ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದ ಮತ್ತೆ ಐವರು ಮಂಗಳೂರಿನ ನಿವಾಸಿಗಳು ಪಾರು ! ದೆಹಲಿ ಏರ್ಪೋರ್ಟಿಗೆ ಆಗಮನ 

22-08-21 10:40 pm       Mangaluru correspondent   ಕರಾವಳಿ

ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದಿದ್ದ ಮತ್ತೆ ಐದು ಮಂದಿ ಮಂಗಳೂರು ಮೂಲದ ನಿವಾಸಿಗಳು ಭಾರತದ ವಾಯುಪಡೆ ವಿಮಾನದಲ್ಲಿ ದೆಹಲಿಗೆ ಬಂದಿದ್ದಾರೆ. 

ಮಂಗಳೂರು, ಆಗಸ್ಟ್ 22: ಅಫ್ಘಾನಿಸ್ತಾನದಲ್ಲಿ ಸಿಕ್ಕಿಬಿದ್ದಿದ್ದ ಮತ್ತೆ ಐದು ಮಂದಿ ಮಂಗಳೂರು ಮೂಲದ ನಿವಾಸಿಗಳು ಭಾರತದ ವಾಯುಪಡೆ ವಿಮಾನದಲ್ಲಿ ದೆಹಲಿಗೆ ಬಂದಿದ್ದಾರೆ. 

ವಾಯುಪಡೆ ವಿಮಾನದಲ್ಲಿ ಭಾರತ ಮೂಲದ ನೂರಾರು ನಿವಾಸಿಗಳನ್ನು ಕಾಬೂಲಿನಿಂದ ತಜಕಿಸ್ತಾ‌ನಕ್ಕೆ ಒಯ್ಯಲಾಗಿತ್ತು. ತಜಕಿಸ್ತಾನ ಭಾರತದ ಮಿತ್ರರಾಷ್ಟ್ರ ಆಗಿರುವುದರಿಂದ ಕಾಬೂಲಿನಿಂದ ಹತ್ತಿರ ಇರುವ ತಜಕಿಸ್ತಾನಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಕಾಬೂಲ್ ಏರ್ಪೋರ್ಟ್ ನಲ್ಲಿ ವಿವಿಧ ದೇಶಗಳ ವಿಮಾನಗಳು ತಮ್ಮ ನಿವಾಸಿಗಳನ್ನು ಒಯ್ಯಲು ಸರದಿಯಂತೆ ಸಾಲು ಗಟ್ಟಿರುವುದರಿಂದ ದೊಡ್ಡ ಗಾತ್ರದ ವಿಮಾನಗಳು ಇಳಿಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. 

ಸದ್ಯ ಕೆಲವು ಅಫ್ಘನ್ ನಿವಾಸಿಗಳು ಸೇರಿದಂತೆ 150 ಕ್ಕೂ ಹೆಚ್ಚು ಮಂದಿಯನ್ನು ಭಾರತೀಯ ವಾಯುಪಡೆ ವಿಮಾನದಲ್ಲಿ ದೆಹಲಿಗೆ ಕರೆತರಲಾಗಿದೆ‌‌. ಅದರಲ್ಲಿ ಮಂಗಳೂರಿನ ಐದು ಮಂದಿ ಇದ್ದಾರೆಂದು ವಿಮಾನ ಯಾನ ಸಚಿವಾಲಯ ದೃಢಪಡಿಸಿದೆ. ಇದನ್ನು ಮಂಗಳೂರು ಪೊಲೀಸರು ಕೂಡ ಖಚಿಪಡಿಸಿದ್ದಾರೆ. 

ಮೂಡುಬಿದ್ರೆ ನಿವಾಸಿ ಜಗದೀಶ ಪೂಜಾರಿ, ದಿನೇಶ್ ರೈ ಬಜ್ಪೆ, ತೊಕ್ಕೊಟ್ಟಿನ ಪ್ರಸಾದ್ ಆನಂದ್, ಕಿನ್ನಿಗೋಳಿಯ ಡೆಸ್ಮಂಡ್ ಡೇವಿಡ್ ಡಿಸೋಜ, ಮಂಗಳೂರು ಉರ್ವಾ ನಿವಾಸಿ ಶ್ರವಣ್ ಅಂಚನ್ ಈಗ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವರು ಬೆಂಗಳೂರು ಮೂಲಕ ಮಂಗಳೂರಿಗೆ ಬರಲಿದ್ದಾರೆ. ಇವರ ಜೊತೆಗೆ ಒಬ್ಬ ಬೆಂಗಳೂರು ನಿವಾಸಿ ಹಿರೇಕ್ ದೇಬನಾಥ್, ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರು ನಿವಾಸಿ ತನ್ವೀನ್ ಅಬ್ದುಲ್ ಕೂಡ ಅಫ್ಘಾನಿಸ್ತಾನದಿಂದ ಬಂದಿದ್ದಾರೆ. 

ಮಂಗಳೂರು ಮೂಲದ ಜೆರೋಮ್ ಸಿಕ್ವೇರಾ ಮತ್ತು ಚಿಕ್ಕಮಗಳೂರಿನ ಎನ್.ಆರ್. ಪುರದ ಫಾದರ್ ರಾಬರ್ಟ್ ಕ್ಲೈವ್ ಕಾಬೂಲ್ ಏರ್ಪೋರ್ಟ್ ನಲ್ಲಿ ಸುರಕ್ಷಿತವಾಗಿದ್ದಾರೆ. ಅವರನ್ನು ಕರೆತರುವ ಕೆಲಸ ಆಗುತ್ತಿದೆ ಎಂದು ವಿದೇಶಾಂಗ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

Five Mangaloreans stranded in Afghan Kabul rescued reach Delhi Airport