ಬಜ್ಪೆ ವಿಮಾನ ನಿಲ್ದಾಣದ ರನ್ ವೇಯಲ್ಲಿ ಅನುಮಾನಾಸ್ಪದ ವ್ಯಕ್ತಿ ; ಪೊಲೀಸರ ವಶಕ್ಕೆ

06-07-21 02:19 pm       Mangalore Correspondent   ಕರಾವಳಿ

ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ನಿನ್ನೆ ಮಧ್ಯರಾತ್ರಿ ಅನುಮಾನಾಸ್ಪದ ವ್ಯಕ್ತಿ ಕಂಡುಬಂದಿದ್ದು ಸಿಐಎಸ್ಎಫ್ ಭದ್ರತಾ ಸಿಬಂದಿ ವಶಕ್ಕೆ ಪಡೆದಿದ್ದಾರೆ. 

ಮಂಗಳೂರು, ಜುಲೈ 6: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ನಿನ್ನೆ ಮಧ್ಯರಾತ್ರಿ ಅನುಮಾನಾಸ್ಪದ ವ್ಯಕ್ತಿ ಕಂಡುಬಂದಿದ್ದು ಸಿಐಎಸ್ಎಫ್ ಭದ್ರತಾ ಸಿಬಂದಿ ವಶಕ್ಕೆ ಪಡೆದಿದ್ದಾರೆ. 

ಸಿಐಎಸ್ಎಫ್ ಭದ್ರತಾ ಸಿಬಂದಿ ರಾತ್ರಿ 11 ಗಂಟೆ ವೇಳೆಗೆ ಗಸ್ತು ತಿರುಗುತ್ತಿದ್ದಾಗ ಹಳೆಯ ವಿಮಾನ ನಿಲ್ದಾಣದ ಎಟಿಎಸ್ ಭಾಗದಲ್ಲಿ ರನ್ ವೇ ಕಾಮಗಾರಿ ನಡೆಯುತ್ತಿದ್ದು ಅಲ್ಲಿ ಅಪರಿಚಿತ ವ್ಯಕ್ತಿ ಕಂಡುಬಂದಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಬುಧುವಾ ಗ್ರಾಮದ ನಿವಾಸಿ, ರಾಕೇಶ್ ಎಂದು ಹೇಳಿಕೊಂಡಿದ್ದಾನೆ. 

ತಾನು ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು ಇಲ್ಲೇ ಸಮೀಪದಲ್ಲಿ ಲಾರಿ ಡ್ರೈವರ್ ತನ್ನನ್ನು ಸಂಬಳ ನೀಡದೇ ಬಿಟ್ಟು ಹೋಗಿದ್ದು ವಿಮಾನ ನಿಲ್ದಾಣ ಎಂದು ತಿಳಿಯದೇ ಬಂದಿದ್ದೇನೆ ಎಂದು ತಿಳಿಸಿದ್ದಾಗಿ ಸಿಐಎಸ್ಎಫ್ ಯೂನಿಟ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ನೀಡಿರುವ ದೂರಿನಂತೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಜಪೆ ಠಾಣೆಯಲ್ಲಿ ವಿಮಾನ ನಿಲ್ದಾಣ ಆವರಣವನ್ನು ಅಕ್ರಮವಾಗಿ ಪ್ರವೇಶ ಮಾಡಿದ ಕಾರಣಕ್ಕೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಅಲ್ಲದೆ, ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. 

ಈಗಾಗ್ಲೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಭಯೋತ್ಪಾದಕರ ಆತಂಕ ಇರುವ ಹಿನ್ನೆಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿ ವಶಕ್ಕೆ ಪಡೆದಿರುವ ಪ್ರಕರಣದ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

Illegal entry to a restricted area in Mangalore airport one held by Police. The man was taken into Custody by CISF and later was handover to Mangalore City Police.