ಪುತ್ತೂರಿನ ವಿಜ್ಞಾನ ಸಾಧಕ ರಾಕೇಶ್ ಕೃಷ್ಣ ಸೇರಿ 32 ಮಂದಿಗೆ ರಾಷ್ಟ್ರೀಯ ಬಾಲ ಪುರಸ್ಕಾರ

25-01-21 10:45 am       Mangalore Correspondent   ಕರಾವಳಿ

ಗಣರಾಜ್ಯೋತ್ಸವ ಸಮಾರಂಭದಲ್ಲಿ ನೀಡಲಾಗುವ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಈ ಬಾರಿ 32 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. 

ಮಂಗಳೂರು, ಜ.25: ಪ್ರತಿ ವರ್ಷ ಗಣರಾಜ್ಯೋತ್ಸವ ಸಮಾರಂಭದಲ್ಲಿ ನೀಡಲಾಗುವ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಈ ಬಾರಿ 32 ಮಕ್ಕಳನ್ನು ಆಯ್ಕೆ ಮಾಡಲಾಗಿದ್ದು ಕರ್ನಾಟಕದಿಂದ ಇಬ್ಬರು ಪುಟಾಣಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅದರಲ್ಲಿ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣ ಒಬ್ಬ. 

ನವೋನ್ವೇಷಣೆ ವಿಭಾಗದಲ್ಲಿ ಕರ್ನಾಟಕ ರಾಜ್ಯದಿಂದ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ರಾಕೇಶ ಕೃಷ್ಣ ಮತ್ತು ಬೆಂಗಳೂರಿನ ವೀರ್ ಕಶ್ಯಪ್ ಬಾಲ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ವೀರ್ ಕಶ್ಯಪ್ ದೆಹಲಿಯ ಪಬ್ಲಿಕ್ ಸ್ಕೂಲಿನಲ್ಲಿ ಕಲಿಯುತ್ತಿದ್ದಾನೆ. 

ಬಾಲ ಪುರಸ್ಕಾರಕ್ಕೆ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಏಳು, ನವೋನ್ವೇಷಣೆ ವಿಭಾಗದಲ್ಲಿ 9, ಶೈಕ್ಷಣಿಕ ಸಾಧನೆ ವಿಭಾಗದಲ್ಲಿ 5, ಕ್ರೀಡಾ ವಿಭಾಗದಲ್ಲಿ 7, ಶೌರ್ಯಕ್ಕಾಗಿ 3, ಸಮಾಜ ಸೇವೆ ವಿಭಾಗದಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗಿದೆ. 

ಬಾಲ ಪುರಸ್ಕಾರಕ್ಕೆ ಆಯ್ಕೆಯಾದ ಮಕ್ಕಳ ಜೊತೆ ಇಂದು ಮಧ್ಯಾಹ್ನ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಜೊತೆಗೆ ರಾಕೇಶ್ ಕೃಷ್ಣ ಭಾಗವಹಿಸಲಿದ್ದಾನೆ. ಇದೇ ವೇಳೆ, ಮೋದಿಯವರು ರಾಕೇಶ್ ಕೃಷ್ಣ ವಿಜ್ಞಾನ ವಿಭಾಗದಲ್ಲಿ ಆವಿಷ್ಕರಿಸಿದ ಸಾಧನದ ವಿಡಿಯೋ ತುಣುಕನ್ನು ವೀಕ್ಷಿಸಲಿದ್ದಾರೆ. 

ರಾಕೇಶ್, ಬನ್ನೂರು ನಿವಾಸಿ ರವಿಶಂಕರ್ ನೆಕ್ಕಿಲ ಹಾಗೂ ಡಾ. ದುರ್ಗಾ ರತ್ನಾ ದಂಪತಿಯ ಪುತ್ರ. ಭಾರತ ಸರಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆ ನಡೆಸಿದ ರಾಷ್ಟ್ರಮಟ್ಟದ ಇನ್ ಸ್ಪೈರ್ ಅವಾರ್ಡ್ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದ. ಅಲ್ಲದೆ, ಜಪಾನಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಜ್ಞಾನ ಮಾದರಿ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

Among 32 Nominated for Pradan Mantri Rashtriya Awards 2021 Two Boys from Karnataka have been nominated in which one is a native of Puttur.