ಹೆತ್ತವರ ಬಗ್ಗೆ ಆತಂಕ ; ವೀಸಾ ಮುಂದುವರಿಸಿ, ನಮ್ಮನ್ನು ಇಲ್ಲಿಯೇ ಉಳಿಸಿಕೊಳ್ಳಿ ಎಂದ ಅಫ್ಘನ್ನರು !

21-08-21 05:13 pm       Mangaluru Correspondent   ಕರಾವಳಿ

ಅಫ್ಘಾನಿಸ್ತಾನದಿಂದ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ಮಂಗಳೂರಿನ ವಿವಿಧ ಕಾಲೇಜುಗಳಿಗೆ ಆಗಮಿಸಿರುವ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಬಂದಿದ್ದರು. ದುಗುಡ ಹೊತ್ತುಕೊಂಡೇ ಬಂದವರನ್ನು ಮಾತನಾಡಿಸಿದಾಗ ಒಬ್ಬೊಬ್ಬರು ಒಂದೊಂದು ಕತೆಯನ್ನು ಬಿಚ್ಚಿಟ್ಟರು.

ಮಂಗಳೂರು, ಆಗಸ್ಟ್ 21: ಅವರೆಲ್ಲ ಏನಾಗುತ್ತೋ ಎನ್ನುವ ದುಗುಡದಲ್ಲಿದ್ದರು. ದೇಹ ಇಲ್ಲಿದ್ದರೂ, ಯೋಚನೆ ಎಲ್ಲ ಅಲ್ಲಿನದ್ದೇ ಆಗಿತ್ತು. ತಮ್ಮ ಕುಟುಂಬ ಸದಸ್ಯರು, ಹೆತ್ತವರ ಬಗ್ಗೆ ತುಂಬ ಆತಂಕಕ್ಕೆ ಒಳಗಾಗಿದ್ದರು. ಹೌದು.. ಅಫ್ಘಾನಿಸ್ತಾನದಿಂದ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ಮಂಗಳೂರಿನ ವಿವಿಧ ಕಾಲೇಜುಗಳಿಗೆ ಆಗಮಿಸಿರುವ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಬಂದಿದ್ದರು. ದುಗುಡ ಹೊತ್ತುಕೊಂಡೇ ಬಂದವರನ್ನು ಮಾತನಾಡಿಸಿದಾಗ ಒಬ್ಬೊಬ್ಬರು ಒಂದೊಂದು ಕತೆಯನ್ನು ಬಿಚ್ಚಿಟ್ಟರು.

ಮಂಗಳೂರಿನಲ್ಲಿ 58 ವಿದ್ಯಾರ್ಥಿಗಳಿದ್ದು, ಹಲವರು ಕುಟುಂಬ ಸಹಿತ ಬಂದವರಿದ್ದಾರೆ. ಪಿಎಚ್ ಡಿ ಮಾಡುವುದಕ್ಕಾಗಿ ಆಗಮಿಸಿದ್ದವರು ಪತ್ನಿ, ಮಕ್ಕಳೊಂದಿಗೆ ಇಲ್ಲಿಗೇ ಬಂದು ನೆಲೆಸಿದ್ದಾರೆ. ಇನ್ನು ಹಲವರು ಯುವಕರು ಮತ್ತು ಯುವತಿಯರೂ ಇದ್ದರು. ಮಂಗಳೂರಿನಲ್ಲಿರುವ ಅಫ್ಘನ್ನರು ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದು, ಸಂಘಟಿತರಾಗಿದ್ದಾರೆ. ಇವರಿಗೆ ನಾಸೀರ್ ಸೈಯದ್ ಎಂಬ ವ್ಯಕ್ತಿ ಪ್ರಮುಖನಾಗಿದ್ದು ತನ್ನ ಕುಟುಂಬ ಸಹಿತ ಮಂಗಳೂರಿನಲ್ಲಿದ್ದಾರೆ.

ನಾವು ತುಂಬ ಆತಂಕಗೊಂಡಿದ್ದೇವೆ. ಹೆತ್ತವರು, ಕುಟುಂಬ ಸದಸ್ಯರು ಕಾಬೂಲಿನಲ್ಲಿದ್ದಾರೆ. ಸದ್ಯಕ್ಕೇ ಸೇಫ್ ಎನ್ನುತ್ತಿದ್ದಾರೆ. ಆದರೆ, ತಾಲಿಬಾನ್ ಗಳ ಆಕ್ರಮಣದಿಂದಾಗಿ ನಾಳೆ ಏನಾಗುತ್ತೋ ಅನ್ನುವ ಭಯದಲ್ಲಿದ್ದೇವೆ. ಅವರು ಯಾರನ್ನೂ ಬಿಡುವುದಿಲ್ಲ. ತುಂಬ ಕಟು ಮನಸ್ಸಿನವರು. ತಾಲಿಬಾನ್ ಆಡಳಿತದಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ. ಮನೆಯಿಂದ ಹೊರಗೆ ಬರುವಂತಿಲ್ಲ ಎಂದು ನಾಸೀರ್ ಹೇಳುತ್ತಾರೆ.

ವೀಸಾ ಅವಧಿ ಮುಂದುವರಿಸಿ, ನಮ್ಮನ್ನು ಕಾಪಾಡಿ  

ಕಾಬೂಲಿನವರೇ ಆದ ಕಾಝಿಮ್ ಎಂಬವರು ಕೂಡ ಈ ಗುಂಪಿನಲ್ಲಿದ್ದರು. ಕಾಬೂಲ್ ಯೂನಿವರ್ಸಿಟಿಯಲ್ಲಿ ಲೆಕ್ಚರರ್ ಆಗಿರುವ ಕಾಝಿಮ್, ಕಂಪ್ಯೂಟರ್ ಸೈನ್ಸ್ ನಲ್ಲಿ ಡಾಕ್ಟರೇಟ್ ಮಾಡುವುದಕ್ಕಾಗಿ ಮಂಗಳೂರು ವಿವಿಗೆ ಬಂದಿದ್ದರು. ಇಲ್ಲಿ ಬಂದು ಮೂರು ವರ್ಷ ಆಗಿದೆ. ಕುಟುಂಬ ಸಮೇತ ಇಲ್ಲಿದ್ದೇನೆ. ಆದರೆ, ಈಗಿನ ಅಫ್ಘನ್ ಪರಿಸ್ಥಿತಿ ನೋಡಿ ತುಂಬ ಭಯವಾಗಿದೆ. ತಂದೆ ಕಾಬೂಲಿನಲ್ಲಿದ್ದಾರೆ. ಸಂಪರ್ಕದಲ್ಲಿದ್ದೇನೆ. ಆದರೆ ನಾಳೆ ಏನಾಗುತ್ತೆ ಎನ್ನುವುದನ್ನು ಹೇಳಲು ಬರುವುದಿಲ್ಲ. ಸದ್ಯಕ್ಕೆ ಸೇಫ್. ಒಂದಷ್ಟು ದಿನ ಹೀಗೇ ಆದರೆ, ತಿನ್ನುವ ಆಹಾರಕ್ಕೂ ಕೊರತೆ ಬರಲಿದೆ. ಈ ನಡುವೆ, ನಮ್ಮ ವೀಸಾ ಇದೇ ಸೆಪ್ಟಂಬರ್ ತಿಂಗಳಲ್ಲಿ ಮುಗಿಯುತ್ತಿದೆ. ಭಾರತ ಸರಕಾರ ನಮ್ಮ ವೀಸಾ ಅವಧಿಯನ್ನು ಮುಂದುವರಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ ಎಂದರು ಕಾಝಿಮ್.

ಮಹಿಳೆಯರನ್ನು ಹೊರಗೆ ಬಿಡಲ್ಲ ತಾಲಿಬಾನಿಗಳು

ಮಂಗಳೂರಿನಲ್ಲಿ ಬಿಎ ಓದುತ್ತಿರುವ ಇನ್ನೊಬ್ಬ ಹುಡುಗಿಯೂ ಇದೇ ರೀತಿಯ ಆತಂಕ ಹೇಳಿಕೊಂಡಳು. ಕಾಬೂಲಿನ ಈಗಿನ ಸ್ಥಿತಿ ನೋಡಿದರೆ, ನಾಳೆ ಏನಾಗುತ್ತೆ ಎಂದು ಹೇಳಕ್ಕಾಗಲ್ಲ. ಏನೂ ಆಗಬಹುದು. ತಾಲಿಬಾನಿಗಳು ಮಹಿಳೆಯರನ್ನು ಹೊರಗೆ ಕಾಣಿಸಿಕೊಳ್ಳಲು ಬಿಡಲ್ಲ. ಶಿಕ್ಷಣ, ಉದ್ಯೋಗ ಪಡೆಯುವುದಕ್ಕೂ ಬಿಡಲ್ಲ. ಹೆತ್ತವರು ಅಲ್ಲಿದ್ದು ತುಂಬ ಆತಂಕದಲ್ಲಿದ್ದಾರೆ. ಕಾಬೂಲ್ ಏರ್ಪೋರ್ಟಿಗೆ ಬಂದಿದ್ದು, ಬೇರೆ ಕಡೆಗೆಲ್ಲಿಯಾದರೂ ಹೋಗೋಣ ಎಂದು ಪ್ರಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ತಾಲಿಬಾನಿಗಳು ತಮ್ಮ ಕ್ರೂರ ಮನಸ್ಥಿತಿಯನ್ನು ಬದಲಿಸಿ ಎಲ್ಲರಿಗೂ ಬದುಕಲು ಅವಕಾಶ ನೀಡಬೇಕು ಎಂದು ಹೇಳಿದಳು.

ಇನ್ನೊಬ್ಬ ವ್ಯಕ್ತಿ, ನಾನು ಪುನಃ ಅಫ್ಘಾನಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ. ಭಾರತ ತುಂಬಾನೇ ಸೇಫ್ ಇದೆ. ಇಲ್ಲಿನ ಸರಕಾರ ಅವಕಾಶ ಕೊಟ್ಟರೆ ಇಲ್ಲಿಯೇ ಉಳಿಯುತ್ತೇನೆ. ಶಿಕ್ಷಣ ಮುಗಿಸಿ, ಎಲ್ಲಿಯಾದರೂ ಉದ್ಯೋಗಕ್ಕೆ ಅವಕಾಶ ಸಿಕ್ಕಿದರೆ ಉಳಿಯುತ್ತೇನೆ. ನಮ್ಮನ್ನು ನಿರಾಶ್ರಿತರು ಎಂದು ಪರಿಗಣಿಸಿ ವಾಸಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡರು. ಹೆಸರು ಹೇಳಲಿಚ್ಚಿಸದ ಆ ವ್ಯಕ್ತಿ ಕೂಡ ಮಂಗಳೂರು ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಮಾಡುತ್ತಿದ್ದಾರೆ. ನಮ್ಮ ಹೆಸರು ಉಲ್ಲೇಖಿಸಿದರೆ, ಅಲ್ಲಿ ತಾಲಿಬಾನಿಗಳು ನಮ್ಮ ಕುಟುಂಬಸ್ಥರನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಭಯಪಟ್ಟರು.

ತಂದೆ ಬಗ್ಗೆ ಆತಂಕವಾಗುತ್ತಿದೆ, ಹುಡುಕಾಡುತ್ತಿದ್ದಾರೆ !

ಬುರ್ಖಾ ಧರಿಸಿಕೊಂಡಿದ್ದ ಇನ್ನೊಬ್ಬ ಮಹಿಳೆ ಕೂಡ ತನ್ನ ಹೆತ್ತವರ ಬಗ್ಗೆ ಆತಂಕ ತೋಡಿಕೊಂಡರು. ತಂದೆ ಅಫ್ಘನ್ ಸರಕಾರದಲ್ಲಿ ಸೆಕ್ಯುರಿಟಿ ವಿಭಾಗದಲ್ಲಿದ್ದರು. ತಾಲಿಬಾನಿಗಳು ಅಫ್ಘನ್ ಸರಕಾರದ ಜೊತೆಗಿದ್ದವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಯಾರು ಹಿಂದಿನ ಸರಕಾರದಲ್ಲಿದ್ದಾರೆ ಎಂದು ಹುಡುಕಿ ಕೊಲ್ಲುತ್ತಿದ್ದಾರೆ. ಸದ್ಯಕ್ಕೆ ತಂದೆ ಕಾಬೂಲಿನಲ್ಲಿದ್ದಾರೆ. ಆದರೆ, ಯಾವಾಗ ತಾಲಿಬಾನಿಗಳ ಕೈಗೆ ಸಿಗುತ್ತಾರೋ ಎನ್ನುವ ಭಯವಿದೆ. ತಾಲಿಬಾನಿಗಳು ನಮ್ಮಂಥ ಮಹಿಳೆಯರಿಗೆ ಅವಕಾಶ ನೀಡುತ್ತಿಲ್ಲ. ಹೊರಗೆ ಬರುವುದಕ್ಕೇ ಬಿಡುವುದಿಲ್ಲ. ನಾವು ಭಾರತದಲ್ಲಿ ತುಂಬ ಸೇಫ್ ಇದ್ದೇವೆ. ಭಾರತ ಸರಕಾರಕ್ಕೆ ಋಣಿಯಾಗಿದ್ದೇವೆ ಎಂದು ಹೇಳಿದರು.

ರಾಜಕೀಯ ನಾಯಕರ ವೈಫಲ್ಯದಿಂದಲೇ ದುಸ್ಥಿತಿ

ಮಂಗಳೂರು ಯುನಿವರ್ಸಿಟಿಯಲ್ಲಿ ಸ್ಟಡಿ ಮಾಡುತ್ತಿರುವ ಸದ್ದಾಮುಲ್ಲಾ ಎಂಬ ವ್ಯಕ್ತಿ ತುಂಬ ಲಿಬರಲ್ ಆಗಿ ಮಾತನಾಡಿದ್ರು. ಅಫ್ಘಾನಿಸ್ತಾನದಲ್ಲಿ ಎಲ್ಲ ಮನುಷ್ಯರು ಒಂದೇ ಎನ್ನುವ ಭಾವನೆಯೇ ಇಲ್ಲ. ಮಹಿಳೆಯರು ಕೂಡ ಮನುಷ್ಯರು, ಅವರಿಗೂ ಬದುಕುವ ಹಕ್ಕಿದೆ ಎನ್ನುವ ಚಿಂತನೆಯೇ ತಾಲಿಬಾನ್ ಸದಸ್ಯರಿಗಿಲ್ಲ. ಶಿಕ್ಷಣ, ತಿಳುವಳಿಕೆ ಇಲ್ಲದ ವ್ಯಕ್ತಿಗಳೇ ತಾಲಿಬಾನ್ ಪಡೆಯಲ್ಲಿ ತುಂಬಿಕೊಂಡಿದ್ದಾರೆ. ಯಾರೇ ಆಗಲಿ, ತಮ್ಮ ಮಾತು ಕೇಳದವರನ್ನು ಕೊಲ್ಲುವುದೇ ಇವರ ಮನಸ್ಥಿತಿ. ಇವರಿಗೆ ಕೊಲ್ಲುವ ಅಧಿಕಾರ ಕೊಟ್ಟವರು ಯಾರು. ಬರೀ ಮತೀಯ ಭಾವನೆಯನ್ನಷ್ಟೇ ಹೊಂದಿರುವ ಉಗ್ರರು. ನಮ್ಮಲ್ಲಿನ ರಾಜಕೀಯ ನಾಯಕರ ವೈಫಲ್ಯವೇ ಇಂದಿನ ಸ್ಥಿತಿಗೆ ಕಾರಣ. ಅಷ್ಟೊಂದು ಸೈನಿಕರು, ಸೇನಾಪಡೆ ಇದ್ದರೂ, 50 ಸಾವಿರ ಅಷ್ಟೇ ಇದ್ದ ತಾಲಿಬಾನಿಗಳಿಗೆ ಶರಣಾಗಿದ್ದಾರೆ. ರಾಜಕೀಯ ನಾಯಕರು ತಾಲಿಬಾನಿಗಳಿಗೆ ಶೂಟ್ ಮಾಡದಂತೆ ಸೂಚನೆ ನೀಡಿದ್ದರು. ಅದರಂತೆ, ಸೇನಾಪಡೆ ಸುಮ್ಮನಿದ್ದುದರಿಂದ ತಾಲಿಬಾನಿಗಳು ಆಕ್ರಮಿಸಿಕೊಂಡರು ಎಂದು ಅಫ್ಘಾನಿಸ್ತಾನದ ಸ್ಥಿತಿಯನ್ನು ವಿವರಿಸಿದರು.

ಸದ್ದಾಮುಲ್ಲಾ ಜೊತೆಗಿದ್ದ ಕೂಲಿಂಗ್ ಗ್ಲಾಸ್ ಹಾಕಿದ್ದ ಇನ್ನೊಬ್ಬ ಯುವತಿಯೂ ಅದೇ ಮಾತನ್ನು ಹೇಳಿದರು. ತಮ್ಮ ರಾಜಕೀಯ ನಾಯಕತ್ವ ವಿಫಲವಾಗಿದ್ದರಿಂದಲೇ ಈ ಸ್ಥಿತಿ ಬಂತು. ತಾಲಿಬಾನಿಗಳು ಮತ್ತೆ ಆಡಳಿತಕ್ಕೆ ಬರಬೇಕು ಎನ್ನುವ ಇಚ್ಚೆ ಅವರಿಗೂ ಇತ್ತು ಎಂದು ಹೇಳಿದರು.

ಅಫ್ಘಾನಿಸ್ತಾನದ ಲಘ್ ಮಾನ್ ಎನ್ನುವ ಪ್ರಾಂತದಿಂದ ಆಗಮಿಸಿರುವ ಯುವಕ ಅಜ್ಮಿತ್ ಮಂಗಳೂರು ವಿವಿಯಲ್ಲಿ ಇಂಟರ್ನ್ಯಾಶನಲ್ ಇಕಾನಮಿಕ್ಸ್ ಬಗ್ಗೆ ಪಿಎಚ್ ಡಿ ಮಾಡುತ್ತಿದ್ದಾನೆ. 2018ರಲ್ಲಿ ಮಂಗಳೂರು ಬಂದಿದ್ದೇನೆ. ತಾಲಿಬಾನಿಗಳು ವಶಕ್ಕೆ ಪಡೆದ ಬಳಿಕ ಹೆತ್ತವರ ಬಗ್ಗೆ ಆತಂಕ ಉಂಟಾಗಿದೆ. ಈಗಿನ ಬೆಳವಣಿಗೆಯ ಬಳಿಕ ಮನೆ ಬಿಟ್ಟು ಕಾಬೂಲಿಗೆ ಬಂದಿದ್ದಾರೆ. ಕಾಬೂಲ್ ಸದ್ಯಕ್ಕೆ ಸೇಫ್ ಎಂದು ಬಂದಿದ್ದಾರೆ. ಆದರೆ, ಅಲ್ಲಿಯೂ ಈಗ ತಾಲಿಬಾನ್ ಬಂದಿದೆ, ಅವರಿಗೆ ಕರುಣೆಯಿಲ್ಲ ಎಂದು ಹೇಳಿದ.

ನಿರಾಶ್ರಿತರಾಗಿ ಉಳಿದುಕೊಳ್ಳುವುದಕ್ಕೂ ಅವಕಾಶ

ಅಫ್ಘಾನಿಸ್ತಾನದ ವಿದ್ಯಾರ್ಥಿಗಳ ಜೊತೆಗೆ ಸಭೆ ನಡೆಸಿದ ಮಂಗಳೂರು ಕಮಿಷನರ್ ಶಶಿಕುಮಾರ್, ಬಳಿಕ ಮಾಧ್ಯಮಕ್ಕೆ ವಿವರಣೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು, ಸೆಪ್ಟಂಬರ್ ತಿಂಗಳಲ್ಲಿ ವೀಸಾ ಅವಧಿ ಮುಗಿದವರಿಗೆ ಆರು ತಿಂಗಳಿಗೆ ವಿಸ್ತರಣೆ ಮಾಡಲಾಗುವುದು. 58 ಮಂದಿಯ ಪೈಕಿ 11 ಜನ ಅಫ್ಘಾನಿಸ್ತಾನಕ್ಕೆ ತೆರಳಿದ್ದು, ಅವರು ತಮ್ಮ ವ್ಯಾಸಂಗ ಮುಂದುವರಿಸಲು ಬಯಸಿದರೆ ಭಾರತ ಸರಕಾರ ಅವಕಾಶ ನೀಡಲಿದೆ. ಯಾರಾದ್ರೂ ತಮ್ಮ ದೇಶಕ್ಕೆ ತೆರಳಿ ಕುಟುಂಬಸ್ಥರ ಜೊತೆಗಿರಬೇಕು ಎಂದು ಬಯಸಿದರೆ ಅದಕ್ಕೂ ಅವಕಾಶ ನೀಡಲಾಗುವುದು. ಇಲ್ಲಿಯೇ ಉಳಿದುಕೊಳ್ಳಲು ಬಯಸಿದರೆ ರೆಫ್ಯುಜಿ ಸ್ಟೇಟಸ್ (ನಿರಾಶ್ರಿತರು) ಅಡಿ ಉಳಿಸಲಾಗುವುದು. ಅಲ್ಲದೆ, ಅಫ್ಘನ್ ಸ್ಥಿತಿ ಸುಧಾರಣೆ ಆಗೋವರೆಗೆ ಇಲ್ಲಿ ಕೆಲಸ ಮಾಡಲು ಬಯಸಿದರೆ ಅದಕ್ಕೂ ಆಸ್ಪದ ನೀಡಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.

Video: 

Afghan students association in Mangalore met police commissioner N Shashi Kumar and expressed their concerns.  The police commissioner interacted with the students. Out of 58 students, 11 have gone back and 47 are staying with some of their family members. , N Shashi Kumar said, “Students from Afghanistan are studying in various colleges across Mangaluru. The students’ association have approached us looking at the developments in Afghanistan. We assure complete support to the Afghan students and will coordinate with them if they want to speak to their families back home.”