ಉದಯೋನ್ಮುಖ ನಟಿ ವಿನುತಾ ನಾಯಕ್ ಹಠಾತ್ ಕುಸಿದು ಬಿದ್ದು ಅಸ್ವಸ್ಥ ; ‘ಮೊನಾಲಿಸಾ ಈಸ್ ಇನ್ ಟ್ರಬಲ್’ ಮತ್ತೆ ಪ್ರದರ್ಶನ, ಉದ್ಯಮಿ ಜೋಯಲ್ ನೊರೊನ್ಹಾ ನೆರವು, ಶಸ್ತ್ರಚಿಕಿತ್ಸೆಗೆ ಸಹಾಯ ಕೋರಿದ ಕುಟುಂಬಸ್ಥರು 

28-10-26 11:53 am       HK News Desk   ಕರಾವಳಿ

ಆಕೆ ಸಣ್ಣಂದಿನಲ್ಲೇ ಭರತನಾಟ್ಯ, ಡ್ಯಾನ್ಸ್, ನಟನೆ ಹೀಗೆ ಎಲ್ಲದರಲ್ಲೂ ಪ್ರತಿಭಾ ಸಂಪನ್ನೆಯಾಗಿದ್ದಳು. ವರ್ಷದ ಹಿಂದಷ್ಟೇ ಟೆಲಿಮೂವಿ ಒಂದರಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಹೆಸರು ಮಾಡಿದ್ದಳು.

ಮಂಗಳೂರು, ಅ.28 ಆಕೆ ಸಣ್ಣಂದಿನಲ್ಲೇ ಭರತನಾಟ್ಯ, ಡ್ಯಾನ್ಸ್, ನಟನೆ ಹೀಗೆ ಎಲ್ಲದರಲ್ಲೂ ಪ್ರತಿಭಾ ಸಂಪನ್ನೆಯಾಗಿದ್ದಳು. ವರ್ಷದ ಹಿಂದಷ್ಟೇ ಟೆಲಿಮೂವಿ ಒಂದರಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಹೆಸರು ಮಾಡಿದ್ದಳು. ‘ಮೊನಾಲಿಸಾ ಈಸ್ ಇನ್ ಟ್ರಬಲ್’ ಎನ್ನುವ ಒಂದು ಗಂಟೆಯ ಸಿನಿಮಾ ರಿಲೀಸ್ ಆಗುತ್ತಲೇ ವಿನುತಾ ಸಿ. ನಾಯಕ್ ಕನ್ನಡದ ಉದಯೋನ್ಮುಖ ನಟಿಯಾಗುವ ಲಕ್ಷಣ ತೋರಿದ್ದಳು. ಆದರೆ, ಇದರ ಬೆನ್ನಲ್ಲೇ ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದ 22 ವರ್ಷದ ವಿನುತಾ ನಾಯಕ್ ದಿಢೀರ್ ಆಗಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದಾರೆ.

ವಿನುತಾ ನಾಯಕ್ ಅವರ ತಂದೆ ಕಡೂರು ಮೂಲದ ಚಂದ್ರ ನಾಯ್ಕ್ ಕಾರ್ಕಳದ ನಿಟ್ಟೆಯಲ್ಲಿ ಶಾಲೆ ಒಂದರಲ್ಲಿ ಶಿಕ್ಷಕರು. ಎರಡು ವರ್ಷಗಳಿಂದ ವಿನುತಾ ಮಂಗಳೂರಿನಲ್ಲಿ ಹಾಸ್ಟೆಲ್ ನಲ್ಲಿದ್ದುಕೊಂಡು ಕಾನೂನು ಕಲಿಯುತ್ತಿದ್ದರು. ಇದರ ನಡುವೆಯೇ ಡ್ಯಾನ್ಸ್, ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ಸೆ.26ರಂದು ಕಾಲೇಜಿನಿಂದ ಹಾಸ್ಟೆಲ್ ಬಂದಿದ್ದ ಆಕೆ ಮಧ್ಯಾಹ್ನ ವೇಳೆಗೆ ತಲೆಸುತ್ತು ಬರುತ್ತಿದೆಯೆಂದು ಹೇಳಿ ದಿಢೀರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಎಜೆ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಲಾಗಿದ್ದು, ನರರೋಗ ತಜ್ಞ ಸುನಿಲ್ ಶೆಟ್ಟಿ ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದಾಗಿ ತಿಳಿಸಿದ್ದಾರೆ.

ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದು ಈಗ ಡಿಸ್ಚಾರ್ಜ್ ಆಗಿದ್ದರೂ, ಶರೀರದ ಒಂದು ಭಾಗ ಸ್ವಸ್ಥವಾಗಿಲ್ಲ. ಹೀಗಾಗಿ ಮತ್ತೆ ಸಿಟಿ ಸ್ಕ್ಯಾನ್ ಮಾಡಿ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಹತ್ತು ಲಕ್ಷದಷ್ಟು ಖರ್ಚು ಆಗಿದ್ದು, ಬಡ ಕುಟುಂಬಕ್ಕೆ ಮುಂದಿನ ಖರ್ಚು ಭರಿಸಲಾಗದ ಸ್ಥಿತಿಯಿದೆ. ವಿಷಯ ತಿಳಿದ ಮಂಗಳೂರಿನ ಉದ್ಯಮಿ, ಡಿಕೆ ಗ್ರೂಪ್ ಆಫ್ ಕಂಪನಿಯ ಚೇರ್ಮನ್ ಜೋಯಲ್ ನೊರೊನ್ಹಾ ಅವರು ಚಿತ್ರತಂಡದ ಕೋರಿಕೆಯಂತೆ ನೆರವು ನೀಡಿದ್ದು, ಆಕೆ ನಟಿಸಿರುವ ಚಿತ್ರವನ್ನು ಮತ್ತೊಮ್ಮೆ ಪ್ರದರ್ಶನ ಮಾಡಲು ಏರ್ಪಾಟು ಮಾಡಿದ್ದಾರೆ. ಇದರಂತೆ, ಅ.30ರಂದು ಸಂಜೆ 6.30ಕ್ಕೆ ಕೆಎಸ್ಸಾರ್ಟಿಸಿ ಬಳಿಯ ಬಿಜೈ ಭಾರತ್ ಸಿನಿಮಾಸ್ ನಲ್ಲಿ ಮೊನಾಲಿಸಾ ಈಸ್ ಇನ್ ಟ್ರಬಲ್ ಕನ್ನಡ ಚಿತ್ರ ಪ್ರದರ್ಶನವಾಗಲಿದೆ. ಇದರಿಂದ ಬಂದ ಹಣವನ್ನು ಆಕೆಯ ಚಿಕಿತ್ಸೆಗೆ ನೀಡುವುದಕ್ಕೆ ಚಿತ್ರತಂಡ ಮುಂದಾಗಿದೆ.

‘ಮೊನಾಲಿಸಾ ಈಸ್ ಇನ್ ಟ್ರಬಲ್’ ಎನ್ನುವ ಚಿತ್ರದಲ್ಲಿ ವಿನುತಾ ನಾಯಕ್ ಮೊನಾಲಿಸಳಾಗಿ ಕಾಣಿಸಿಕೊಂಡಿದ್ದರೂ, ಸ್ವತಃ ಆಕೆಯ ಬದುಕಲ್ಲೇ ಟ್ರಬಲ್ ಎದುರಾಗಿದ್ದು ಕಾಕತಾಳೀಯ. ಶಿಕ್ಷಕರಾಗಿರುವ ತಂದೆ ಚಂದ್ರ ನಾಯ್ಕ್ ಅವರು, ತನ್ನ ಮಗಳಿಗಾದ ಆರೋಗ್ಯ ಸಮಸ್ಯೆ ನಡುವೆಯೂ ಚಿತ್ರದ ಕಾರಣಕ್ಕೆ ಹೀಗಾಯ್ತು ಎನ್ನುವುದಿಲ್ಲ ಎಂದಿದ್ದಾರೆ. ಅದು ಬರೀ ಕಾಕತಾಳೀಯ ಅಷ್ಟೇ. ಅಪರೂಪದಲ್ಲಿ ಬರುವ ಕಾಯಿಲೆ ಎಂದು ವೈದ್ಯರು ತಿಳಿಸಿದ್ದಾರೆ. ಸಹೃದಯಿಗಳು, ದೇವರು ಕೈಬಿಡಲ್ಲ ಎಂದಿದ್ದಾರೆ.

ಮೊದಲ ಚಿತ್ರದಲ್ಲೇ ಜನಮನ ಸೆಳೆದಿದ್ದ ವಿನುತಾ ನಾಯಕ್, ಭವಿಷ್ಯದ ಕನಸುಗಳನ್ನು ಕಟ್ಟಿ ಮುನ್ನಡೆಯುತ್ತಿರುವಾಗಲೇ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದು ಇಡೀ ಚಿತ್ರತಂಡಕ್ಕೂ ಬರಸಿಡಿಲಿನಂತಾಗಿದೆ. ಹೀಗಾಗಿ ನಟಿಯ ಚಿಕಿತ್ಸೆಗೆ ಸಹೃದಯರು ಸಹಾಯ ನೀಡುವಂತೆ ವಿನುತಾ ಕುಟುಂಬಸ್ಥರು ಮತ್ತು ಚಿತ್ರತಂಡದ ಸದಸ್ಯರು ಕೇಳಿಕೊಂಡಿದ್ದಾರೆ. ಇಲ್ಲಿ ಆಕೆಯ ಸೋದರನ ಬ್ಯಾಂಕ್ ಖಾತೆ ನೀಡಲಾಗಿದೆ:

BHARATH C NAIK 
Canara Bank Nitte
A/c no :    01152210018604
IFSC NO : CNRB0010115

Emerging Kannada actress Vinutha C. Nayak, 22, who recently gained recognition for her lead role in the one-hour film Monalisa Is in Trouble, is battling a serious health condition after collapsing suddenly due to a brain haemorrhage. Her family has appealed to the public for financial assistance to meet the cost of her further treatment and surgery.