ದೇಶದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದಿನದ್ದೇ  ತಾಂಡವ ; ಕೇಶವ ಮೂರ್ತಿ 

11-02-21 09:19 pm       Mangaluru Correspondent   ಕರಾವಳಿ

ಇತ್ತೀಚೆಗೆ ಹಿಂದು ಸಮಾಜದ ಮೇಲಾಗುತ್ತಿರುವ ಅನ್ಯಾಯ, ದೌರ್ಜನ್ಯದ ವಿರುದ್ದ ಜನಜಾಗೃತಿಗಾಗಿ ಮುಡಿಪುವಿನಲ್ಲಿ ಗುರುವಾರ ನಡೆದ ಹಿಂದು ಜಾಗೃತಿ ಸಮಾವೇಶದಲ್ಲಿ ಕೇಶವ ಮೂರ್ತಿ ದಿಕ್ಸೂಚಿ ಭಾಷಣ ಮಾಡಿದರು.

ಉಳ್ಳಾಲ, ಫೆ.11: ದೇಶದಲ್ಲಿ ಇಂದು ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಎಂಬ ಎರಡು ಪದಗಳಷ್ಟೇ ತಾಂಡವವಾಡುತ್ತಿದೆ. ಲವ್ ಜಿಹಾದ್ ಹೆಸರಿನಲ್ಲಿ ಬಡ, ಅಮಾಯಕ ಹೆಣ್ಮಕ್ಕಳನ್ನು ಮತಾಂತರಿಸಿ ನಾಲ್ಕು ಮುಸ್ಲಿಂ ಮಕ್ಕಳನ್ನು ಹೆರಿಸುವ ಯಂತ್ರ ಮಾಡುತ್ತಿದ್ದರೆ, ಇನ್ನೊಂದೆಡೆ ಸಾವಿರಾರು ಎಕರೆ ಜಮೀನು ಖರೀದಿಸಿ ಲ್ಯಾಂಡ್ ಜಿಹಾದ್ ಮಾಡಲಾಗುತ್ತಿದೆ. ಇದರ ವಿರುದ್ಧ ಹಿಂದು ಸಮಾಜ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹಿಂದು ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಕೇಶವ ಮೂರ್ತಿ ಹೇಳಿದರು. 

ಇತ್ತೀಚೆಗೆ ಹಿಂದು ಸಮಾಜದ ಮೇಲಾಗುತ್ತಿರುವ ಅನ್ಯಾಯ, ದೌರ್ಜನ್ಯದ ವಿರುದ್ದ ಜನಜಾಗೃತಿಗಾಗಿ ಮುಡಿಪುವಿನಲ್ಲಿ ಗುರುವಾರ ನಡೆದ ಹಿಂದು ಜಾಗೃತಿ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಹಿಂದು ಸಮಾಜವನ್ನು ನುಂಗಿ ನೀರು ಕುಡಿಯಬಹುದು ಎಂದು ತಿಳಿದುಕೊಂಡಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ನಮ್ಮ ಪೂರ್ವಜರಿಂದ ರಕ್ಷಿಸಿಕೊಂಡು ಬಂದಿರುವ ಹಿಂದು ಸಮಾಜವನ್ನು ಕೆಣಕಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದರು. ಇತಿಹಾಸ ನೋಡಿದರೆ 2000 ಕ್ರೈಸ್ತ ಮಿಷನರಿಗಳು ಬಂದು 4% ರಷ್ಟು ಜನರನ್ನು ಮಾತ್ರ ಮತಾಂತಗೊಳಿಸಿದರು. ಮುಸ್ಲಿಮರು 600 ವರ್ಷಗಳ ಕಾಲ ಆಳಿದರೂ ಶೇ. 10% ಹಿಂದುಗಳನ್ನು ಮತಾಂತರ ಮಾಡಲು ಅವರಿಂದ ಸಾಧ್ಯವಾಗಿಲ್ಲ. ಯಾಕೆಂದರೆ ನಮ್ಮ ಪೂರ್ವಜರು ಹಿಂದು ಧರ್ಮದ ರಕ್ಷಣೆಗಾಗಿ ಅಷ್ಟು ಗಟ್ಟಿಯಾಗಿ ನಿಂತಿದ್ದರು. ಇನ್ನೂ ಸಾವಿರ ವರ್ಷ ಕಳೆದರೂ  ನಮ್ಮ ಹಿಂದೂ ರಾಷ್ಟ್ರವನ್ನು  ಪರಿವರ್ತನೆ ಮಾಡಲು ಸಾಧ್ಯವಿಲ್ಲ ಎಂದರು. 

ತಾಂಟ್ರೆ ತಾಂಟ್ರೆ ಎಂದು ಹೇಳಿದಾತನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ.  ಆತ ಹೇಳಿದ ಅಂತ ಹಿಂದು ಸಮಾಜ ಒಂದು ವೇಳೆ ತಾಂಟಿದರೆ ಏನಾಗುತ್ತದೆ ಎಂದು ಪೊಲೀಸರೇ ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರ ಸೇವಿಕ ಸಮಿತಿಯ ಕರ್ನಾಟಕ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಮೀನಾಕ್ಷಿ ಭಗಿನಿ ಮಾತನಾಡಿ, ನಾವು ಮಕ್ಕಳನ್ನು ಝಾನ್ಸಿರಾಣಿ, ವಿವೇಕಾನಂದ, ಶಿವಾಜಿ ಮೊದಲಾದ ಮಹಾನ್ ವ್ಯಕ್ತಿಗಳಂತೆ ಬೆಳೆಸಬೇಕು. ಸ್ತ್ರೀ ಶಕ್ತಿಯೊಂದಿಗೆ ರಾಷ್ಟ್ರಭಕ್ತಿ ಮೆರೆದು ಬಲಿಷ್ಠ ರಾಷ್ಟ್ರ ಕಟ್ಟ ಬೇಕಾಗಿದೆ ಎಂದರು. ನಾವು ಸಂಘಟಿತರಾಗಿ ಜಾಗೃತರಾಗಬೇಕಾದ ಅಗತ್ಯವಿದೆ. ಹೆಣ್ಮಕ್ಕಳು ದೇವಿಯ ಸ್ವರೂಪ. ಇಂದಿನ ಕಾಲದಲ್ಲಿ ಮಕ್ಕಳು ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಿಗೆ ಜೋತು ಬೀಳದೆ ಎಚ್ಚೆತ್ತುಕೊಳ್ಳಬೇಕು ಎಂದರು.