ಕೊಲ್ಲೂರು ಹೋಗಬೇಕಿದ್ದರೆ ಇನ್ನು ಆಧಾರ್ ಕಾರ್ಡ್ ಕಡ್ಡಾಯ ! ಕೇರಳದ ಭಕ್ತರ ಪತ್ತೆಗೆ ದೇಗುಲ ಆಡಳಿತದಿಂದ ಕಟ್ಟುನಿಟ್ಟಿನ ಕ್ರಮ

04-09-21 02:55 pm       Udupi Correspondent   ಕರಾವಳಿ

ಕೋವಿಡ್ ಹಿನ್ನೆಲೆಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇನ್ನು ಮುಂದೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ

ಉಡುಪಿ, ಸೆ.4: ಕೋವಿಡ್ ಹಿನ್ನೆಲೆಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಇನ್ನು ಮುಂದೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪಿ.ಬಿ. ಮಹೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಉಡುಪಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಸೆಪ್ಟಂಬರ್ 4ರಿಂದಲೇ ಅನ್ವಯ ಆಗುವಂತೆ  ಆಧಾರ್ ಕಾರ್ಡ್ ಕಡ್ಡಾಯ ನೀತಿಯನ್ನು ಜಾರಿಗೆ ತರಲಾಗಿದೆ. ದೇಗುಲ ಪ್ರವೇಶ ದ್ವಾರದಲ್ಲಿ ಎಲ್ಲಾ ಭಕ್ತಾದಿಗಳ ಆಧಾರ್ ಕಾರ್ಡ್ ಪರಿಶೀಲಿಸಿ ಹೆಸರು, ಊರು ಹಾಗೂ ಸಂಪರ್ಕ ಸಂಖ್ಯೆಯನ್ನು ದಾಖಲಿಸಲಾಗುತ್ತದೆ. ಕರ್ನಾಟಕ ಹೊರತುಪಡಿಸಿ ಇತರೇ ಕಡೆಯ ಭಕ್ತರು ಕಡ್ಡಾಯ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು. 

ಕೇರಳ ರಾಜ್ಯದಿಂದ ಆಗಮಿಸುವ ಭಕ್ತರು 72 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್- 19 ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿಯನ್ನು ಹಾಜರುಪಡಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಕ್ಷೇತ್ರದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಕೊಲ್ಲೂರು ದೇವಸ್ಥಾನಕ್ಕೆ ಕೇರಳದ ಭಕ್ತರು ಅತಿ ಹೆಚ್ಚು ಬರುವುದರಿಂದ ಆಧಾರ್ ಕಾರ್ಡ್ ಕಡ್ಡಾಯ ಮಾಡುವ ಮೂಲಕ ಹೊರ ರಾಜ್ಯದ ಭಕ್ತರ ಪತ್ತೆಗೆ ಕ್ರಮ ವಹಿಸಲಾಗಿದೆ. ‌

Aadhar card must for those Visiting Kollur mookambika temple due to spike in covid cases a temple authorities have brought a new rule.