ಟೂರ್ ಬುಕ್ ಮಾಡೋ ಮುನ್ನ ತಿಳ್ಕೊಳ್ಳಿ ; ಮಲ್ಪೆಯಲ್ಲಿ ಸಮುದ್ರಕ್ಕೇ ಹಾಕಿದ್ದಾರೆ ಬೇಲಿ !

06-08-21 04:28 pm       Udupi Correspondent   ಕರಾವಳಿ

ಉಡುಪಿಗೆ ತೆರಳಬೇಕು, ಮಲ್ಪೆ ಸಮುದ್ರದ ಹಾಲ್ನೊರೆಯಲ್ಲಿ ತೇಲಬೇಕು ಅಂದ್ಕೊಂಡು ಟೂರ್ ಬುಕ್ ಮಾಡಿದ್ರೆ ಒಂಚೂರು ತಡೀರಿ. ಯಾಕಂದ್ರೆ, ಕಡಲ ಅಲೆಗಳ ಜೊತೆ ಆಟವಾಡೋದಕ್ಕೆ ಉಡುಪಿ ಜಿಲ್ಲಾಡಳಿತ ಬ್ರೇಕ್ ಹಾಕಿದೆ

ಉಡುಪಿ, ಆಗಸ್ಟ್ 6 : ಉಡುಪಿಗೆ ತೆರಳಬೇಕು, ಮಲ್ಪೆ ಸಮುದ್ರದ ಹಾಲ್ನೊರೆಯಲ್ಲಿ ತೇಲಬೇಕು ಅಂದ್ಕೊಂಡು ಟೂರ್ ಬುಕ್ ಮಾಡಿದ್ರೆ ಒಂಚೂರು ತಡೀರಿ. ಯಾಕಂದ್ರೆ, ಕಡಲ ಅಲೆಗಳ ಜೊತೆ ಆಟವಾಡೋದಕ್ಕೆ ಉಡುಪಿ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಜನರು ಸಮುದ್ರಕ್ಕೆ ಇಳಿಯಬಾರದು ಎಂದು ಸಮುದ್ರಕ್ಕೇ ಬೇಲಿ ಹಾಕಿದೆ. 

ಎಚ್ಚರಿಕೆ ಬೋರ್ಡ್, ಎಚ್ಚರಿಸುವ ಹೋಮ್ ಗಾರ್ಡ್, ಆದಾಗ್ಯೂ ಸಮುದ್ರಕ್ಕೆ ಇಳಿದರೆ ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ. ಇದು ಉಡುಪಿಯ ಮಲ್ಪೆ ಸಮುದ್ರ ತೀರದ ಸದ್ಯದ ಸ್ಥಿತಿ. ಇತ್ತೀಚೆಗೆ ಮಲ್ಪೆ ಸಮುದ್ರದಲ್ಲಿ ನಾಲ್ವರು ಪ್ರವಾಸಿಗರು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದರು. ಕೊನೆಗೆ ಮೂವರು ಬದುಕುಳಿದು ಕೊಡಗು ಮೂಲದ ಓರ್ವ ಯುವತಿ ಸಾವನ್ನಪ್ಪಿದ್ದಳು. ಮಲ್ಪೆಯ ಜೀವ ರಕ್ಷಕ ತಂಡದ ಸಿಬ್ಬಂದಿ ಮಾತನ್ನು ಲೆಕ್ಕಿಸದೇ ಮೋಜಿನಲ್ಲಿ ತೊಡಗಿದ್ದರಿಂದ ರಕ್ಕಸ ಗಾತ್ರದ ಅಲೆಗೆ ಸಿಲುಕಿ ಯುವತಿ ಕೊಚ್ಚಿಕೊಂಡು ಹೋಗಿದ್ದಳು. 

ಮಳೆಯಿಂದಾಗಿ ಸಮುದ್ರ ಬಿರುಸುಗೊಂಡಿದ್ದು ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ, ದಡದ ಉದ್ದಕ್ಕೂ ಬಲೆಗಳಿಂದ ಬೇಲಿ ಹಾಕಲಾಗಿದೆ. ಸೂಚನೆ ಹೊರತಾಗಿಯೂ ಸಮುದ್ರಕ್ಕೆ ಇಳಿದರೆ 500 ರೂ. ಡಂಡ ವಿಧಿಸುವುದಾಗಿ ಎಚ್ಚರಿಸಿದೆ. ಈ ಆದೇಶ ಸೆಪ್ಟೆಂಬರ್ 15ರ  ವರೆಗೆ ಈ ಆದೇಶ ಇರಲಿದೆ.

ಇದಲ್ಲದೆ, ಕರಾವಳಿಯ ದೇವಸ್ಥಾನಗಳಲ್ಲೂ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ. ಪ್ರಸಿದ್ಧ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕಟೀಲು ದೇವಸ್ಥಾನ ಸೇರಿದಂತೆ ಮುಂತಾದ ತೀರ್ಥ ಕ್ಷೇತ್ರಗಳಲ್ಲಿ ಕೊರೊನಾ ಸೋಂಕಿನ ಕಾರಣದಿಂದ ವಾರಾಂತ್ಯದಲ್ಲಿ ಪ್ರವೇಶ ನಿರ್ಬಂಧ ಇದೆ. ಇತರೇ ದಿನಗಳಲ್ಲಿ ದೇವರ ದರ್ಶನ ಮಾತ್ರ. ಸೇವೆ ನಡೆಸುವುದಕ್ಕೆ ನಿರ್ಬಂಧ ಹಾಕಲಾಗಿದೆ.‌ ಹೀಗಾಗಿ ದೂರದ ಜನ ಟ್ರಾವೆಲ್ ಬುಕ್ ಮಾಡೋ ಮುನ್ನ ಚೂರು ಯೋಚಿಸಿ.‌

Udupi Maple beach closed for vistors due to heavy rains and rough sea waves