ಸೋಮೇಶ್ವರ ಕಡಲ ತೀರದಲ್ಲೇ ಜೀವರಕ್ಷಕ ಅಶೋಕ್ ಸನ್ಮಾನ

18-01-21 04:50 pm       Mangalore Correspondent   ಕರಾವಳಿ

ಕಡಲು ಪಾಲಾಗುತ್ತಿದ್ದ ಅನೇಕ ಪ್ರವಾಸಿಗರನ್ನು ರಕ್ಷಿಸುತ್ತಿರುವ ಕರಾವಳಿ ಕಾವಲು ಪಡೆಯ ಜೀವ ರಕ್ಷಕ ಸಿಬ್ಬಂದಿ ಅಶೋಕ್ ಸೋಮೇಶ್ವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉಳ್ಳಾಲ, ಜ. 18: ಸೋಮೇಶ್ವರ ಕಡಲ ತೀರದಲ್ಲಿ ಕಡಲು ಪಾಲಾಗುತ್ತಿದ್ದ ಅನೇಕ ಪ್ರವಾಸಿಗರನ್ನು ಜೀವದ ಹಂಗು ತೊರೆದು ರಕ್ಷಿಸುತ್ತಿರುವ ಕರಾವಳಿ ಕಾವಲು ಪಡೆಯ ಜೀವ ರಕ್ಷಕ ಸಿಬ್ಬಂದಿ ಅಶೋಕ್ ಸೋಮೇಶ್ವರ ಅವರನ್ನು  ಸರಕಾರವು ಗುರುತಿಸಿ, ಪ್ರಶಸ್ತಿ ನೀಡಬೇಕು. ಈ ಬಗ್ಗೆ ಸಚಿವರು, ಸಂಸದರಲ್ಲಿ ಮಾತುಕತೆ ನಡೆಸುವುದಾಗಿ ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.

ಕರಾವಳಿ ಕಾವಲು ಪಡೆಯ ಜೀವ ರಕ್ಷಕ ಸಿಬ್ಬಂದಿ ಅಶೋಕ್ ಸೋಮೇಶ್ವರ ಅವರನ್ನು ತೊಕ್ಕೊಟ್ಟಿನ ಸಾಯಿ ಪರಿವಾರ್ ಟ್ರಸ್ಟ್ ವತಿಯಿಂದ ಸೋಮೇಶ್ವರ ಕಡಲ ತೀರದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಾಯಿ ಪರಿವಾರ್ ಟ್ರಸ್ಟ್ ಮಾರ್ಗದರ್ಶಕರಾದ ಚಂದ್ರಹಾಸ್ ಪಂಡಿತ್ ಹೌಸ್ ಮಾತನಾಡಿ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಣದ ಹಂಗು ತೊರೆದು ಪ್ರವಾಸಿಗರ ಪ್ರಾಣ ರಕ್ಷಣೆ ಮಾಡುವ ಸೇವೆಯನ್ನು ಮಾಡುತ್ತಾ ಬಂದಿರುವ ಅಶೋಕ್ ಸೋಮೇಶ್ವರ ಅವರ ಕಾರ್ಯ ಶ್ಲಾಘನೀಯ. ಸರಕಾರಿ ಸಂಬಳವಿಲ್ಲದಿದ್ದರೂ ಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿರುವ ಅಶೋಕ್ ಅವರನ್ನು ಸರಕಾರ ಗುರುತಿಸುವ ಅಗತ್ಯವಿದೆ. ಈ ಬಗ್ಗೆ ಸಚಿವರು, ಸಂಸದರಲ್ಲಿ ಮಾತುಕತೆ ನಡೆಸುವುದಾಗಿ ಹೇಳಿದರು. 

ಸನ್ಮಾನ ಸ್ವೀಕರಿಸಿದ ಅಶೋಕ್ ಸೋಮೇಶ್ವರ ಮಾತನಾಡಿ ಸೇವೆಯಲ್ಲಿ ಯಾವುದೇ ಫಲಾಪೇಕ್ಷೆ ಇರಬಾರದು. ಫಲಾಪೇಕ್ಷೆ ಬಯಸಿದವ ಸೇವಕನಾಗಲು ಸಾಧ್ಯವಿಲ್ಲ. ಅನೇಕ ವೇದಿಕೆಗಳಲ್ಲಿ ಸನ್ಮಾನ ಪಡೆದಿದ್ದರೂ ಕಡಲ ತೀರದಲ್ಲೇ ಪಡೆದ ಈ ಸನ್ಮಾನ ಎಂದಿಗೂ ಮರೆಯಲು ಸಾಧ್ಯವಿಲ್ಲವೆಂದರು.

ಅಡ್ಕ ಭಗವತಿ ಕ್ಷೇತ್ರದ ಅರ್ಚಕ ವಸಂತ್ ಉಚ್ಚಿಲ್, ಸಾಯಿ ಪರಿವಾರ್ ಟ್ರಸ್ಟ್ ನ ಪ್ರವೀಣ್ ಎಸ್. ಕುಂಪಲ, ಪುರುಷೋತ್ತಮ್ ಕಲ್ಲಾಪು, ಶವಿತ್ ಉಚ್ಚಿಲ್, ಕಲಾವಿದ ಜೆ.ಪಿ ಆಚಾರ್ಯ, ಸತೀಶ್ ಭಟ್ನಗರ, ರವಿಶಂಕರ್ ಸೋಮೇಶ್ವರ, ರಮೇಶ್ ಕೊಂಡಾಣ, ಜಯಂತ್ ಕಾಪಿಕಾಡ್, ಕಿಶೋರ್ ಮಂಚಿ, ವಿಶ್ವನಾಥ್ ಮಂಚಿ, ಸೂರ್ಯ ಕುಂಪಲ, ಪ್ರವೀಣ್ ಮೆಸ್ಕಾಂ, ಸುಖೇಶ್ ಉಚ್ಚಿಲ್  ಮೊದಲಾದವರು ಇದ್ದರು.