ಮಂಗಳೂರು ವಿವಿ ಪದವಿ ಪರೀಕ್ಷೆ ಮುಂದೂಡಿಕೆ ಇಲ್ಲ ; ಆಗಸ್ಟ್ 11 ರಿಂದ ನಡೆಸಲು ಜಿಲ್ಲಾಡಳಿತ ನಿರ್ಣಯ 

06-08-21 08:30 am       Mangaluru Correspondent   ಕರಾವಳಿ

ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಆಗಸ್ಟ್ 11 ರಿಂದ ಮುಂದುವರಿಸುವಂತೆ ವಿಶ್ವವಿದ್ಯಾನಿಲಯದ ಕುಲಸಚಿವರಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚಿಸಿದ್ದಾರೆ.

Photo credits : The Hindu

ಮಂಗಳೂರು, ಆ.5: ಕೋವಿಡ್ ಸೋಂಕಿನಿಂದಾಗಿ ಮುಂದೂಡಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಆಗಸ್ಟ್ 11 ರಿಂದ ಮುಂದುವರಿಸುವಂತೆ ವಿಶ್ವವಿದ್ಯಾನಿಲಯದ ಕುಲಸಚಿವರಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2021ರ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಮುಂದುವರಿಕೆ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ತೀವ್ರಗೊಂಡ ಕಾರಣ ಕಾಸರಗೋಡಿಗೆ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಗಡಿಗಳ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಳಿಸಿದ್ದು, ಅನಗತ್ಯ ಸಂಚಾರವನ್ನು ರದ್ದು ಪಡಿಸಲಾಗಿದೆ. ಆದ ಕಾರಣ ಕೇರಳ ರಾಜ್ಯದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಕಷ್ಟವಾಗುತ್ತಿರುವುದು ಮತ್ತು ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪದವಿ ಪರೀಕ್ಷೆಗಳನ್ನು ಮುಂದೂಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.‌ ಆದರೆ, ಪದವಿ ಪರೀಕ್ಷೆಗಳನ್ನು ರದ್ದುಪಡಿಸಿದ್ದು ಶಿಕ್ಷಣ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿತ್ತು. ಕೊನೆಯ ಸೆಮಿಸ್ಟರ್ ಪರೀಕ್ಷೆಗಳನ್ನು ಇನ್ನಷ್ಟು ಮುಂದೂಡಿದರೆ, ಅದರಿಂದ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ ಪರೀಕ್ಷೆ ನಡೆಸಬೇಕೆಂಬ ಒತ್ತಡ ಜಿಲ್ಲಾಧಿಕಾರಿ ಮೇಲೆ ಬಿದ್ದಿತ್ತು. ಈಗ ಪರೀಕ್ಷೆ ಮುಂದೂಡಿ, ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕು ಹೆಚ್ಚಿದಲ್ಲಿ ಪರೀಕ್ಷೆಯನ್ನು ರದ್ದುಪಡಿಸಬೇಕಾಗಬಹುದು ಎನ್ನುವ ಆತಂಕ ಎದುರಾಗಿತ್ತು.‌

ಹೀಗಾಗಿ ಆಗಸ್ 4 ರಂದು ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಆಗಸ್ಟ್ 11 ರಂದು ನಡೆಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಿದ್ದಲ್ಲಿ ಮಾತ್ರ ಪರೀಕ್ಷೆಗೆ ಹಾಜರಾಗಬಹುದು. ಇಲ್ಲದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ನಿರ್ದೇಶನ ನೀಡಿದರು.

ಪದವಿ ಪರೀಕ್ಷೆಗಳಲ್ಲಿ ವಹಿಸಲಾದ ಅಸೈನ್‌ಮೆಂಟ್ ಗಳನ್ನು ಆನ್‌ಲೈನ್ ಅಥವಾ ಅಂಚೆ ಮೂಲಕ ಸಂಬಂಧಿಸಿದ ಕಾಲೇಜುಗಳಿಗೆ ತಲುಪಿಸಲು ಅವಕಾಶ ನೀಡಬೇಕು, ಪದವಿ ಪರೀಕ್ಷೆಗಳಿಗೆ ಹಾಜರಾಗಲು ಇಚ್ಛಿಸುವ ಕೋವಿಡ್ ಸೋಂಕಿತ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಅವರು ಸೂಚಿಸಿದರು.

ಜಿಲ್ಲೆಯಲ್ಲಿ 29,052 ಪದವಿ ವಿದ್ಯಾರ್ಥಿಗಳು, 5,493 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಗೂ ಕೇರಳದ 2000 ವಿದ್ಯಾರ್ಥಿಗಳು (ಪದವಿ ಪರೀಕ್ಷೆ) ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ. ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಗಳಾಗದಂತೆ ಎಚ್ಚರ ವಹಿಸಬೇಕು. ಇದಕ್ಕಾಗಿ ಯಾವುದೇ ರೀತಿ ಹೆಚ್ಚುವರಿ ದಂಡವನ್ನು ವಿಧಿಸದಂತೆ ಕಾಲೇಜಿನ ಪ್ರಾಂಶುಪಾಲರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ (ಪ) ಡಾ.ಪಿ.ಎಲ್. ಧರ್ಮ, ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿ ಡಾ.ಜಯಕರ ಭಂಡಾರಿ ಎಂ., ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಕಾರ್ಯದರ್ಶಿ (ಎನ್.ಐ.ಸಿ) ಫಾರೂಕ್ ಬಾಯಬೆ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ದೇವಿಪ್ರಸಾದ್ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.

ಪರಿಷ್ಕೃತ ವೇಳಾಪಟ್ಟಿ ನಿಗದಿ 

ಇದೇ ವೇಳೆ, ಜಿಲ್ಲಾಧಿಕಾರಿ ಸೂಚನೆಯಂತೆ ಪರೀಕ್ಷೆ ಮರು ನಿಗದಿಗೊಳಿಸಿದ್ದು ಪರಿಷ್ಕೃತ ವೇಳಾಪಟ್ಟಿಯನ್ನು ಕಾಲೇಜಿನ ವೆಬ್‌ಸೈಟ್‌ ಮೂಲಕ ತಿಳಿಸಲಾಗುವುದು. ವಾಹನ ಸೌಲಭ್ಯ ಅಥವಾ ಕೋವಿಡ್‌ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.

The odd semester examinations of undergraduate and post-graduate courses of Mangalore University of the academic year 2020-21 will resume on August 11, according to Registrar (Evaluation) of the university P.L. Dharma.The university postponed the examinations, which had resumed on August 2, with effect from August 4, after Deputy Commissioner K.V. Rajendra asked it to do so to prevent the spread of COVID-19, mainly from those students who came from Kerala for the examinations. A decision to resume the examinations on August 11 was taken following a meeting the university, the Department of Collegiate Education authorities and the representatives of student unions had with the Deputy Commissioner on Thursday.