ಆಸ್ಕರ್ ಪತ್ನಿ ಬ್ಲೋಸಮ್ ಗೆ ಕರೆ ಮಾಡಿ ಸಾಂತ್ವನ ಹೇಳಿದ ಸೋನಿಯಾ ಗಾಂಧಿ, ಗೌರವದ ವಿದಾಯಕ್ಕೆ ಸೂಚನೆ

13-09-21 05:56 pm       Mangaluru Correspondent   ಕರಾವಳಿ

ಆಸ್ಕರ್ ಫೆರ್ನಾಂಡಿಸ್ ನಿಧನರಾಗಿರುವ ಸುದ್ದಿ ತಿಳಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ವತಃ ಕರೆ ಮಾಡಿ, ಆಸ್ಕರ್ ಪತ್ನಿ ಬ್ಲೋಸಮ್ ಜೊತೆಗೆ ಮಾತನಾಡಿದ್ದು ಸಾಂತ್ವನ ಹೇಳಿದ್ದಾರೆ.

ಮಂಗಳೂರು, ಸೆ.13: ತಮ್ಮ ಪರಮಾಪ್ತರಾಗಿ ಗುರುತಿಸಿಕೊಂಡಿದ್ದ ಆಸ್ಕರ್ ಫೆರ್ನಾಂಡಿಸ್ ನಿಧನರಾಗಿರುವ ಸುದ್ದಿ ತಿಳಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ವತಃ ಕರೆ ಮಾಡಿ, ಆಸ್ಕರ್ ಪತ್ನಿ ಬ್ಲೋಸಮ್ ಜೊತೆಗೆ ಮಾತನಾಡಿದ್ದು ಸಾಂತ್ವನ ಹೇಳಿದ್ದಾರೆ.

ಸೋನಿಯಾ ಗಾಂಧಿ ಸಾಂತ್ವನದ ಮಾತು ಹೇಳುವಾಗ ಆಸ್ಕರ್ ಪತ್ನಿ ಬ್ಲೋಸಮ್ ಅತ್ತಿದ್ದಾರೆ. ಬ್ಲೋಸಮ್ ಬಳಿ ನೀವು ಅಳಬೇಡಿ ಎನ್ನುತ್ತಲೇ ಎಲ್ಲ ಮಂಗಳೂರಿನ ಜನತೆ ನಿಮ್ಮೊಂದಿಗಿದ್ದಾರೆ. ಆಸ್ಕರ್ ನಮ್ಮ ಪ್ರೀತಿಪಾತ್ರರಾಗಿದ್ದರು. ನಾವು ಯಾರು ಕೂಡ ದುಃಖಿತರಾಗಬಾರದು. ಅವರ ಪ್ರೀತಿ ನಮ್ಮ ಜೊತೆಗೆ ಸದಾ ಇರುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ, ಮಂಗಳೂರಿನ ಕಾಂಗ್ರೆಸ್ ನಾಯಕಿ ಶಾಲೆಟ್ ಪಿಂಟೋ, ಉಡುಪಿ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಬಗ್ಗೆ ಸೋನಿಯಾ ಗಾಂಧಿಗೆ ಮಾಹಿತಿ ನೀಡಿದ್ದಾರೆ. ಓಕೆ, ಗೌರವಪೂರ್ಣವಾಗಿ ಎಲ್ಲ ಕಾರ್ಯವನ್ನೂ ನಡೆಸಿ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಸೋನಿಯಾ ಗಾಂಧಿ ತಮ್ಮ ಪರಮಾಪ್ತನ ಅಂತಿಮ ಕಾರ್ಯದ ಬಗ್ಗೆ ಆಸಕ್ತಿ ವಹಿಸಿದ್ದು ಮತ್ತು ಬ್ಲೋಸಮ್ ಫೆರ್ನಾಂಡಿಸ್ ಜೊತೆಗೆ ಮಾತನಾಡಿ ಸಾಂತ್ವನ ಹೇಳಿದ ಆಡಿಯೋವನ್ನು ಕಾಂಗ್ರೆಸ್ ನಾಯಕರು ಮಾಧ್ಯಮ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಗ್ರೂಪ್ ಗಳಲ್ಲಿ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಅಧಿನಾಯಕಿ ಆಗಿರುವ ಸೋನಿಯಾ ಗಾಂಧಿ ತಮ್ಮ ಪರಮಾಪ್ತ ಆಸ್ಕರ್ ಜೊತೆಗೆ ಎಷ್ಟರ ಮಟ್ಟಿಗೆ ಹತ್ತಿರದ ಒಡನಾಟ ಹೊಂದಿದ್ದರು ಎನ್ನುವುದನ್ನು ಇದು ಸೂಚಿಸುತ್ತದೆ. ಆಸ್ಕರ್ ಕಳೆದ ನಾಲ್ಕು ದಶಕಗಳಲ್ಲಿ ಸೋನಿಯಾ ಗಾಂಧಿ, ರಾಜೀವ ಗಾಂಧಿ ಸೇರಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಜೊತೆ ಹತ್ತಿರದ ಸಂಬಂಧ ಹೊಂದಿದ್ದರು. 


Congress President Sonia Gandhi calls to Oscar wife blossom Fernandes