ಕರಾವಳಿಯಲ್ಲಿ ಗಲಭೆಗೆ ಷಡ್ಯಂತ್ರ, ದೇಶದ್ರೋಹಿ ಚಟುವಟಿಕೆ ; ವಿಹಿಂಪ ನಾಯಕರಿಂದ ಗೃಹ ಸಚಿವರ ಭೇಟಿ

21-08-21 01:24 pm       Mangaluru Correspondent   ಕರಾವಳಿ

ಕರಾವಳಿಯಾದ್ಯಂತ ನಡೆಯುತ್ತಿರುವ ದೇಶ ವಿರೋಧಿ, ಸಮಾಜ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕಲು ಕ್ರಮಕ್ಕೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಮುಖಂಡರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.‌ 

ಮಂಗಳೂರು, ಆಗಸ್ಟ್ 21: ದಕ್ಷಿಣ ಕನ್ನಡ ಜಿಲ್ಲೆ ಸೇರಿ ಕರಾವಳಿಯಾದ್ಯಂತ ನಡೆಯುತ್ತಿರುವ ದೇಶ ವಿರೋಧಿ, ಸಮಾಜ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕಲು ಕ್ರಮಕ್ಕೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಮುಖಂಡರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.‌ 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಲಭೆ ಎಬ್ಬಿಸಲು ಯೋಜಿತ ಷಡ್ಯಂತ್ರ ನಡೆಯುತ್ತಲೇ ಇದೆ. ವಿವಿಧ ನೆಪಗಳನ್ನು ಮುಂದಿಟ್ಟು ಹಿಂದುಗಳ ಮೇಲೆ ಆಕ್ರಮಣ, ದಾಳಿ, ಹಲ್ಲೆ ಕೃತ್ಯಗಳನ್ನು ನಡೆಸುವುದು, ಶಾಂತಿ ಸಾಮರಸ್ಯವನ್ನು ಕೆಡಿಸುವುದು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಕಂಡುಬಂದಿದೆ. ಕಬಕದಲ್ಲಿ ಸ್ವಾತಂತ್ರೋತ್ಸವ ಕಾರ್ಯಕ್ರಮವನ್ನು ತಡೆದು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೆ ಅವಮಾನ ಮಾಡಿರುವುದು, ಉಳ್ಳಾಲದ ಕಾಂಗ್ರೆಸ್ ನ ಮಾಜಿ ಶಾಸಕ ದಿ. ಇದಿನಬ್ಬ ಕುಟುಂಬಕ್ಕೆ ಭಯೋತ್ಪಾದಕರ ನಂಟಿನ ಆರೋಪದಲ್ಲಿ ಎನ್ಐಎ ದಾಳಿ, ಗೋ ಕಳವು, ಗೋ ಹತ್ಯೆ, ಲವ್ ಜಿಹಾದ್, ಮತಾಂತರ, ಹಿಂದು ಪವಿತ್ರ ಕ್ಷೇತ್ರಗಳ ಅಪವಿತ್ರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ದೈವ ದೇವರುಗಳ ಬಗ್ಗೆ ಅಶ್ಲೀಲವಾಗಿ ಚಿತ್ರಿಸಿ ಅವಮಾನಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಪರಿಶೀಲಿಸಿ ಶಾಂತಿ ಭಂಜಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಅಲ್ಲದೆ, ಕಬಕದಲ್ಲಿ ಸ್ವಾತಂತ್ರ್ಯ ರಥ ಯಾತ್ರೆಗೆ ಅಡ್ಡಿಪಡಿಸಿದ ಮತ್ತು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಗೆ ಅವಮಾನಿಸಿದ ಆರೋಪಿಗಳ ವಿರುದ್ಧ ದೇಶದ್ರೋಹದ ಕೇಸು  ದಾಖಲಿಸಬೇಕು. ಕರಾವಳಿಯಲ್ಲಿ ಕೆಲವರು ಉಗ್ರಗಾಮಿಗಳ ಜೊತೆ ಸಂಪರ್ಕ ಹೊಂದಿದ್ದು ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇದನ್ನು ನಿಗ್ರಹಿಸಲು ಮಂಗಳೂರಿನಲ್ಲಿ ಎನ್ಐಎ ಕಚೇರಿ ಸ್ಥಾಪಿಸಬೇಕು.‌ ಪ್ರೀತಿ ಪ್ರೇಮದ ಹೆಸರಿನಲ್ಲಿ ಹಿಂದು ಯುವತಿಯರನ್ನು ಮದುವೆಯಾಗಿ ಇಸ್ಲಾಮಿಗೆ ಮಾತಾಂತರಿಸಿ, ಬಳಿಕ ಅವರನ್ನು ದೇಶದ್ರೋಹದ ಚಟುವಟಿಕೆಗಳಿಗೆ ತೊಡಗಿಸುತ್ತಿರುವುದು ಕಂಡುಬಂದಿದೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯದಲ್ಲಿ ಲವ್ ಜಿಹಾದ್ ತಡೆ ಕಾನೂನು ತರಬೇಕು. 

ಸಾಮಾಜಿಕ ಜಾಲತಾಣಗಲ್ಲಿ ಹಿಂದು ದೈವ ದೇವರುಗಳ ಬಗ್ಗೆ ಅಶ್ಲೀಲವಾಗಿ ಚಿತ್ರಿಸಿ ಅವಹೇಳನ ಮಾಡುವುದು ಮತ್ತು ಹಿಂದು ಸಂಘಟನೆಯ ನಾಯಕರ ಬಗ್ಗೆ ಸುಳ್ಳು ಅಪಪ್ರಚಾರ ಮಾಡುತ್ತಿರುವುದು ಹೆಚ್ಚುತ್ತಿದ್ದು ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ನೇತೃತ್ವದಲ್ಲಿ ಪ್ರಮುಖರಾದ ಮುರಳಿಕೃಷ್ಣ ಹಸಂತಡ್ಕ, ರಾಧಾಕೃಷ್ಣ ಅಡ್ಯಂತಾಯ, ಕಿಶೋರ್ ಕುಮಾರ್ ಮನವಿ ಸಲ್ಲಿಸಿದ್ದಾರೆ.

Terror links in Mangalore VH P submits memorandum to Home Minister in Mangalore ask to implement law on Love Jihad.