ಕತಾರ್ ಭಾರತೀಯ ಸಾಂಸ್ಕೃತಿಕ ಕೇಂದ್ರ ಆಡಳಿತ ಸಮಿತಿಗೆ ಸುಬ್ರಹ್ಮಣ್ಯ ಹೆಬ್ಬಾಗಿಲು ಆಯ್ಕೆ 

20-01-21 10:02 pm       Mangaluru Correspondent   ಕರಾವಳಿ

ಕತಾರಿನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ) ದ ಆಡಳಿತ ಸಮಿತಿಯ ಚುನಾವಣೆಯಲ್ಲಿ ಸುಬ್ರಮಣ್ಯ ಹೆಬ್ಬಾಗಿಲು ಅವರು ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

Photo credits : ICC Qatar

ಕತಾರ್, ದೋಹಾ, ಜ.20; ಕತಾರಿನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ) ದ ಆಡಳಿತ ಸಮಿತಿಯ ಚುನಾವಣೆಯಲ್ಲಿ ಸುಬ್ರಮಣ್ಯ ಹೆಬ್ಬಾಗಿಲು ಅವರು ಅತಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. 2021-23 ರ ಸಾಲಿನ ಎರಡು ವರ್ಷಗಳ ಆಡಳಿತ ಸಮಿತಿಯಲ್ಲಿ ಸುಬ್ರಮಣ್ಯ ಇರಲಿದ್ದಾರೆ. 

ಕರ್ನಾಟಕದಲ್ಲಿನ ಬೈಂದೂರು ಮೂಲದ ಸುಬ್ರಮಣ್ಯ, ಕಳೆದ ಒಂದು ದಶಕದಿಂದ ಕತಾರಿನಲ್ಲಿ ನಿರ್ಮಾಣ ಸಂಸ್ಥೆಯಲ್ಲಿ ದುಡಿಯುತ್ತಿದ್ದು ಅಲ್ಲಿ ನೆಲೆಸಿರುವ ಭಾರತೀಯರ ಪರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

'ಡಿಜಿಪೋಲ್' ಎಂಬ ತಂತ್ರಾಂಶದ ಮೂಲಕ ಆನ್ ಲೈನ್ ಚುನಾವಣೆ ನಡೆಸಲಾಗಿತ್ತು. ಪ್ರತಿ ಸದಸ್ಯರು ತಮ್ಮ ಮೊಬೈಲ್ ಗಳಲ್ಲಿ ಈ ತಂತ್ರಾಂಶ ಅಳವಡಿಸಿಕೊಂಡು, ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಜ.7ರಂದು ಆನ್ ಲೈನ್ ಚುನಾವಣೆ ನಡೆದಿದ್ದು ಸುಮಾರು 90 ಪ್ರತಿಶತ ಸದಸ್ಯರು ಮತ ಚಲಾಯಿಸಿದರು.

ಚುನಾಯಿತ ಸದಸ್ಯರು ಮತ್ತು ಭಾರತೀಯ ರಾಯಭಾರ ಕಚೇರಿಯ ನಾಮನಿರ್ದೇಶಿತ ಸದಸ್ಯರು ಈ ಸಮಿತಿಯಲ್ಲಿ ಇರುತ್ತಾರೆ. ಎರಡು ವರ್ಷಗಳಿಗೊಮ್ಮೆ ಈ ಸಮಿತಿಗೆ ಚುನಾವಣೆ ನಡೆಯುತ್ತದೆ.‌

ಸುಬ್ರಮಣ್ಯ ಅವರು ಈ ಹಿಂದೆ ಭಾರತೀಯ ಸಮುದಾಯ ಹಿತೈಷಿ ವೇದಿಕೆ (ಐ.ಸಿ.ಬಿ.ಎಫ್) ಆಡಳಿತ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ ಮತ್ತು ಅದಕ್ಕೂ ಪೂರ್ವದಲ್ಲಿ ಕರ್ನಾಟಕ ಸಂಘ ಕತಾರಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Subramanya Hebbagilu has been elected as a committee member for 2021-2023 term of ICC (Indian Cultural Centre) Qatar.