ಮಂಗಳೂರು: ಭಾನುವಾರ ಲಾಕ್‌ಡೌನ್‌ - ದ.ಕ ಜಿಲ್ಲೆ ಸಂಪೂರ್ಣ ಸ್ತಬ್ಧ

26-07-20 10:53 am ಕರಾವಳಿ

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ಪ್ರತಿ ಭಾನುವಾರ ಸರ್ಕಾರ ವಿಧಿಸಿರುವ ಸಂಪೂರ್ಣ ಲಾಕ್‌‌‌‌‌‌‌ಡೌನ್‌‌‌‌‌‌‌ ಹಿನ್ನೆಲೆ ಜು 26ರ ಭಾನುವಾರ ದ.ಕ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ.

ಮಂಗಳೂರು, ಜು 26: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ಪ್ರತಿ ಭಾನುವಾರ ಸರ್ಕಾರ ವಿಧಿಸಿರುವ ಸಂಪೂರ್ಣ ಲಾಕ್‌‌‌‌‌‌‌ಡೌನ್‌‌‌‌‌‌‌ ಹಿನ್ನೆಲೆ ಜು 26ರ ಭಾನುವಾರ ದ.ಕ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ.

ಜಿಲ್ಲಾಡಳಿತ ಆದೇಶದಂತೆ ಜಿಲ್ಲೆಯು ಶನಿವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಸಂಪೂರ್ಣ ಬಂದ್‌‌ ಆಗಿದೆ.

ಭಾನುವಾರ ಮೆಡಿಕಲ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾರುಕಟ್ಟೆಗಳು ಮುಚ್ಚಿದ್ದವು. ಅಗತ್ಯ ವಸ್ತುಗಳು ಹಾಗೂ ದಿನಸಿ ವಸ್ತುಗಳ ಮಾರಾಟ ಹೊರತುಪಡಿಸಿ ಎಲ್ಲಾ ಅಂಗಡಿಗಳು ಬಂದ್‌ ಆಗಿದ್ದವು.

ನಗರದ ಕೆಲವು ಕಡೆಗಳಲ್ಲಿ ಬ್ಯಾರಿಕೇಡ್‌‌‌‌ಗಳನ್ನು ಹಾಕಲಾಗಿದ್ದು, ಯಾವುದೇ ಖಾಸಗಿ ವಾಹನಗಳ ಪ್ರಯಾಣಕ್ಕೆ ಅನುಮತಿ ನಿರ್ಬಧಿಸಲಾಗಿತ್ತು. ಈ ನಡುವೆಯೂ ಬೈಕು ಹಾಗೂ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಜನರನ್ನು ಪೊಲೀಸರು ತಡೆದಿದ್ದು, ಮಾನ್ಯ ಕಾರಣಗಳು ಅಥವಾ ಪಾಸ್ ಹೊಂದಿರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತವು ಲಾಕ್‌‌ಡೌನ್‌ ಅನ್ನು ಗಂಭೀರವಾಗಿ ಪರಿಗಣಿಸಿದೆ.

ಜಿಲ್ಲೆಯಲ್ಲಿ ಜುಲೈ 25 ರ ಶನಿವಾರದಂದು 218 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,612 ಕ್ಕೆ ಏರಿದೆ. ಈ ನಡುವೆ ಶನಿವಾರ 140 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೊನಾ ಸೋಂಕಿಗೆ ಈವರೆಗೆ ಒಟ್ಟು 115 ಮಂದಿ ಸಾವನ್ನಪ್ಪಿದ್ದಾರೆ. ಪ್ರಸ್ತುತ 2,370 ಪ್ರಕರಣಗಳು ಸಕ್ರಿಯವಾಗಿವೆ.