ಕಟೀಲು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಗಲು ಮಾತ್ರ ದೇವರ ದರ್ಶನ ; ವಾರಾಂತ್ಯ ಭಕ್ತಾದಿಗಳಿಗೆ ಸಂಪೂರ್ಣ ನಿರ್ಬಂಧ

07-09-21 09:24 pm       Mangaluru Correspondent   ಕರಾವಳಿ

ಕಟೀಲು ಶ್ರೀ ದುರ್ಗಾಪರಮೇಶ್ವರಿ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯ ವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಂಗಳೂರು, ಸೆ.7 : ದ.ಕ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯ ವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ‌ಅಲ್ಲದೆ, ವಾರಾಂತ್ಯದ ಶನಿವಾರ ಮತ್ತು ಭಾನುವಾರ ಎರಡು ದಿನ ಭಕ್ತಾದಿಗಳ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. 

ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿ, ಕೋವಿಡ್ ಪಾಸಿಟಿವಿಟಿ ದರದಲ್ಲಿ ಇಳಿಕೆಯಾಗಿದ್ದರೂ, ಸಂಭಾವ್ಯ 3ನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮುಂದಿನ ಆದೇಶದ ವರೆಗೆ ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಿ, ಆದೇಶ ಹೊರಡಿಸಿದ್ದಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಮುಂದಿನ ಆದೇಶದ ವರೆಗೆ ಭಕ್ತಾದಿಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ವರೆಗೆ ಮಾತ್ರ ತೆರೆಯಲಾಗಿರುತ್ತದೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಮಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಕ್ತಾದಿಗಳಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ತೀರ್ಥ ಪ್ರಸಾದ, ಸೇವೆಗಳು, ಅನ್ನಸಂತರ್ಪಣೆಗೆ ಅವಕಾಶವಿರುವುದಿಲ್ಲ.

ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಭಕ್ತಾದಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಲ್ಲದೆ, ವಸತಿ ಗೃಹಗಳಲ್ಲಿ ತಂಗುವುದಾಗಲೀ ಅಥವಾ ದೇವರ ದರ್ಶನಕ್ಕಾಗಲೀ ಅವಕಾಶವಿರುವುದಿಲ್ಲ. ಶನಿವಾರ ಮತ್ತು ಭಾನುವಾರ ಎಲ್ಲಾ ರೀತಿಯ ಉತ್ಸವ, ಸೇವೆಗಳು, ತೀರ್ಥ, ಪ್ರಸಾದ, ಮುಡಿ ಸೇವೆಗಳನ್ನು ನಿರ್ಬಂಧಿಸಿದ್ದು, ಅರ್ಚಕರಿಂದ ಸಾಂಪ್ರಾದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಜಾತ್ರೆಗಳು, ದೇವಾಲಯದ ಉತ್ಸವಗಳು ಹಾಗೂ ಮೆರವಣಿಗೆಗಳನ್ನು ಸಹ ನಿರ್ಬಂಧಿಸಲಾಗಿದೆ.
ಈ ಆದೇಶವನ್ನು ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2001ರ ಕಲಂ 51 ರಿಂದ 60ರನ್ವಯ ಐಪಿಸಿ ಕಲಂ 188ರಂತೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಕಲಂ 4, 5 ಮತ್ತು 10 ರಂತೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Temples in Dakshina Kannada to open only from 7 Am to 7 Pm to be closed on weekend orders DC. The decision was taken due to rise in covid cases in Mangalore.