ಸಾಮಾನ್ಯರಿಗೆ ಬರೆ ಹಾಕುತ್ತಾ ಹೋದರೆ ಮುಂದೆ ಜನರೇ ದಂಗೆ ಏಳಲಿದ್ದಾರೆ, ಜೇಬುಕಳ್ಳ ಸರ್ಕಾರಕ್ಕೆ ಪಾಠ ಕಲಿಸಲಿದ್ದಾರೆ

02-09-21 10:10 pm       Headline Karnataka News Network   ಕರಾವಳಿ

ಕೇಂದ್ರ ಮತ್ತು ರಾಜ್ಯದಲ್ಲಿ ದುಬಾರಿ ಸರ್ಕಾರ ಆಡಳಿತ ಮಾಡ್ತಾ ಇದೆ. ದೇಶದ ಜನರು ಬೆವರು ಸುರಿಸಿ ಗಳಿಸಿದ ಹಣದಲ್ಲಿ ಆಡಳಿತ ನಡೆಸಲು ಮುಂದಾಗಿದೆ.

ಮಂಗಳೂರು, ಸೆ.2 : ಕೇಂದ್ರ ಮತ್ತು ರಾಜ್ಯದಲ್ಲಿ ದುಬಾರಿ ಸರ್ಕಾರ ಆಡಳಿತ ಮಾಡ್ತಾ ಇದೆ. ದೇಶದ ಜನರು ಬೆವರು ಸುರಿಸಿ ಗಳಿಸಿದ ಹಣದಲ್ಲಿ ಆಡಳಿತ ನಡೆಸಲು ಮುಂದಾಗಿದೆ. ಸಿಕ್ಕಿದ್ದಕ್ಕೆಲ್ಲಾ ಬೆಲೆಯೇರಿಸಿ ಸರಕಾರ ಜನರ ಜೇಬು ಕಳ್ಳನಂತಾಗಿದೆ. ಇದೆ ರೀತಿ ಮುಂದುವರಿದರೆ ಜನರೇ ದಂಗೆ ಏಳಲಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಖಾದರ್, ಮೊದಲಿಗೆ ಅಚ್ಚೇದಿನ್ ಘೋಷಣೆ ಮಾಡಿದ್ದರು. ಈ ದೇಶಕ್ಕೆ ಅಚ್ಚೇದಿನ್ ಬರಲು ಇನ್ನೂ ಎಷ್ಟು ವರ್ಷ ಬೇಕೆಂದು ಹೇಳಲಿ. ಅಚ್ಚೇದಿನ್ ಹೆಸರಲ್ಲಿ ಇನ್ನೂ ಎಷ್ಟು ಜನ್ರಿಂದ ಸುಲಿಗೆ ಮಾಡ್ತಾರೆ. ಈ ಸರ್ಕಾರ ಜನ ಸಾಮಾನ್ಯರ ಜೇಬುಕಳ್ಳ ಸರ್ಕಾರ. ರಾತ್ರಿ ಬೆಳಗಾಗುವುದ್ರಲ್ಲಿ ಬೆಲೆ ಏರಿಕೆ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತದೆ. 

ಜನಸಾಮಾನ್ಯರ ಬಗ್ಗೆ ಇವರಿಗೆ ಯಾವುದೇ ಒಂದು ಕಾಳಜಿ ಇಲ್ಲ. ಸಂಸದರು, ಸಚಿವರಿಗೂ ಕಾಳಜಿ ಇಲ್ಲದಾಗಿದೆ. ಪೆಟ್ರೋಲಿಯಂ ಬೆಲೆ ಜಾಸ್ತಿ ಆದರೆ ಜನರ ನಿತ್ಯ ಬಳಕೆ ವಸ್ತುಗಳ ಮೇಲೆ ಬೆಲೆ ಏರಿಕೆ ಆಗುತ್ತೆ. ಈ ಒಂದು ವಿಚಾರವನ್ನು ಸರ್ಕಾರ ಮನದಟ್ಟು ಮಾಡಿಕೊಳ್ಳಬೇಕು. ಬೇರೆ ಯಾವುದೇ ವಿಚಾರದಲ್ಲಿ ಏರಿಳಿತ ಆದರೂ ನಡೆಯುತ್ತದೆ. ಪೆಟ್ರೋಲ್, ಡೀಸೆಲ್ ಒಮ್ಮಿಂದೊಮ್ಮೆಗೆ ಏರಿಕೆಯಾದರೆ ಅದನ್ನು ಹೊಂದಿಕೊಂಡ ಎಲ್ಲವುಗಳ ದರ ಏರುತ್ತದೆ. ಜನರ ಕಷ್ಟಕ್ಕೆ ಯಾಕೆ ಇವರು ಕಿವಿಕೊಡ್ತಾ ಇಲ್ಲ ಎಂದು ಖಾದರ್ ಪ್ರಶ್ನೆ ಎತ್ತಿದ್ದಾರೆ.  

ದೇಶದ ಕೇವಲ ಏಳೆಂಟು ಮಂದಿ ಮಾತ್ರ ವಿಶ್ವದಲ್ಲಿ ಅತಿ ಶ್ರೀಮಂತರ ಪಟ್ಟಿಯ ಒಂದನೇ ಸ್ಥಾನಕ್ಕೆ ಬರ್ತಿದಾರೆ. ಇವರು ಏಳು ವರ್ಷಗಳ ಕಡಿಮೆ ಅವಧಿಯಲ್ಲಿ ಇಷ್ಟೊಂದು ಶ್ರೀಮಂತರಾಗಲು ಸರ್ಕಾರ ಹೇಗೆಲ್ಲಾ ಸಹಕಾರ ಮಾಡ್ತಾ ಇದೆ. ಇಲ್ಲಿನ ಜನರು ಇನ್ನಷ್ಟು ಬಡವರಾಗಿ ಬಿಡ್ತಿದ್ದಾರೆ. ಆದರೆ ಇವ್ರು ಮಾತ್ರ ಕಡಿಮೆ ಅವಧಿಯಲ್ಲಿ ಹತ್ತು ಪಟ್ಟು ಶ್ರೀಮಂತಿಕೆ ತುಂಬಿಕೊಳ್ಳುತ್ತಿರುವುದಕ್ಕೇನು  ಕಾರಣ ? ಸರ್ಕಾರ ಇವರಿಗೆ ಯಾವ ರೀತಿ ಬೆನ್ನೆಲುಬಾಗಿ ಸಹಾಯ ಮಾಡ್ತಾ ಇದೆ. ಸಾಮಾನ್ಯ ಜನರಿಗೆ ಬರೆಹಾಕಿ, ಇವರು ಸಿರಿವಂತರಿಗೆ ಇನ್ನಷ್ಟು ಸಿರಿವಂತಿಕೆ ತುಂಬಿಕೊಡುವುದರ ಹಿಂದಿನ ಗುಟ್ಟೇನು ? ಇದರ ಬಗ್ಗೆ ಸರ್ಕಾರ ದೇಶದ ಜನರಿಗೆ ಸ್ಪಷ್ಪಪಡಿಸಬೇಕು ಎಂದು ಆಗ್ರಹಿಸಿದರು. 

ಯಾವುದೇ ಹೊರೆಯನ್ನು ಸರ್ಕಾರ ಜನ್ರ ಮೇಲೆ ಹಾಕಬಾರದು. ಈ ಹಿಂದೆ ನಮ್ಮ ಸರ್ಕಾರ ಯಾವುದೇ ಬೆಲೆ ಏರಿಕೆ ಹೊರೆಯನ್ನು ಸಾಮಾನ್ಯ ಜನರ ಮೇಲೆ ಹಾಕಿರಲಿಲ್ಲ. ಈ ಸರ್ಕಾರ ಮಾತ್ರ ಜನರಿಗೆ ಮಾರಕವಾಗುವ ಕೆಲಸ ಮಾಡುತ್ತಿದೆ.‌ ಇದೇ ರೀತಿ ಮುಂದುವರಿದರೆ ಕೇಂದ್ರದ ವಿರುದ್ಧ ಮುಂದಿನ ದಿನಗಳಲ್ಲಿ ಜನರೇ ದಂಗೆಗೆ ಏಳಬಹುದು ಎಂದು ಖಾದರ್ ಭವಿಷ್ಯ ನುಡಿದರು. 

ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ಸರ್ಕಾರದಲ್ಲಿ ಯಾವುದೇ ಸ್ಪಷ್ಟ ಯೋಜನೆ, ಯೋಚನೆಗಳೇ ಇಲ್ಲ. ದಿನಕ್ಕೊಂದು ಹೇಳಿಕೆ ನೀಡುತ್ತಾ ಗೊಂದಲಕ್ಕೆ ತಳ್ಳುತ್ತಿದೆ. ಆನ್ ಲೈನ್, ಆಫ್ ಲೈನ್ ಹತ್ತು ಹಲವು ಗೊಂದಲ. ಜನರು ಇದರಿಂದ ಸಂಕಷ್ಟ ಎದುರಿಸುತ್ತಿದ್ದರೆ ಸರ್ಕಾರ, ಆಡಳಿತ ವರ್ಗ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ವಿಷಾದ ಪಡಿಸಿದರು.

Mangalore UT Khader slams BJP govt during the press meet held at Circuit house in Mangalore, says they are looting people's money.