ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ವಿರುದ್ಧ ಪ್ರಧಾನಿ ಮೋದಿಗೆ ದೂರಿತ್ತ ಪೋಸ್ಟ್ ಕಾರ್ಡ್ ಮಹೇಶ್ ವಿಕ್ರಂ ಹೆಗ್ಡೆ! ದೂರಿನ ಪೋಸ್ಟ್ ಟ್ವಿಟರ್ ನಲ್ಲಿ ವೈರಲ್

18-12-21 09:31 pm       HK Desk news   ಕರಾವಳಿ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರನ್ನು ಈ ರಾಜ್ಯ ಕಂಡ ಅತ್ಯಂತ ದುರ್ಬಲ ರಾಜ್ಯಾಧ್ಯಕ್ಷ ಎಂದು ಗೇಲಿ ಮಾಡಿದ್ದಕ್ಕಾಗಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಿಂದ ಕಾಂಗ್ರೆಸ್ ಏಜಂಟ್ ಎಂದು ಟೀಕೆಗೊಳಗಾಗಿದ್ದ ಪೋಸ್ಟ್ ಕಾರ್ಡ್ ಸಂಪಾದಕ ಮೂಡುಬಿದ್ರೆ ಮೂಲದ ಮಹೇಶ್ ವಿಕ್ರಮ್ ಹೆಗ್ಡೆ ಈ ಬಗ್ಗೆ ಪ್ರಧಾನಿ ಮೋದಿಗೆ ದೂರು ಹೇಳಿಕೊಂಡಿದ್ದಾರೆ.

ಮಂಗಳೂರು, ಡಿ.18 : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರನ್ನು ಈ ರಾಜ್ಯ ಕಂಡ ಅತ್ಯಂತ ದುರ್ಬಲ ರಾಜ್ಯಾಧ್ಯಕ್ಷ ಎಂದು ಗೇಲಿ ಮಾಡಿದ್ದಕ್ಕಾಗಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಿಂದ ಕಾಂಗ್ರೆಸ್ ಏಜಂಟ್ ಎಂದು ಟೀಕೆಗೊಳಗಾಗಿದ್ದ ಪೋಸ್ಟ್ ಕಾರ್ಡ್ ಸಂಪಾದಕ ಮೂಡುಬಿದ್ರೆ ಮೂಲದ ಮಹೇಶ್ ವಿಕ್ರಮ್ ಹೆಗ್ಡೆ ಈ ಬಗ್ಗೆ ಪ್ರಧಾನಿ ಮೋದಿಗೆ ದೂರು ಹೇಳಿಕೊಂಡಿದ್ದಾರೆ.

ನರೇಂದ್ರ ಮೋದಿಜೀ, ಕಳೆದ ಏಳು ವರ್ಷಗಳಿಂದ ನಾನು ನನ್ನ ಕೆಲಸ ತ್ಯಜಿಸಿ ಪಕ್ಷದ ಪರವಾಗಿ ಸೇವೆ ಮಾಡುತ್ತಿದ್ದೇನೆ. ನಾನು ನಿಮ್ಮ ಬಿಗ್ ಫ್ಯಾನ್. ಆದರೆ ಇಂದು ಹಿಂದುತ್ವವಾದಿ ಯುವಕರಿಗೆ ಬೆಂಬಲಿಸುವುದಕ್ಕಾಗಿ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರ ಬಗ್ಗೆ ಟೀಕಿಸಿದ್ದನ್ನೇ ನೆಪವಾಗಿಟ್ಟು ನನ್ನನ್ನು ಕಾಂಗ್ರೆಸ್ ಏಜಂಟ್ ಎಂದು ಕರೆದಿದ್ದಾರೆ. ನಾನು ಮೂರು ಲಕ್ಷಕ್ಕೂ ಹೆಚ್ಚು ಬಿಜೆಪಿ ಪರವಾಗಿ ಪೋಸ್ಟ್ ಮಾಡಿದ್ದೇನೆ. ಆದರೆ ನನ್ನ ಒಂದು ಪೋಸ್ಟ್ ಮಾತ್ರಕ್ಕೆ ಇವರೆಲ್ಲ ನನ್ನ ವಿರುದ್ಧ ನಿಂತಿದ್ದಾರೆ. ಪಕ್ಷಕ್ಕಾಗಿ ನನ್ನ ಸೇವೆಯನ್ನು ನೀವು ಗಮನಿಸಿದ್ದೀರಿ.

ಆಂಟೋನಿಯೋ ಮೈನೋ ಮತ್ತು ಕಾಂಗ್ರೆಸ್ ನನ್ನ ಪಾದದ ಧೂಳಿಗೆ ಸಮ. ನಾನು ಯಾವತ್ತಿಗೂ ಸ್ವಯಂಸೇವಕ ಮತ್ತು ಬಿಜೆಪಿ ಕಾರ್ಯಕರ್ತ. ಇವೆಲ್ಲ ಬೆಳವಣಿಗೆಯನ್ನು ನೀವು ಗಮನಿಸಿದ್ದೀರೆಂದು ಆಶಿಸುತ್ತೇನೆ. ಅಲ್ಲದೆ, ಹಿಂದಿನಂತೇ ಬೆಂಬಲ ನೀಡುವಿರೆಂದು ನಂಬುತ್ತೇನೆ ಎಂಬುದಾಗಿ ಮಹೇಶ್ ವಿಕ್ರಮ್ ಹೆಗ್ಡೆ ಪ್ರಧಾನಿ ಮೋದಿಯವರಿಗೆ ನೇರವಾಗಿ ಟ್ವೀಟ್ ಮಾಡಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ಮೋದಿಗೆ ದೂರು ನೀಡಿರುವ ಮಹೇಶ್ ಅವರ ಟ್ವೀಟ್ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವಿಟರ್ ನಲ್ಲಿ ಒಂದೇ ದಿನದಲ್ಲಿ 2266 ಮಂದಿ ರಿ ಟ್ವೀಟ್ ಮಾಡಿದ್ದಾರೆ. 7760 ಮಂದಿ ಲೈಕ್ಸ್ ಮಾಡಿದ್ದಾರೆ.

ಕಳೆದ ಏಳೆಂಟು ವರ್ಷಗಳಲ್ಲಿ ಟ್ವಿಟರ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ಪರವಾಗಿ ಪೋಸ್ಟ್ ಹಾಕುತ್ತಾ ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಪಡೆದಿರುವ ಮಹೇಶ್ ವಿಕ್ರಮ್ ಹೆಗ್ಡೆಯನ್ನು ಪ್ರಧಾನಿ ಮೋದಿ ಅವರೇ ಫಾಲೋ ಮಾಡುತ್ತಿದ್ದಾರೆ. ದಿನವೂ ಕಾಂಗ್ರೆಸ್ ವಿರೋಧಿಸಿ, ಟ್ವೀಟ್ ಮಾಡುವುದರಲ್ಲಿ ಮಹೇಶ್ ವಿಕ್ರಮ್ ಹೆಗ್ಡೆ ಖ್ಯಾತಿ ಪಡೆದಿದ್ದಾರೆ. ಮಹೇಶ್ ಅವರನ್ನು ಟ್ವಿಟರ್ ಒಂದರಲ್ಲೇ 1.82 ಲಕ್ಷ ಜನರು ಫಾಲೋ ಮಾಡುತ್ತಿದ್ದು ಜಾಲತಾಣದಲ್ಲಿ ಜನಪ್ರಿಯರಾಗಿದ್ದಾರೆ.  

ಬಿಜೆಪಿ ರಾಜ್ಯ ಘಟಕದ ಟ್ವಿಟರ್ ತಂಡಕ್ಕೂ ಮಹೇಶ್ ಅವರೇ ಮೊದಲಿಗೆ ಸಲಹೆಗಳನ್ನು ನೀಡುತ್ತಿದ್ದರು. ಕಡಿಮೆ ಪದಗಳಲ್ಲಿ ಎದುರಾಳಿಯ ತಲೆಗೆ ಹೊಡೆದ ರೀತಿ ಅಗ್ರೆಸಿವ್ ಆಗಿ ಟ್ವೀಟ್ ಮಾಡುವ ಬಗ್ಗೆ ಮಹೇಶ್ ಸಿದ್ಧಹಸ್ತರು. ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ಜೊತೆ ಹತ್ತಿರದ ನಂಟು ಹೊಂದಿರುವ ಇವರು ಬೆಂಗಳೂರಿನಲ್ಲಿದ್ದೇ ಈಗ ಪ್ರತ್ಯೇಕ ಮಾಧ್ಯಮ ತಂಡ ಕಟ್ಟುವಲ್ಲಿ ತೊಡಗಿದ್ದಾರೆ. ಈ ನಡುವೆ, ಕಳೆದ ವಾರ ಕರಾವಳಿಯಲ್ಲಿ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ವಿರುದ್ಧ ಗರಂ ಆಗಿದ್ದರು. ಹಿಂದುತ್ವ, ಲವ್ ಜಿಹಾದ್ ವಿರುದ್ಧ ಕಾರ್ಯಾಚರಣೆ ನಡೆಸಿದ್ದೇ ತಮ್ಮ ತಪ್ತಾಯ್ತಾ ಅನ್ನುವ ರೀತಿ ಪ್ರಶ್ನೆ ಮಾಡಿ, ಈ ಬಗ್ಗೆ ಸಹಾಯ ನೀಡದ ಕಾರಣಕ್ಕೆ ನಳಿನ್ ಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಳಿನ್ ಕುಮಾರ್ ರಾಜಿನಾಮೆಗೂ ಆಗ್ರಹ ಮಾಡಿದ್ದರು.

ಇದೇ ಸಂದರ್ಭದಲ್ಲಿ ಯುವಕರ ಪರ ನಿಂತ ಮಹೇಶ್ ವಿಕ್ರಮ್ ಹೆಗ್ಡೆ ತಮ್ಮ ಪೋಸ್ಟ್ ಕಾರ್ಡ್ ನಲ್ಲಿ ನಳಿನ್ ಕುಮಾರ್ ಒಬ್ಬ ದುರ್ಬಲ ರಾಜ್ಯಾಧ್ಯಕ್ಷ, ಇಷ್ಟು ದುರ್ಬಲ ರಾಜ್ಯಾಧ್ಯಕ್ಷರನ್ನು ಈ ರಾಜ್ಯ ಬಿಡಿ ಇಡೀ ದೇಶವೇ ಕಂಡಿಲ್ಲ. ಜನರಲ್ ರಾವತ್ ಹಾಗೂ ಸೈನ್ಯದ ಅವಹೇಳನ ಮಾಡುವವರ ವಿರುದ್ಧ ನಾವೇ ದಾಖಲೆ ಸಹಿತ ದೂರು ನೀಡಿದರೂ ಕೇಸು ದಾಖಲಿಸಲು ಮೀನ ಮೇಷ ಎಣಿಸುವ ರಾಜ್ಯ ಬಿಜೆಪಿ ಸರಕಾರ, ಲವ್ ಜಿಹಾದ್ ತಡೆಯಲು ಹೋದ ಹಿಂದು ಯುವಕರ ಮೇಲೆ ಸುಮೋಟೊ ಕೇಸು ಹಾಕುತ್ತದೆ ಎಂದರೆ ಇದು ನಿಜಕ್ಕೂ ನಾಚಿಕೆಗೇಡು. ನಳಿನ್ ಕುಮಾರ್ ಕಟೀಲ್ ಅವರೇ ನೀವು ಬಜರಂಗದಳ ಹಿನ್ನೆಲೆಯಿಂದ ಬದಂವರು. ದೇವಸ್ಥಾನ ನೆಲಸಮ ಮಾಡುವಾಗಲೂ ಮಾತನಾಡಲಿಲ್ಲ. ಇಂದು ನಿಮ್ಮದೇ ಪ್ರದೇಶದಲ್ಲಿ ಈ ಕೆಲಸವಾಗಿದೆ. ದಯವಿಟ್ಟು ರಾಜಿನಾಮೆ ಕೊಟ್ಟು ನಿಮ್ಮ ಮರ್ಯಾದೆ ಉಳಿಸಿಕೊಳ್ಳಿ ಎಂದು ಬರೆದಿದ್ದರು. ಮಹೇಶ್ ಹೆಗ್ಡೆ ಬರೆದಿದ್ದ ಈ ಪೋಸ್ಟ್ ಭಾರೀ ವೈರಲ್ ಆಗಿದ್ದು, ಬಿಜೆಪಿ ನಾಯಕರನ್ನು ಮುಜುಗರಕ್ಕೀಡು ಮಾಡಿತ್ತು.

Postcard News Editor Mahesh Vikram Hedge complains PM Modi about Nalin Kumar Kateel. The tweet made to PM has gone viral on social media.