ಮಾಡೂರಿನಲ್ಲಿ ವಿಲೇವಾರಿ ಘಟಕದ ಹೆಸರಲ್ಲಿ ತ್ಯಾಜ್ಯ ರಾಶಿ ; ಪಟ್ಟಣ ಪಂಚಾಯತ್ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ ಕೋಟೆಕಾರು ಗ್ರಾಮಸ್ಥರು 

23-12-21 06:49 pm       Mangalore Correspondent   ಕರಾವಳಿ

ಮಾಡೂರಿನ ನೀರಿನ ಟ್ಯಾಂಕಿ ಬಳಿಯ ತ್ಯಾಜ್ಯ ವಿಲೇವಾರಿ ಘಟಕ ತೆರವುಗೊಳಿಸದಿದ್ದರೆ ಡಿ.27 ರಂದು ನಡೆಯುವ ಕೋಟೆಕಾರು ಪಟ್ಟಣ ಪಂಚಾಯತ್ ಚುನಾವಣೆಯನ್ನ ಬಹಿಷ್ಕರಿಸಲು ನಾಗರಿಕರು ನಿರ್ಧರಿಸಿದ್ದಾರೆ. 

ಉಳ್ಳಾಲ, ಡಿ.23 : ಮಾಡೂರಿನ ನೀರಿನ ಟ್ಯಾಂಕಿ ಬಳಿಯ ತ್ಯಾಜ್ಯ ವಿಲೇವಾರಿ ಘಟಕ ತೆರವುಗೊಳಿಸದಿದ್ದರೆ ಡಿ.27 ರಂದು ನಡೆಯುವ ಕೋಟೆಕಾರು ಪಟ್ಟಣ ಪಂಚಾಯತ್ ಚುನಾವಣೆಯನ್ನ ಬಹಿಷ್ಕರಿಸಲು ನಾಗರಿಕರು ನಿರ್ಧರಿಸಿದ್ದಾರೆ. 

ಮಾಡೂರಿನ ನೀರಿನ ಟ್ಯಾಂಕಿ ಬಳಿ ಇಂದು ಸ್ಥಳೀಯ ನಾಲ್ಕು ವಾರ್ಡಿನ ನಾಗರಿಕರು ಪ್ರತಿಭಟನೆ ನಡೆಸಿದ್ದು ಕೋಟೆಕಾರು ಪಟ್ಟಣ ಪಂಚಾಯತ್ ಗೆ ಬಿಸಿ ಮುಟ್ಟಿಸಿದ್ದಾರೆ. ಪಟ್ಟಣ ವ್ಯಾಪ್ತಿಯ 17 ವಾರ್ಡಿನ ತ್ಯಾಜ್ಯವನ್ನೆಲ್ಲಾ ಮಾಡೂರಿನ ನೀರಿನ ಟ್ಯಾಂಕ್ ಪ್ರದೇಶದ ರಸ್ತೆ ಬದಿಯಲ್ಲಿ ಸುರಿಯುತ್ತಿದ್ದು ಕೇವಲ ಹಸಿ ಕಸವನ್ನಷ್ಟೇ ಇಲ್ಲಿಂದ ವಿಲೇವಾರಿ ನಡೆಸುತ್ತಿದ್ದಾರೆ. ಉಳಿದ ಪ್ಲಾಸ್ಟಿಕ್ ತ್ಯಾಜ್ಯ, ಪ್ಯಾಂಪರ್ಸ್, ನ್ಯಾಪ್ ಕಿನ್ ಪ್ಯಾಡ್ ಗಳು ವಸತಿ ಪ್ರದೇಶದಲ್ಲೇ ಟನ್ ಗಟ್ಟಲೆ ರಾಶಿ ಬಿದ್ದು ಗಬ್ಬೆದ್ದರೂ ಪಟ್ಟಣ ಪಂಚಾಯತ್ ಆಡಳಿತ ಈ ಕಡೆ ಗಮನ‌‌ಹರಿಸಿಲ್ಲವೆಂದು ಪ್ರತಿಭಟನಾಕಾರರಾದ ವಾಸುದೇವ ನಾಯಕ್ ಹೇಳಿದ್ದಾರೆ. 

ಅನೇಕ ಬಾರಿ ತ್ಯಾಜ್ಯ ಘಟಕವನ್ನ ಸ್ಥಳಾಂತರಿಸುವಂತೆ ಪಟ್ಟಣ ಪಂಚಾಯತಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಿಶೇಷವೆಂದರೆ ಈ ಪ್ರದೇಶದಲ್ಲಿ ಸಾರ್ವಜನಿಕರು ಕಸ ಎಸೆಯಬಾರದು ಎಂದು ಪಟ್ಟಣ ಪಂಚಾಯತ್ ಎಚ್ಚರಿಕೆಯ ಫಲಕ ಹಾಕಿ ಸಿಸಿ ಕ್ಯಾಮೆರಾ ಅಳವಡಿಸಿದ್ದು ಅದೇ ಆಡಳಿತವೇ ನಿಯಮ ಬಾಹಿರವಾಗಿ ಇಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದೆ ಎಂದು ವಾಸುದೇವ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಸ್ಥಳೀಯರ ಮನವಿಗೆ ಸ್ಪಂದಿಸದ ಸ್ಥಳೀಯಾಡಳಿತ ಇದ್ದೇನು ಪ್ರಯೋಜನವೆಂದು ಇದೇ ಡಿ.27 ರಂದು ನಡೆಯಲಿರುವ ಕೋಟೆಕಾರು‌ ಪಟ್ಟಣ ಪಂಚಾಯತ್ ಚುನಾವಣೆ ಬಹಿಷ್ಕರಿಸುವುದಾಗಿ ಸ್ಥಳೀಯ ನಾಲ್ಕು ವಾರ್ಡಿನ ನಾಗರಿಕರು ನಿರ್ಧರಿಸಿದ್ದಾರೆ. 

ತಾಲೂಕು ಪಂಚಾಯತ್ ನಿಕಟ ಪೂರ್ವ ಸದಸ್ಯೆ ಸುರೇಖ ಚಂದ್ರಹಾಸ್, ಸ್ಥಳೀಯರಾದ ರೇಣುಕಾ ಶೆಟ್ಟಿ, ಪೂವಮ್ಮ , ಚಂದ್ರಿಕಾ ರೈ, ಅರುಣ್ ಡಿಸೋಜ, ರವಿಶಂಕರ್ ಕಿಣಿ, ರಮಾನಂದ, ಮೋಹನ್, ಸತೀಶ್ ಮೊದಲಾದವರು ಪ್ರತಿಭಟನೆಯಲ್ಲಿ ಇದ್ದರು.

Madur residents oppose panchayat election after being fed up with tons of garbage in residential area.