ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಜುಗಾರಿ ; ಕೊಣಾಜೆ ಪೊಲೀಸ್ ದಾಳಿ, ಪ್ರಕರಣ ಮುಚ್ಚಲು ಯತ್ನ ! 

13-09-20 11:27 pm       Mangalore Reporter   ಕರಾವಳಿ

ರಾಜಕೀಯ ಪ್ರಮುಖರು ಸೇರಿ ಜುಗಾರಿ ಆಡುತ್ತಿದ್ದ ವೇಳೆ ಕೊಣಾಜೆ ಪೊಲೀಸರು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ. 

ಮಂಗಳೂರು, ಸೆಪ್ಟೆಂಬರ್ 13: ಕೊಣಾಜೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಸ್ಥಳೀಯ ಕಾಂಗ್ರೆಸ್ ಪುಢಾರಿ ಆಗಿರುವ ವ್ಯಕ್ತಿಯೊಬ್ವರ ಮನೆಯಲ್ಲಿ ರಾಜಕೀಯ ಪ್ರಮುಖರು ಸೇರಿ ಜುಗಾರಿ ಆಡುತ್ತಿದ್ದ ವೇಳೆ ಕೊಣಾಜೆ ಪೊಲೀಸರು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ. 

ಐದಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದು ಪೊಲೀಸರು ಠಾಣೆಗೆ ಕರೆತಂದಿದ್ದು ನೆಲದಲ್ಲಿ ಕೂರಿಸಿದ್ದಾರೆ. ಈ ಬಗ್ಗೆ ಠಾಣೆಯ ಇನ್ಸ್ ಪೆಕ್ಟರ್ ಬಳಿ ಕೇಳಿದರೆ ದಾಳಿ ನಡೆಸಿದ್ದನ್ನು ಮಾತ್ರ ಖಚಿತ ಪಡಿಸಿದ್ದಾರೆ. ಅಲ್ಲದೆ, ಘಟನೆ ಆಗಿರುವ ಜಾಗ ಮಂಗಳೂರು ವಿವಿಯ ಬಳಿ ಎನ್ನುವ ಮಾಹಿತಿ ನೀಡಿದ್ದಾರೆ. 

ಆರೋಪಿಯ ಮನೆಯಲ್ಲಿ ಜುಗಾರಿ ಆಡುತ್ತಿದ್ದ ಸ್ಥಳೀಯ ಮತ್ತೋರ್ವ ಕಾಂಗ್ರೆಸ್ ಬೆಂಬಲಿತ ಮಾಜಿ ಪಂಚಾಯತ್ ಅಧ್ಯಕ್ಷನ ಸಹಿತ ಹಲವರನ್ನು ಬಂಧಿಸಲಾಗಿದೆ. ‌ಬಂಧಿತ ಎಲ್ಲರನ್ನು ಕೊಣಾಜೆ ಠಾಣೆಗೆ ಕರೆತಂದು ಕುಳ್ಳಿರಿಸಿದ್ದನ್ನು ಕಂಡ ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಬಗ್ಗೆ ಠಾಣಾ ಎಸ್ಐ ಬಳಿ ಕೇಳಿದರೆ ದಾಳಿ ನಡೆಸಿದ್ದು ಹೌದು. ಆರೋಪಿಗಳ ಹೆಸರು ಗೊತ್ತಿಲ್ಲ. ಇನ್ನಷ್ಟೇ ಎಫ್ಐಆರ್ ಆಗಬೇಕು ಎಂದು ಹೇಳಿದ್ದು ಸಂಶಯಕ್ಕೆ ಕಾರಣವಾಗಿದೆ. ಜುಗಾರಿ ಆರೋಪಿಗಳು ಪ್ರಭಾವಿಗಳಾಗಿದ್ದು ಪ್ರಕರಣವನ್ನು ತಿರುಚುವ  ಸಾಧ್ಯತೆಗಳಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Join our WhatsApp group for latest news updates