ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹತ್ತು ಕೇಜಿ ಅಕ್ಕಿ ; ಜನಧ್ವನಿ ಯಾತ್ರೆಗೆ ಚಾಲನೆ

22-02-21 04:30 pm       Udupi Correspondent   ಕರಾವಳಿ

ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ದೇಶ ಮತ್ತು ರಾಜ್ಯದ ಜನರ ಸ್ಥಿತಿ ನರಕವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ, ಫೆ.22: ನಾವು ಮತ್ತೆ ಅಧಿಕಾರಕ್ಕೆ ಬಂದರೆ ಬಡವರ ಉಚಿತ ಅಕ್ಕಿಯನ್ನು ಹತ್ತು ಕೇಜಿಗೆ ಏರಿಸುತ್ತೇವೆ. ನಾವು ಏಳು ಕೇಜಿ ಕೊಡುತ್ತಿದ್ದ ಅಕ್ಕಿಯನ್ನು ಬಿಜೆಪಿಯವರು 5 ಕೇಜಿಗೆ ಇಳಿಸಿದ್ದಾರೆ. ಬಡವರಿಗೆ ಕೊಡುವ ಅಕ್ಕಿಯನ್ನೂ ಬಿಜೆಪಿಯವರು ತಿಂದಿದ್ದಾರೆ. ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ದೇಶ ಮತ್ತು ರಾಜ್ಯದ ಜನರ ಸ್ಥಿತಿ ನರಕವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಪುವಿನ ಹೆಜಮಾಡಿಯಿಂದ ಉತ್ತರ ಕನ್ನಡದ ಕಾರವಾರದ ವರೆಗೆ ಕಾಂಗ್ರೆಸ್ ಹಮ್ಮಿಕೊಂಡಿರುವ ಬಿಜೆಪಿ ಸರಕಾರದ ವಿರುದ್ಧ ಜನಜಾಗೃತಿಯ ಜನಧ್ವನಿ ಪಾದಯಾತ್ರೆ ಅಭಿಯಾನಕ್ಕೆ ಚಾಲನೆ ನೀಡಿ, ಸಿದ್ದರಾಮಯ್ಯ ಮಾತನಾಡಿದರು. ಹೆಜಮಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಭ್ರಷ್ಟರು ಅಧಿಕಾರ ನಡೆಸುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆಯುತ್ತಿದ್ದರೆ, ಆತನ ಮಗ ವಿಜಯೇಂದ್ರ ಆರ್ಟಿಜಿಎಸ್ ಮೂಲಕ ಲಂಚದ ಹಣ ಪಡೆಯುತ್ತಿದ್ದಾನೆ. ಇವರ ಭ್ರಷ್ಟ ಸರಕಾರವನ್ನು ಕಿತ್ತೊಗೆದು ಮತ್ತೆ ಕಾಂಗ್ರೆಸ್ ಸರಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಂತೆ ಜನತೆಗೆ ಕರೆ ನೀಡಿದರು.

ಬಿಜೆಪಿಯಲ್ಲಿರುವ ಯಾವನಿಗೂ ಮನುಷ್ಯತ್ವ ಇಲ್ಲ. ಬಡವರ ಹಕ್ಕನ್ನು, ಬಡವರ ಅನ್ನವನ್ನು ಕಸಿದು ಬಹುರಾಷ್ಟ್ರೀಯ ಕಂಪನಿಗಳಿಗೆ ಕೊಡುತ್ತಿರುವ ಮಂದಿ ಅಧಿಕಾರ ನಡೆಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ದಿನವೂ ಏರುತ್ತಿದ್ದರೆ, ಜನರು ದೇಶಕ್ಕಾಗಿ ಸಹಿಸಿಕೊಳ್ಳುವಂತೆ ಸಲಹೆ ಕೊಡುತ್ತಾರೆ. ಇವರಿಗೆ ಮಾನ, ಮರ್ಯಾದೆ, ನಾಚಿಕೆ ಏನಾದ್ರೂ ಇದೆಯಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಹಿಂದುತ್ವ ಅಂದರೆ ಏನಾದ್ರೂ ಹೊಟ್ಟೆಗೆ ಅನ್ನ ಕೊಡುತ್ತದೆಯೇ ? ನಾವೆಲ್ಲ ಹಿಂದುಗಳು, ಎಲ್ಲರೂ ಭಾರತೀಯರು. ನಾವು ಮಹಾತ್ಮ ಗಾಂಧಿ ಹೇಳಿಕೊಟ್ಟ ಹಿಂದುತ್ವವನ್ನು ಅನುಸರಣೆ ಮಾಡುತ್ತೇವೆ. ಬಿಜೆಪಿಯವರು ಸಾರ್ವಕರ್ ಹಿಂದುತ್ವವನ್ನು ಪಾಲನೆ ಮಾಡುತ್ತಾರೆ. ಗಾಂಧಿಯನ್ನು ಕೊಂದ ಗೋಡ್ಸೆಯ ಹಿಂದುತ್ವ ಅನುಸರಿಸುತ್ತಾರೆ. ಹಿಂದುವಿನೊಂದಿಗಿದ್ದೇವೆ ಎನ್ನುತ್ತಲೇ ರಕ್ತಪಾತ ನಡೆಸುತ್ತಾರೆ ಎಂದು ಮೂದಲಿಸಿದರು.

ನರೇಂದ್ರ ಮೋದಿಯ ಎದೆ ಎಷ್ಟಗಲ ಇದೆ ಎನ್ನೋದು ಮುಖ್ಯವಲ್ಲ. ಆ ಹೃದಯ ಬಡವರ ಪರವಾಗಿ ಮಿಡಿಯುತ್ತದೆಯೇ ಎನ್ನೋದು ಪ್ರಶ್ನೆ. ಬಿಜೆಪಿಯಲ್ಲಿರುವ ಯಾವನಾದ್ರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸಾವು ಕಂಡಿದ್ದು ಇದೆಯಾ.. ಮೋದಿ ಸ್ವಾತಂತ್ರ್ಯ ಸಿಕ್ಕ ಬಳಿಕ ಹುಟ್ಟಿದ ಮನುಷ್ಯ. ಸ್ವಾತಂತ್ರ್ಯ ಗಳಿಸಿದ ಕಷ್ಟ ಆತನಿಗೆ ಗೊತ್ತಿಲ್ಲ. ನಾನು ಸ್ವಾತಂತ್ರ್ಯ ಸಿಗೋ ಮೊದಲೇ ಹುಟ್ಟಿದವನು. ಇವರು ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ. ದೇಶ, ದೇಶದ ಸಾಮಾನ್ಯ ಜನರ ಸ್ಥಿತಿ ಬಗ್ಗೆ ಕರುಣೆ ಇದ್ದರೆ ಇವರು ಮೊದಲು ಜನರ ಪರವಾಗಿ ವರ್ತಿಸಲಿ. ಆಮೇಲೆ ದೇಶಭಕ್ತಿಯ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಸಮಾಜವನ್ನು ಒಗ್ಗೂಡಿಸುತ್ತದೆ. ದೇಶದಲ್ಲಿರುವ ನಾನಾ ಧರ್ಮ, ಜಾತಿಗಳನ್ನು ಜೊತೆಗೂಡಿಸಿಕೊಂಡು ಜಾತ್ಯತೀತ ತತ್ವದಡಿ ಜೊತೆಗೆ ಒಯ್ಯುತ್ತದೆ. ಸಂವಿಧಾನದಡಿ ಆಯಾ ಧರ್ಮವನ್ನು ಪಾಲಿಸಿಕೊಂಡು ಇನ್ನೊಂದು ಧರ್ಮವನ್ನು ಹೀಯಾಳಿಸದೆ ಬದುಕುವುದನ್ನು ಕಲಿಸುತ್ತದೆ. ಇಂಥ ಸಿದ್ಧಾಂತ ಹೊಂದಿರುವ ಪಕ್ಷ ಈ ದೇಶದಲ್ಲಿ ಅಧಿಕಾರ ಹಿಡಿಯಬೇಕು. ಫ್ಯಾಸಿಸ್ಟ್ ಶಕ್ತಿಗಳು ದೇಶದ ಅಧಿಕಾರ ಹಿಡಿದರೆ ಈ ದೇಶಕ್ಕೆ ಉಳಿಗಾಲವಿಲ್ಲ ಎಂದರು ಸಿದ್ದರಾಮಯ್ಯ.

ಸಮಾರಂಭದಲ್ಲಿ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ರಮಾನಾಥ ರೈ, ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್, ಮಿಥುನ್ ರೈ, ಐವನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Udupi If congress comes to power 10 kilo rice for every home will be free says siddaramaiah