ಕದ್ರಿ ದೇವಸ್ಥಾನದಲ್ಲಿ ಮತ್ತೆ ಎಜೆ ಶೆಟ್ಟಿಯದ್ದೇ ಕಾರುಬಾರು !  ಬಿಜೆಪಿ ನಾಯಕರ ಮುಂದೆ ಸೋತುಬಿಟ್ಟು ಸಂಘ ಪರಿವಾರ

14-07-21 08:28 pm       Mangaluru Correspondent   ಕರಾವಳಿ

ಕಳೆದ ಒಂದು ವರ್ಷದಿಂದ ಬಿಜೆಪಿ – ಕಾಂಗ್ರೆಸ್ ನಡುವಿನ ಹಗ್ಗ ಜಗ್ಗಾಟದಲ್ಲಿ ಬಿಜೆಪಿ ಪ್ರಭಾವಿ ನಾಯಕರ ಕೈಬಲದೊಂದಿಗೆ ಕಾಂಗ್ರೆಸ್ ನಾಯಕನದ್ದೇ ಕೈಮೇಲಾಗಿದೆ.

ಮಂಗಳೂರು, ಜುಲೈ 13: ಕಳೆದ ಒಂದು ವರ್ಷದಿಂದ ಬಿಜೆಪಿ – ಕಾಂಗ್ರೆಸ್ ನಡುವಿನ ಹಗ್ಗ ಜಗ್ಗಾಟದಲ್ಲಿ ಬಿಜೆಪಿ ಪ್ರಭಾವಿ ನಾಯಕರ ಕೈಬಲದೊಂದಿಗೆ ಕಾಂಗ್ರೆಸ್ ನಾಯಕನದ್ದೇ ಕೈಮೇಲಾಗಿದೆ. ಕದ್ರಿ ಮಂಜುನಾಥ ಕ್ಷೇತ್ರದ ಆಡಳಿತ ಮಂಡಳಿಗೆ ಮತ್ತೆ 77 ರ ಹರೆಯದ ಉದ್ಯಮಿ ಎ.ಜೆ. ಶೆಟ್ಟರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಸರಕಾರ ಬದಲಾದ ಸಂದರ್ಭದಲ್ಲಿ ಧಾರ್ಮಿಕ ಪರಿಷತ್ ಸದಸ್ಯರು ಬದಲಾಗುವುದರಿಂದ ದೇವಸ್ಥಾನ ಕಮಿಟಿಗಳ ವ್ಯವಸ್ಥಾಪನಾ ಮಂಡಳಿಯೂ ಬದಲಾಗುವುದು ರೂಢಿ. ಹಾಗೆಯೇ ಕಳೆದ ಬಾರಿ ಕಾಂಗ್ರೆಸ್ ಸರಕಾರ ಬದಲಾಗಿ ಬಿಜೆಪಿ ಆಡಳಿತಕ್ಕೇರಿದಾಗ, ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಲ್ಲಿಯೂ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರ ಬದಲಾವಣೆ ಆಗಬೇಕೆಂಬ ಕೂಗು ಎದ್ದಿತ್ತು. ಕಳೆದ ಸುದೀರ್ಘ 30 ವರ್ಷಗಳ ಅಧ್ಯಕ್ಷಾವಧಿಯ ಬಳಿಕವಾದ್ರೂ ಎಜೆ ಶೆಟ್ಟರನ್ನು ಬದಲಿಸಬೇಕೆಂದು ಬಿಜೆಪಿ ಮತ್ತು ಸಂಘ ಪರಿವಾರದ ಮಂದಿ ಕಸರತ್ತು ನಡೆಸಿದ್ದರು. ಇದೇ ಹಗ್ಗ ಜಗ್ಗಾಟದಿಂದಾಗಿ ಅಲ್ಲಿ ಆಡಳಿತ ಮಂಡಳಿಯೇ ಕೈಬದಲಾಗದೆ ಮುಂದೂಡುತ್ತಾ ಬಂದಿತ್ತು.

ಆದರೆ, ಕೊನೆಗೂ ಸಂಘದ ನಾಯಕರ ಶಕ್ತಿ ಯಕಶ್ಚಿತ್ ಬಿಜೆಪಿ ವರಿಷ್ಠನೊಬ್ಬನ ಶಕ್ತಿಯ ಮುಂದೆ ನಡೆಯಲಿಲ್ಲ. ಆರೆಸ್ಸೆಸ್ ಪ್ರಮುಖರು, ವಿಶ್ವ ಹಿಂದು ಪರಿಷತ್ ನಾಯಕರೆಲ್ಲ ಈ ಬಾರಿ ಜೋಗಿ ಸಮುದಾಯದ ಪುರುಷೋತ್ತಮ ಅವರನ್ನು ಅಧ್ಯಕ್ಷರಾಗಿ ಮಾಡಬೇಕೆಂದು ಹಠ ಹಿಡಿದರೂ, ತಮ್ಮದೇ ಜಾತಿಯ ನಾಯಕನೆಂಬ ಮಮಕಾರವೋ, ವ್ಯವಹಾರದಲ್ಲಿ ನೆಂಟಸ್ತನವೋ ಮತ್ತೆ ಎಜೆ ಶೆಟ್ಟಿಯನ್ನೇ ಮುಂದುವರಿಸುವಂತೆ ಬಿಜೆಪಿ ನಾಯಕರೊಬ್ಬರು ಹುಕುಂ ಮಾಡಿದ್ದಾರೆ. ಅದನ್ನು ಜಿಲ್ಲಾ ಬಿಜೆಪಿಯ ನಾಯಕರು ಯಥಾವತ್ತಾಗಿ ಪಾಲಿಸಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.

ಎಜೆ ಶೆಟ್ಟಿ ಮಂಗಳೂರಿನ ಮಟ್ಟಿಗೆ ಹಿಂದಿನಿಂದಲೂ ಕಾಂಗ್ರೆಸಿಗನಾಗಿ ಗುರುತಿಸಿಕೊಂಡು ಬಂದವರು. ಆದರೆ, ಬಿಜೆಪಿ ವಲಯದಲ್ಲಿ ಎಜೆ ಶೆಟ್ಟರ ಪರವಾಗಿ ಬ್ಯಾಟಿಂಗ್ ಮಾಡುವ ಮಂದಿ ಬಹಳಷ್ಟು ಇದ್ದಾರೆ. ಸಂಸದ ನಳಿನ್ ಕುಮಾರ್ ಸೇರಿ ಹಲವರು ಎಜೆ ಶೆಟ್ಟಿ ಪರವಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸಂಘದ ನಿಷ್ಠಾವಂತ ಕಾರ್ಯಕರ್ತರು ಈ ಬಾರಿಯಾದ್ರೂ ಅಧ್ಯಕ್ಷ ಹುದ್ದೆ ಸಿಗಬಹುದು ಎಂದು ಲಾಬಿ ನಡೆಸಿದ್ದರೂ, ಅದು ಸ್ಥಳೀಯ ಮಟ್ಟದಲ್ಲಿ ಪ್ರಭಾವ ಬೀರಲಿಲ್ಲ.

ಈ ವಿಚಾರ ಕಲ್ಲಡ್ಕ ಪ್ರಭಾಕರ ಭಟ್, ಧಾರ್ಮಿಕ ಪರಿಷತ್ತಿನ ಕಶೆಕೋಡಿ ನಾರಾಯಣ ಭಟ್, ಸುನಿಲ್ ಆಚಾರ್ ಮತ್ತಿತರ ಸಂಘ ಪರಿವಾರದ ಪ್ರಭಾವಿಗಳ ಬಳಿ ಹೋಗಿದ್ದರೂ, ಬಿಜೆಪಿ ಮಂದಿಯೇ ಆಡಳಿತ ಕಮಿಟಿಗೆ ಬರಬೇಕೆಂಬ ಮನಸ್ಸು ಅವರೆಲ್ಲರಿಗೂ ಇದ್ದರೂ ಅದನ್ನು ಕಾರ್ಯಗತ ಮಾಡಲು ಸೋತಿದ್ದಾರೆ. ಸ್ಥಳೀಯವಾಗಿದ್ದ ಬಿಜೆಪಿ ನಾಯಕನ ವ್ಯಾಪ್ತಿ ರಾಜ್ಯ ಮಟ್ಟಕ್ಕೆ ವಿಸ್ತರಣೆ ಆಗಿದ್ದು ಇವರ ಕೈಕಟ್ಟಿದಂತಾಗಿದೆ. 

Mangalore 77-Year-old A J Shetty chairman of AJ Group of institution and hospital once again elected as president of Kadri Temple Committee 2021.