17 ಗ್ರಾಪಂ ಫುಲ್ ಲಾಕ್ ; ನಗರಕ್ಕಿಂತ ಹಳ್ಳಿಯಲ್ಲೇ ಸೋಂಕು ಹೆಚ್ಚು ! ಬೆಳ್ತಂಗಡಿ ತಾಲೂಕಿನಲ್ಲಿ ಗರಿಷ್ಠ ಪ್ರಕರಣ

14-06-21 11:49 am       Mangalore Correspondent   ಕರಾವಳಿ

50ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣ ಇರುವ 17 ಗ್ರಾಮ ಪಂಚಾಯತ್ ಗಳನ್ನು ಜೂನ್ 14 ರಿಂದ ಜೂನ್ 21ರ ವರೆಗೆ ಸೀಲ್‌ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.‌ 

ಮಂಗಳೂರು, ಜೂನ್ 14 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣ ಇರುವ 17 ಗ್ರಾಮ ಪಂಚಾಯತ್ ಗಳನ್ನು ಜೂನ್ 14 ರಿಂದ ಜೂನ್ 21ರ ವರೆಗೆ ಸೀಲ್‌ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.‌ 

ಈಗಾಗಲೇ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ ಇರುವ ಜಿಲ್ಲೆಗಳಿಗೆ ಲಾಕ್ ಡೌನ್ ವಿನಾಯಿತಿ ನೀಡಲಾಗಿದೆ. ಆದರೆ, ದ.ಕ.  ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಇನ್ನೂ ಕಡಿಮೆಯಾಗದ ಕಾರಣ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಪಾಸಿಟಿವ್ ದರ ಕಡಿಮೆ ಮಾಡುವ ಉದ್ದೇಶದಿಂದ 50ಕ್ಕಿಂತ ಹೆಚ್ಚು ಪ್ರಕರಣಗಳಿರುವ ಗ್ರಾಮಗಳನ್ನು ಸೀಲ್‌ಡೌನ್ ಮಾಡಲು ನಿರ್ಧರಿಸಲಾಗಿತ್ತು. ಕೋವಿಡ್ ಸೋಂಕಿನ ಪ್ರಕರಣ ಹೆಚ್ಚಿರುವ ಗ್ರಾಮ ಪಂಚಾಯತಿಗಳ ಬಗ್ಗೆ ಟಾಸ್ಕ್‌ಫೋರ್ಸ್ ನೀಡಿರುವ ವರದಿ ಆಧರಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ. 

ಇಂದಿನಿಂದ ಜೂನ್ 21ರ ಬೆಳಗ್ಗೆ 9 ಗಂಟೆ ವರೆಗೆ ಏಳು ದಿನಗಳ ಕಾಲ 17 ಗ್ರಾಪಂಗಳಲ್ಲಿ ಸೀಲ್‌ಡೌನ್ ಇರಲಿದೆ. ಈ ವೇಳೆ ಗ್ರಾಮಗಳಿಗೆ ಹೊರಗಿನ ಯಾರು ಕೂಡ ಬರುವಂತಿಲ್ಲ. ಜೊತೆಗೆ ಗ್ರಾಮದಿಂದ ಹೊರ ಹೊಗುವುದನ್ನೂ ಸಂಪೂರ್ಣ ನಿಷೇಧಿಸಲಾಗಿದೆ. ನರ್ಸಿಂಗ್ ಹೋಂ, ಕ್ಲಿನಿಕ್, ಲ್ಯಾಬ್, ಟೆಲಿಮೆಡಿಸಿನ್, ರಕ್ತ ಸಂಗ್ರಹ ಕೇಂದ್ರಗಳನ್ನು ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಉಳಿದಂತೆ ಕೆಎಂಎಫ್ ಹಾಲಿನ ಬೂತ್, ಪೆಟ್ರೋಲ್ ಬಂಕ್ ತೆರೆಯಲು ಮತ್ತು ವೈದ್ಯಕೀಯ, ಇತರ ತುರ್ತು ಅಗತ್ಯ ಸೇವೆಗೆ ವಾಹನ ಓಡಾಟಕ್ಕೆ ಅನುಮತಿಸಲಾಗಿದೆ.  

ಮಂಗಳೂರು ತಾಲೂಕಿನ ನೀರುಮಾರ್ಗ ಮತ್ತು ಕೊಣಾಜೆ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೆಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯ್ಲ, ಉಜಿರೆ, ಚಾರ್ಮಾಡಿ, ಸುಳ್ಯ ತಾಲೂಕಿನ ಐವರ್ನಾಡು, ಅಮರಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು, ಅರಂತೋಡು, ಕಡಬ ತಾಲೂಕಿನ ಸುಬ್ರಹ್ಮಣ್ಯ ಮತ್ತು ಸವಣೂರು ಗ್ರಾಮ ಪಂಚಾಯತಿಗಳು ಜಿಲ್ಲಾಧಿಕಾರಿ ಆದೇಶದಂತೆ ಸೀಲ್ ಡೌನ್ ಆಗಲಿದೆ.

Complete seal down will be enforced in 17-gram panchayats of Dakshina Kannada district from June 14 to 21. The gram panchayats where there are more than 50 active Covid-19 cases will go for complete seal down.