ಕೊಂಕಣ ರೈಲ್ವೇಯ ತೋಕೂರು ಬಳಿ ರೈಲು ಹಳಿಗೆ ಗುಡ್ಡ ಕುಸಿತ ; 9 ರೈಲುಗಳ ಸಂಚಾರಕ್ಕೆ ತೊಡಕು

16-07-21 01:30 pm       Mangalore Correspondent   ಕರಾವಳಿ

ಮಂಗಳೂರು – ಮುಂಬೈ ರೈಲ್ವೇ ಹಳಿಯ ಕುಲಶೇಖರ – ತೋಕೂರು ಮಧ್ಯೆ ಗುಡ್ಡ ಕುಸಿದು ಹಳಿಗೆ ಬಿದ್ದಿದ್ದು, ರೈಲು ಸಂಚಾರಕ್ಕೆ ತೊಡಕಾಗಿದೆ.

ಮಂಗಳೂರು, ಜುಲೈ 16: ಮಂಗಳೂರು – ಮುಂಬೈ ರೈಲ್ವೇ ಹಳಿಯ ಕುಲಶೇಖರ – ತೋಕೂರು ಮಧ್ಯೆ ಗುಡ್ಡ ಕುಸಿದು ಹಳಿಗೆ ಬಿದ್ದಿದ್ದು, ರೈಲು ಸಂಚಾರಕ್ಕೆ ತೊಡಕಾಗಿದೆ. ಭಾರೀ ಮಳೆಯಿಂದಾಗಿ ಗುಡ್ಡಕ್ಕೆ ಕಟ್ಟಿದ್ದ ತಡೆಗೋಡೆ ಸೇರಿದಂತೆ ಗುಡ್ಡ ಕುಸಿದು ಹಳಿಗೆ ಬಿದ್ದು ಮಣ್ಣು ಮುಚ್ಚಿದೆ.

ಇದರಿಂದಾಗಿ ಮಂಗಳೂರಿನಿಂದ ಕೊಂಕಣ ರೈಲ್ವೇ ಮೂಲಕ ಕಾರವಾರ, ಮುಂಬೈ ಸಾಗುವ ರೈಲುಗಳ ಸಂಚಾರಕ್ಕೆ ತೊಡಕಾಗಿದೆ. ಇಂದು ಬೆಳಗ್ಗೆ ಗುಡ್ಡ ಕುಸಿದ ಘಟನೆ ನಡೆದಿದ್ದು, ಈ ಭಾಗದಲ್ಲಿ ಸಂಚರಿಸುವ ರೈಲುಗಳನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ. ಇದೇ ವೇಳೆ, ರೈಲು ಹಳಿಯಿಂದ ಮಣ್ಣು ತೆರವು ಮಾಡುವ ಕಾರ್ಯ ನಡೆಸಲಾಗುತ್ತಿದೆ.

ರೈಲ್ವೇ ಮೂಲಗಳ ಪ್ರಕಾರ, ಇಂದು ಈ ಹಳಿಯಿಂದ ಸಂಚರಿಸುವ ಒಂಬತ್ತು ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ಮಧ್ಯಾಹ್ನ ಮಂಗಳೂರಿನಿಂದ ಮುಂಬೈಗೆ ಹೊರಡಲಿದ್ದ ಮತ್ಸ್ಯಗಂಧ ರೈಲು ನಾಲ್ಕು ಗಂಟೆ ತಡವಾಗಿ ಸಂಚರಿಸಲಿದೆ ಎನ್ನುವ ಮಾಹಿತಿ ನೀಡಲಾಗಿದೆ.

ರೈಲು ಹಳಿಯ ಉದ್ದಕ್ಕೆ ಗುಡ್ಡದ ಬದಿಗೆ ಕಾಂಕ್ರೀಟ್ ತಡೆಗೋಡೆ ಕಟ್ಟಲಾಗಿತ್ತು. ಕಾಂಕ್ರೀಟ್ ಗೋಡೆಯೇ ಕುಸಿದು ಬಿದ್ದಿದ್ದು , ಹಳಿಯ ಬದಿಯಲ್ಲಿ ಮಳೆ ನೀರು ಹರಿಯುತ್ತಿದೆ. ಸಂಜೆ ಹೊತ್ತಿಗೆ ಮಣ್ಣು ತೆರವು ಕಾರ್ಯಾಚರಣೆ ಮುಗಿಯಬಹುದು ಎನ್ನುವ ಮಾಹಿತಿಯನ್ನು ರೈಲ್ವೇ ಅಧಿಕಾರಿಗಳು ನೀಡಿದ್ದಾರೆ. ಕೊಂಕಣ ರೈಲ್ವೇ ಮೂಲಕ ದೆಹಲಿಗೆ ತೆರಳುವ ನಿಜಾಮುದ್ದೀನ್ ಎಕ್ಸ್ ಪ್ರೆಸ್ ಸೇರಿದಂತೆ ಕೇರಳದಿಂದ ಮಂಗಳೂರು- ಮುಂಬೈಗೆ ಸಂಚರಿಸುವ ರೈಲುಗಳನ್ನು ಕಣ್ಣೂರಿನಲ್ಲಿ ಡೈವರ್ಟ್ ಮಾಡಲಾಗಿದ್ದು, ಮೈಸೂರು ಮೂಲಕ ಸಾಗಲಿದೆ.

ಹಜ್ರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್ ಪ್ರೆಸ್, ಜಾಮ್ ನಗರ್ ಎಕ್ಸ್ ಪ್ರೆಸ್, ಪುಣೆ ಸೂಪರ್ ಫಾಸ್ಟ್, ಮುಂಬೈ ಸಿಎಸ್ ಟಿ, ಕಾರವಾರ ಯಶವಂತಪುರ ಸ್ಪೆಷಲ್ ಟ್ರೈನ್(ವಿಳಂಬ), ಮಂಗಳಾ ಲಕ್ಷದ್ವೀಪ ಎಕ್ಸ್ ಪ್ರೆಸ್ (ದೆಹಲಿ), ಇಂದೋರ್ ಎಕ್ಸ್ ಪ್ರೆಸ್, ನೇತ್ರಾವತಿ ಮತ್ತು ಪಂಚಗಂಗಾ ಎಕ್ಸ್ ಪ್ರೆಸ್ ರೈಲುಗಳ ಸಂಚಾರಕ್ಕೆ ತೊಡಕಾಗಿದ್ದು ಮಂಗಳೂರು ರೈಲು ನಿಲ್ದಾಣಕ್ಕೆ ಬರದೆ ಬೇರೆ ಬೇರೆ ಹಾದಿಗಳಲ್ಲಿ ಅದನ್ನು ಡೈವರ್ಟ್ ಮಾಡಲಾಗಿದೆ.

Video: 

Due to Heavy Rain Landslide Happened near Thokur Mangalore Konkan railway Trains Affected.