ಯಾವುದೇ ರಾಜ್ಯದ ಗಡಿಯನ್ನು ಹೊಂದಿಲ್ಲದ ಉಡುಪಿಯಲ್ಲಿ ವೀಕೆಂಡ್ ಕರ್ಫ್ಯೂ ಹೇರಿದ್ಯಾಕೆ ?

01-09-21 03:57 pm       Udupi Correspondent   ಕರಾವಳಿ

ಉಡುಪಿ ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ  ಜಾರಿ ಮಾಡಿರುವ ವಿಚಾರದಲ್ಲಿ ಉಡುಪಿ ಶಾಸಕ ರಘುಪತಿ‌ ಭಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಉಡುಪಿ, ಸೆ.1: ಯಾವುದೇ ರಾಜ್ಯದ ಗಡಿಯನ್ನು ಹೊಂದಿರದ ಉಡುಪಿ ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ  ಜಾರಿ ಮಾಡಿರುವ ವಿಚಾರದಲ್ಲಿ ಉಡುಪಿ ಶಾಸಕ ರಘುಪತಿ‌ ಭಟ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಉಡುಪಿ ಯಾವುದೇ ಗಡಿ‌ ಜಿಲ್ಲೆಗಳ ಸಾಲಿಗೆ ಸೇರುವುದಿಲ್ಲ. ಯಾವುದೇ ಇತರೇ ರಾಜ್ಯದ ಗಡಿಯನ್ನೂ ಹೊಂದಿಕೊಂಡಿಲ್ಲ. ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕೂಡ ಕಡಿಮೆಯಿದೆ. ಪಾಸಿಟಿವ್ ರೇಟ್ ಶೇ. 1.5 ಕ್ಕೆ ಇಳಿಕೆಯಾಗಿದೆ. ಹೀಗಿದ್ದರೂ ಈ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸಿದ್ದು ಯಾಕೆಂದು ಗೊತ್ತಾಗಲ್ಲ. ಹೀಗಾಗಿ ಉಡುಪಿ ಜಿಲ್ಲೆಯನ್ನು ವೀಕೆಂಡ್ ಕರ್ಫ್ಯೂ ನಿಂದ‌ ಹೊರಗಿಡಬೇಕು ಎಂದು ಒತ್ತಾಯಿಸಿದರು.

ಉಡುಪಿ ಜಿಲ್ಲೆಯ ಜನರು ಕಟ್ಟುನಿಟ್ಟಾಗಿ ಕೋವಿಡ್ ನಿಯಮ ಪಾಲಿಸುತ್ತಿದ್ದಾರೆ. ದಿನಕ್ಕೆ ಹತ್ತು ಸಾವಿರದಷ್ಟು ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಕರ್ಫ್ಯೂ ವಿಧಿಸಿದರೆ ವ್ಯಾಪಾರಸ್ಥರಿಗೆ ಮತ್ತೊಮ್ಮೆ ಸಮಸ್ಯೆಯಾಗುತ್ತೆ. ಈ ಬಗ್ಗೆ ನಾನು ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತೇನೆ. ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರ ಜೊತೆಯೂ ಚರ್ಚಿಸಿದ್ದೇನೆ. ಸಚಿವ ಸುನಿಲ್ ಕೂಡ ನನ್ನ ನಿಲುವು ಒಪ್ಪಿದ್ದಾರೆ. ಆರೋಗ್ಯ ‌ಸಚಿವರೊಂದಿಗೆ ಮಾತನಾಡುವುದಾಗಿ‌ ಹೇಳಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ‌ಶಾಲೆಗಳು ಕೂಡ ಆರಂಭಗೊಂಡಿದ್ದು, ಈ ನಡುವೆ ಕರ್ಪ್ಯೂ ಹೇರುವುದು ಸರಿಯಲ್ಲ. ನಮ್ಮಲ್ಲಿ ಶೇ. 70 ಮೊದಲ ‌ಡೋಸ್ ಹಾಗೂ  ಶೇ. 30 ರಷ್ಟು ಎರಡನೇ ಡೋಸ್ ಲಸಿಕೆ ನೀಡಿಯಾಗಿದೆ. ವ್ಯಾಕ್ಸಿನೇಶನ್ ಆದ ಮೇಲೂ ಕರ್ಪ್ಯೂ ಜಾರಿಯಾದರೆ ಜನರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಗಡಿ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ‌ಸರಿಯಾದ ನಿರ್ಧಾರ. ಆದರೆ ಉಡುಪಿ ಜಿಲ್ಲೆಗೆ‌‌‌ ಸರಿಯಲ್ಲ ಎಂದು ಹೇಳಿದರು.

ಸಾರ್ವಜನಿಕ ಗಣೇಶೋತ್ಸವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಶಾಸಕ‌ ರಘುಪತಿ‌ ಭಟ್, ಗಣೇಶೋತ್ಸವವನ್ನು ಕಳೆದ ವರ್ಷವೂ‌ ವಿಜೃಂಭಣೆಯಿಲ್ಲದೆ ಆಚರಣೆ ಮಾಡಿದ್ದೇವೆ. ಹಾಗೆಂದು ಕೋವಿಡ್ ಸಮಯದಲ್ಲಿ ಮೆರವಣಿಗೆ ಮಾಡಬೇಕೆಂಬ ಅಪೇಕ್ಷೆ ಸರಿಯಲ್ಲ. ಶಾಸ್ತ್ರೋಕ್ತವಾಗಿ ಗಣೇಶನ ಮೂರ್ತಿ ಇಟ್ಟು ಪೂಜಿಸಲು ಅನುಮತಿ ಸಿಗಲಿದೆ. ಸರ್ಕಾರ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ನೀಡಲಿದೆ ಎಂದು ಹೇಳಿದರು. 

Udupi MLA Raghupathi bhat slams govt over weekend curfew in Udupi