ಕಡೆಗೂ ನಕ್ಸಲ್ ಹಣೆಪಟ್ಟಿ ಕಳಚಿಕೊಂಡ ವಿಠಲ ಮಲೆಕುಡಿಯ, ಕರಪತ್ರದ ಕಾರಣಕ್ಕೇ ದೇಶದ್ರೋಹಿಯಾಗಿದ್ದ ಪತ್ರಿಕೋದ್ಯಮ ವಿದ್ಯಾರ್ಥಿ !!

21-10-21 10:42 pm       Mangalore Reporter   ಕರಾವಳಿ

ಕುದುರಮುಖ ರಕ್ಷಿತಾರಣ್ಯ ವ್ಯಾಪ್ತಿಯ ಕುತ್ಲೂರಿನಲ್ಲಿ ನಕ್ಸಲ್ ಸಂಪರ್ಕದಲ್ಲಿದ್ದಾನೆಂದು ಬಂಧಿಸಿದ್ದ ವಿಠಲ ಮಲೆಕುಡಿಯ ಮತ್ತು ಆತನ ತಂದೆ ಕೊನೆಗೂ ನ್ಯಾಯದ ಹೋರಾಟದಲ್ಲಿ ದೋಷಮುಕ್ತರಾಗಿ ಬಂದಿದ್ದಾರೆ.

ಮಂಗಳೂರು, ಅ.21 : ಸುದೀರ್ಘ ಒಂಬತ್ತು ವರ್ಷಗಳ ಅಲೆದಾಟ, ಕೋರ್ಟ್- ಪೊಲೀಸ್ ವಿಚಾರಣೆಯ ಪೀಕಲಾಟ. 2012ರಲ್ಲಿ ಏಂಟಿ ನಕ್ಸಲ್ ಫೋರ್ಸ್ ಪಡೆಯು ಕುದುರಮುಖ ರಕ್ಷಿತಾರಣ್ಯ ವ್ಯಾಪ್ತಿಯ ಕುತ್ಲೂರಿನಲ್ಲಿ ನಕ್ಸಲ್ ಸಂಪರ್ಕದಲ್ಲಿದ್ದಾನೆಂದು ಬಂಧಿಸಿದ್ದ ವಿಠಲ ಮಲೆಕುಡಿಯ ಮತ್ತು ಆತನ ತಂದೆ ಕೊನೆಗೂ ನ್ಯಾಯದ ಹೋರಾಟದಲ್ಲಿ ದೋಷಮುಕ್ತರಾಗಿ ಬಂದಿದ್ದಾರೆ.

ಭಗತ್ ಸಿಂಗ್ ಕುರಿತ ಪುಸ್ತಕ, ಚುನಾವಣೆ ಬಹಿಷ್ಕಾರದ ಬ್ಯಾನರುಗಳು, ನಕ್ಸಲರು ಹಂಚುತ್ತಿದ್ದ ಕರಪತ್ರಗಳು ಆ ಮನೆಯಲ್ಲಿದ್ದವು ಅನ್ನೋ ಕಾರಣಕ್ಕೆ 2012ರ ಮಾರ್ಚ್ 2ರಂದು ಎಎನ್ಎಫ್ ನಡೆಸಿದ್ದ ದಾಳಿಗೆ ಅವರಿಬ್ಬರು ಬಲಿಯಾಗಿದ್ದರು. ನಕ್ಸಲ್ ಸಂಪರ್ಕದಲ್ಲಿದ್ದಾರೆ, ನಕ್ಸಲರಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಬಂಧಿಸಿದ್ದಲ್ಲದೆ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಸ್ನಾತಕ ಪದವಿ ಓದುತ್ತಿದ್ದ ವಿಠಲ ಮತ್ತು ಕುತ್ಲೂರು ಎಂಬ ಕುಗ್ರಾಮದಲ್ಲಿ ಕಾಡುತ್ಪತ್ತಿ ಸಂಗ್ರಹಿಸಿ ಜೀವನ ದೂಡುತ್ತಿದ್ದ ಆತನ ತಂದೆ ಲಿಂಗಣ್ಣ ಮಲೆಕುಡಿಯ ಇಬ್ಬರ ಮೇಲೂ ದೇಶದ್ರೋಹದ ಕೇಸು ದಾಖಲಿಸಿದ್ದರು.

ಮಾರ್ಚ್ 2ರಂದು ತನ್ನ ಮನೆಗೆ ಎಎನ್ಎಫ್ ಪಡೆ ದಾಳಿ ನಡೆಸಿ, ತಂದೆಯನ್ನು ವಶಕ್ಕೆ ಪಡೆದಿದ್ದಾರೆ ಅನ್ನುವುದು ಗೊತ್ತಾಗುತ್ತಲೇ ಮಂಗಳೂರಿನ ಕೋಣಾಜೆಯ ವಿವಿ ಆವರಣದ ಹಾಸ್ಟೆಲಿನಲ್ಲಿದ್ದ ವಿಠಲ ಮರುದಿನ ನೇರವಾಗಿ ಕುತ್ಲೂರಿನ ಮನೆಗೆ ತೆರಳಿದ್ದ. ಆದರೆ, ಮನೆಗೆ ಬಂದು ವಿಷಯದ ಬಗ್ಗೆ ತಿಳಿಯುವ ಮೊದಲೇ ಎಎನ್ಎಫ್ ಪಡೆಗಳು ಆತನನ್ನು ಬಂಧಿಸಿದ್ದವು. ಆತನ ಮನೆಯಲ್ಲಿದ್ದ ಒಂದಷ್ಟು ಚಾಹುಡಿ, ಸಕ್ಕರೆ ಸೇರಿದಂತೆ ಚುನಾವಣೆ ಬಹಿಷ್ಕಾರದ ಕರಪತ್ರಗಳನ್ನು ಪಡೆದು ಕೇಸು ದಾಖಲಿಸಿದ್ದರು. ಈ ಬಗ್ಗೆ ವೇಣೂರು ಠಾಣೆಯಲ್ಲಿ ಎಎನ್ಎಫ್ ಪಡೆಯ ಎಸ್ಐ ಸಚಿನ್ ಲಾರೆನ್ಸ್ ದೂರು ದಾಖಲಿಸಿದ್ದರು.

ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಕ್ಸಲರಾದ ವಿಕ್ರಂ ಗೌಡ, ಪ್ರದೀಪ್, ಜಾನ್, ಪ್ರಭಾ ಮತ್ತು ಸುಂದರಿ ಎಂಬವರು ಮೊದಲ ಐದು ಆರೋಪಿಗಳಾಗಿದ್ದರೆ, ವಿಠಲ ಮಲೆಕುಡಿಯ ಮತ್ತು ಲಿಂಗಣ್ಣ 6 ಮತ್ತು 7ನೇ ಆರೋಪಿಗಳಾಗಿದ್ದರು. ಇವರ ವಿರುದ್ಧ ಸೆಕ್ಷನ್ 120 ಬಿ, 121 ಮತ್ತು ಯುಎಪಿಎ ಕಾಯ್ದೆಯಡಿ 19 ಮತ್ತು 20 ಅಡಿಯಲ್ಲಿ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಪೊಲೀಸರು ಮೂರು ವರ್ಷಗಳ ಕಾಲ ಒದ್ದಾಡಿದರೂ, ಇವರಿಬ್ಬರನ್ನು ಬಿಟ್ಟರೆ ಬೇರೆ ಯಾರನ್ನೂ ಬಂಧಿಸಲು ಸಾಧ್ಯವಾಗಲಿಲ್ಲ.  ಉಳಿದ ಐವರು ನಕ್ಸಲರ ಬಗ್ಗೆ ಕನಿಷ್ಠ ಮಾಹಿತಿ ಕಲೆ ಹಾಕುವುದಕ್ಕೂ ಸಾಧ್ಯವಾಗಿರಲಿಲ್ಲ.

2015ರಲ್ಲಿ ಪೊಲೀಸರು ಕೊನೆಗೆ ಚಾರ್ಜ್ ಶೀಟ್ ಹಾಕಿದ್ದರು. ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ 90 ದಿವಸದಲ್ಲಿ ಚಾರ್ಜ್ ಶೀಟ್ ಹಾಕಬೇಕು. ಅತ್ಯಂತ ವಿಶೇಷ ಪ್ರಕರಣದಲ್ಲಿ ಮಾತ್ರ ಹೆಚ್ಚುವರಿ ಅವಧಿ ನೀಡಲಾಗುತ್ತದೆ. 90 ದಿವಸದಲ್ಲಿ ಚಾರ್ಜ್ ಶೀಟ್ ಹಾಕದೇ ಇದ್ದ ಟೆಕ್ನಿಕಲ್ ಕಾರಣದಿಂದಾಗಿಯೇ ವಿಠಲ ಮಲೆಕುಡಿಯನಿಗೆ 2012ರ ಜೂನ್ 2ರಂದು ಜಾಮೀನು ದೊರಕಿತ್ತು. ದೇಶದ್ರೋಹದ ಕೇಸು ದಾಖಲಾದರೆ, ಜಾಮೀನು ಸಿಗುವುದೇ ಅಪರೂಪ. ಒಂದ್ಕಡೆ ಇಡೀ ಕುಟುಂಬ ಮಾನಸಿಕ ಹಿಂಸೆ ಅನುಭವಿಸಿದರೂ, ಮೂರೇ ತಿಂಗಳಲ್ಲಿ ಜಾಮೀನಿನಲ್ಲಿ ಹೊರತಂದಿದ್ದು ವಕೀಲರ ಜಾಣ್ಮೆಯ ನಡೆಯಾಗಿತ್ತು. ಆನಂತರ, ಬೆಳ್ತಂಗಡಿ ಕೋರ್ಟಿನಲ್ಲಿ ವಿಚಾರಣೆ ಆರಂಭಗೊಂಡಿತ್ತು. ಪ್ರಕರಣದ ವ್ಯಾಪ್ತಿ ಹೆಚ್ಚಿನದಾಗಿದ್ದರಿಂದ ಸಹಜವಾಗೇ ಕೇಸು ಜಿಲ್ಲಾ ಕೋರ್ಟಿಗೆ ಹಸ್ತಾಂತರವಾಗಿತ್ತು. 2017ರಿಂದ 2021ರ ಆಗಸ್ಟ್ ವರೆಗೂ ಮಂಗಳೂರಿನ ಕೋರ್ಟಿನಲ್ಲಿ ವಿಚಾರಣೆ ಮುಂದುವರಿದಿತ್ತು. ಪೊಲೀಸರು 44 ಸಾಕ್ಷ್ಯಗಳ ಬಗ್ಗೆ ಉಲ್ಲೇಖಿಸಿದ್ದರೂ, 23 ಸಾಕ್ಷ್ಯಗಳನ್ನು ಕೋರ್ಟಿನಲ್ಲಿ ವಿಚಾರಣೆಗೆ ಕರೆಯಲಾಗಿತ್ತು.

ಕೈಕೋಳದಲ್ಲಿಯೇ ಪರೀಕ್ಷೆ ಬರೆದಿದ್ದ

2012ರಲ್ಲಿ ಬಂಧನ ಆದಾಗ ವಿಠಲ ಮಲೆಕುಡಿಯ ಎಂಎ ಪತ್ರಿಕೋದ್ಯಮದ ಮೊದಲ ವರ್ಷದಲ್ಲಿದ್ದ. ಪೊಲೀಸರು ಬಂಧಿಸಿದ ವೇಳೆ ಪರೀಕ್ಷೆ ತಯಾರಿಯಲ್ಲಿದ್ದ. ಆದರೆ, ನ್ಯಾಯಾಂಗ ಬಂಧನದಲ್ಲಿದ್ದರೂ ಆತನಿಗೆ ಪರೀಕ್ಷೆ ಬರೆಯಲು ಪೊಲೀಸರು ಬಿಟ್ಟಿರಲಿಲ್ಲ. ಬಳಿಕ ಕೈಕೋಳ ಹಾಕಿ ಪರೀಕ್ಷೆ ಬರೆದಿದ್ದು ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಕೈಕೋಳ ತೆಗೆದು ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು. 2013ರಲ್ಲಿ ಪತ್ರಿಕೋದ್ಯಮ ಎಂಎ ಪೂರೈಸಿದ್ದ ವಿಠಲ ಮಲೆಕುಡಿಯ ಕುತ್ಲೂರು ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿಗಿಂತ ಹೆಚ್ಚು ಓದಿದ ಮೊದಲ ವ್ಯಕ್ತಿಯಾಗಿದ್ದ. ದುರಾದೃಷ್ಟ ಅಂದರೆ, ವಿದ್ಯಾರ್ಥಿ ಜೀವನದಲ್ಲಿ ಎಡಪಂಥೀಯರ ಜೊತೆ ಗುರುತಿಸಿಕೊಂಡಿದ್ದು ಮತ್ತು ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಕಾರಣಕ್ಕೆ ಆತನನ್ನು ನಕ್ಸಲ್ ಬೆಂಬಲಿಗ ಅನ್ನುವ ಹಣೆಪಟ್ಟಿ ಹೊತ್ತುಕೊಳ್ಳುವಂತಾಗಿತ್ತು. ಅದೇ ಕಾರಣಕ್ಕೆ ನಕ್ಸಲ್ ಕಾರ್ಯಾಚರಣೆಯಲ್ಲಿ ಸಿಲುಕಿಸಲಾಗಿತ್ತು ಅನ್ನುವ ಆರೋಪಗಳೂ ಇವೆ. 

ಇದೀಗ ಸುದೀರ್ಘ ಹೋರಾಟದ ಬಳಿಕ ನ್ಯಾಯದ ಬಾಗಿಲು ತೆರೆದಿದ್ದು, ವಿಠಲ ಮಲೆಕುಡಿಯ ಮತ್ತು ಆತನ ತಂದೆಯನ್ನು ದೋಷಮುಕ್ತಗೊಳಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ನ್ಯಾಯಾಲಯದಲ್ಲಿ ಇವರ ಪರವಾಗಿ ವಾದಿಸಿ, ಗೆಲುವು ಕಂಡಿದ್ದಾರೆ.

ಪತ್ರಿಕೋದ್ಯಮ ಕಲಿಯಲು ಪತ್ರಕರ್ತರೇ ಪ್ರೇರಣೆ

ಇಷ್ಟಕ್ಕೂ ವಿಠಲ ಮಲೆಕುಡಿಯ ಪತ್ರಿಕೋದ್ಯಮ ಓದುವುದಕ್ಕೆ ಮಂಗಳೂರಿನ ಪತ್ರಕರ್ತರೇ ಕಾರಣವಂತೆ. 2010ರ ಸಂದರ್ಭದಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಕ್ಸಲರ ಹಾವಳಿ ಬಗ್ಗೆ ವರದಿಗಾಗಿ ಮಂಗಳೂರು, ಉಡುಪಿಯ ಪತ್ರಕರ್ತರು ಕುತ್ಲೂರು ಭಾಗಕ್ಕೆ ಭೇಟಿ ನೀಡಿದ್ದರು. ಆಗಷ್ಟೇ ಪಿಯುಸಿ ಮುಗಿಸಿದ್ದ ಹುಡುಗ ವಿಠಲನಿಗೆ ತಾನೂ ಪತ್ರಕರ್ತನಾಗಬೇಕೆಂಬ ಬಯಕೆ ಹುಟ್ಟಿತ್ತು. ಇದನ್ನು ಅಲ್ಲಿಗೆ ವರದಿಗಾಗಿ ಬಂದವರ ಜೊತೆ ಹಂಚಿಕೊಂಡಿದ್ದ. ಆನಂತರ, ಪದವಿ ಮುಗಿಸಿದ ವಿಠಲ ಮಲೆಕುಡಿಯನಿಗೆ ಮಂಗಳೂರಿನ ಕೆಲವು ಪತ್ರಕರ್ತ ಮಿತ್ರರೇ ಸೇರಿಕೊಂಡು ವಿವಿಯಲ್ಲಿ ಪತ್ರಿಕೋದ್ಯಮ ಎಂಎಗೆ ಸೀಟು ದೊರಕಿಸಿದ್ದರು. ಹಾಸ್ಟೆಲ್ ವ್ಯವಸ್ಥೆಯನ್ನೂ ಮಾಡಿಸಿದ್ದರು ಎಂದು ಸ್ಮರಿಸುತ್ತಾರೆ, ದಿನೇಶ್ ಹೆಗ್ಡೆ.  

ಗೌರವಯುತ ಬಿಡುಗಡೆಗೆ ಪ್ರಯತ್ನ 

ತಾನು ಮಾಡದ ತಪ್ಪಿಗೆ ಸುದೀರ್ಘ ಕಾಲ ಮಾನಸಿಕ ಹಿಂಸೆ, ಸಮಾಜದಲ್ಲಿ ನಕ್ಸಲ್ ಹಣೆಪಟ್ಟಿ ಹೊತ್ತು ಗೌರವಕ್ಕೆ ಧಕ್ಕೆಯಾದ ಕಾರಣಕ್ಕೆ ವಿಠಲ ಮಲೆಕುಡಿಯನ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ, ಗೌರವಯುತ ಬಿಡುಗಡೆಗೆ ಅವಕಾಶ ಕೊಡಬೇಕೆಂದು ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಲಿದ್ದಾರೆ. ವಿಠಲ ಮಲೆಕುಡಿಯನಿಗೆ ಹೋದ ಮಾನ ಮರಳಿ ಕೊಡಿಸುವ ಪ್ರಯತ್ನವಾಗಿ ಗೌರವದ ಬಿಡುಗಡೆ ಸಿಗುವಂತಾಗಲು ಹೈಕೋರ್ಟ್ ಅಪೀಲು ಹೋಗುವುದಾಗಿ ಉಳೇಪಾಡಿ ತಿಳಿಸಿದ್ದಾರೆ.

The 3rd Additional District and Sessions Judge B.B. Jakati acquitted journalist Vittala Malekudiya and his father Lingappa, who had been accused of links with Maoists, on October 21.In March 2012, Anti Naxal Force (ANF) personnel searched the house of Malekudiya in Kutlur of Belthangady taluk, on the fringes of Kudremukh National Park, in Dakshina Kannada district and seized, among other things, a book on Bhagat Singh and some articles related to Maoist activities. ANF Sub-Inspector R. Sachin Lawrence arrested Vittala, who was then a journalism student, and his father.