿದಿದ್ದ ಕಾರಣ ಈಜಿ ದಡ ಸೇರಿ ಪ್ರಾಣಾಪಾಯದಿಂದ ಪಾರಾಗಿದ್ದ. 

ಸಮುದ್ರ ಪಾಲಾಗಿದ್ದ ವಿದ್ಯಾರ್ಥಿ ಶೋಭಿತ್ ಗಾಗಿ ತಡರಾತ್ರಿ ವರೆಗೂ ಹುಡುಕಾಟ ನಡೆಸಲಾಗಿತ್ತು.‌ ಎಸ್ ಡಿಆರ್ ಎಫ್, ಕರಾವಳಿ ಕಾವಲು ಪಡೆ, ಗೃಹ ರಕ್ಷಕ ದಳ, ಉಳ್ಳಾಲ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿಸಿದ್ದರು. ಇಂದು ಮಧ್ಯಾಹ್ನದ ವೇಳೆ ಉಳ್ಳಾಲ ವಲಯ ನಾಡದೋಣಿ ಹಾಗೂ ಗಿಲ್ನೆಟ್ ಮೀನುಗಾರರ ಸಂಘದ ಪ್ರಮುಖರಾದ ಆಸಿಫ್ ಎಂ.ಬಿ, ನಿಝಾಮ್‌ ಕೋಟೆಪುರ, ನಝೀರ್ ಕೋಡಿ, ರಝಾಕ್ ಕೋಟೆಪುರ, ಮುಸ್ತಾಫ ಕೋಟೆಪುರ, ಇರ್ಫಾನ್ ಕೋಟೆಪುರ ಅವರುಗಳು ನಾಡ ದೋಣಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಉಚ್ಚಿಲ ಪೆರಿಬೈಲ್ ಬಳಿಯ ಸಮುದ್ರದಲ್ಲಿ ತೇಲುತ್ತಿದ್ದ ಶೋಭಿತ್ ಮೃತದೇಹವನ್ನ ಪತ್ತೆ ಮಾಡಿದ್ದಾರೆ. ನಾಡ ದೋಣಿಯಲ್ಲೇ ಕೋಟೆಪುರ ಸಮುದ್ರ ತೀರಕ್ಕೆ‌ ತರಲಾಗಿದ್ದ ಮೃತದೇಹವನ್ನು ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿದ್ದಾರೆ. ಮೃತ ಶೋಭಿತ್ ಪೋಷಕರಿಗೆ ಏಕೈಕ‌‌ ಮಗನೆಂಬ ಮಾಹಿತಿ ಲಭ್ಯವಾಗಿದೆ.

 

The body of a student from Chikkamagaluru, who was swept away by strong waves at Someshwar Beach, has been recovered. According to reports, a group of nine students from SDM College had visited the beach. During their visit, one of the students was swept into the sea by powerful waves.