ಸಾವಿನ ದವಡೆಯಿಂದ ಪಾರಾಗಿ ಬಂದ ಮೀನುಗಾರ ! ಅರ್ಧ ತಾಸು ಸಮುದ್ರದಲ್ಲಿ ಈಜಾಡಿ ಪ್ರಾಣ ರಕ್ಷಣೆ ! 

28-08-21 07:47 pm       Mangaluru Correspondent   ಕರಾವಳಿ

ಸಮುದ್ರಪಾಲಾಗಿದ್ದ ಮೀನುಗಾರನನ್ನು ಮತ್ತೊಂದು ನಾಡದೋಣಿಯ ಮೀನುಗಾರರು ರಕ್ಷಿಸಿದ ಘಟನೆ ಉಳ್ಳಾಲದ ಅಳಿವೆಬಾಗಿಲಿನಲ್ಲಿ ನಡೆದಿದೆ. 

ಉಳ್ಳಾಲ, ಆ.28: ಮೀನಿಗೆ ಹಾಕಿದ ಬಲೆ ಎಳೆಯುತ್ತಿದ್ದ ವೇಳೆ ನಾಡದೋಣಿಯಿಂದ ಬಿದ್ದು ಸಮುದ್ರಪಾಲಾಗಿದ್ದ ಮೀನುಗಾರನನ್ನು ಮತ್ತೊಂದು ನಾಡದೋಣಿಯ ಮೀನುಗಾರರು ರಕ್ಷಿಸಿದ ಘಟನೆ ಉಳ್ಳಾಲದ ಅಳಿವೆಬಾಗಿಲಿನಲ್ಲಿ ನಡೆದಿದೆ. 
 
ಕಸಬಾ ಬೆಂಗ್ರೆಯ ನಾಡದೋಣಿ ಇಂದು ಮಧ್ಯಾಹ್ನ ಅಳಿವೆಬಾಗಿಲಿನಲ್ಲಿ ಹಿಂತಿರುಗುತ್ತಿದ್ದಾಗ ಮೀನಿಗೆ ಹಾಕಿದ್ದ ಬಲೆಯನ್ನು ಎಳೆಯಲು ಯತ್ನಿಸಿದ್ದಾರೆ. ಈ ವೇಳೆ ದೋಣಿಯ ಇಂಜಿನ್ ಕೆಟ್ಟು ನಿಂತಿದ್ದು ಇದೇ ಸಂದರ್ಭದಲ್ಲಿ ದೋಣಿಗೆ ಭಾರೀ ಗಾತ್ರದ ಅಲೆಗಳು ಅಪ್ಪಳಿಸಿದ ಪರಿಣಾಮ ದೋಣಿಯಲ್ಲಿದ್ದ ಕಸಬ ಬೆಂಗ್ರೆ ನಿವಾಸಿ ನವಾಝ್(35) ಸಮುದ್ರಕ್ಕೆ ಎಸೆಯಲ್ಪಟ್ಟಿದ್ದಾರೆ. 

ನವಾಝ್ ಅವರು ಅಳಿವೆ ಬಾಗಿಲಿನ ರಣಭಯಂಕರ ಸಮುದ್ರದಲ್ಲಿ ಸುಮಾರು ಅರ್ಧ ತಾಸಿನಷ್ಟು ಕಾಲ ಥರ್ಮಾಕೋಲಿನ ಸಹಾಯದಿಂದ ಈಜಾಡಿದ್ದಾರೆ. ಈ ವೇಳೆ ಅದೇ ದಾರಿಯಿಂದ ಮೀನುಗಾರಿಕೆ ಮುಗಿಸಿ ಹಿಂತಿರುಗುತ್ತಿದ್ದ ಉಳ್ಳಾಲ ಹೊಯ್ಗೆಯ ನಿಶಾನ್ ಜಾಯ್ ಮಾಲಕತ್ವದ ಓಶಿಯನ್ ಬ್ರೀಝ್ ನಾಡದೋಣಿಯ ಮೀನುಗಾರರು ಸಮುದ್ರದಲ್ಲಿ ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿದ್ದ ನವಾಝ್ ನನ್ನು ಗಮನಿಸಿದ್ದು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ. ದೋಣಿಯಲ್ಲಿದ್ದ ಹೊಯ್ಗೆ ನಿವಾಸಿ ಪ್ರೇಮ್ ಪ್ರಕಾಶ್, ಸೂರ್ಯಪ್ರಕಾಶ್, ಅನಿಲ್ ಮೊಂತೇರೊ, ಅಜಿತ್ ಬೆಂಗರೆ, ರಿತೇಶ್ ಹೊಯ್ಗೆ ಬಝಾರ್ ಜೊತೆಗೂಡಿ ನವಾಝ್ ಅವರಿಗೆ ರೋಪ್ ಎಸೆದು ದೋಣಿಯೊಳಗೆ ಎಳೆತಂದು ರಕ್ಷಿಸಿದ್ದಾರೆ. 

ರಕ್ಷಣೆಗೊಳಗಾದ ಕಸಬಾ ಬೆಂಗ್ರೆ ನಿವಾಸಿ ನವಾಝ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದು ಚೇತರಿಸಿಕೊಂಡಿದ್ದಾರೆ.

Mangalore fisherman falls overboard survives in sea for hours rescued in Ullal.