ಸೆ.15ರ ವರೆಗೆ ಸ್ನಾತಕ, ಸ್ನಾತಕೋತ್ತರ ಭೌತಿಕ ತರಗತಿ ಆರಂಭಿಸಬೇಡಿ ; ದ.ಕ‌ ಜಿಲ್ಲಾಧಿಕಾರಿ ಸೂಚನೆ 

26-08-21 08:32 pm       Mangaluru Correspondent   ಕರಾವಳಿ

ಮುಂಬರುವ ಸೆಪ್ಟೆಂಬರ್ 15ರ ವರೆಗೂ ಯಾವುದೇ ಸ್ನಾತಕ ಮತ್ತು ಸ್ನಾತಕೋತ್ತರ ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭಿಸದೇ ಆನ್‍ಲೈನ್ ಮೂಲಕವಷ್ಟೇ ತರಗತಿ ನಡೆಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ನಿರ್ದೇಶನ ನೀಡಿದ್ದಾರೆ. 

ಮಂಗಳೂರು, ಆ.26:  ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪಾಸಿಟಿವಿಟಿ ಸೂಚ್ಯಂಕ ಶೇ. 2.4ರಷ್ಟಿರುವ ಕಾರಣ ಮುಂಬರುವ ಸೆಪ್ಟೆಂಬರ್ 15ರ ವರೆಗೂ ಯಾವುದೇ ಸ್ನಾತಕ ಮತ್ತು ಸ್ನಾತಕೋತ್ತರ ಕಾಲೇಜುಗಳ ಭೌತಿಕ ತರಗತಿಗಳನ್ನು ಆರಂಭಿಸದೇ ಆನ್‍ಲೈನ್ ಮೂಲಕವಷ್ಟೇ ತರಗತಿ ನಡೆಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ನಿರ್ದೇಶನ ನೀಡಿದ್ದಾರೆ. 

ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಭೌತಿಕ ತರಗತಿಗಳನ್ನು ಪ್ರಾರಂಭಿಸುವ ಕುರಿತು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ಪ್ರಸ್ತುತ ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ಸೂಚ್ಯಂಕ ಸೆಪ್ಟೆಂಬರ್ 15ರೊಳಗೆ ಕಡಿಮೆಯಾದಲ್ಲಿ ಮತ್ತೊಮ್ಮೆ ಸಂಬಂಧಪಟ್ಟ ಕಾಲೇಜು ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಭೌತಿಕ ತರಗತಿಗಳನ್ನು ಪ್ರಾರಂಭಿಸಲು ಚರ್ಚಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ಬ್ಯಾಚ್‍ವೈಸ್ ಮೂಲಕ ಕೋವಿಡ್ ಮಾರ್ಗಸೂಚಿಗಳ ಅನುಸಾರವೇ ನಡೆಸಬೇಕು, ವಿಜ್ಞಾನ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ವಿಭಾಗಗಳ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕವೇ ತರಗತಿಗಳನ್ನು ನಡೆಸುವಂತೆ ಸೂಚನೆ ನೀಡಿದರು.

ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್ ನಿರೋಧಕ ಲಸಿಕೆ ಪಡೆದಿರಬೇಕು, ಲಸಿಕೆ ಪಡೆಯದ ಸಿಬ್ಬಂದಿಗಳು ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳದ ಮಾಹಿತಿಯನ್ನು ಕಾಲೇಜು ಶಿಕ್ಷಣಾಧಿಕಾರಿಗಳು ನೀಡಬೇಕು, ನೆಟ್‍ವರ್ಕ್ ಸಮಸ್ಯೆಯಿಂದ ಗ್ರಾಮೀಣ ಭಾಗದ ಕೆಲವು ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳಿಗೆ ಹಾಜರಾಗುವುದು ಸಮಸ್ಯೆಯಾಗಿದೆ, ಜಿಲ್ಲಾಡಳಿತದಿಂದ ಪರ್ಯಾಯ ಮಾರ್ಗ ಹುಡುಕಿ ಅಂತಹ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗುವ ವ್ಯವಸ್ಥೆ ಮಾಡಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಕಿಶೋರ್ ಕೆ, ಕಾಲೇಜು ಶಿಕ್ಷಣ ವಿಶೇಷಾಧಿಕಾರಿ ಜಯಕರ ಭಂಡಾರಿ, ನಿಟ್ಟೆ ವಿಶ್ವವಿದ್ಯಾನಿಲಯದ ನೋಡಲ್ ಅಧಿಕಾರಿ ಡಾ. ದಾನೇಶ್ ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Mangalore DC orders not to start Graduate and Postgraduate classes offline till Sep 15th