ಡ್ರಗ್ಸ್ ಪ್ರಕರಣ ಕೇವಲ ಹಿಟ್ ಅಂಡ್ ರನ್ ಆಗಬಾರದು ; ಯು‌ಟಿ ಖಾದರ್ 

14-09-20 07:23 pm       Mangalore Reporter   ಕರಾವಳಿ

ಡ್ರಗ್ಸ್ ವಿಚಾರದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಕಠಿಣ ಕ್ರಮ ಆಗಬೇಕು, ರಾಜ್ಯ ಸರಕಾರ ಹಿಟ್ ಅಂಡ್ ರನ್ ಆಗುವಂತೆ ನಡೆದುಕೊಳ್ಳಬಾರದು ಎಂದು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ. 

ಮಂಗಳೂರು, ಸೆಪ್ಟೆಂಬರ್ 12: ಡ್ರಗ್ಸ್ ವಿಚಾರದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಕಠಿಣ ಕ್ರಮ ಆಗಬೇಕು. ಆದರೆ ರಾಜ್ಯ ಸರಕಾರ ಹಿಟ್ ಅಂಡ್ ರನ್ ಆಗುವಂತೆ ನಡೆದುಕೊಳ್ಳಬಾರದು.‌ ಸರಕಾರದ ಬಳಿ ಸಾಕ್ಷಿಗಳಿದ್ದರೆ ತಪ್ಪಿತಸ್ಥರು ಯಾರಿದ್ದಾರೆ ಎಲ್ರಿಗೂ ಶಿಕ್ಷೆ ಆಗೋ ವರೆಗೆ ಮಾಡಬೇಕು ಎಂದು ಮಾಜಿ ಸಚಿವ ಯು.ಟಿ ಖಾದರ್ ಆಗ್ರಹಿಸಿದ್ದಾರೆ. 

ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಯು.ಟಿ.ಖಾದರ್, ಜಮೀರ್ ಅಹ್ಮದ್ ಶ್ರೀಲಂಕಾ ಹೋಗಿದ್ದನ್ನು ಒಪ್ಕೊಂಡಿದ್ದಾರಲ್ವಾ ಎಂಬ ಪ್ರಶ್ನೆಗೆ, ಶ್ರೀಲಂಕಾಗೆ ಹೋಗಬಾರದು ಅಂತೇನಾದ್ರೂ ಇದೆಯಾ ? ಲಂಕಾಗೆ ಹೋಗಲು ವೀಸಾ ಕೊಟ್ಟವರು ಇವರೇ ಅಲ್ವಾ ? ಬಿಜೆಪಿಯವರದ್ದೇ ಕೇಂದ್ರ ಸರಕಾರ ಇದೆ.‌ ಏನೇನು ಅಕ್ರಮ ಆಗಿದೆ ಪತ್ತೆಹಚ್ಚಿ ಶಿಕ್ಷೆ ವಿಧಿಸಿ.‌.. ಅದು ಬಿಟ್ಟು ತಮ್ಮ ವೈಫಲ್ಯ ಮುಚ್ಚಿಡಲು ಜನರ ಗಮನ ಬೇರೆಡೆಗೆ ಸೆಳೆಯುವ ಕೆಲಸ ಮಾಡಬಾರದು. ಶ್ರೀಲಂಕಾ, ಕ್ಯಾಸಿನೋ ಮತ್ತೊಂದು ಅಂತ ಕಾಲಹರಣ ಮಾಡಬಾರದು ಎನ್ನುವ ಮೂಲಕ ಪರೋಕ್ಷವಾಗಿ ಜಮೀರ್ ಪರ ಖಾದರ್ ಕೂಡ ಬ್ಯಾಟಿಂಗ್ ಮಾಡಿದ್ದಾರೆ. ‌

ಅಲ್ಲದೆ, ರಾಜ್ಯ ಸರಕಾರ ಈಗ  ರಾಜ್ಯದಲ್ಲಿ ನಾರ್ಕೊಟಿಕ್ ದಳವನ್ನು ಪ್ರಬಲಗೊಳಿಸಬೇಕು. ಡ್ರಗ್ಸ್ ಬಗ್ಗೆ ಮಾಹಿತಿ ಕೊಡುವ ಮಂದಿ ಸಾವಿರ ಇದ್ದಾರೆ. ಇವ್ರು ಬಂಧಿಸಿ ಬಿಡೋದ್ರಿಂದ ಏನೂ ಆಗಲ್ಲ. ಸೂಕ್ತ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನಾರ್ಕೋಟಿಕ್ ಸೆಲ್ ಬಲಗೊಳಿಸಬೇಕು. ಆ ಬಗ್ಗೆ ಖಚಿತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ಚಳಿಗಾಲದ ವಿಧಾನಸಭೆ ಅಧಿವೇಶನದ ಬಗ್ಗೆ ಮಾತನಾಡಿದ ಯು.ಟಿ. ಖಾದರ್, ಎಂಟು ದಿನಗಳಿಗಷ್ಟೇ ವಿಧಾನಸಭೆ ಅಧಿವೇಶನ ಮಾಡಿದ್ದಾರೆ. ಇದರಲ್ಲಿ ಒಂದು ದಿನ ನಿಧನರಾದವರಿಗೆ ಶೋಕಾಚರಣೆ ಇರುತ್ತದೆ. ಇನ್ನಿರುವ ಏಳು ದಿನದಲ್ಲಿ ಏನ್ ಚರ್ಚೆ ಮಾಡೋಕೆ ಸಾಧ್ಯ. ಕೇವಲ ಕಾಟಾಚಾರಕ್ಕೆ ಮಾಡೋ ಬದಲು ಅಧಿವೇಶನವನ್ನು ಕನಿಷ್ಠ ಹತ್ತು ದಿನಗಳಿಗಾದ್ರೂ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.