ಆಳ ಸಮುದ್ರದಲ್ಲಿ ನೀರಿಗೆ ಬಿದ್ದು ಅಪಾಯಕ್ಕೀಡಾದ ಮೀನುಗಾರ ; ಕೋಸ್ಟ್ ಗಾರ್ಡ್ ಪಡೆಯಿಂದ ರಕ್ಷಣೆ

02-11-26 05:34 pm       HK News Staffer   ಕರಾವಳಿ

ಮಂಗಳೂರು ಕಡಲ ತೀರದಿಂದ ನೂರು ಕಿಮೀ ದೂರದ ಆಳ ಸಮುದ್ರದಲ್ಲಿ ಸಮುದ್ರಕ್ಕೆ ಬಿದ್ದು ಸಂಕಷ್ಟಕ್ಕೀಡಾಗಿದ್ದ ಮೀನುಗಾರನನ್ನು ಕರಾವಳಿ ಕಾವಲು ಪಡೆ ತುರ್ತಾಗಿ ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಿದೆ. ನವೆಂಬರ್ 1ರ ರಾತ್ರಿ ಮಂಗಳೂರು ತೀರದಿಂದ ಸುಮಾರು 54 ನಾಟಿಕಲ್ ಮೈಲಿ ದೂರದ ಆಳ ಸಮುದ್ರದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆದಿದೆ.

ಮಂಗಳೂರು, ನ.2: ಮಂಗಳೂರು ಕಡಲ ತೀರದಿಂದ ನೂರು ಕಿಮೀ ದೂರದ ಆಳ ಸಮುದ್ರದಲ್ಲಿ ಸಮುದ್ರಕ್ಕೆ ಬಿದ್ದು ಸಂಕಷ್ಟಕ್ಕೀಡಾಗಿದ್ದ ಮೀನುಗಾರನನ್ನು ಕರಾವಳಿ ಕಾವಲು ಪಡೆ ತುರ್ತಾಗಿ ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಿದೆ. ನವೆಂಬರ್ 1ರ ರಾತ್ರಿ ಮಂಗಳೂರು ತೀರದಿಂದ ಸುಮಾರು 54 ನಾಟಿಕಲ್ ಮೈಲಿ ದೂರದ ಆಳ ಸಮುದ್ರದಲ್ಲಿ ಯಶಸ್ವಿ ಕಾರ್ಯಾಚರಣೆ ನಡೆದಿದೆ. 

ಆಳ ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ‘ಶಿವ್ ಸಾಗರ್’ ಎಂಬ ಮೀನುಗಾರಿಕಾ ದೋಣಿಯಲ್ಲಿದ್ದ ಕಾರ್ಮಿಕ ಸಮುದ್ರಕ್ಕೆ ಬಿದ್ದು ಸಂಕಷ್ಟಕ್ಕೀಡಾಗಿದ್ದರು. ಈ ಬಗ್ಗೆ VHF ರೇಡಿಯೋ ಮೂಲಕ ಕೋಸ್ಟ್ ಗಾರ್ಡ್ ಪಡೆಗೆ ತುರ್ತು ಕರೆಯನ್ನು ರವಾನಿಸಲಾಗಿತ್ತು. ದೋಣಿಯಲ್ಲಿದ್ದ ಮೀನುಗಾರನೊಬ್ಬ ರಾತ್ರಿ ವೇಳೆ ಸಮುದ್ರಕ್ಕೆ ಹಾಕಿದ್ದ ಬಲೆಗಳನ್ನು ಮೇಲಕ್ಕೆ ಎಳೆಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದ. 

ತಕ್ಷಣವೇ ಕಾರ್ಯ ಪ್ರವೃತ್ತರಾದ ದೋಣಿಯ ಇತರ ಸಿಬ್ಬಂದಿ ಆತನನ್ನು ನೀರಿನಿಂದ ಮೇಲೆತ್ತಲು ಯಶಸ್ವಿಯಾಗಿದ್ದರೂ, ಆತನ ಆರೋಗ್ಯ ತೊಂದರೆಗೀಡಾಗಿತ್ತು. ತುರ್ತು ವೈದ್ಯಕೀಯ ನೆರವಿನ ಅಗತ್ಯವಿದ್ದುದರಿಂದ ಕೋಸ್ಸ್ ಗಾರ್ಡ್ ಕರೆಸಲಾಗಿತ್ತು.‌ 

ತುರ್ತು ಕರೆಯ ಬೆನ್ನಲ್ಲೇ ತಕ್ಷಣವೇ ಭಾರತೀಯ ಕರಾವಳಿ ಕಾವಲು ಪಡೆ, ಮಂಗಳೂರು ಘಟಕದಿಂದ ‘ಐಸಿಜಿಎಸ್ ಸಿ-448’ ವೇಗದ ನೌಕೆಯನ್ನು ರಕ್ಷಣಾ ಕಾರ್ಯಾಚರಣೆಗೆ ರವಾನಿಸಿತು. ಕಠಿಣ ಸಮುದ್ರದಲ್ಲಿ ಕರಾವಳಿ ಕಾವಲು ಪಡೆಯ ಕಮಾಂಡಿಂಗ್ ತಂಡವು ಜಿಪಿಎಸ್ ಹಾಗೂ ರೇಡಾರ್ ನೆರವಿನಿಂದ ಅಪಾಯಕ್ಕೀಡಾಗಿದ್ದ ‘ಶಿವ್ ಸಾಗರ್’ ದೋಣಿಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದೆ. 

ಸಂಕಷ್ಟದಲ್ಲಿದ್ದ ಮೀನುಗಾರನನ್ನು ಕೂಡಲೇ ಕೋಸ್ಟ್ ಗಾರ್ಡ್ ನೌಕೆಗೆ ಸ್ಥಳಾಂತರಿಸಿದ ಯೋಧರು, ತಕ್ಷಣವೇ ತುರ್ತು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ನೌಕೆಯನ್ನು ಕರಾವಳಿಯತ್ತ ಚಲಾಯಿಸಿ, ನವ ಮಂಗಳೂರು ಬಂದರು ಪ್ರಾಧಿಕಾರದ  ಜೆಟ್ಟಿಗೆ ಸುರಕ್ಷಿತವಾಗಿ ತಲುಪಿಸಲಾಗಿದೆ. ಅಲ್ಲಿ ಮುಂಚಿತವಾಗಿಯೇ ಸಿದ್ಧವಾಗಿದ್ದ ಆಂಬುಲೆನ್ಸ್ ಮೂಲಕ ಮೀನುಗಾರನನ್ನು ಮಂಗಳೂರಿನ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಒದಗಿಸಲಾಗಿದೆ.